Government Employees: ಸರ್ಕಾರಿ ನೌಕರರಿಗೆ ಸ್ಥಗಿತ ವೇತನ ಬಡ್ತಿ ಸೌಲಭ್ಯ ಕುರಿತು ಮಾಹಿತಿ ಇಲ್ಲಿದೆ
ಬೆಂಗಳೂರು, ಅಕ್ಟೋಬರ್ 11: ಕಾಲಿಕ ವೇತನ ಶ್ರೇಣಿಯಲ್ಲಿ ಗರಿಷ್ಠ ವೇತನ ಹಂತವನ್ನು ತಲುಪಿದ ರಾಜ್ಯ ಸರ್ಕಾರಿ ನೌಕರರಿಗೆ ಸ್ಥಗಿತ ವೇತನ ಬಡ್ತಿ ಸೌಲಭ್ಯಗಳನ್ನು ಮಂಜೂರು ಮಾಡುವ ಕುರಿತು ನಿಗದಿತ ಮಾರ್ಗಸೂಚಿಗಳನ್ನು ಅನುಸರಿಸುವ ಬಗ್ಗೆ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ.
ರಾಜ್ಯ ಸರ್ಕಾರಿ ನೌಕರರು ಅವರು ಧಾರಣೆ ಮಾಡಿರುವ ಹುದ್ದೆಯ ಕಾಲಿಕ ವೇತನ ಶ್ರೇಣಿಯ ಗರಿಷ್ಠ ಹಂತವನ್ನು ತಲುಪಿದ್ದಲ್ಲಿ, ಅಂತಹ ಸರ್ಕಾರಿ ನೌಕರರಿಗೆ ಸ್ಥಗಿತ ವೇತನ ಬಡ್ತಿಗಳನ್ನು ಮಂಜೂರು ಮಾಡುವ ಕುರಿತು ಉಲ್ಲೇಖ(1)ರ ದಿನಾಂಕ: 18.03.1996ರ ಸರ್ಕಾರಿ ಆದೇಶದಲ್ಲಿ ವಿಸ್ತ್ರತವಾದ ಮಾರ್ಗಸೂಚಿಗಳನ್ನು ಹೊರಡಿಸಲಾಗಿರುತ್ತದೆ. ಅದರಂತೆ. ಆದೇಶದಲ್ಲಿ ತಿಳಿಸಿರುವ ಷರತ್ತು ಮತ್ತು ನಿಬಂಧನೆಗಳ ಪೂರೈಕೆಗೊಳಪಟ್ಟು ರಾಜ್ಯ ಸರ್ಕಾರಿ ನೌಕರರಿಗೆ ಗರಿಷ್ಠ 5 ಸ್ಥಗಿತ ವೇತನ ಬಡ್ತಿಗಳನ್ನು, ಆದೇಶದಲ್ಲಿ ತಿಳಿಸಿರುವ ಸಕ್ಷಮ ಪ್ರಾಧಿಕಾರಿಗಳು ಮಂಜೂರು ಮಾಡಬಹುದಾಗಿರುತ್ತದೆ.

2011ರ ಅಧಿಕಾರಿ ವೇತನ ಸಮಿತಿಯ ಶಿಫಾರಸ್ಸಿನಂತೆ, ಮೇಲಿನ ಉಲ್ಲೇಖ(1)ರ ಆದೇಶದನ್ವಯ ಲಭ್ಯವಿದ್ದ ಗರಿಷ್ಠ 5 ಸ್ಥಗಿತ ವೇತನ ಬಡ್ತಿಗಳ ಸಂಖ್ಯೆಯನ್ನು ಉಲ್ಲೇಖ(2)ರ ದಿನಾಂಕ: 14.06.2012ರ ಸರ್ಕಾರಿ ಆದೇಶದಲ್ಲಿ ಗರಿಷ್ಠ 8 ಸ್ಥಗಿತ ವೇತನ ಬಡ್ತಿಗಳಿಗೆ ನಿಗದಿಪಡಿಸಲಾಗಿರುತ್ತದೆ. ಅಂದರೆ, ದಿನಾಂಕ: 01.04.2012ರಿಂದ ಜಾರಿಗೆ ಬರುವಂತೆ ರಾಜ್ಯ ಸರ್ಕಾರಿ ನೌಕರರಿಗೆ ಲಭ್ಯವಿದ್ದ ಸ್ಥಗಿತ ವೇತನ ಬಡ್ತಿಗಳ ಸಂಖ್ಯೆಯನ್ನು 5 ರಿಂದ 8ಕ್ಕೆ ಪರಿಷ್ಕರಿಸಲಾಗಿದ್ದು, ಸ್ಥಗಿತ ವೇತನ ಬಡ್ತಿ ಮಂಜೂರಾತಿ ಕುರಿತಂತೆ ಉಲ್ಲೇಖ(1)ರಲ್ಲಿ ತಿಳಿಸಿರುವ ಷರತ್ತು ಮತ್ತು ನಿಬಂಧನೆಗಳು ಮುಂದುವರೆದು ಅನ್ವಯವಾಗುತ್ತವೆ.
