RTI ನಿರ್ವಹಣೆ; ಕರ್ನಾಟಕ ಸರ್ಕಾರದ ಹೊಸ ಸುತ್ತೋಲೆ
ಬೆಂಗಳೂರು, ಆಗಸ್ಟ್ 16: ಕರ್ನಾಟಕ ಸರ್ಕಾರದ ಖಜಾನೆ ಆಯುಕ್ತರ ಕಾರ್ಯಾಲಯ ರಾಜ್ಯದ ಎಲ್ಲಾ ಖಜಾನೆಗಳ ಪ್ರಭಾರಾಧಿಕಾರಿಗಳಿಗೆ ಮಾಹಿತಿ ಹಕ್ಕು ಅಧಿನಿಯಮ 2005ರ ಸಮರ್ಪಕ ನಿರ್ವಹಣೆ ಕುರಿತು ಸುತ್ತೋಲೆಯೊಂದನ್ನು ಹೊರಡಿಸಿದೆ.
ಅರುಂಧತಿ ಖಜಾನೆ, ಆಯುಕ್ತರು ಬೆಂಗಳೂರು ಈ ಕುರಿತು ಸುತ್ತೋಲೆ ಹೊರಡಿಸಿದ್ದಾರೆ. ಮಾನ್ಯ ರಾಜ್ಯ ಮುಖ್ಯ ಮಾಹಿತಿ ಆಯುಕ್ತರು, ಕರ್ನಾಟಕ ಮಾಹಿತಿ ಆಯೋಗ, ಇವರ ಅಧ್ಯಕ್ಷತೆಯಲ್ಲಿ ದಿನಾಂಕ 4/5/2023 ರಂದು ನಡೆದ ಸಭೆಯ ತೀರ್ಮಾನಗಳು, ಸರ್ಕಾರದ ಸುತ್ತೋಲೆ 19/7/2023ರನ್ನು ಉಲ್ಲೇಖಿಸಲಾಗಿದೆ.

ಈ ಸುತ್ತೋಲೆಯಲ್ಲಿ ಸೂಚಿಸಿರುವಂತೆ ರಾಜ್ಯದ ಎಲ್ಲಾ ಖಜಾನೆಗಳ ಪ್ರಭಾರಾಧಿಕಾರಿಗಳು ಸರ್ಕಾರದ ಎಲ್ಲಾ ಇಲಾಖೆಗಳು ಇವುಗಳನ್ನು ಪಾಲಿಸುತ್ತಿರುವ ಬಗ್ಗೆ ಇಲಾಖೆಗಳ ಮುಖ್ಯಸ್ಥರು/ ಕಾರ್ಯದರ್ಶಿಗಳು ಕಟ್ಟುನಿಟ್ಟಿನ ಮೇಲ್ವಿಚಾರಣೆ ಮಾಡತಕ್ಕದ್ದು. ಒಂದೊಮ್ಮೆ ಈ ಪ್ರಕ್ರಿಯೆಯಲ್ಲಿ ಯಾವುದೇ ಲೋಪ-ದೋಷಗಳು ಕಂಡುಬಂದಲ್ಲಿ, ಮಾಹಿತಿ ಹಕ್ಕು ಅಧಿನಿಯಮ, 2005ರ ಆಸ್ಪದದ ಅಡಿಯಲ್ಲಿ ಸಕ್ಷಮ ಪ್ರಾಧಿಕಾರಗಳು ಸೂಕ್ತ ಕ್ರಮವಹಿಸತಕ್ಕದ್ದು ಎಂದು ತಿಳಿಸಿದೆ.
ಸುತ್ತೋಲೆಯಲ್ಲಿ ಏನಿದೆ?
ದಿನಾಂಕ 4/5/2023ರಂದು ನಡೆದ ಸಭೆಯ ತೀರ್ಮಾನಗಳಂತೆ ಮಾಹಿತಿ ಹಕ್ಕು ಅಧಿನಿಯಮ 2005ರಲ್ಲಿ ಪ್ರದತ್ತವಾದ ಕರ್ತವ್ಯಗಳನ್ನು ಸಾರ್ವಜನಿಕ ಮಾಹಿತಿ ಪ್ರಾಧಿಕಾರಿಗಳು ಸರಿಯಾಗಿ ನಿರ್ವಹಿಸದೇ ಇರುವುದನ್ನು ಗಮನಿಸಿದ ಕರ್ನಾಟಕ ಮಾಹಿತಿ ಆಯೋಗವು ರಾಜ್ಯ ಮುಖ್ಯ ಮಾಹಿತಿ ಆಯುಕ್ತರು, ಕರ್ನಾಟಕ ಮಾಹಿತಿ ಆಯೋಗ, ಇವರ ಅಧ್ಯಕ್ಷತೆಯಲ್ಲಿ ಸಭೆಯನ್ನು ನಡೆಸಿ ಈ ಕೆಳಕಂಡ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನಿರ್ಣಯ ಕೈಗೊಳ್ಳಲಾಗಿದೆ.
