ಭಾರತದ ಕ್ರೀಡಾಪಟುಗಳಿಗೆ ಸೌಲಭ್ಯ ಬೇಕಾದಷ್ಟಿದೆ ಮೆಡಲ್ ಮಾತ್ರ ಸಿಗ್ತಿಲ್ಲ: ಜಿ. ಪರಮೇಶ್ವರ
ಭಾರತದಲ್ಲಿ ಕ್ರೀಡಾಪಟುಗಳಿಗೆ ಬೇಕಾದ ಎಲ್ಲ ಸೌಲಭ್ಯವೂ ಸಿಗುತ್ತಿದೆ. ಆದರೆ, ಒಲಿಂಪಿಕ್ಸ್ ಸೇರಿದಂತೆ ಯಾವುದೇ ಕ್ರೀಡಾಕೂಟದಲ್ಲೂ ನಿರೀಕ್ಷಿತ ಪ್ರಮಾಣದಲ್ಲಿ ಮೆಡಲ್ ಗಳು ಸಿಗ್ತಿಲ್ಲ ಎಂದು ಗೃಹ ಸಚಿವ ಜಿ. ಪರಮೇಶ್ವರ ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಭಾರತೀಯ ಕ್ರೀಡಾಪಟುಗಳಿಗೆ ಯಾವುದೇ ರೀತಿಯ ಕೊರತೆಯಾಗಿಲ್ಲ. ಎಲ್ಲರ ನಿರೀಕ್ಷೆಯಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ವಿವಿಧ ಕ್ರೀಡಾಕೂಟಗಳಲ್ಲಿ ಚಾಂಪಿಯನ್ ಶಿಪ್, ಮೆಡಲ್ ಮಾತ್ರ ತರಲಾಗುತ್ತಿಲ್ಲ. ಆಫ್ರಿಕಾ ದೇಶಗಳು ಸೇರಿದಂತೆ ಸಣ್ಣ ದೇಶಗಳಲ್ಲಿ ಕ್ರೀಡೆಗೆ ಯಾವ ಸವಲತ್ತುಗಳು ಇಲ್ಲ. ಆದರೆ, ಅಲ್ಲಿನ ಕ್ರೀಡಾಪಟುಗಳು ಒಲಂಪಿಕ್‌ನಲ್ಲಿ ಮೆಡಲ್ ತರುತ್ತಿದ್ದಾರೆ.

ಭಾರತದ ಯುವಕರು ಬೇರೆಯವರಿಗಿಂತ ಕಡಿಮೆಯೇನಿಲ್ಲ. ಆದರೆ, ದೃಢ ಸಂಕಲ್ಪ ಮತ್ತು ಛಲದ ಕೊರತೆಯಿಂದ ನಮ್ಮ ದೇಶಕ್ಕೆ ಮೆಡಲ್ ಸಿಗ್ತಿಲ್ಲ. ನಮ್ಮ ದೇಶದ ಯುವಕರು ಸಹ ದೃಢ ಸಂಕಲ್ಪ ಮಾಡಬೇಕು ಎಂದರು.