6ನೇ ರಾಜ್ಯ ವೇತನ ಆಯೋಗದ ಶಿಫಾರಸ್ಸಿನಂತೆ, ರಾಜ್ಯ ಸರ್ಕಾರಿ ನೌಕರರ ವೇತನ ಮತ್ತು ಭತ್ಯೆಗಳನ್ನು 2:01.07.20170 ಜಾರಿಗೆ ಬರುವಂತೆ ಪರಿಷ್ಕರಿಸಿ ಆದೇಶಗಳನ್ನು ಹೊರಡಿಸಲಾಗಿರುತ್ತದೆ. ಉಲ್ಲೇಖ(3)ರ ದಿನಾಂಕ: 19.04.2018ರಲ್ಲಿ ಅಧಿಸೂಚಿಸಲಾದ ಕರ್ನಾಟಕ ನಾಗರಿಕ ಸೇವಾ (ಪರಿಷ್ಕೃತ ವೇತನ) ನಿಯಮಗಳು, 2018ರ ನಿಯಮಗಳನ್ವಯ ಸರ್ಕಾರಿ ನೌಕರರ ವೇತನವನ್ನು ಪರಿಷ್ಕೃತ ವೇತನ ಶ್ರೇಣಿಗಳಲ್ಲಿ ನಿಗದಿತ ಸಮಯದೊಳಗೆ ಪುನರ್ ನಿಗದಿಪಡಿಸಿ ಅವರ ಮೂಲ ಸೇವಾ ಪುಸ್ತಕದಲ್ಲಿ ಸೂಕ್ತ ರೀತಿಯಲ್ಲಿ ನಮೂದು ಮಾಡುವ ಬಗ್ಗೆ ಉಲ್ಲೇಖ(4)ರ ದಿನಾಂಕ: 17.02.2020 ಸುತ್ತೋಲೆಯಲ್ಲಿ ವಿವರವಾದ ಸೂಚನೆಗಳನ್ನು ನೀಡಲಾಗಿರುತ್ತದೆ.
ಸರ್ಕಾರಿ ನೌಕರರ ಸೇವಾ ವಿಷಯಗಳಿಗೆ ಸಂಬಂಧಿಸಿದ ಪ್ರತಿ ಹಂತದ ಪ್ರಮುಖ ಅಂಶಗಳನ್ನು ಅವರ ಮೂಲ ಸೇವಾ ಪುಸ್ತಕಗಳಲ್ಲಿ ಸೂಕ್ತ ರೀತಿಯಲ್ಲಿ ನಮೂದು ಮಾಡಬೇಕೆಂದು ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳಲ್ಲಿ ಉದ್ಭಕ್ತವಾಗಿರುತ್ತದೆ. ಈ ಬಗ್ಗೆ ಉಲ್ಲೇಖ (4)ರ ಸುತ್ತೋಲೆಯಲ್ಲಿಯೂ ಸಹ ಸೂಚನೆಗಳನ್ನು ನೀಡಲಾಗಿರುತ್ತದೆ. ಆದರೆ, ಸರ್ಕಾರಿ ನೌಕರರು ಶ್ರೇಣಿಕೃತ ವ್ಯವಸ್ಥೆಯಲ್ಲಿ ಅವರಿಗೆ ಲಭ್ಯವಿರುವ ಪದೋನ್ನತಿ ಅವಕಾಶಗಳನ್ನು ಸ್ವ ಇಚ್ಛೆಯಿಂದ ನಿರಾಕರಿಸಿದ ಬಗ್ಗೆ ಸೇವಾ ಪುಸ್ತಕದಲ್ಲಿ ನಮೂದು ಮಾಡದೇ ಇರುವುದು ಸಹ ಸರ್ಕಾರದ ಗಮನಕ್ಕೆ ಬಂದಿರುತ್ತದೆ. ಇದು ಸ್ಥಗಿತ ವೇತನ ಬಡ್ತಿ ಮಂಜೂರು ಮಾಡುವಲ್ಲಿ ಅನಗತ್ಯ ಗೊಂದಲಗಳಿಗೆ ಕಾರಣವಾಗುತ್ತದೆ.
