Government employee; OPS ಜಾರಿಗೆ ಪ್ರಕ್ರಿಯೆ ಆರಂಭಿಸಿದ ರಾಜ್ಯ ಸರ್ಕಾರ
ಬೆಂಗಳೂರು, ನವೆಂಬರ್ 13; ಕರ್ನಾಟಕ ಸರ್ಕಾರಿ ನೌಕರರು ಹೊಸ ಪಿಂಚಣಿ ಯೋಜನೆ (NPS) ರದ್ದುಗೊಳಿಸಿ ಹಳೆಯ ಪಿಂಚಣಿ ಯೋಜನೆ ಮರು ಜಾರಿಗೊಳಿಸಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಕಾಂಗ್ರೆಸ್ ಪಕ್ಷ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿಯೂ ಸಹ ಈ ಕುರಿತು ಭರವಸೆ ನೀಡಿತ್ತು.
ಸರ್ಕಾರಿ ನೌಕರರು, ನೌಕರರ ವಿವಿಧ ಸಂಘನೆಗಳು ಕೆ. ಸುಧಾಕರ್ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗಕ್ಕೆ ಸಹ ಹಳೆ ಪಿಂಚಣಿ ಯೋಜನೆ ಮರು ಜಾರಿಗೊಳಿಸಬೇಕು ಎಂದು ಮನವಿಯನ್ನು ಸಲ್ಲಿಕೆ ಮಾಡಿವೆ. ಸದ್ಯದ ಮಾಹಿತಿ ಪ್ರಕಾರ ಕರ್ನಾಟಕ ಸರ್ಕಾರ ಹಳೆಯ ಪಿಂಚಣಿ ಯೋಜನೆ ಮರು ಜಾರಿಗೊಳಿಸುವ ಪ್ರಕ್ರಿಯೆಯನ್ನು ಆರಂಭಿಸಿದೆ. ಈ ಕುರಿತು ಮುಖ್ಯಮಂತ್ರಿಗಳ ಜಂಟಿ ಕಾರ್ಯದರ್ಶಿಗಳು ಆರ್ಥಿಕ ಇಲಾಖೆಗೆ ಪತ್ರವನ್ನು ಬರೆದಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

ಎನ್‌ಪಿಎಸ್ ಯೋಜನೆ ರದ್ದು; ಪತ್ರದಲ್ಲಿ ಜಂಟಿ ಕಾರ್ಯದರ್ಶಿಗಳು ನೂತನ ಪಿಂಚಣಿ ಯೋಜನೆ (ಎನ್‌ಪಿಎಸ್)ನಲ್ಲಿ ಹಲವು ಸಮಸ್ಯೆಗಳಿವೆ. ಸರ್ಕಾರಿ ನೌಕರರಿಗೆ ಇದರಿಂದಾಗಿ ಸಮಸ್ಯೆಗಳಾಗಿವೆ. ಸರ್ಕಾರಿ ನೌಕರರ ಸಂಘದ ಮನವಿ ಹಿನ್ನಲೆಯಲ್ಲಿ ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಲು ನಿಯಾಮಾನುಸಾರ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ ಎಂದು ವಿವರಣೆ ನೀಡಲಾಗಿದೆ.
ಕರ್ನಾಟಕದ 2,65,715 ಸರ್ಕಾರಿ ನೌಕರರು ನೂತನ ಪಿಂಚಣಿ ಯೋಜನೆ ವ್ಯಾಪ್ತಿಯಲ್ಲಿದ್ದಾರೆ. ಈ ಯೋಜನೆಯ ಅಡಿ ಇದ್ದ 1169 ನೌಕರರು ಮರಣ ಹೊಂದಿದ್ದಾರೆ. 1463 ನಿವೃತ್ತ ನೌಕರರು ಸಹ ಈ ಯೋಜನೆ ವ್ಯಾಪ್ತಿಯಲ್ಲಿದ್ದಾರೆ. ಎನ್‌ಪಿಎಸ್ ನೌಕರರ ಸಮಾವೇಶ ಡಿಸೆಂಬರ್ ತಿಂಗಳಿನಲ್ಲಿ ನಡೆಯಲಿದೆ. ಈ ಸಮಾವೇಶದಲ್ಲಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಎನ್‌ಪಿಎಸ್ ರದ್ದು ಮಾಡುವ ಕುರಿತು ಘೋಷಣೆ ಮಾಡುವ ನಿರೀಕ್ಷೆ ಇದೆ.
ಎನ್‌ಪಿಎಸ್ ನೌಕರರ ಸಂಘದ ಅಧ್ಯಕ್ಷ ಶಾಂತರಾಮ ತೇಜ ಮಾತನಾಡಿ, "ಎನ್‌ಪಿಎಸ್ ರದ್ದುಗೊಳಿಸಿದರೆ ಸರ್ಕಾರಕ್ಕೆ ಯಾವುದೇ ಹೊರೆ ಆಗುವುದಿಲ್ಲ. ಸರ್ಕಾರ ಕಡಿತ ಮಾಡಿರುವ ಹಾಗೂ ಸರ್ಕಾರ ಪಾವತಿಸಿರುವ ಮೊತ್ತ ತಕ್ಷಣ ಅಭಿವೃದ್ಧಿ ಕಾರ್ಯಗಳಿಗೆ ಸಹಾಯಕವಾಗಲಿದೆ. ಸುಮಾರು 5 ಲಕ್ಷ ನೌಕರರು ಎನ್‌ಪಿಎಸ್ ರದ್ದುಗೊಳಿಸಲು ಕಾಯುತ್ತಿದ್ದಾರೆ" ಎಂದು ಹೇಳಿದ್ದಾರೆ.