ಬೆಂಗಳೂರಿನ ಕಂಠೀರವ ಕ್ರೀಡಾಂಗಣದ ಒಲಂಪಿಕ್ ಭವನದಲ್ಲಿ ರಾಜ್ಯ ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆಯು ಆಯೋಜಿಸಿದ್ದ ಪದ್ಮಭೂಷಣ, ಹಾಕಿಪಟು ಮೇಜರ್ ಧ್ಯಾನ್ ಚಂದ್ ಜನ್ಮದಿನ ಹಾಗೂ ರಾಷ್ಟ್ರೀಯ ಕ್ರೀಡಾ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅನೇಕ ಯುವಕರಲ್ಲಿ ಕ್ರೀಡಾ ಬದ್ಧತೆ ಕಡಿಮೆಯಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಈಗ ಕ್ರೀಡಾಪಟುಗಳಿಗೆ ಸಿಗುತ್ತಿರುವ ಸವಲತ್ತುಗಳನ್ನು ಈ ಹಿಂದೆ ಬೇರೆ ಯಾವ ಸರ್ಕಾರಗಳು ನೀಡಿಲ್ಲ. ರಾಜ್ಯದಲ್ಲಿ ಕಂಠೀವರ ಕ್ರೀಡಾಂಗಣದಲ್ಲಿ ಮಾತ್ರ ಒಂದೇ ಒಂದು ಸಿಂಡರ್ ಟ್ರ್ಯಾಕ್ ಮಾತ್ರ ಇತ್ತು. ಈಗ ಸಿಂಥೆಟಿಕ್ ಟ್ರ್ಯಾಕ್ ಮಾಡಲಾಗಿದೆ. ರಾಜ್ಯದ 18 ಜಿಲ್ಲೆಗಳಲ್ಲಿ ಸಿಂಥೆಟಿಕ್ ಟ್ರ್ಯಾಕ್ ಕ್ರೀಡಾಂಗಣಗಳಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೀಡುತ್ತಿರುವ ಎಲ್ಲ ರೀತಿಯ ಸಹಕಾರಗಳ ಪ್ರಯೋಜನ ಪಡೆದುಕೊಂಡು, ಸಾಧನೆ ಮಾಡಿಯೇ ತೀರುತ್ತೇವೆ ಎಂಬ ಸಂಕಲ್ಪ ಮಾಡಿದ್ರೆ ನಮ್ಮ ದೇಶಕ್ಕೂ ಮೆಡಲ್ ಬರುತ್ತೆ ಎಂದರು.
ದೇಶದಲ್ಲಿ ಕ್ರೀಡೆಗೆ ಹೆಚ್ಚು ಪ್ರೋತ್ಸಾಹ ಸಿಗುತ್ತಿದೆ. ಇದು ಎರಡು ಕಾರಣಕ್ಕೆ ಬಹಳ ಮುಖ್ಯ. ಕತಾರ್ ದೇಶದ ದೋಹಾದಲ್ಲಿ ಎಂಟು ಕ್ರೀಡಾಂಗಣಗಳನ್ನು ನಿರ್ಮಿಸಲಾಗಿದೆ. ಸಣ್ಣ ದೇಶಗಳು ಕ್ರೀಡೆಗೆ ನೀಡುತ್ತಿರುವ ಪ್ರೋತ್ಸಾಹವನ್ನು ನೀಡುತ್ತಿವೆ. ಯುವಕರಲ್ಲಿ ಕ್ರೀಡಾಮನೋಭಾವನೆ ಬೆಂಬಲಿಸುವುದರಿಂದ ಡ್ರಗ್ಸ್, ಮದ್ಯ ವ್ಯಸನ ಸೇರಿದಂತೆ ಇನ್ನಿತರ ದುಶ್ಚಟಗಳಿಂದ ದೂರ ಉಳಿಯುತ್ತಾರೆ.
ದೇಶದ ಆರೋಗ್ಯ ಸ್ಥಿತಿ ಉತ್ತಮವಾಗುತ್ತೆ. ಇದೇ ಕಾರಣದಿಂದ ಭಾರತವು ಸಹ ಕ್ರೀಡೆಗೆ ಹೆಚ್ಚು ಒತ್ತು ನೀಡುತ್ತಿದೆ. 2036 ಒಲಂಪಿಕ್ ಕ್ರೀಡಾಕೂಟವನ್ನು ಭಾರತಕ್ಕೆ ತರುವ ಪ್ರಯತ್ನವನ್ನು ಕೇಂದ್ರ ಸರ್ಕಾರ ನಡೆಸುತ್ತಿದೆ. ಯುವಕರು ಕ್ರೀಡೆಗೆ ಬಂದರೆ ದುಶ್ಚಟಗಳು ನಿಂತು ಹೋಗುತ್ತವೆ.
