Insurance Scheme; ನೋಂದಣಿಗೆ ಡೆಲಿವರಿ ಬಾಯ್ಸ್ ನಿರಾಸಕ್ತಿ
ಬೆಂಗಳೂರು, ಫೆಬ್ರವರಿ 15: ಕರ್ನಾಟಕ ಸರ್ಕಾರದ ಕಾರ್ಮಿಕ ಇಲಾಖೆ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಗಿಗ್ ಕಾರ್ಮಿಕರಿಗೆ ವಿಮೆ ಸೌಲಭ್ಯವನ್ನು ಕಲ್ಪಿಸಿದೆ. ಆದರೆ ಡೆಲಿವರಿ ವೃತಿಯಲ್ಲಿ ತೊಡಗಿರುವ ಗಿಗ್ (ಡೆಲಿವರಿ ಕಾರ್ಮಿಕ/ ಬಾಯ್) ಕಾರ್ಮಿಕರು ವಿಮಾ ಯೋಜನೆಗೆ ಹೆಸರು ನೋಂದಣಿಗೆ ನಿರಾಸಕ್ತಿ ತೋರುತ್ತಿದ್ದಾರೆ.
' ಕರ್ನಾಟಕ ರಾಜ್ಯ ಗಿಗ್ ಕಾರ್ಮಿಕರ ವಿಮಾ ಯೋಜನೆ' ಎಂಬ ಹೆಸರಿನಲ್ಲಿ ಈ ವಿಮೆ ಯೋಜನೆಯನ್ನು ಆರಂಭಿಸಲಾಗಿದೆ. ಕಾರ್ಮಿಕ ಇಲಾಖೆಯ ಮಾಹಿತಿ ಪ್ರಕಾರ ಇದುವರೆಗೂ ಕೇವಲ 3 ಸಾವಿರ ಜನರು ನೋಂದಣಿ ಮಾಡಿದ್ದಾರೆ.

ಇಲಾಖೆಯ ಮಾಹಿತಿಯಂತೆ 3,152 ಅರ್ಜಿಗಳು ಇಲ್ಲಿಯ ತನಕ ಸಲ್ಲಿಕೆಯಾಗಿವೆ. ಇವುಗಳಲ್ಲಿ 2,321 ಅರ್ಜಿಗಳನ್ನು ಅನುಮೋದಿಸಲಾಗಿದೆ. 793 ಅರ್ಜಿಗಳು ಅನುಮೋದನೆ ಹಂತದಲ್ಲಿವೆ. 22 ಅರ್ಜಿಗಳನ್ನು ವಿವಿಧ ಮಾಹಿತಿಗಾಗಿ ವಾಪಸ್ ಕಳಿಸಲಾಗಿದೆ. 16 ಅರ್ಜಿ ತಿರಸ್ಕಾರ ಮಾಡಲಾಗಿದೆ.
ಬೆಂಗಳೂರು ನಗರದಲ್ಲಿಯೇ ಅಧಿಕ; 'ಕರ್ನಾಟಕ ರಾಜ್ಯ ಗಿಗ್ ಕಾರ್ಮಿಕರ ವಿಮಾ ಯೋಜನೆ'ಗೆ ಬೆಂಗಳೂರು ನಗರದಲ್ಲಿ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ. ನಗರದಲ್ಲಿ 1365 ಅರ್ಜಿ ಸಲ್ಲಿಸಲಾಗಿದೆ. ಇವುಗಳಲ್ಲಿ ಸ್ವಿಗ್ಗಿ 708, ಬಿಗ್ ಬಾಸ್ಕೆಟ್ 212, ಫ್ಲಿಪ್ ಕಾರ್ಟ್ 142, ಝೊಮೇಟೋ 131, ಅಮೆಝಾನ್ 12, ಊಬರ್ 10, ಓಲಾದ 10 ಅರ್ಜಿ ಸಲ್ಲಿಕೆಯಾಗಿದೆ.
ಕರ್ನಾಟಕ ಸರ್ಕಾರ 'ಕರ್ನಾಟಕ ರಾಜ್ಯ ಗಿಗ್ ಕಾರ್ಮಿಕರ ವಿಮಾ ಯೋಜನೆ' ಘೋಷಣೆ ಮಾಡಿದ ಬಳಿಕ ಇಬ್ಬರು ಡೆಲಿವರಿ ಬಾಯ್‌ಗಳು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಆದರೆ ಅವರ ನೋಂದಣಿಯಾಗದ ಕಾರಣ ಪರಿಹಾರ ನೀಡಲು ಸಾಧ್ಯವಾಗಿಲ್ಲ ಎಂದು ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಹೆಚ್ಚಿನ ಜನರು ನೋಂದಣಿ ಮಾಡಿಸುವಂತೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಸಹ ಕೈಗೊಳ್ಳಲಾಗಿದೆ.
ಯೋಜನೆಯ ಮಾಹಿತಿ; 'ಕರ್ನಾಟಕ ರಾಜ್ಯ ಗಿಗ್ ಕಾರ್ಮಿಕರ ವಿಮಾ ಯೋಜನೆ' ಅಸಂಘಟಿತ ಕಾರ್ಮಿಕರಿಗೆ ನೆರವಾಗಲಿದೆ. ಪೂರ್ಣಕಾಲಿಕ ಹಾಗೂ ಅರೆಕಾಲಿಕ ಡೆಲಿವರಿ ನೌಕರರು ಈ ಯೋಜನೆ ಲಾಭ ಪಡೆಯಬಹುದು.