ಕರ್ನಾಟಕ ಸರ್ಕಾರ ಸಚಿವಾಲಯಗಳ ನೌಕರರ ಸಂಘ 7ನೇ ರಾಜ್ಯ ವೇತನ ಆಯೋಗಕ್ಕೆ ಸಲ್ಲಿಕೆ ಮಾಡಿರುವ ವರದಿಯಲ್ಲಿಯೂ ಹೊಸ ಪಿಂಚಣಿ ವ್ಯವಸ್ಥೆ ರದ್ದು ಮಾಡಲು ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ಮನವಿಯನ್ನು ಮಾಡಿದೆ. ಅಲ್ಲದೇ ಎನ್‌ಪಿಎಸ್ ಏಕೆ ಬೇಡ? ಎಂದು ಹಲವು ಅಂಶಗಳನ್ನು ಉಲ್ಲೇಖ ಮಾಡಿದೆ.
NPS ಯೋಜನೆ ಸರ್ಕಾರಿ ನೌಕರರ ಮಧ್ಯದಲ್ಲಿಯೇ ಎರಡು ಗುಂಪುಗಳನ್ನಾಗಿ ವಿಂಗಡಿಸುತ್ತದೆ. ಆದ್ದರಿಂದ NPS ಯೋಜನೆಯನ್ನು ಕೈಬಿಡಬೇಕು. NPS ನೌಕರರು, ಸದರಿ ಯೋಜನೆಯು ಮಾರುಕಟ್ಟೆ ಆಧಾರಿತ ಇರುವುದರಿಂದ, ಮುಂದೆ ಪೆನ್ಷನ್ ಪಡೆಯುವುದು ಬಹಳ ಅನಿಶ್ಚಿತವಾಗಿರುವುದರಿಂದ, NPS ಯೋಜನೆ ಕೈಬಿಟ್ಟು ಮೊದಲಿನಂತೆ ಸರ್ಕಾರವೇ ಪೆನ್ಷನ್ ನೀಡಬೇಕು ಎಂದು ವರದಿಯಲ್ಲಿ ಹೇಳಿದೆ.
ಎನ್‌ಪಿಎಸ್‌ಗೆ ನೌಕರರು ವೇತನದ 10% ವಂತಿಗೆ ನೀಡಬೇಕಾದುದರಿಂದ ಒಟ್ಟು ಪಡೆಯಬೇಕಾದ ವೇತನ ಕಡಿಮೆಯಾಗುತ್ತದೆ. ಇದು ತಾರತಮ್ಯದ ನೀತಿ ಎಂದು ತಮ್ಮ ಅಸಮಾಧಾನವನ್ನು ನೌಕರರು ವ್ಯಕ್ತಪಡಿಸಿರುತ್ತಾರೆ. ಈ ಯೋಜನೆಯಲ್ಲಿ ನೌಕರರಿಗೆ ನಿವೃತ್ತಿ ಸಮಯದಲ್ಲಿ DCRG ಹಾಗೂ ನಿಶ್ಚಿತ ಫ್ಯಾಮಿಲಿ, ಪೆನ್ಷ್‌ನ್‌ಗೆ ಅವಕಾಶವಿರುವುದಿಲ್ಲ. ಎನ್‌ಪಿಎಸ್ ಹೂಡಿಕೆದಾರರು GPF ನಲ್ಲಿ ಉಳಿತಾಯ ಮಾಡಲು ಅವಕಾಶವಿರುವುದಿಲ್ಲ ಎಂದು ತಿಳಿಸಿದೆ.
ಎನ್‌ಪಿಎಸ್ ಯೋಜನೆಯಲ್ಲಿ GPF ನಲ್ಲಿದ್ದಂತೆ ನೌಕರರು ತಮ್ಮ ಸಾಮಾಜಿಕ ಅಗತ್ಯಗಳಿಗೆ ಅನುಗುಣವಾಗಿ ಹಣವನ್ನು ಹಿಂಪಡೆಯಲು ಸಾಧ್ಯವಿಲ್ಲ. ಇದರಿಂದಾಗಿ ನೌಕರರನ್ನು ಇನ್ನಷ್ಟು ಸಾಲಗಾರನಾಗುವ ಪರಿಸ್ಥಿತಿ ಉಂಟಾಗುತ್ತದೆ. ಹಣ ಹಿಂಪಡೆದಾಗ ಒಟ್ಟು ಆದಾಯಕ್ಕೆ ಪೆನ್ಷನ್ ಸೇರಿ ಟ್ಯಾಕ್ಸ್ ಕಟ್ಟಬೇಕಾಗುತ್ತದೆ. ಇದಲ್ಲದೆ ಸೇವಾ ಟ್ಯಾಕ್ಸ್ ಬೇರೆ ಕಟ್ಟಬೇಕಾಗುತ್ತದೆ. ಆದ್ದರಿಂದ ಒಪಿಎಸ್ ಜಾರಿಗೊಳಿಸಬೇಕು ಎಂದು ಬೇಡಿಕೆ ಇಡಲಾಗಿದೆ.












Click it and Unblock the Notifications