ಭಾರತವು ಜ್ಞಾನದ ಮೂಲಕ ವಿಶ್ವಗುರುವಾಗುವತ್ತ ದಾಪುಗಾಲು: ಆರ್.ಅಶೋಕ್
ಬೆಂಗಳೂರು,ಡಿಸೆಂಬರ್ 10: ಭಾರತವು ಜ್ಞಾನದ ಮೂಲಕ ವಿಶ್ವಗುರುವಾಗುವತ್ತ ದಾಪುಗಾಲಿಟ್ಟಿದೆ. ಇದಕ್ಕೆ ವಿದ್ಯಾರ್ಥಿಗಳೇ ಸಾಧಕರು ಮತ್ತು ಸಾಧನವಾಗಬೇಕು ಎಂದು ಕಂದಾಯ ಸಚಿವ ಆರ್.ಅಶೋಕ್ ಕರೆ ನೀಡಿದರು.
ಬನಶಂಕರಿಯ ಪಿಇಎಸ್ ವಿಶ್ವವಿದ್ಯಾಲಯದಲ್ಲಿ ಏರ್ಪಡಿಸಿದ್ದ 'ವಿಜ್ಞಾನ ಮೇಳ'ದಲ್ಲಿ ಮಾತನಾಡಿದ ಅವರು, ಜ್ಞಾನಕ್ಕೆ ಸರ್ಕಾರಿ ಅಥವಾ ಖಾಸಗಿ ಶಾಲೆ ಎಂಬ ಬೇಧವಿಲ್ಲ. ಬುದ್ಧಿಯನ್ನು ಸರಿಯಾಗಿ ಉಪಯೋಗಿಸಿದರೆ ಜ್ಞಾನಿಗಳಾಗುತ್ತಾರೆ. ಆದ್ದರಿಂದ ಮಕ್ಕಳು ತಮ್ಮಲ್ಲಿರುವ ಬುದ್ಧಿಶಕ್ತಿಯನ್ನು ದೇಶದ ಪ್ರಗತಿಗೆ ಉಪಯೋಗಿಸಬೇಕು ಎಂದು ತಿಳಿಸಿದರು.
ಒಬ್ಬ ವಿಜ್ಞಾನಿ ಮನೆಗಷ್ಟೇ ಸಂಪತ್ತಾಗದೆ ರಾಜ್ಯಕ್ಕೆ, ದೇಶಕ್ಕೇ ಸಂಪತ್ತಾಗುತ್ತಾರೆ. ವಿಜ್ಞಾನಕ್ಕೆ ಭಾರತವು ನೀಡಿದ ಕೊಡುಗೆ ಅಮೂಲ್ಯವಾಗಿದ್ದು ವಿಶ್ವಗುರುವಾಗುವತ್ತ ಹೊರಟಿದ್ದು ಇದಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಅಭಿಪ್ರಾಯಪಟ್ಟರು. ನಮ್ಮಲ್ಲಿರುವ ಜ್ಞಾನವನ್ನು ಸರಿಯಾಗಿ ಉಪಯೋಗಿಸಿಕೊಳ್ಳಬೇಕು. ಗ್ರಂಥಾಲಯಗಳು ಜ್ಞಾನದ ಕಣಜವಾಗಿದ್ದು, ಸದುಪಯೋಗ ಮಾಡಿಕೊಳ್ಳಬೇಕು. ಜ್ಞಾನವು ಯಾವುದೇ ಜಾತಿ, ಧರ್ಮಕ್ಕೆ ಸೀಮಿತವಾಗಿಲ್ಲ. ನಾನು ಸರ್ಕಾರಿ ಶಾಲೆಯ ವಿದ್ಯಾರ್ಥಿ. ಪಿಇಎಸ್ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕರೂ ಆಗಿರುವ ಸರ್ಕಾರದ ಶಿಕ್ಷಣ ಸುಧಾರಣಾ ಸಲಹೆಗಾರ ಪ್ರೊ.ಎಂ.ಆರ್.ದೊರೆಸ್ವಾಮಿಯವರೂ ಸರ್ಕಾರಿ ಶಾಲೆಯ ವಿದ್ಯಾರ್ಥಿ ಎಂದು ಉದಾಹರಣೆ ನೀಡಿದರು.