ದೇಶದಲ್ಲಿಯೇ ಕರ್ನಾಟಕ ಸರ್ಕಾರ ಫುಡ್ ಡೆಲಿವರಿ ಮಾಡುವ ಹಾಗೂ ಇ-ಕಾಮರ್ಸ್ ಸಂಸ್ಥೆಗಳಾದ ಅಮೇಜಾನ್, ಫ್ಲಿಪ್‌ಕಾರ್ಟ್, ಫಾರ್ಮಸಿ, ಬ್ಲಿಂಕಿಟ್, ಜೆಪ್ಪೊ, ಬಿಗ್ ಬಾಸ್ಕೆಟ್, ಡೊಮಿನೋಸ್ ಹೀಗೆ ಮುಂತಾದ ಸಂಸ್ಥೆಗಳಲ್ಲಿ ಡೆಲಿವರಿ ವೃತಿಯಲ್ಲಿ ತೊಡಗಿರುವ ಗಿಗ್ (ಡೆಲಿವರಿ ಕಾರ್ಮಿಕ/ ಬಾಯ್) ಕಾರ್ಮಿಕರಿಗಾಗಿ ಈ ಯೋಜನೆ ಆರಂಭಿಸಿದೆ.
ಈ ವಿಮೆ ಸೌಲಭ್ಯವು ಕರ್ತವ್ಯದಲ್ಲಿರುವಾಗ/ ಇಲ್ಲದಿರುವಾಗ ಸಂಭವಿಸುವ ಅಪಘಾತಗಳಿಗೆ ಅನ್ವಯವಾಗುತ್ತದೆ. ಈ ಯೋಜನೆ ಸಂಪೂರ್ಣ ಉಚಿತವಾಗಿದೆ. ಯಾವುದೇ ರೀತಿಯ ಪ್ರೀಮಿಯಂ ಪಾವತಿ ಮಾಡುವ ಅವಶ್ಯಕತೆ ಇಲ್ಲ. ವಿಮೆ ಸೌಲಭ್ಯವನ್ನು ಪಡೆಯಲು ಎಲ್ಲಾ ಅರ್ಹ ಕಾರ್ಮಿಕರು ಸೇವಾ ಸಿಂಧು ಪೋರ್ಟಲ್‌ನಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕಿದೆ. ಈ ಸೌಲಭ್ಯವು ಕರ್ನಾಟಕದಲ್ಲಿ ಡೆಲಿವರಿ ಕಾರ್ಯನಿರ್ವಹಿಸುತ್ತಿರುವವರಿಗೆ ಮಾತ್ರ ಅನ್ವಯ ಎಂದು ಸ್ಪಷ್ಟಪಡಿಸಲಾಗಿದೆ.
ಕರ್ತವ್ಯದಲ್ಲಿ ಇದ್ದಾಗ ಹಾಗೂ ಇಲ್ಲದಿರುವಾಗ ಸಂಭವಿಸುವ ಅಫಘಾತಗಳಿಗೆ ಈ ಯೋಜನೆಯಡಿ ನೆರವು ಲಭ್ಯವಾಗಲಿದೆ. ಅಫಘಾತದಿಂದ ಮರಣ ಹೊಂದಿದ್ದಲ್ಲಿ ರೂ. 2 ಲಕ್ಷ ಹಾಗೂ ಜೀವ ವಿಮಾ ರೂ. 2 ಲಕ್ಷ ಸೇರಿ ಒಟ್ಟು ರೂ. 4 ಲಕ್ಷಗಳ ಪರಿಹಾರ.
ಅಫಘಾತದಿಂದ ಸಂಪೂರ್ಣವಾಗಿ ಶಾಶ್ವತ ದುರ್ಬಲತೆಗೆ ಹೊಂದಿದ್ದಲ್ಲಿ ರೂ. 2 ಲಕ್ಷ, ಅಪಘಾತದ ಸಂದರ್ಭದ ಆಸ್ಪತ್ರೆ ವೆಚ್ಚ ಮರುಪಾವತಿ ರೂ. 1 ಲಕ್ಷ ಹಾಗೂ ಜೀವ ವಿಮಾ ರೂ. 2 ಲಕ್ಷ ಪರಿಹಾರ ದೊರೆಯಲಿದೆ. ಯೋಜನೆ ಫಲಾನುಭವಿಗಳು ಆದಾಯ ತೆರಿಗೆ ಪಾವತಿದಾರರು ಹಾಗೂ ಇ.ಎಸ್.ಐ ಫಲಾನುಭವಿಗಳಾಗಿರಬಾರದು ಎಂಬುದು ಷರತ್ತು.
ಅರ್ಜಿ ಸಲ್ಲಿಕೆ ಮಾಡುವವರ ವಯೋಮಿತಿ 18 ರಿಂದ 60 ವರ್ಷಗಳು. ಆಧಾರ್‌ಕಾರ್ಡ್, ವೃತ್ತಿ ನಿರ್ವಹಿಸುತ್ತಿರುವ ಕುರಿತು ಸಂಸ್ಥೆಗಳು ವಿತರಿಸಿದ ಗುರುತಿನ ಚೀಟಿ/ ವೇತನ ಚೀಟಿ/ ವೇತನ ಪಡೆದ ಬ್ಯಾಂಕ್ ಪಾಸ್ ಬುಕ್ ಝೆರಾಕ್ಸ್ ಪ್ರತಿ ಇವುಗಳಲ್ಲಿ ಯಾವುದಾದರೊಂದು ಹಾಗೂ ಇ-ಶ್ರಮ್ ಕಾರ್ಡ್ ದಾಖಲಾತಿಯೊಂದಿಗೆ ನೋಂದಣಿ ಮಾಡಿಸಬಹುದು.












Click it and Unblock the Notifications