ರಸ್ತೆ ಅಪಘಾತದಲ್ಲಿ ಸಾಕು ನಾಯಿ ಗಾಯಗೊಳಿಸಿದರೆ ಅಪರಾಧವಲ್ಲ- ಹೈಕೋರ್ಟ್
ಬೆಂಗಳೂರು.ಅ.30. ರಸ್ತೆ ಅಪಘಾತದಲ್ಲಿ ಕಾರು ಚಲಾಯಿಸಿ ಸಾಕು ನಾಯಿಯನ್ನು ಗಾಯಗೊಳಿಸಿ, ಅದರ ಸಾವಿಗೆ ಕಾರಣವಾದರೆ ಅದು ಅಪರಾಧವಲ್ಲ ಎಂದು ಹೈಕೋರ್ಟ್ ಆದೇಶ ನೀಡಿದೆ. ಅಲ್ಲದೆ, ಇದೇ ಆರೋಪದಡಿ ಕಾರು ಚಾಲಕನ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಕೇಸ್ ಅನ್ನು ಹೈಕೋರ್ಟ್ ರದ್ದುಪಡಿಸಿದೆ.
ಭಾರತೀಯ ದಂಡ ಸಂಹಿತೆ(ಐಪಿಸಿ) 279ರ (ನಿರ್ಲಕ್ಷ್ಯದ ಚಾಲನೆ) ಮಾನವರಿಗೆ ಮಾತ್ರ ಅನ್ವಯಿಸುತ್ತವೆ ಎಂದು ತಿಳಿಸಿರುವ ಹೈಕೋರ್ಟ್, ರಸ್ತೆ ಅಪಘಾತಗಳಲ್ಲಿ ಸಾಕು ನಾಯಿಗಳಿಗೆ ಪೆಟ್ಟಾದಲ್ಲಿ ಇದೇ ಸೆಕ್ಷನ್ ಅಡಿಯಲ್ಲಿ ಕ್ರಮ ಕೈಗೊಳ್ಳುವುದಕ್ಕೆ ಸಾಧ್ಯವಿಲ್ಲ ಎಂದು ಅಭಿಪ್ರಾಯ ಪಟ್ಟಿದೆ.
ಆರೋಪಿಯಾದ ಕುರುಬರಹಳ್ಳಿಯ ನಿವಾಸಿ ಜಿ.ಪ್ರತಾಪ್ ಕುಮಾರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರಿದ್ದ ಏಕಸದಸ್ಯಪೀಠ, 'ಸಾರ್ವಜನಿಕ ರಸ್ತೆಯಲ್ಲಿ ಅತಿ ವೇಗದ ವಾಹನ ಚಾಲನೆ ಮಾಡಿದ ಸಂದರ್ಭದಲ್ಲಿ ಅಪಘಾತ ಸಂಭವಿಸಿ ಸಾಕು ನಾಯಿ ಮೃತಪಟ್ಟರೆ ಅಂತಹ ಪ್ರಕರಣವನ್ನು ಭಾರತೀಯ ದಂಡ ಸಂಹಿತೆ 1860ರ (ಐಪಿಸಿ) ಕಲಂ 279ರ ವ್ಯಾಪ್ತಿಯಲ್ಲಿ ಪರಿಗಣಿಸಲು ಆಗದು. ಮಾನವರ ಹೊರತಾದ ಜೀವಗಳಿಗೆ ಉಂಟಾದ ಗಾಯದ ಬಗ್ಗೆ ಈ ಕಲಂ ಎಲ್ಲೂ ವಿವರಿಸುವುದಿಲ್ಲ' ಎಂದು ಅಭಿಪ್ರಾಯಪಟ್ಟಿದೆ.

ಹೈಕೋರ್ಟ್ ಏನು ಹೇಳಿದೆ?