ಸಾಧಿಸಬೇಕು ಎಂಬ ಛಲ ನಮ್ಮಲ್ಲಿ ಇರ್ಬೇಕು, ಸಾಧಿಸಬೇಕು ಎಂಬ ಹಂಬಲ ಇದ್ದು ಪರಿಶ್ರಮಪಟ್ಟವರು ಸಾಧಕರಾಗುತ್ತಾರೆ. ಇಲ್ಲದಿದ್ದರೆ ಸೋಮಾರಿಗಳಾಗುತ್ತಾರೆ. ಸರ್ಕಾರಿ ಶಾಲೆಯ ಮಕ್ಕಳಿಗಾಗಿ ದೊರೆಸ್ವಾಮಿಯವರು ಇಂತಹ ಅಪರೂಪದ ವಿಜ್ಞಾನ ಮೇಳ ಆಯೋಜಿಸಿದ್ದಾರೆ. ಸರ್ಕಾರದ ಪರವಾಗಿ ಇದಕ್ಕೆ ಧನ್ಯವಾದ ಸಲ್ಲಿಸುತ್ತೇನೆ. ಪ್ರಧಾನಿ ನರೇಂದ್ರ ಮೋದಿ ಅವರು ಯೋಗವನ್ನು ವಿಶ್ವಕ್ಕೆ ಪರಿಚಯಿಸಿದರು. ಹೊಸ ಹೊಸ ಅವಿಷ್ಕಾರಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಪ್ರೋತ್ಸಾಹ ನೀಡುತ್ತಿವೆ ಎಂದು ತಿಳಿಸಿದರು.
ಇನ್ನೂ ಪ್ರೊ.ಎಂ.ಆರ್. ದೊರೆಸ್ವಾಮಿ ಮಾತನಾಡಿ, ರಾಜ್ಯದ ಎಲ್ಲ ಸರ್ಕಾರಿ ಶಾಲೆಯ ಮಕ್ಕಳಿಗೆ ಹೈಟೆಕ್ ಪ್ರಯೋಗಾಲಯ ಲಭ್ಯವಾಗಬೇಕು. ಬಡವರ ಮಕ್ಕಳು ವಿದ್ಯಾಭ್ಯಾಸ ಮಾಡುವ ಸರ್ಕಾರಿ ಶಾಲೆಗಳಲ್ಲಿ ಶ್ರೀಮಂತರ ಮಕ್ಕಳು ಅಭ್ಯಾಸ ಮಾಡುವ ಖಾಸಗಿ ಶಾಲೆಗಳಂತೆ ಎಲ್ಲ ಸೌಲಭ್ಯ ದೊರೆಯುವಂತಾಗಬೇಕು. ಜ್ಞಾನ ವಿಕಾಸನಕ್ಕೆ ವಿಜ್ಞಾನ ಮೇಳ ಸಹಕಾರಿಯಾಗಿದೆ. ಇದೊಂದು ವಿಶೇಷ ಅನುಭವವಾಗಿದೆ. ಸಾಧನೆಯ ಮಾರ್ಗದಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಂಡು ಉನ್ನತಿ ಸಾಧಿಸಿ ರಾಜ್ಯಕ್ಕೆ, ದೇಶಕ್ಕೆ ಕೀರ್ತಿ ತರ್ಬೇಕು ಎಂದರು.
ಈ ನಿಟ್ಟಿನಲ್ಲಿ ಎಲ್ಲ ಚುನಾಯಿತ ಜನಪ್ರತಿನಿಧಿಗಳು, ವಿಶ್ವವಿದ್ಯಾಲಯಗಳು ಶಾಲಾ ದತ್ತು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು. ಜ್ಞಾನ-ವಿಜ್ಞಾನ, ಕೌಶಲಗಳ ತ್ರಿವೇಣಿ ಸಂಗಮವಾದ ಈ ಕಾರ್ಯಕ್ರಮವನ್ನು ವಿದ್ಯಾರ್ಥಿಗಳು ಸದುಪಯೋಗ ಮಾಡಿಕೊಳ್ಳಬೇಕು. ಕರ್ನಾಟಕದ ಎಲ್ಲ 70 ವಿವಿಗಳೂ ತಮ್ಮ ವ್ಯಾಪ್ತಿಯಲ್ಲಿ ಇಂತಹ ಮೇಳಗಳನ್ನು ಆಯೋಜಿಸಲಿ ಎಂದು ಆಶಿಸಿದರು.












Click it and Unblock the Notifications