ಕರ್ನಾಟಕ; ಮುಂದುವರಿದ ಮುಂಗಾರು ಮಳೆ ಅಬ್ಬರ
ಬೆಂಗಳೂರು ಜುಲೈ 13: ರಾಜ್ಯದಲ್ಲಿ ಕಳೆದ ಎರಡು ವಾರದಿಂದ ಅಬ್ಬರಿಸುತ್ತಿರುವ ಮಳೆಯು ಕಡಿಮೆ ಆಗುವ ಲಕ್ಷಣಗಳು ಗೋಚರಿಸುತ್ತಿಲ್ಲ.
ಕರಾವಳಿ, ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡು ಭಾಗದ ವಿವಿಧ ಜಿಲ್ಲೆಗಳ ಹಲವೆಡೆ ಮುಂದಿನ ಐದು ದಿನ (ಜು.18) ಗುಡುಗು ಸಹಿತ ಭಾರೀ ಮಳೆ ಆಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕರಾವಳಿ ಭಾಗದಲ್ಲಿ ಮಳೆ ಅಬ್ಬರ ತುಸು ಕಡಿಮೆ ಆಗಿದ್ದರು ಸಹ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಹಲವು ಪ್ರದೇಶಗಳಲ್ಲಿ ಶುಕ್ರವಾರದವರೆಗೆ (ಜು.15)ಜೋರು ಮಳೆ ಆಗುವ ಕಾರಣಕ್ಕೆ 'ಆರೆಂಜ್ ಅಲರ್ಟ್' ಘೋಷಿಸಲಾಗಿದೆ. ನಂತರ ಜು.18ರವರೆಗೆ 'ಯೆಲ್ಲೋ ಅಲರ್ಟ್' ನೀಡಲಾಗಿದೆ.

ಕರಾವಳಿ ಜಿಲ್ಲೆಗಳ ಕೆಲವೆಡೆ ಮಾತ್ರ ಭಾರೀ ಮಳೆ ಅಂದರೆ ಸುಮಾರು 10ಸೆಂ.ಮೀ.ಗೂ ಅಧಿಕ ಮಳೆ ಸುರಿಯಲಿದೆ. ಸಮುದ್ರ ತೀರ ಪ್ರದೇಶದಲ್ಲಿ ಗಾಳಿಯು 45-55 ಕಿ. ಮೀ. ವೇಗದಲ್ಲಿ ಬೀಸಲಿದ್ದು, ಮೀನುಗಾರರಿಗೆ ಸಮುದ್ರಕ್ಕಿಳಿಯದಂತೆ ಸೂಚಿಸಲಾಗಿದೆ.
ಮಲೆನಾಡಿನ ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲೂ ಸಹ ಶುಕ್ರವಾರದವರೆಗೆ ಭಾರೀ ಮಳೆ ಆಗಲಿದೆ. ಹೀಗಾಗಿ ಅಷ್ಟು ಜಿಲ್ಲೆಗಳಿಗೆ ಎರಡು ದಿನ ಈ ಜಿಲ್ಲೆಗಳು 'ಆರೆಂಜ್ ಅಲರ್ಟ್' ನೀಡಲಾಗಿದೆ. ಉಳಿದಂತೆ ಜು.18ರವರೆಗೆ ದಕ್ಷಿಣ ಒಳನಾಡಿನ ಹಾಸನ ಸೇರಿದಂತೆ ಮೆಲೆನಾಡಿನ ಎಲ್ಲ ಜಿಲ್ಲೆಗಳಿಗೆ 'ಯೆಲ್ಲೋ ಅಲರ್ಟ್' ನೀಡಲಾಗಿದೆ.
ಉತ್ತರ ಒಳನಾಡಿನ ಕೆಲವೆಡೆ ಭಾರಿ ಮಳೆ : ಉತ್ತರ ಒಳನಾಡಿನ ಬೆಳಗಾವಿ ಮತ್ತು ಕಲಬುರಗಿ ಜಿಲ್ಲೆಗಳ ಕೆಲವು ಕಡೆಗಳಲ್ಲಿ ಅತಿ ಭಾರೀ ಮಳೆ ಆಗಲಿದೆ. ಹೀಗಾಗಿ ಗುರುವಾರ ಒಂದು ದಿನ 'ಆರೆಂಜ್ ಅಲರ್ಟ್' ಎಚ್ಚರಿಕೆ ನೀಡಲಾಗಿದೆ.

