Almatti Dam: ಭರ್ಜರಿ ಮಳೆ; ಮಳೆಯಿಂದ ಆಲಮಟ್ಟಿ ಜಲಾಶಯಕ್ಕೆ ಹೆಚ್ಚಿದ ಒಳಹರಿವು: ಇಲ್ಲಿದೆ ಮಾಹಿತಿ
ವಿಜಯಪುರ, ಜೂನ್ 08: ರಾಜ್ಯದಲ್ಲಿ ಮುಂಗಾರು ಆರಂಭಕ್ಕೂ ಮೊದಲೇ ಉತ್ತಮ ಮಳೆಯಾಗುತ್ತಿದ್ದು, ನದಿ ಹಳ್ಳ ಕೊಳ್ಳಗಳ ನೀರಿನ ಮಟ್ಟ ಹೆಚ್ಚಾಗುತ್ತಿದೆ. ನೆರೆ ರಾಜ್ಯ ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗುತ್ತಿದೆ. ಅದರಂತೆ ಕೃಷ್ಣಾನದಿ ಉಗಮಸ್ಥಾನ ಮಹಾಬಲೇಶ್ವರದಲ್ಲೂ ಭಾರೀ ಮಳೆಯಾಗಿದ್ದು, ಆಲಮಟ್ಟಿ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದೆ. ಇದರಿಂದಾಗಿ ರೈತರು ಸಂತಸಗೊಂಡಿದ್ದಾರೆ.
ವಿಜಯಪುರ ಜಿಲ್ಲೆಯ ಹಲವೆಡೆ ಶುಕ್ರವಾರ ತಡರಾತ್ರಿ ಧಾರಾಕಾರ ಮಳೆ ಸುರಿದಿದೆ. ಇದರಿಂದ ಹಲವೆಡೆ ಮನೆಗಳಿಗೆ ನೀರು ನುಗ್ಗಿದೆ. ಸಿಂದಗಿ ತಾಲೂಕಿನ ಗೋಲಗೇರಿ ಗ್ರಾಮದಲ್ಲಿ ಮನೆಗಳಿಗೆ ನೀರು ನುಗ್ಗಿದೆ. 15ಕ್ಕೂ ಅಧಿಕ ಮನೆಗಳಿಗೆ ಮಳೆ ನೀರು ನುಗ್ಗಿದ್ದು, ಮಳೆಯ ಆರ್ಭಟಕ್ಕೆ ಜನರು ಕಂಗಾಲಾಗಿದ್ದಾರೆ. ಶುಕ್ರವಾರದಿಂದ ಆಲಮಟ್ಟಿ ಜಲಾಶಯಕ್ಕೆ ಒಳಹರಿವು ಆರಂಭವಾಗಿದೆ. ವಿಜಯಪುರ ಜಿಲ್ಲೆಯ ಆಲಮಟ್ಟಿ ಜಲಾಶಯದಲ್ಲಿ 2,578 ಕ್ಯೂಸೇಕ್ ಒಳಹರಿವು ದಾಖಲಾಗಿದೆ.

ಇನ್ನೂ ಮಳೆ ಹೆಚ್ಚಾದ ಹಿನ್ನಲೆಯಲ್ಲಿ ಮನೆಯಿಂದ ನೀರು ಹೊರಹಾಕಲು ಜನರ ಹರಸಾಹಸ ಪಡುವಂತಾಗಿದೆ. ನಿನ್ನೆ ತಡರಾತ್ರಿ 1 ಗಂಟೆಗಳ ಕಾಲ ಸತತವಾಗಿ ಸುರಿದ ಮಳೆಯಿಂದ ಈ ಆವಾಂತರ ಸೃಷ್ಟಿಯಾಗಿದೆ. ಇತ್ತ ಮಳೆ ಹೆಚ್ಚಾದ ಹಿನ್ನಲೆ ಕೃಷ್ಣಾ ನದಿ ಪಾತ್ರದ ಜನರಲ್ಲಿ ಸಂತಸ ಮನೆ ಮಾಡಿದೆ. ಕಳೆದ ವರ್ಷ ಜೂನ್ ಕಳೆದರೂ ಒಳಹರಿವು ಇರಲಿಲ್ಲ. ಈ ವರ್ಷ ಜೂನ್ ಮೊದಲ ವಾರದಲ್ಲೇ ಒಳಹರಿವು ಆರಂಭವಾದ ಕಾರಣ ಕೃಷ್ಣಾ ನದಿ ಪಾತ್ರದ ಜನರಲ್ಲಿ ಸಂತಸ ಮೂಡಿದೆ.
ಕರ್ನಾಟಕದ ಕರವಾಳಿ ಭಾಗವೂ ಸೇರಿದಂತೆ ದಾವಣಗೆರೆ, ಬೆಳಗಾವಿ, ಚಿತ್ರದುರ್ಗ, ಧಾರವಾಡ, ದಕ್ಷಿಣ ಕನ್ನಡ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಮುಂಗಾರು ಮಳೆಯ ಅರ್ಭಟ ಮುಂದುವರಿದಿದೆ. ಉಡುಪಿ , ಉತ್ತರಕನ್ನಡ ಜಿಲ್ಲೆಗಳಿಗೆ ಭಾರೀ ಮಳೆ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. 30-40 ಕಿಮೀ ವೇಗದಲ್ಲಿ ಗಾಳಿ ಬೀಸಲಿದ್ದು, ಮುಂದಿನ 15 ದಿನ ಕರಾವಳಿ ಭಾಗದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.












Click it and Unblock the Notifications