Panchaganga Express: ಬೆಂಗಳೂರು-ಕಾರವಾರ 'ಪಂಚಗಂಗಾ ಎಕ್ಸ್‌ಪ್ರೆಸ್' ರೈಲು ಕುಣಿಗಲ್‌ನಲ್ಲಿ ನಿಲುಗಡೆ- ಸಮಯ, ದಿನಾಂಕ, ವಿವರ
ಬೆಂಗಳೂರು, ಅಕ್ಟೋಬರ್ 10: ಕುಣಿಗಲ್ ಮತ್ತು ಸುತ್ತಮುತ್ತಲಿನ ರೈಲು ಪ್ರಯಾಣಿಕರಿಗೆ ಶುಭ ಸುದ್ದಿಯೊಂದು ಬಂದಿದೆ. ಕುಣಿಗಲ್ ನಿಲ್ದಾಣದಲ್ಲಿ ಪಂಚಗಂಗಾ ಎಕ್ಸ್‌ಪ್ರೆಸ್ ರೈಲಿನ ತಾತ್ಕಾಲಿಕ ನಿಲುಗಡೆಯನ್ನು ಮುಂದುವರಿಸಲು ಭಾರತೀಯ ರೈಲ್ವೆ ನಿರ್ಧರಿಸಿದೆ.
ಈ ಬದಲಾವಣೆಯು ಮೂರು ತಿಂಗಳ ಅವಧಿಗೆ ಪ್ರಾಯೋಗಿಕ ಆಧಾರದ ಮೇಲೆ ಜಾರಿಯಲ್ಲಿರುತ್ತದೆ. ಅಕ್ಟೋಬರ್ 6, 2023 ರಿಂದ ಪ್ರಾರಂಭವಾಗಿ ಜನವರಿ 5, 2024 ರ ವರೆಗೆ ಇದು ಜಾರಿಯಲ್ಲಿ ಇರಲಿದೆ.

ಪಂಚಗಂಗಾ ಎಕ್ಸ್‌ಪ್ರೆಸ್ ರೈಲು ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣದಿಂದ ಕಾರವಾರಕ್ಕೆ ಪ್ರತಿದಿನ ( ತೆರಳಲಿದೆ ಹಾಗೂ ಹಿಂತಿರುಗಲಿದೆ ) ಸಂಚರಿಸಲಿದೆ.
ದೈನಂದಿನ ಸಂಚಾರದ ಸಮಯದಲ್ಲಿ ಕುಣಿಗಲ್ ನಿಲ್ದಾಣದಲ್ಲಿ ನಿಗದಿತ ನಿಲುಗಡೆ ಮಾಡುತ್ತದೆ. ಇದಕ್ಕೆ ಪ್ರಯಾಣಿಕರಿಂದ ಅಭೂತಪೂರ್ವ ಪ್ರತಿಕ್ರಿಯೆ ದೊರೆತಿದೆ. ಈ ಹಿನ್ನೆಲೆಯಲ್ಲಿ ನಿಲುಗಡೆಯನ್ನು ಮುಂದುವರಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ. ಇದಕ್ಕೆ ಕುಣಿಗಲ್ ಭಾಗದ ಪ್ರಯಾಣಿಕರು ಹರ್ಷ ವ್ಯಕ್ತಪಡಿಸಿದ್ದಾರೆ.

ಕುಣಿಗಲ್ ನಿಲುಗಡೆ: ರೈಲಿನ ವೇಳಾಪಟ್ಟಿಯ ವಿವರಗಳು ಇಲ್ಲಿವೆ
ರೈಲು ಸಂಖ್ಯೆ: 16595 / 16596 ಪಂಚಗಂಗಾ ಎಕ್ಸ್‌ಪ್ರೆಸ್
ಮಾರ್ಗ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬೆಂಗಳೂರು ನಿಲ್ದಾಣ - ಕಾರವಾರ - ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬೆಂಗಳೂರು ನಿಲ್ದಾಣ
ಆವರ್ತನ: ಪ್ರತಿದಿನ
ಕುಣಿಗಲ್‌ನಲ್ಲಿ ನಿಲುಗಡೆ ದಿನಾಂಕಗಳು: ಅಕ್ಟೋಬರ್ 6, 2023 ರಿಂದ ಜನವರಿ 5, 2024
ಆಗಮನ ಮತ್ತು ನಿರ್ಗಮನ: 16595: 19:42 / 19:43 ಗಂಟೆಗಳು, 16596: 05:09 / 05:10 ಗಂಟೆಗಳು
ಈ ಹೆಚ್ಚುವರಿ ನಿಲುಗಡೆಯೊಂದಿಗೆ ಪ್ರಯಾಣಿಕರು ಈಗ ತಮ್ಮ ಪ್ರಯಾಣವನ್ನು ಹೆಚ್ಚು ಅನುಕೂಲಕರವಾಗಿ ಯೋಜಿಸಬಹುದು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಈ ತಾತ್ಕಾಲಿಕ ನಿಲುಗಡೆ ವಿಸ್ತರಣೆಯು ಪ್ರಾಯೋಗಿಕ ಆಧಾರದ ಮೇಲೆ ಎಂಬುದನ್ನು ಪ್ರಯಾಣಿಕರು ದಯವಿಟ್ಟು ಗಮನಿಸಿಬೇಕು. ಮುಂದಿನ ಅಪ್‌ಡೇಟ್ ಅನ್ನು ಜನವರಿ ಬಳಿಕ ತಿಳಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ರೈಲು ಸಂಖ್ಯೆ 16595/16596 ಬೆಂಗಳೂರು-ಕಾರವಾರ-ಬೆಂಗಳೂರು ಎಕ್ಸ್‌ಪ್ರೆಸ್‌ಗೆ ಪಂಚಗಂಗಾ ಎಕ್ಸ್‌ಪ್ರೆಸ್ ಎಂದು ಹೆಸರಿಸುವ ಪ್ರಸ್ತಾವನೆಯನ್ನು ರೈಲ್ವೆ ಸಚಿವಾಲಯ 2021 ರಲ್ಲಿ ಅನುಮೋದಿಸಿದೆ.
ಮೀನುಗಾರಿಕೆ, ಕೃಷಿ, ಪ್ರವಾಸೋದ್ಯಮಕ್ಕೆ ಸಹಕಾರಿಯಾಗಿರುವ ಪಂಚಗಂಗಾ ನದಿಯ ಹೆಸರನ್ನು ಈ ರೈಲಿಗೆ ಇಡಲಾಗಿದೆ. ಪಂಚಗಂಗಾವಳಿಯು ಉಡುಪಿ ಜಿಲ್ಲೆಯ ಉತ್ತರ ಭಾಗದ ಜನರ ಜೀವನಾಡಿಯಾಗಿದೆ. ಅದೇ ರೀತಿ ಬೆಂಗಳೂರು-ಕಾರವಾರ ಎಕ್ಸ್‌ಪ್ರೆಸ್ ಕರಾವಳಿಯ ಜೀವನಾಡಿಯಾಗಲಿದೆ ಎಂದು ಈ ಹಿಂದೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದರು.












Click it and Unblock the Notifications