* ರಾಜ್ಯದಲ್ಲಿ ಪ್ರಥಮ ಮೇಲ್ಮನವಿ ಪ್ರಾಧಿಕಾರಗಳು ತಮ್ಮ ಕರ್ತವ್ಯಗಳನ್ನು ನಿಯಮಾನುಸಾರವಾಗಿ ನಿರ್ವಹಿಸದ ಕಾರಣ, ಕರ್ನಾಟಕ ಮಾಹಿತಿ ಆಯೋಗದಲ್ಲಿ ದ್ವಿತೀಯ ಮೇಲ್ಮನವಿ ಮತ್ತು ದೂರು ಪುಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುತ್ತಿದ್ದು, ಆಯೋಗಕ್ಕೆ ಹೆಚ್ಚಿನ ಹೊರೆಯಾಗಿರುತ್ತದೆ. ಆದುದರಿಂದ, ಎಲ್ಲಾ ಪ್ರಥಮ ಮೇಲ್ಮನವಿ ಪ್ರಾಧಿಕಾರಗಳು ಮಾಹಿತಿ ಹಕ್ಕು ಅಧಿನಿಯಮ 2005ರ ಕಲಂ 19(1)ರ ಪ್ರದತ್ತವಾಗಿರುವ ಶಾಸನಬದ್ಧ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸುವುದು.
* ಎಲ್ಲಾ ಇಲಾಖೆಗಳು ತಮ್ಮ ಕಛೇರಿ ವ್ಯಾಪ್ತಿಗೆ ಸಂಬಂಧಿಸಿದಂತೆ, ಸಾರ್ವಜನಿಕ ಮಾಹಿತಿ ಅಧಿಕಾರಿ ಮತ್ತು ಪಥಮ ಮೇಲ್ಮನವಿ ಪ್ರಾಧಿಕಾರಗಳ ವಿವರಗಳನ್ನು ಸಾರ್ವಜನಿಕರಿಗೆ ಸುಲಭವಾಗಿ ಸಿಗುವಂತೆ ಆಯಾ ಇಲಾಖೆಗಳ ಜಾಲತಾಣದಲ್ಲಿ ಕಾಲಕಾಲಕ್ಕೆ ಇಂದೀಕರಿಸಿ ಇಲಾಖಾ ಮುಖ್ಯಸ್ಥರು ಪ್ರಕಟಿಸತಕ್ಕದ್ದು.
* ಪ್ರತಿಯೊಂದು ಸಾರ್ವಜನಿಕ ಪ್ರಾಧಿಕಾರವು, ಮಾಹಿತಿ ಹಕ್ಕು ಅಧಿನಿಯಮ 2005ರ ಕಲಂ-6(1) ಮತ್ತು 19(1)ರಡಿ ಸಾರ್ವಜನಿಕ ಮಾಹಿತಿ ಅಧಿಕಾರಿ ಮತ್ತು ಪ್ರಥಮ ಮೇಲ್ಮನವಿ ಪ್ರಾಧಿಕಾರಗಳನ್ನು ನಾಮನಿರ್ದೇಶನ ಮಾಡಿ ಹೊರಡಿಸುವ ಪ್ರಕಟಣೆ/ ಅಧಿಸೂಚನೆಯ ಪ್ರತಿಯನ್ನು ಕಡ್ಡಾಯವಾಗಿ ಕರ್ನಾಟಕ ಮಾಹಿತಿ ಆಯೋಗಕ್ಕೆ ಇಲಾಖಾ ಮುಖ್ಯಸ್ಥರು ಸಲ್ಲಿಸುವುದು.
* ಪತ್ರಾಂಕಿತ ಅಧಿಕಾರಿಯ ದರ್ಜೆಗಿಂತ ಕಡಿಮೆಯಿಲ್ಲದ ಅಧಿಕಾರಿಗಳನ್ನೇ ಸಾರ್ವಜನಿಕ ಮಾಹಿತಿ ಅಧಿಕಾರಿಯನ್ನಾಗಿ ಮಾಡುವುದು ಅಥವಾ ಯಾವ ಕಛೇರಿಯಲ್ಲಿ ಪತ್ರಾಂಕಿತ ದರ್ಜೆಯ ಅಧಿಕಾರಿ ಲಭ್ಯವಿರುವುದಿಲ್ಲವೋ ಅಂತಹ ಕಛೇರಿಗಳಲ್ಲಿ ಒಬ್ಬ ಜವಾಬ್ದಾರಿಯುತ ಅಧಿಕಾರಿ/ ಸಿಬ್ಬಂದಿಯನ್ನು ಸಾರ್ವಜನಿಕ ಮಾಹಿತಿ ಅಧಿಕಾರಿಯನ್ನಾಗಿ ನೇಮಕ ಮಾಡುವುದು.












Click it and Unblock the Notifications