ಉಳಿದಂತೆ ವಿಜಯಪುರ, ಬೀದರ್, ಗದಗ, ಹಾವೇರಿ, ಧಾರವಾಡದಲ್ಲಿ ಶುಕ್ರವಾರದವರೆಗೆ ಒಂದೆರಡು ಕಡೆಗಳಲ್ಲಿ ಭಾರೀ ಮಳೆಯ ಸಂಭವವಿದ್ದು, ಅವುಗಳಿಗೆ 'ಯಲ್ಲೋ ಅಲರ್ಟ್' ಕೊಡಲಾಗಿದೆ. ಉಳಿದ ಕೆಲವು ಪ್ರದೇಶಗಳಲ್ಲಿ ಹಗುರದಿಂದ ಸಾಧಾರಣ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ರಾಜ್ಯದ ವಿವಿಧೆಡೆ ಭಾರೀ ಮಳೆ ದಾಖಲು; ಬುಧವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಹಿಂದಿನ 24ಗಂಟೆಗಳಲ್ಲಿ ಉತ್ತರ ಒಳನಾಡು, ಮನಲೆನಾಡಿನಲ್ಲಿ ಚುರುಕಾಗಿತ್ತು. ಈ ಪೈಕಿ ಶಿವಮೊಗ್ಗದದ ಅಗ್ರಹಾರ ಕೋಣಂದೂರಲ್ಲಿ ಅಧಿಕ 16ಸೆಂ.ಮೀ. ಮಳೆ ಆಗಿದೆ.
ಶೃಂಗೇರಿ, ಕ್ಯಾಸಲ್ ರಾಕ್ ನಲ್ಲಿ ತಲಾ 13 ಸೆಂ.ಮೀ., ಚಿಕ್ಕಮಗಳೂರಿನ ಕೊಪ್ಪ 11 ಸೆಂ.ಮೀ., ಉಡುಪಿಯ ಕೊಲ್ಲೂರು, ಶಿವಮೊಗ್ಗದ ತಾಳಗುಪ್ಪದಲ್ಲಿ ತಲಾ 9ಸೆಂ.ಮೀ. ಮಳೆ ದಾಖಲಾಗಿದೆ. ರಾಜ್ಯ ಗರಿಷ್ಠ ಉಷ್ಣಾಂಶ 29.4 ಡಿಗ್ರಿ ಸೆಲ್ಸಿಯಸ್ ಬಳ್ಳಾರಿಯಲ್ಲಿ ಮತ್ತು ಕನಿಷ್ಠ ಉಷ್ಣಾಂಶ 13.4 ಡಿಗ್ರಿ ಸೆಲ್ಸಿಯಸ್ ಹಾಸನದಲ್ಲಿ ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿ ಮಾಡಿದೆ.
ಬೆಂಗಳೂರು ಮಳೆ ಮುನ್ಸೂಚನೆ; ರಾಜ್ಯ ರಾಜಧಾನಿ ಬೆಂಗಳೂರಿಗೆ ಭಾರೀ ಮಳೆಯ ನಿರೀಕ್ಷೆ ಇಲ್ಲವಾಗಿದೆ. ಆದರೆ ಮುಂದಿನ 48ಗಂಟೆ ಮೋಡ ಮುಸುಕಿನ ಹಾಗೂ ಚಳಿಯ ವಾತಾವರಣವೇ ಮುಂದುವರಿಯಲಿದೆ.
ಆಗಾಗ ಕೆಲವು ಬಡಾವಣೆಗಲ್ಲಿ ಸೋನೆ, ಇಲ್ಲವೇ ಸಾಮಾನ್ಯ ಪ್ರಮಾಣದಲ್ಲಿ ಮಳೆ ಬೀಳಲಿದೆ. ಈ ವೇಳೆ ಗರಿಷ್ಠ ತಾಪಮಾನ 25 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ ಎಂದು ಮುನ್ಸೂಚನೆ ತಿಳಿಸಿದೆ.












Click it and Unblock the Notifications