ಚಿತ್ರಗಳು : ಲಕ್ಷ್ಮಣ್ ಪುರಿ ಸ್ಲಂನಲ್ಲಿ ಯಡಿಯೂರಪ್ಪ ವಾಸ್ತವ್ಯ
ಬೆಂಗಳೂರು, ಫೆಬ್ರವರಿ 11 : ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಬಿಜೆಪಿ ನಾಯಕರು 'ಸ್ಲಂ ವಾಸ್ತವ್ಯ' ಆರಂಭಿಸಿದ್ದಾರೆ. ಬಿ.ಎಸ್.ಯಡಿಯೂರಪ್ಪ ಸೇರಿದಂತೆ ವಿವಿಧ ನಾಯಕರು ಶನಿವಾರ ಸ್ಲಂ ನಿವಾಸಿಗಳ ಮನೆಯಲ್ಲಿ ವಾಸ್ತವ್ಯ ಹೂಡಿದರು.
ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ, ಸಂಸದ ಪಿ.ಸಿ.ಮೋಹನ್, ಶೋಭಾ ಕರಂದ್ಲಾಜೆ, ಶ್ರೀರಾಮುಲು, ಮಾಜಿ ಸಚಿವ ಆರ್.ಅಶೋಕ್ ಸೇರಿದಂತೆ ಹಲವು ನಾಯಕರು ಸ್ಲಂ ವಾಸ್ತವ್ಯ ಮಾಡಿದರು.
ಯಡಿಯೂರಪ್ಪ ಅವರು ಬೆಂಗಳೂರಿನ ಗಾಂಧಿನಗರ ಕ್ಷೇತ್ರದ ಲಕ್ಷಣ್ ಪುರಿ ಸ್ಲಂನಲ್ಲಿ ಆಟೋ ಚಾಲಕ ಮುನಿರತ್ನಂ ಅವರ ನಿವಾಸದಲ್ಲಿ ವಾಸ್ತವ್ಯ ಹೂಡಿದ್ದರು. ಸಂಸದ ಪಿ.ಸಿ.ಮೋಹನ್, ಮಾಜಿ ಸಚಿವ ಆರ್.ಅಶೋಕ್ ಅವರು ಯಡಿಯೂರಪ್ಪ ಜೊತೆಗಿದ್ದರು.
ಭಾನುವಾರ ಬೆಳಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಬಿ.ಎಸ್.ಯಡಿಯೂರಪ್ಪ, 'ಕಾಂಗ್ರೆಸ್ ನಾಯಕರು ಎಂದಾದರೂ ಸ್ಲಂಗಳಿಗೆ ಭೇಟಿ ನೀಡಿದ್ದಾರಾ?, ಅವರ ಸಮಸ್ಯೆ ಆಲಿಸಿದ್ದಾರಾ?' ಎಂದು ಪ್ರಶ್ನಿಸಿದರು.
ಚಿತ್ರಗಳು : ಲಕ್ಷ್ಮಣ್ ಪುರಿ ಸ್ಲಂನಲ್ಲಿ ಯಡಿಯೂರಪ್ಪ ವಾಸ್ತವ್ಯ
ಹುಬ್ಬಳ್ಳಿಯಲ್ಲಿ ಜಗದೀಶ್ ಶೆಟ್ಟರ್, ಶಿವಮೊಗ್ಗದಲ್ಲಿ ಈಶ್ವರಪ್ಪ, ಮೈಸೂರಿನಲ್ಲಿ ಶೋಭಾ ಕರಂದ್ಲಾಜೆ, ಬಳ್ಳಾರಿಯಲ್ಲಿ ಶ್ರೀರಾಮುಲು ಅವರು ಸ್ಲಂ ನಿವಾಸಿಗಳ ಮನೆಯಲ್ಲಿ ವಾಸ್ತವ್ಯ ಹೂಡಿದ್ದರು..

ಸ್ಲಂ ನಿವಾಸಿಗಳ ಸಮಸ್ಯೆ ಪುಸ್ತಕ
ಬೆಂಗಳೂರಿನ ಲಕ್ಷಣ್ ಪುರಿ ಸ್ಲಂನಲ್ಲಿ ಆಟೋ ಚಾಲಕ ಮುನಿರತ್ನಂ ಅವರ ನಿವಾಸದಲ್ಲಿ ವಾಸ್ತವ್ಯ ಹೂಡಲು ಆಗಮಿಸಿದ ಯಡಿಯೂರಪ್ಪ ಅವರಿಗೆ ಭವ್ಯ ಸ್ವಾಗತ ಸಿಕ್ಕಿತು. ಭಾನವಾರ ಬೆಳಗ್ಗೆ ಯಡಿಯೂರಪ್ಪ ಅವರು ಸ್ಲಂ ನಿವಾಸಿಗಳ ಸಮಸ್ಯೆಗಳ ಕುರಿತು ಪುಸ್ತಕವನ್ನು ಬಿಡುಗಡೆ ಮಾಡಿದರು.

ಸ್ಥಳೀಯ ಜನರ ಜೊತೆ ಮಾತುಕತೆ, ಊಟ
ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಹುಬ್ಬಳ್ಳಿಯ ಚಾಮುಂಡೇಶ್ವರಿ ನಗರ ಸ್ಲಂನಲ್ಲಿನ ವೆಂಕಟೇಶ ಗುತ್ತಿ ಅವರ ನಿವಾಸದಲ್ಲಿ ವಾಸ್ತವ್ಯ ಹೂಡಿದರು. ಸ್ಥಳೀಯ ಜನರ ಜೊತೆ ಸಮಸ್ಯೆಗಳ ಬಗ್ಗೆ ಸಮಾಲೋಚನೆ ನಡೆಸಿ, ಅಲ್ಲಿಯೇ ಊಟ ಸವಿದರು.

ಶ್ರೀರಾಂಪುರ ಕಾಲೋನಿ ಸ್ಲಂ
ಬಳ್ಳಾರಿ ಸಂಸದ ಶ್ರೀರಾಮುಲು ಅವರು ಸೋಮಶೇಖರ ರೆಡ್ಡಿ ಅವರ ಜೊತೆ ಬಳ್ಳಾರಿ ನಗರದ ಶ್ರೀರಾಂಪುರ ಕಾಲೋನಿಯ ಸ್ಲಂನಲ್ಲಿ ವಾಸ್ತವ್ಯ ಹೂಡಿದ್ದರು.

ಆರತಿ ಬೆಳಗುವ ಮೂಲಕ ಸ್ವಾಗತ
ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಅವರು ಶಿವಮೊಗ್ಗ ನಗರದ ನ್ಯೂ ಮಂಡ್ಲಿಯ ಸ್ಲಂನಲ್ಲಿ ಶನಿವಾರ ರಾತ್ರಿ ವಾಸ್ತವ್ಯ ಹೂಡಿದ್ದರು. ಸ್ಲಂಗೆ ಆಗಮಿಸಿದ ಈಶ್ವರಪ್ಪ ಅವರಿಗೆ ಆರತಿ ಬೆಳಗುವ ಮೂಲಕ ಸ್ವಾಗತ ಕೋರಲಾಯಿತು.












Click it and Unblock the Notifications