ಕ್ರೀಡೆಯ ಬಗ್ಗೆ ಧ್ಯಾನ್ ಚಂದ್ ಅವರಿಗಿದ್ದ ಮನಸ್ಥಿತಿ ಮತ್ತು ಬದ್ಧತೆಯನ್ನು ಯುವ ಕ್ರೀಟಾಪಟುಗಳು ಅನಕರಿಸಿದರೆ ಯಶಸ್ಸು ಕಾಣಲು ಸಾಧ್ಯ ಎಂದರು.
ನಾನು ಈ ಹಿಂದೆ ಉನ್ನತ ಶಿಕ್ಷಣ ಸಚಿವನಾಗಿದ್ದಾಗ ಕ್ರೀಡಾಪಟುಗಳಿಗೆ ಮೊದಲ ಬಾರಿಗೆ ಮೀಸಲಾತಿ ಕಲ್ಪಿಸಲಾಯಿತು. ಪೊಲೀಸ್ ಇಲಾಖೆಯ ನೇಮಕಾತಿಯಲ್ಲಿಯೂ ಸಹ ಶೇ. 3ರಷ್ಟು ಮೀಸಲಾತಿ ಕಲ್ಪಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲ್ಲ ಇಲಾಖೆಯ ನೇಮಕಾತಿಯಲ್ಲಿ ಮೀಸಲಾತಿ ಕಲ್ಪಿಸಿ, ಎಲ್ಲ ರೀತಿಯ ಉತ್ತೇಜನ ನೀಡುತ್ತಿದ್ದಾರೆ ಎಂದರು.
ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಮ್ಯೂಸಿಯಂ
ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಮ್ಯೂಸಿಯಂ ಪ್ರಾರಂಭಿಸುವ ನಿಟ್ಟಿನಲ್ಲಿ ಸಕಲ ಸಿದ್ಧತೆಯನ್ನು ರಾಜ್ಯ ಸರ್ಕಾರ ಮಾಡಿಕೊಳ್ಳುತ್ತಿದೆ ಎಂದು ಹೋಮ್ ಮಿನಿಸ್ಟರ್ ಜಿ ಪರಮೇಶ್ವರ ಅವರು ಹೇಳಿದರು.
ಅಲ್ಲದೇ ಬೆಂಗಳೂರು ಐಟಿ ಸಿಟಿ ಎಂದು ವಿಶ್ವದ ಗಮನ ಸೆಳೆದಿದೆ. ಇದೇ ರೀತಿಯಾಗಿ ಕ್ರೀಡೆಯಲ್ಲಿಯು ಸಹ ಪ್ರಪಂಚದ ಗಮನ ಸೆಳೆಯಬೇಕಿದೆ. ದೇವನಹಳ್ಳಿ ಸಮೀಪ 50 ಎಕರೆ ಜಾಗದಲ್ಲಿ ಸ್ಪೋರ್ಟ್ಸ್ ಸಿಟಿ ನಿರ್ಮಿಸಲು ಸರ್ಕಾರ ಆದೇಶ ಮಾಡಿದೆ. ಬೆಂಗಳೂರು ನಗರದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಮ್ಯೂಸಿಯಂ ನಿರ್ಮಿಸಲು ಚಿಂತನೆ ನಡೆದಿದೆ ಎಂದರು.
ರಾಜ್ಯದ ಕ್ರೀಡಾಪಟುಗಳಿಗೆ ಸನ್ಮಾನ
ಇನ್ನು ಕಾರ್ಯಕ್ರಮದಲ್ಲಿ ಪ್ಯಾರೀಸ್ ಒಲಂಪಿಕ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ ರಾಜ್ಯದ ಕ್ರೀಡಾಪಟುಗಳನ್ನು ಸನ್ಮಾನಿಸಿ, ಗೌರವಿಸಲಾಯಿತು.












Click it and Unblock the Notifications