ಕ್ರೈಸ್ತ ದೇವಾಲಯಗಳಲ್ಲಿ ಕನ್ನಡ ಅನುಷ್ಠಾನ: ಕರವೇ ಮಹತ್ವದ ಕ್ರಮ
ವಲಸಿಗರಿಗೆ ಕನ್ನಡ ಕಲಿಸುವ ಪ್ರಯತ್ನದೊಂದಿಗೆ ಕರ್ನಾಟಕದ ಎಲ್ಲಾ ಧರ್ಮದವರೂ ಕನ್ನಡ ಕಲಿಯಬೇಕು ಎನ್ನುವ ನಿಟ್ಟಿನಲ್ಲಿ ಕರ್ನಾಟಕ ರಕ್ಷಣಾ ವೇದಿಕೆ / ಕರವೇ ವಿನೂತನ ಪ್ರಯತ್ನಕ್ಕೆ ಮುಂದಾಗಿದೆ.
ಎಲ್ಲ ಧರ್ಮಗಳ ಧರ್ಮಗುರುಗಳನ್ನು ಭೇಟಿಮಾಡಿ, ಧರ್ಮಕೇಂದ್ರಗಳಲ್ಲಿ ಕನ್ನಡದ ಅನುಷ್ಠಾನದ ಕುರಿತು ಸಹಭಾಗಿತ್ವ ಕೋರುವ ಅಭಿಯಾನದ ಮುಂದುವರಿದ ಭಾಗವಾಗಿ ಬೆಂಗಳೂರಿನ ಆರ್ಚ್ ಬಿಷಪ್ ಡಾ. ಪೀಟರ್ ಮಚಾಡೊ ಅವರನ್ನು ಭೇಟಿ ಮಾಡಿರುವುದಾಗಿ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಾರಾಯಣಗೌಡ್ರು.ಟಿ.ಎ ಅವರು ಹೇಳಿದ್ದಾರೆ. ಈ ಭೇಟಿ ಒಂದು ಅವಿಸ್ಮರಣೀಯ ಅನುಭವವಾಗಿತ್ತು. ಗುರುಗಳು ಅತ್ಯಂತ ಆಪ್ಯಾಯತೆ ಮತ್ತು ಪ್ರೀತಿಯಿಂದ ಬರಮಾಡಿಕೊಂಡರು.

ಕ್ರೈಸ್ತ ದೇವಾಲಯಗಳಲ್ಲಿ ಕನ್ನಡ ಅನುಷ್ಠಾನದ ಕುರಿತು ಹಲವು ವರ್ಷಗಳಿಂದ ಇರುವ ಬೇಡಿಕೆಗಳ ಕುರಿತು ಅವರೊಂದಿಗೆ ಚರ್ಚಿಸಿದೆ. ಕನ್ನಡ ನಾಡು ಎಲ್ಲ ಧರ್ಮಗಳನ್ನೂ ಒಳಗೆ ತಂದುಕೊಂಡು ಹೇಗೆ ಬೆಳೆದುಬಂದಿದೆ ಎಂಬುದನ್ನು ವಿವರಿಸಿದೆ. ಸಹಬಾಳ್ವೆ, ಸೋದರತ್ವ, ಸಹಕಾರ ಮತ್ತು ಸಾಂಸ್ಕೃತಿಕ ಕೊಡುಕೊಳ್ಳುವಿಕೆಯ ಮಹತ್ವದ ಕುರಿತು ಅವರೊಂದಿಗೆ ಮಾತನಾಡಿದೆ. ಕನ್ನಡ ಸಂಸ್ಕೃತಿಗೆ ಕ್ರೈಸ್ತ ಅನುಯಾಯಿಗಳ ಕೊಡುಗೆಯನ್ನು ಸ್ಮರಿಸಿದೆ. ವಿಶೇಷವಾಗಿ ಬಿ.ಎಲ್.ರೈಸ್, ಲಾರ್ಡ್ ಕಬ್ಬನ್, ರೆವೆರೆಂಡ್ ಫರ್ಡಿನ್ಯಾಂಡ್ ಕಿಟೆಲ್, ಕ್ರಾಫರ್ಡ್ ಇನ್ನಿತರರು ಕನ್ನಡ ನಾಡಿನ ಪರಂಪರೆಯ ಭಾಗವಾಗಿರುವುದು ಮತ್ತು ಕನ್ನಡಿಗರ ಪಾಲಿಗೆ ಎಂದಿಗೂ ಅಜರಾಮರ ವ್ಯಕ್ತಿತ್ವಗಳಾಗಿ ಉಳಿದುಕೊಂಡಿರುವುದನ್ನು ವಿವರಿಸಿದೆ ಎಂದು ಅವರು ಹೇಳಿದ್ದಾರೆ.