ಪ್ರಕರಣ ಸಂಬಂಧ ದೂರುದಾರರ ಪರ ವಕೀಲರು, ಸುಪ್ರೀಂಕೋರ್ಟ್‌ನ ಪ್ರಕರಣವೊಂದರ ಹೇಳಿರುವ ಪ್ರಾಣಿಗಳಿಗೂ ಬದುಕುವ ಹಕ್ಕಿದೆ ಮತ್ತು ಪ್ರಾಣಿಗಳನ್ನು ಸಮಾನವಾಗಿ ಕಾಣಬೇಕು. ಆದರೆ, ಯಾವುದೇ ಪ್ರಾಣಿಯೂ ಮನುಷ್ಯನಿಗಿಂತ ಶ್ರೇಷ್ಠವಲ್ಲ ಎಂಬ ಅಂಶವನ್ನು ಉಲ್ಲೇಖಿಸಿದ್ದಾರೆ. ಆದರೆ, ಈ ಅಂಶ ಪ್ರಾಣಿಗಳ ಮೇಲಿನ
ಕ್ರೌರ್ಯ ತಡೆ ಕಾಯಿದೆಗೆ ಅನ್ವಯವಾಗಲಿದೆ. ಆದರೆ, ಐಪಿಸಿ ಕಾಯಿದೆಯಲ್ಲಿ ಅನ್ವಯವಾಗುವುದಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.
ಅಂತೆಯೇ, 'ಮೋಟಾರು ವಾಹನ ಕಾಯ್ದೆ? 1988ರ ಕಲಂ 134 (ಎ) ಮತ್ತು (ಬಿ) ಅನುಸಾರ ವಾಹನ ಚಾಲಕ ಯಾವುದಾದರೂ ವ್ಯಕ್ತಿಗೆ ಗಾಯಗೊಳಿಸಿದ್ದರೆ ಮಾತ್ರವೇ ಅನ್ವಯ ಆಗುತ್ತದೆ. ಇದರ ವ್ಯಾಪ್ತಿಗೆ ನಾಯಿ ಅಥವಾ ಪ್ರಾಣಿಗಳು ಒಳಪಡುವುದಿಲ್ಲ' ಎಂದೂ ನ್ಯಾಯಪೀಠ ವಿವರಿಸಿದೆ.
ದೂರುದಾರರ ಪರ ವಕೀಲರ ವಾದ ಪರಿಗಣಿಸಿದಲ್ಲಿ ಐಪಿಸಿಯಲ್ಲಿ ಕಾಯಿದೆಯಲ್ಲಿ ವ್ಯಕ್ತಿ ಎಂಬ ಪದದ ಬದಲಿಗೆ ಪ್ರಾಣಿ ಎಂಬುದಾಗಿ ಅರ್ಥೈಸಬೇಕಾಗಲಿದೆ. ಆಗ ಸಾಕು ಪ್ರಾಣಿಗಳು ಸಾವನ್ನಪ್ಪಿದಾಗ ಸೆಕ್ಷನ್ 302(ಕೊಲೆ) ಪ್ರಕರಣ ದಾಖಲಿಸಬೇಕಾಗುತ್ತದೆ ಎಂದು ಆದೇಶದಲ್ಲಿ ಹೇಳಲಾಗಿದೆ. ಅಲ್ಲದೆ, ಐಪಿಸಿ 428 (10 ರು.ಗಳಿಗೆ ಮೇಲ್ಪಟ್ಟ ಮೌಲ್ಯದ ಪ್ರಾಣಿಯನ್ನು ಉದ್ದೇಶ ಪೂರಕವಾಗಿ ವಿಷ ಹಾಕಿ ಕೊಲ್ಲುವುದು ಇಲ್ಲವೇ ಅಂಗವೈಕಲ್ಯವನ್ನುಂಟು ಮಾಡುವುದು) ಮತ್ತು ಸೆಕ್ಷನ್ 429(50 ರು.ಮೌಲ್ಯಕ್ಕೂ ಹೆಚ್ಚಿನ ಬೆಲೆಯ ಪ್ರಾಣಿಗಳನ್ನು ಉದ್ದೇಶ ಪೂರಕವಾಗಿ ವಿಷ ಹಾಕಿ ಕೊಲ್ಲುವುದು ಹಾಗೂ ಅಂಗವೈಕಲ್ಯವನ್ನುಂಟು ಮಾಡುವುದಾಗಿದೆ. ಆದರೆ, ಈ ಪ್ರಕರಣ ಆಕಸ್ಮಿಕವಾಗಿ ನಡೆದಿರುವುದಾಗಿದ್ದು, ಉದ್ದೇಶಪೂರ್ವಕವಾಗಿ ನಡೆದಿರುವುದಲ್ಲ. ಆದ್ದರಿಂದ ಈ ಎರಡೂ ಸೆಕ್ಷನ್ ಗಳಡಿ ಕ್ರಮ ಕೈಗೊಳ್ಳುವುದಕ್ಕೆ ಅವಕಾಶವಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯ ಪಟ್ಟಿದೆ.
