ಹವಾಮಾನ ವರದಿ; ಎರಡು ದಿನ ಬೆಂಗಳೂರಿನಲ್ಲಿ ಸಂಜೆ ಮಳೆ ಸಾಧ್ಯತೆ
ಬೆಂಗಳೂರು, ಸೆಪ್ಟೆಂಬರ್ 10; ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುತ್ತಿದೆ. ಆಗಸ್ಟ್‌ನಲ್ಲಿ ಮಳೆಯ ಕೊರತೆಯಿಂದ ಕಂಗಾಲಾಗಿದ್ದ ಜನರು ಸೆಪ್ಟೆಂಬರ್‌ನಲ್ಲಿ ಸುರಿಯುತ್ತಿರುವ ಮಳೆಯಿಂದ ತುಸು ನೆಮ್ಮದಿ ಕಂಡಿದ್ದಾರೆ. ಸೆಪ್ಟೆಂಬರ್ 10 ಮತ್ತು 11ರಂದು ವಿವಿಧ ಜಿಲ್ಲೆಗಳಲ್ಲಿ ಮಳೆ ಮುಂದುವರೆಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕರ್ನಾಟಕದ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಭಾನುವಾರ ಮತ್ತು ಸೋಮವಾರ ಮಳೆಯಾಗುವ ನಿರೀಕ್ಷೆ ಇದೆ. ಉತ್ತರ ಒಳನಾಡಿನ ಜಿಲ್ಲೆಗಳಲ್ಲೂ ಚದುರಿದಂತೆ ಸಾಧಾರಣೆ ಮಳೆಯ ಮುನ್ಸೂಚನೆಯನ್ನು ಕೊಡಲಾಗಿದೆ.

ಕರಾವಳಿ ಭಾಗದ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮಳೆ ಜೋರಾಗಿ ಸುರಿಯಲಿದ್ದು, ಗಾಳಿಯ ಆರ್ಭಟವೂ ಜೋರಾಗಿ ಇರಲಿದೆ. ಗಂಟೆಗೆ 40 ರಿಂದ 55 ಕಿ. ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದ್ದು, ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಸೂಚನೆ ನೀಡಲಾಗಿದೆ.
ಬೆಂಗಳೂರು ನಗರದಲ್ಲಿಯೂ ಮಳೆ; ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿಯೂ ಸಾಧಾರಣ ಮಳೆಯ ಮುನ್ಸೂಚನೆ ನೀಡಲಾಗಿದೆ. ಈ ವ್ಯಾಪ್ತಿಯ ಜಿಲ್ಲೆಗಳಲ್ಲಿ ಗಂಟೆಗೆ 30 ರಿಂದ 40 ಕಿ. ಮೀ. ವೇಗದಲ್ಲಿ ಗಾಳಿ ಬೀಸುವ ನಿರೀಕ್ಷೆ ಇದೆ. ಶನಿವಾರ ಸಹ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಿದೆ. ಉತ್ತರ ಒಳನಾಡು ವ್ಯಾಪ್ತಿಯ ಜಿಲ್ಲೆಗಳಲ್ಲಿ ಚದುರಿದಂತೆ ಸಾಧಾರಣ ಮಳೆಯ ಮುನ್ಸೂಚನೆ ಇದೆ.
ಬೆಂಗಳೂರು ನಗರಕ್ಕೆ ಸಹ ಮಳೆಯ ಮುನ್ಸೂಚನೆ ನೀಡಲಾಗಿದೆ. ಈ ವಾರದ ಕೆಲವು ದಿನ ಸುರಿದಂತೆ ಸಂಜೆ ಅಥವ ರಾತ್ರಿ ನಗರದಲ್ಲಿ ಮಳೆ ಸುರಿಯುವ ಸಾಧ್ಯತೆ ಇದೆ. ಉಳಿದಂತೆ ಉಷ್ಣಾಂಶ ಸಹ ಕಡಿಮೆ ಇರಲಿದ್ದು, ಮೋಡ ಕವಿದ ವಾತಾವರಣ ಮುಂದುವರೆಯಲಿದೆ.
ಜೂನ್ ತಿಂಗಳಿನಲ್ಲಿ ನೈಋತ್ಯ ಮುಂಗಾರು ಆರಂಭದಿಂದಲೂ ಕೈ ಕೊಟ್ಟಿತು. ಆದ್ದರಿಂದ ಕೃಷಿ ಚಟುವಟಿಕೆಗಳ ಮೇಲೆ ಪರಿಣಾಮ ಉಂಟಾಯಿತು. ಆದರೆ ಜುಲೈ ತಿಂಗಳ ಮೊದಲ 15 ದಿನ ಸುರಿದ ಮಳೆ ಜನರಿಗೆ ನೆಮ್ಮದಿ ತಂದಿತು. ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಲಿದೆ ಎಂದು ಎಚ್ಚರಿಕೆ ನೀಡಲಾಗಿತ್ತು.
ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಿನಲ್ಲಿ ರಾಜ್ಯದಲ್ಲಿ ತಾಪಮಾನ ಏರಿಕೆ ಕಂಡಿದೆ. ಒಣಹವೆ ನೋಡಿ ಜನರು ಇದು ಮಳೆಗಾಲವೋ?, ಬೇಸಿಗೆಯೋ? ಎಂದು ಕೇಳುವಂತಾಗಿದೆ. ಆದರೆ ಸೆಪ್ಟೆಂಬರ್‌ನಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುತ್ತಿದೆ. ಇದರಿಂದಾಗಿ ಕೃಷಿ ಚಟುವಟಿಕೆಗಳಿಗೆ ಸಹ ಸಹಕಾರಿಯಾಗಿದೆ.
ಸೆಪ್ಟೆಂಬರ್‌ನಲ್ಲಿ ಉತ್ತಮ ಮಳೆಯಾದರೆ ಮಾತ್ರ ರಾಜ್ಯದಲ್ಲಿ ಕೃಷಿ ಚಟುವಟಿಕೆಗೆ ಸಹಾಯಕವಾಗಲಿದ್ದು, ಕುಡಿಯವ ನೀರಿನ ಸಮಸ್ಯೆಗೂ ಪರಿಹಾರ ಸಿಗಲಿದೆ. ಇಲ್ಲವಾದಲ್ಲಿ ಈ ವರ್ಷ ಕುಡಿಯುವ ನೀರಿನ ಕೊರತೆ ಎದುರಾಗುವುದರಲ್ಲಿ ಅನುಮಾನವೇ ಉಳಿದಿಲ್ಲ. ರಾಜ್ಯದ ಯಾವುದೇ ಜಲಾಶಯಗಳು ಸಹ ಬೇಸಿಗೆಯಲ್ಲಿ ನೀರು ಒದಗಿಸುವಷ್ಟು ಭರ್ತಿಯಾಗಿಲ್ಲ.
ಆಗಸ್ಟ್ ತನಕ ರಾಜ್ಯದಲ್ಲಿ ಮುಂಗಾರು ಹಂಗಾಮಿನಲ್ಲಿ ಶೇ 12ರಷ್ಟು ಮಳೆ ಕೊರತೆ ಉಂಟಾಗಿದೆ. ಬಿತ್ತನೆ ಕಾರ್ಯವೂ ತಡವಾಗಿ ಆಗಿದ್ದು, ಈಗ ರೈತರು ಬೆಳೆಗಳಿಗೆ ನೀರಿಲ್ಲ ಎಂದು ಸಂಕಷ್ಟಕ್ಕೆ ಸಿಲುಕಿದ್ದಾರೆ. ಜುಲೈ ತಿಂಗಳಿನಲ್ಲಿ ತುಂಬಿ ಹರಿದಿದ್ದ ನದಿಗಳಲ್ಲಿ ಈಗ ಮತ್ತೆ ನೀರಿನ ಪ್ರಮಾಣ ಇಳಿಮುಖವಾಗಿದೆ. ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಮುಂತಾದ ಜಿಲ್ಲೆಗಳಲ್ಲಿ ನದಿಗಳ ನೀರಿನ ಮಟ್ಟ ನೋಡಿ ಜನರು ಕಂಗಾಲಾಗಿದ್ದಾರೆ.
ಹವಾಮಾನ ಇಲಾಖೆಯ ತಜ್ಞರು ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗುತ್ತದೆ ಎಂದು ಈಗಾಗಲೇ ಎಚ್ಚರಿಕೆ ಕೊಟ್ಟಿದ್ದಾರೆ. ರಾಜ್ಯದ 14 ಪ್ರಮುಖ ಜಲಾಶಯಗಳಲ್ಲಿ ನೀರಿನ ಸಂಗ್ರಹದಲ್ಲಿ ಕೊರತೆ ಉಂಟಾಗಿದೆ. ಕಾವೇರಿ ಕೊಳ್ಳದ ಜಲಾಶಯಗಳು ಭರ್ತಿಯಾಗದೇ ಇದ್ದರೂ ಕರ್ನಾಟಕ ಸರ್ಕಾರ ತಮಿಳುನಾಡಿಗೆ ನೀರು ಹರಿಸುತ್ತಿದೆ.












Click it and Unblock the Notifications