ಮುಂದುವರಿದು ಕರ್ನಾಟಕದ ಕ್ರೈಸ್ತ ದೇವಾಲಯಗಳಲ್ಲಿ ಕನ್ನಡದಲ್ಲಿ ಪ್ರಾರ್ಥನೆಗಳು, ಪ್ರವಚನಗಳು ನಡೆಯಬೇಕಾದ ಮಹತ್ವವನ್ನು ನಾನು ಒತ್ತಿಹೇಳಿದೆ. ಕನ್ನಡದಲ್ಲಿ ಪ್ರಾರ್ಥನೆ ಎಂಬುದು ಕೇವಲ ಕನ್ನಡಿಗರ ಅಪೇಕ್ಷೆ ಅಥವಾ ಅನುಕೂಲಕ್ಕೆ ಮಾತ್ರವಲ್ಲ, ಅದರ ಮೂಲಕ ಕನ್ನಡೇತರರನ್ನು ಕನ್ನಡದ ಮುಖ್ಯವಾಹಿನಿಗೆ ತರುವ ಕಾರ್ಯವೂ ನಡೆಯುತ್ತದೆ. ಕರ್ನಾಟಕದಲ್ಲಿ ಹತ್ತಾರು ವರ್ಷಗಳಿಂದ ವಾಸ ಮಾಡುತ್ತಿರುವವರನ್ನೂ ನಾವು ಕನ್ನಡಿಗರೆಂದೇ ಪರಿಗಣಿಸುತ್ತೇವೆ. ತಮ್ಮ ತಾಯ್ನುಡಿಯ ಜೊತೆಗೆ ಈ ನೆಲದ ನುಡಿಯನ್ನೂ ಅವರು ತಮ್ಮದಾಗಿಸಿಕೊಂಡರೆ ಅದರ ಲಾಭ ಅವರಿಗೇ ಸಿಗುತ್ತದೆ. ಈ ಹಿನ್ನೆಲೆಯಲ್ಲಿ ಕನ್ನಡದ ಪ್ರಾರ್ಥನೆಗಳು ಕ್ರಾಂತಿಕಾರಿ ಬದಲಾವಣೆಗಳನ್ನು ತರಬಹುದು ಎಂಬುದನ್ನು ಅವರಿಗೆ ಮನವರಿಕೆ ಮಾಡಿಕೊಟ್ಟೆ ಎಂದಿದ್ದಾರೆ.
ನೀವು ತೆಗೆದುಕೊಳ್ಳುವ ತೀರ್ಮಾನ ಕರ್ನಾಟಕದ ಚರ್ಚುಗಳಲ್ಲಿ "ಕನ್ನಡ ಶಾಸನ" ವಾಗಬೇಕು. ಕರ್ನಾಟಕದ ಇತಿಹಾಸದಲ್ಲಿ ಅದೊಂದು ಮಹಾಶಾಸನವಾಗಿ ನಿಮ್ಮ ಹೆಸರು ಚಿರಸ್ಥಾಯಿಯಾಗಿ ಉಳಿಯಲಿದೆ. ಕನ್ನಡಿಗರು ನಿಮ್ಮನ್ನು ಸದಾ ಪ್ರೀತಿಯಿಂದ ನೆನೆಯುತ್ತಾರೆ. ಆರ್ಚ್ ಬಿಷಪ್ ಅವರು ನನ್ನ ಮಾತುಗಳನ್ನು ಅತ್ಯಂತ ಆಸ್ಥೆಯಿಂದ, ಪ್ರೀತಿಯಿಂದ ಕೇಳಿಸಿಕೊಂಡರು.