ಆದಾಗ್ಯೂ, ಸರ್ಕಾರಿ ನೌಕರರಿಗೆ ಲಭ್ಯವಿರುವ ಸ್ಥಗಿತ ವೇತನ ಬಡ್ತಿ ಸೌಲಭ್ಯಗಳನ್ನು ನಿಗದಿತ ಅವಧಿಯೊಳಗೆ ಮಂಜೂರು ಮಾಡದೇ, ಸರ್ಕಾರಿ ನೌಕರರು ನಿವೃತ್ತರಾದ ನಂತರ ಪ್ರಸ್ತಾವನೆಗಳನ್ನು ಸಲ್ಲಿಸುತ್ತಿರುವುದು ಹಾಗೂ ಪದೋನ್ನತಿ ನಿರಾಕರಿಸಿದ ನೌಕರರ ಪ್ರಕರಣಗಳಲ್ಲಿಯೂ ಸಹ ಸ್ಥಗಿತ ವೇತನ ಬಡ್ತಿಗಳನ್ನು ನಿಯಮಬಾಹಿರವಾಗಿ ಮಂಜೂರು ಮಾಡಿರುವ ಪ್ರಕರಣಗಳು ಸರ್ಕಾರದ ಗಮನಕ್ಕೆ ಬಂದಿರುತ್ತವೆ.
ಕಾಲಿಕ ವೇತನ ಶ್ರೇಣಿಗಳಲ್ಲಿ ಲಭ್ಯವಿರುವ ವಾರ್ಷಿಕ ವೇತನ ಬಡ್ತಿ ಸೌಲಭ್ಯಗಳನ್ನು ಮಂಜೂರು ಮಾಡುವುದಕ್ಕೂ ಮತ್ತು ಕಾಲಿಕ ವೇತನ ಶ್ರೇಣಿಗಳ ಗರಿಷ್ಠ ಹಂತವನ್ನು ತಲುಪಿದ ನೌಕರರಿಗೆ ಗರಿಷ್ಠ ಹಂತವನ್ನೂ ಮೀರಿ ಮಂಜೂರು ಮಾಡುವ ಸ್ಥಗಿತ ವೇತನ ಬಡ್ತಿ ಸೌಲಭ್ಯಗಳನ್ನು ಪರಸ್ಪರ ಹೋಲಿಸಲು ಬರುವುದಿಲ್ಲ. ಈ ಸೌಲಭ್ಯಗಳ ಉದ್ದೇಶ, ಮಂಜೂರಾತಿ ಇತ್ಯಾದಿ ಅಂಶಗಳು ಪರಸ್ಪರ ಭಿನ್ನವಾಗಿರುತ್ತವೆ. ಕಾಲಿಕ ವೇತನ ಶ್ರೇಣಿಯ ಗರಿಷ್ಠ ಹಂತವನ್ನು ತಲುಪಿರುವ ಸರ್ಕಾರಿ ನೌಕರನ ಆರ್ಹತೆ ಮತ್ತು ಸೂಕ್ತತೆಯನ್ನು ಖಚಿತಪಡಿಸಿಕೊಂಡ ಬಳಿಕವಷ್ಟೇ ಸ್ಥಗಿತ ವೇತನ ಬಡ್ತಿಗಳನ್ನು ಮಂಜೂರು ಮಾಡುವುದು ಸರಿಯಾದ ಕ್ರಮವಾಗಿರುತ್ತದೆ. ಪರಂತು. ಇದನ್ನು ಸರ್ವೇ ಸಾಮಾನ್ಯವಾಗಿ ಕಾಲಿಕ ವೇತನ ಶ್ರೇಣಿಯಲ್ಲಿ ಲಭ್ಯವಿರುವ ವಾರ್ಷಿಕ ವೇತನ ಬಡ್ತಿಗಳಂತೆ ಪರಿಗಣಿಸಿ ಪ್ರತಿ ವರ್ಷ ಮಂಜೂರು ಮಾಡುವುದು ಸ್ಥಗಿತ ವೇತನ ಬಡ್ತಿ ಸೌಲಭ್ಯಗಳ ಮಂಜೂರಾತಿಯ ಉದ್ದೇಶ ಮತ್ತು ಉಲ್ಲೇಖ(1)ರ ಆದೇಶದ ಮಾರ್ಗಸೂಚಿಗಳಿಗೆ ವ್ಯತಿರಿಕ್ತವಾದ ನಿರ್ಣಯವಾಗುತ್ತದೆ.