ಹೀಗಾಗಿ ಸಾಕು ಪ್ರಾಣಿಗಳಿಗೆ ಉಂಟಾಗುವ ಗಾಯ ಮತ್ತು ಸಾವು ಸಂಭವಿಸಿದಲ್ಲಿ ಐಪಿಸಿ 279, 428 ಮತ್ತು 429 ರಡಿ ಅಪರಾಧವೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ತನ್ನ ಆದೇಶದಲ್ಲಿ ತಿಳಿಸಲಾಗಿದೆ.
ಅಲ್ಲದೆ, ಮೋಟಾರು ವಾಹನ ಕಾಯಿದೆ ಸೆಕ್ಷನ್ 134(ಎ) ಮತ್ತು (ಬಿ) ಪ್ರಕಾರ ಅಪಘಾತ ಕ್ಕೆ ಒಳಗಾದ ವ್ಯಕ್ತಿಗೆ ಚಿಕಿತ್ಸೆ ನೀಡದೆ ರಸ್ತೆ ಬದಿಯಲ್ಲಿ ಬಿಟ್ಟುಹೋಗುವ ಆರೋಪವಾಗಿದೆ. ಆದರೆ, ಈ ಪ್ರಕರಣದಲ್ಲಿ ಪ್ರಾಣಿಗೆ ತೊಂದರೆಯಾಗಿರುವುದರಿಂದ ಈ ಸೆಕ್ಷನ್‌ಗಳ ಅಡಿಯಲ್ಲಿಯೂ ಕ್ರಮ ಕೈಗೊಳ್ಳುವುದಕ್ಕೆ ಸಾಧ್ಯವಿಲ್ಲ. ಹಾಗಾಗಿ ಪ್ರಕರಣ ರದ್ದು ಮಾಡುತ್ತಿರುವುದಾಗಿ ನ್ಯಾಯಪೀಠ ಅಭಿಪ್ರಾಯ ಪಟ್ಟಿದೆ.
ಪ್ರಕರಣದ ಹಿನ್ನೆಲೆ:
2018ರ ಫೆಬ್ರವರಿ 24ರಂದು ಬೆಳಗ್ಗೆ ತನ್ನ ತಾಯಿ ಎರಡು ಸಾಕು ನಾಯಿಗಳೊಂದಿಗೆ ವಾಯು ವಿಹಾರಕ್ಕೆ ತೆರಳಿದ್ದಾಗ ವಾಹನವೊಂದು ನಾಯಿಗೆ ಢಿಕ್ಕಿ ಹೊಡೆದು ಗಾಯಗೊಂಡಿತ್ತು, ತಕ್ಷಣ ನಾಯಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರಾದರೂ ಅದು ಮೃತಪಟ್ಟಿತು ಎಂದು ಕುರುಬರಹಳ್ಳಿಯ ದಿಲ್ರಾಜ್ ರಾಖೇಜಾ ವಿಜಯನಗರ ಠಾಣೆಗೆ ದೂರು ದಾಖಲಿಸಿದ್ದರು.
ದೂರು ದಾಖಲಿಸಿಕೊಂಡಿದ್ದ ಪೊಲೀಸರು ವಾಹನ ಚಾಲಕ ಪ್ರತಾಪ್ (ಅರ್ಜಿದಾರ) ವಿರುದ್ಧ ಮೋಟಾರು ವಾಹನ ಕಾಯಿದೆ 134(ಎ),(ಬಿ) ಮತ್ತು 187 ಹಾಗೂ ಐಪಿಸಿ 279, 428, 429 ಅಡಿಯಲ್ಲಿ ದೂರು ದಾಖಲಿಸಿಕೊಂಡು ತನಿಖೆ ನಡೆಸಿ ನಗರದ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಆರೋಪ ಪಟ್ಟಿಯನ್ನು ಸಲ್ಲಿಸಿದ್ದರು. ಪ್ರಕರಣ ರದ್ದುಕೋರಿ ಪ್ರತಾಪ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.












Click it and Unblock the Notifications