ಕನ್ನಡದ ಬೇಡಿಕೆ ಹೊತ್ತು ಅವರ ಬಳಿ ಬಂದಿದ್ದು ಅವರಿಗೆ ಅತ್ಯಂತ ಸಂತೋಷ ತಂದಿತ್ತು. ನಿಮ್ಮ ಈ ನಡೆಯೇ ನನಗೆ ಅತ್ಯಂತ ಸಂತೋಷ, ಸಂಭ್ರಮ ತಂದಿದೆ. ಖಂಡಿತವಾಗಿಯೂ ನೀವು ಆಡಿದ ಮಾತುಗಳನ್ನು ಗಂಭೀರವಾಗಿ ಪರಿಗಣಿಸುತ್ತೇವೆ, ಈ ಬಗ್ಗೆ ನಮ್ಮಿಂದ ಸಾಧ್ಯವಾಗುವ ಎಲ್ಲ ಕಾರ್ಯಗಳನ್ನೂ ಮಾಡುತ್ತೇವೆ ಎಂದು ಅವರು ಭರವಸೆ ನೀಡಿದರು ಎಂದೂ ಹೇಳಿದದಾರೆ.
ಡಾ. ಪೀಟರ್ ಮಚಾಡೊ ಅಪಾರ ಜ್ಞಾನಿಗಳು, ಅವರ ತಿಳಿವಳಿಕೆಯ ಹರವು ವಿಸ್ತಾರವಾದದ್ದು. ಅವರು ನನ್ನೊಂದಿಗೆ ಸಾಕಷ್ಟು ವಿಷಯಗಳ ಕುರಿತು ಮಾತನಾಡಿದರು. ಅಪಾರವಾದ ಕನ್ನಡದ ಕಳಕಳಿಯೂ ಅವರಿಗಿದೆ. ಅವರನ್ನು ಕರ್ನಾಟಕ ರಕ್ಷಣಾ ವೇದಿಕೆಯ ಪರವಾಗಿ ಅಭಿನಂದಿಸಿದೆ.
ಏಸುಕ್ರಿಸ್ತರು ಬೋಧಿಸಿದ್ದು, ಕರುಣೆ, ಪ್ರೀತಿ ಮತ್ತು ಶಾಂತಿಯನ್ನು. ಕನ್ನಡದ ನೆಲವು ಕೂಡ ಇದೇ ಮೌಲ್ಯಗಳನ್ನು ಪ್ರತಿಪಾದಿಸಿಕೊಂಡು ಬಂದಿದೆ. ನಮ್ಮ ನೆಲದ ಮಹಾದರ್ಶನಿಕ ಬಸವಣ್ಣನವರು "ದಯವಿಲ್ಲದ ಧರ್ಮವಾವುದಯ್ಯಾ ? ದಯವೇ ಬೇಕು ಸಕಲ ಪ್ರಾಣಿಗಳಲ್ಲಿಯೂ. ದಯವೇ ಧರ್ಮದ ಮೂಲವಯ್ಯಾ. ಕೂಡಲಸಂಗಯ್ಯನಂತಲ್ಲದೊಲ್ಲನಯ್ಯಾ" ಎಂದು ಹನ್ನೆರಡನೆ ಶತಮಾನದಲ್ಲೇ ಹೇಳಿದ್ದರು. ಕನ್ನಡದ ನೆಲ ಇಂಥ ಮಹಾ ಆದರ್ಶಗಳನ್ನು ಹೊತ್ತು ನಡೆದಿದೆ. ಕರ್ನಾಟಕದ ನೆಲದಲ್ಲಿ ವಾಸಿಸುವವರು ಕನ್ನಡದ ಈ ಪ್ರೀತಿಯನ್ನು ಧರಿಸಿದರೆ ಅದಕ್ಕಿಂತ ಸಂತೋಷ ಇನ್ನೇನಿರಲು ಸಾಧ್ಯ ಎಂದು ಅವರು ಹೇಳಿದ್ದಾರೆ. ಕರವೇ ಈ ಕ್ರಮಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.












Click it and Unblock the Notifications