ಸರ್ಕಾರಿ ನೌಕರನು ಈ ಕೆಳಕಂಡ ಷರತ್ತು ಮತ್ತು ನಿಬಂಧನೆಗಳನ್ನು ಪೂರೈಸಿರತಕ್ಕದ್ದು:
1. ಸರ್ಕಾರಿ ನೌಕರನು ತೃಪ್ತಿಕರವಾದ ಸೇವಾ ದಾಖಲೆಗಳನ್ನು ಹೊಂದಿರಬೇಕು.
2. ಸ್ಥಗಿತ ವೇತನ ಬಡ್ತಿ ಸೌಲಭ್ಯದ ಮಂಜೂರಾತಿಗಾಗಿ ತೃಪ್ತಿಕರ ಸೇವೆಯನ್ನು ಪದೋನ್ನತಿಗೆ ನಿರ್ಧರಿಸುವ ರೀತಿಯಲ್ಲಿಯೇ ಪರಿಗಣಿಸಿ ನಿರ್ಧರಿಸತಕ್ಕದ್ದು.
3. ಶ್ರೇಣೀಕೃತ ವ್ಯವಸ್ಥೆಯಲ್ಲಿನ ಪದೋನ್ನತಿ ಅವಕಾಶಗಳನ್ನು ನಿರಾಕರಿಸಲ್ಪಟ್ಟ ಅಥವಾ ಸ್ವ-ಇಚ್ಛೆಯಿಂದ ಪದೋನ್ನತಿಯನ್ನು ಬಿಟ್ಟುಕೊಟ್ಟ ಸರ್ಕಾರಿ ನೌಕರರ ಪ್ರಕರಣಗಳಲ್ಲಿ ಸ್ಥಗಿತ ವೇತನ ಬಡ್ತಿಗಳನ್ನು ಮಂಜೂರು ಮಾಡುವಂತಿಲ್ಲ.
ಆದುದರಿಂದ, ಸರ್ಕಾರಿ ನೌಕರರಿಗೆ ಸ್ಥಗಿತ ವೇತನ ಬಡ್ತಿಗಳನ್ನು ಮಂಜೂರು ಮಾಡುವಲ್ಲಿ ಈ ಕುರಿತು ಸಂಬಂಧಿಸಿದ ಸರ್ಕಾರಿ ನೌಕರರಿಂದ ಲಿಖಿತ ಮನವಿ ಸ್ವೀಕೃತವಾದ ಕೂಡಲೇ ಸಕ್ಷಮ ಪ್ರಾಧಿಕಾರಿಗಳು ಈ ಮೇಲಿನ ಸೂಚನೆ ಮತ್ತು ಉಲ್ಲೇಖ(1)ಮತ್ತು (2) ರ ಸರ್ಕಾರಿ ಆದೇಶಗಳಲ್ಲಿನ ಮಾರ್ಗಸೂಚಿಗಳ ಪ್ರಕಾರ ನಿಯಮಾನುಸಾರ ಪರಿಶೀಲಿಸಿ ಸೂಕ್ತ ನಿರ್ಧಾರ ಕೈಗೊಳ್ಳತಕ್ಕದ್ದು.












Click it and Unblock the Notifications