ಪೊಲೀಸರ ವಿರುದ್ದ ಡಿಕೆ ರವಿ ಮಾವ ಸಿಡಿಸಿದ ಹೊಸ ಬಾಂಬ್
ಬೆಂಗಳೂರು, ಮಾ 24: ಮುಖ್ಯಮಂತ್ರಿ ಸಿದ್ದರಾಮಯ್ಯ , ಐಎಎಸ್ ಅಧಿಕಾರಿ ಡಿ ಕೆ ರವಿ ನಿಗೂಢ ಸಾವು ಪ್ರಕರಣವನ್ನು ಸಿಬಿಐಗೆ ವಹಿಸಿದ ಒಂದು ನಂತರ, ರವಿ ಅವರ ಮಾವ ಸಿಐಡಿ ಪೊಲೀಸರ ವಿರುದ್ದ ಹೊಸ ಬಾಂಬ್ ಸಿಡಿಸಿದ್ದಾರೆ.
ಸಿಐಡಿ ಪೊಲೀಸರು ತೆಗೆದುಕೊಂಡು ಹೋಗಿದ್ದ ಸಿಸಿಟಿವಿಯ ಕ್ಯಾಮರಾದ ಡಿವಿಆರ್ (Digital Video Recorders) ನಲ್ಲಿ ರೆಕಾರ್ಡ್ ಆಗಿದ್ದ ಕೆಲವೊಂದು ದೃಶ್ಯಗಳು ಡಿಲಿಟ್ ಆಗಿವೆ ಎಂದು ರವಿ ಮಾವ ಹನುಮಂತರಾಯಪ್ಪ ಟಿವಿ9 ಗೆ ನೀಡಿದ ಹೇಳಿಕೆಯಲ್ಲಿ ಆತಂಕ ವ್ಯಕ್ತ ಪಡಿಸಿದ್ದಾರೆ.
ಸಿಐಡಿ ಅಧಿಕಾರಿಗಳು ನಾಗರಬಾವಿಯಲ್ಲಿನ ನಮ್ಮ ಮನೆಗೆ ಬಂದು ಡಿವಿಆರ್ ತೆಗೆದುಕೊಂಡು ಹೋಗಿದ್ದಾಗ ಮನೆಯಲ್ಲಿ ನಾನಿರಲಿಲ್ಲ.
ಡಿವಿಆರ್ ನಲ್ಲಿನ ದೃಶ್ಯಗಳನ್ನು ಕಾಪಿ ಮಾಡಿ ವಾಪಸ್ ಕೊಡುತ್ತೇನೆಂದು ಹೇಳಿ ತೆಗೆದುಕೊಂಡು ಹೋಗಿದ್ದರು. ತೆಗೆದುಕೊಂಡು ಹೋಗುವ ಮುನ್ನ ಡಿವಿಆರ್ ಮಹಜರು ಕೂಡಾ ಮಾಡಿಸಿರಲಿಲ್ಲ. (ಡಿಕೆ ರವಿ ತಾಯಿ ಸಂದರ್ಶನ)

ಸೋಮವಾರ (ಮಾ 24) ಕರೆಮಾಡಿ ನಾಳೆ ವಾಪಸ್ ತಂದು ಕೊಡುತ್ತೇವೆಂದು ಹೇಳಿ ನಿನ್ನೆಯೇ ವಾಪಸ್ ತಂದುಕೊಟ್ಟಿದ್ದರು.
ನಾನು ಇಂದು ಬೆಳಗ್ಗೆ ಪರೀಕ್ಷಿಸಿದಾಗ ದಿನಾಂಕ 16.03.2015 ರ ಬೆಳಗ್ಗೆ 9.30 ಮೇಲಿನ ದೃಶ್ಯಗಳು ಮಾತ್ರ ರೆಕಾರ್ಡ್ ಅಗಿದೆ. ಹಿಂದಿನ ಮಾಹಿತಿಗಳೆಲ್ಲಾ ಡಿಲಿಟ್ ಆಗಿದೆ ಎಂದು ಹನುಮಂತರಾಯಪ್ಪ ಹೇಳುವ ಮೂಲಕ ಕೇಸಿಗೆ ಹೊಸ ಟ್ವಿಸ್ಟ್ ನೀಡಿದ್ದಾರೆ.
ಈ ಬಗ್ಗೆ ಸಿಐಡಿ ಅಧಿಕಾರಿ ಕುಮಾರಸ್ವಾಮಿಯವರನ್ನು ಸಂಪರ್ಕಿಸಿದಾಗ, ಡಿವಿಆರ್ ಓಪನ್ ಆಗಲೇ ಇಲ್ಲ ಎಂದು ಹೇಳಿದ್ದಾರೆ. ನಮ್ಮ ಮನೆಯಿಂದ ಡಿವಿಆರ್ ತೆಗೆದುಕೊಂಡು ಹೋಗಿದ್ದು ಮಾಧ್ಯಮದಲ್ಲೂ ರೆಕಾರ್ಡ್ ಆಗಿದೆ ಎಂದು ಹನುಮಂತರಾಯಪ್ಪ ಹೇಳಿದ್ದಾರೆ.
ನನ್ನ ಮಗಳ ಮತ್ತು ರವಿ ನಡುವೆ ಎಲ್ಲವೂ ಸರಿಯಿರಲಿಲ್ಲ ಎಂದು ಕೆಲವು ಮಾಧ್ಯಮಗಳೂ ಸುಳ್ಳುಸುದ್ದಿ ಪ್ರಕಟಿಸಿದ್ದವು. ಹಾಗಾಗಿ ಮಾರ್ಚ್ ಹದಿನಾರರ ಹಿಂದಿನ ದಿನಾಂಕದ ದೃಶ್ಯಗಳು ನಮಗೆ ಅವಶ್ಯಕವಾಗಿ ಬೇಕಿತ್ತು ಎಂದು ಹನುಮಂತರಾಯಪ್ಪ ಹೇಳಿದ್ದಾರೆ.
ಸಾಮಾನ್ಯವಾಗಿ ಡಿವಿಆರ್ ನಲ್ಲಿ ಇಪ್ಪತ್ತು ದಿನದ ರೆಕಾರ್ಡ್ ಸಂಗ್ರಹಿಸಿ ಇಟ್ಟುಕೊಳ್ಳಬಹುದು. ಡಿಲಿಟ್ ಆಗಿರುವುದನ್ನು ಮತ್ತೆ ವಾಪಸ್ ಪಡೆಯುವ ತಂತ್ರಜ್ಞಾನ ಇದೆ ಎಂದು ಕೇಳಲ್ಪಟ್ಟಿದ್ದೇನೆ. ಟೆಕ್ನಿಷಿಯನ್ ಬಳಿ ಮಾತನಾಡುತ್ತೇನೆಂದು ಹನುಮಂತರಾಯಪ್ಪ ಹೇಳಿದ್ದಾರೆ.












Click it and Unblock the Notifications