Good News: ಕರ್ನಾಟಕದ ಈ ಜಿಲ್ಲೆಯಲ್ಲಿ ಐನಾಕ್ಸ್‌ವಿಂಡ್ ₹400 ಕೋಟಿ ಹೂಡಿಕೆ: ಎಂಬಿ ಪಾಟೀಲ್
ಬೆಂಗಳೂರು, ಅಕ್ಟೋಬರ್ 15: ಪವನ ವಿದ್ಯುತ್ ಕ್ಷೇತ್ರದಲ್ಲಿ ಅಗತ್ಯವಾಗಿ ಬೇಕಾಗಿರುವ ದೈತ್ಯಾಕಾರದ ಬ್ಲೇಡ್‌ಗಳು ಮತ್ತು ಗೋಪುರಗಳ ಉತ್ಪಾದನೆಗೆ ಹೆಸರಾಗಿರುವ ಐನಾಕ್ಸ್‌ವಿಂಡ್ ಕಂಪನಿಯು ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಕ್ಯಾದಿಗುಪ್ಪ ಕೈಗಾರಿಕಾ ಪ್ರದೇಶದಲ್ಲಿ ₹400 ಕೋಟಿ ಬಂಡವಾಳ ಹೂಡಿಕೆ ಮಾಡಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ ಬುಧವಾರ ತಿಳಿಸಿದ್ದಾರೆ.
ಬೆಂಗಳೂರಿನ ಖನಿಜ ಭವನದಲ್ಲಿ ಸಚಿವರನ್ನು ಕಂಪನಿಯ ಕಾರ್ಪೊರೇಟ್ ತಂತ್ರಗಾರಿಕೆ ವಿಭಾಗದ ಅಧ್ಯಕ್ಷ ಸಂತೋಷ್ ಖೈರ್ನಾರ್ ಭೇಟಿಯಾದರು. ಅವರೊಂದಿಗೆ ಸಚಿವರು ಮಾತುಕತೆ ನಡೆಸಿದರು. ಐನಾಕ್ಸ್‌ವಿಂಡ್ ಕಂಪನಿಯ ಮಾಲೀಕರಾಗಿರುವ ದೇವಾಂಶ್ ಜೈನ್ ಅವರು ತಮ್ಮ ಕಂಪನಿಗೆ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆಯೇ 70 ಎಕರೆ ಭೂಮಿ ಬೇಕು. ಅತ್ಯುತ್ತಮ ಮತ್ತು ವಿಶಾಲ ರಸ್ತೆಗಳು ಇಲ್ಲದ ಕಡೆ ಭೂಮಿ ಒದಗಿಸಿದರೆ ಬೃಹದಾಕಾರದ ಬ್ಲೇಡುಗಳು ಮತ್ತು ಗೋಪುರಗಳನ್ನು ಸಾಗಿಸಲು ಸಾಧ್ಯವಾಗುವುದಿಲ್ಲ ಎಂದು ನನಗೆ ಪತ್ರ ಬರೆದು ಕೋರಿದ್ದರು ಎಂದು ತಿಳಿಸಿದರು.

ವಿಜಯಪುರದಿಂದ ಕುಷ್ಟಗಿಗೆ ಹೂಡಿಕೆ ಶಿಫ್ಟ್
ಮೊದಲಿಗೆ ವಿಜಯಪುರ ಜಿಲ್ಲೆಯಲ್ಲಿ ಈ ಕಂಪನಿ ಬಂಡವಾಳ ಹೂಡಿಕೆಗೆ ಒಲವು ತೋರಿತ್ತು. ಆದರೆ ಅಲ್ಲಿ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಕೈಗಾರಿಕಾ ಪ್ರದೇಶವಿಲ್ಲ. ಕಂಪನಿಯು ಎರಡು ಹಂತಗಳಲ್ಲಿ ಒಟ್ಟು 400 ಕೋಟಿ ರೂ. ಬಂಡವಾಳ ಹೂಡಿಕೆ ಮಾಡಲು ತೀರ್ಮಾನಿಸಿದೆ. ಕುಷ್ಟಗಿ ತಾಲೂಕಿನಲ್ಲಿ ಈಗಾಗಲೇ ಇದ್ದ ಕೆಐಎಡಿಬಿ ಭೂಮಿಯನ್ನೇ ಈಗ ಕೊಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
Powering North Karnataka’s Growth with Wind Energy
— M B Patil (@MBPatil) October 15, 2025
INOX WIND to invest ₹400 Cr in a wind-blade manufacturing plant at Kushtagi, Koppal - creating hundreds of local jobs and giving a big boost to the regional economy.
Met Shri. Santosh Khairnar, President–Corporate Strategy,… pic.twitter.com/LPqgN6yI9p
1,000 ಉದ್ಯೋಗ ಸೃಷ್ಟಿ
ಐನಾಕ್ಸ್‌ವಿಂಡ್ ಕಂಪನಿಯು ಮೊದಲನೆಯ ಹಂತದಲ್ಲಿ 300 ಕೋಟಿ ರೂ. ಹೂಡಲಿದ್ದು ಬ್ಲೇಡುಗಳನ್ನು ತಯಾರಿಸಲಿದೆ. ಎರಡನೆಯ ಹಂತದಲ್ಲಿ 100 ಕೋಟಿ ರೂ. ಹೂಡಿಕೆಯೊಂದಿಗೆ ಗೋಪುರಗಳನ್ನು ಉತ್ಪಾದಿಸಲಿದೆ. ಈ ಯೋಜನೆಯಿಂದ ನೇರವಾಗಿ 1,000 ಉದ್ಯೋಗಗಳು ಸೃಷ್ಟಿಯಾಗಲಿವೆ. ಈ ಕಂಪನಿಯು ಪವನ ವಿದ್ಯುತ್ ಕ್ಷೇತ್ರಕ್ಕೆ ಬೇಕಾಗುವ ಬಾನೆತ್ತರದ ಕಂಬಗಳನ್ನೂ ತಯಾರಿಸಲಿದೆ ಎಂದು ಅವರು ವಿವರಿಸಿದರು.
ಹೊಸ ಕೈಗಾರಿಕಾ ನೀತಿಯ ಅನ್ವಯ ಕೊಡುವ ಎಲ್ಲ ಸೌಲಭ್ಯಗಳನ್ನೂ ಐನಾಕ್ಸ್‌ವಿಂಡ್ ಕಂಪನಿಗೂ ಕೊಡಲಾಗುವುದು. ಇದರಿಂದಾಗಿ ಕಲ್ಯಾಣ ಕರ್ನಾಟಕ ಭಾಗಕ್ಕೂ ಒಳ್ಳೆಯದಾಗಲಿದ್ದು, ಪ್ರಾದೇಶಿಕ ಅಸಮಾನತೆ ನಿವಾರಣೆಯತ್ತ ಒಂದು ದೊಡ್ಡ ಹೆಜ್ಜೆಯಾಗಲಿದೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು.












Click it and Unblock the Notifications