ಕರ್ನಾಟಕಲ್ಲಿ ಮಳೆ ಅಬ್ಬರ: ಜು.9ರವರೆಗೆ ಭಾರಿ ಮಳೆ ಸಾಧ್ಯತೆ ಇರುವ ಜಿಲ್ಲೆಗಳಿವು
ಬೆಂಗಳೂರು ಜು. 4: ಅರಬ್ಬಿ ಸಮುದ್ರದಲ್ಲಿ ಸಣ್ಣ ಪ್ರಮಾಣದ ಮೇಲ್ಮೈ ಸುಳಿಗಾಳಿ (ಸ್ಟ್ರಫ್) ಪಶ್ಚಿಮ ಘಟ್ಟಗಳ ಭಾಗದೆಡೆಗೆ ಬೀಸುತ್ತಿರುವುದರಿಂದ ರಾಜ್ಯದ ಹಲವೆಡೆ ಮುಂದಿನ ಐದು (ಜು.9) ಭಾರಿ ಮಳೆ ಸುರಿಯುವ ನಿರೀಕ್ಷೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಪಶ್ಚಿಮ ಘಟ್ಟ ಮತ್ತು ಅರಬ್ಬಿ ಸಮುದ್ರ ಭಾಗದಲ್ಲಿ ಜೋರು ಗಾಳಿ ಬೀಸುತ್ತಿರುವುದರಿಂದ ಕರಾವಳಿ ಹಾಗೂ ಮಲೆನಾಡಿನ ಭಾಗದಲ್ಲಿ ಕೆಲವು ದಿನಗಳಿಂದ ಧಾರಾಕಾರ ಮಳೆ ದಾಖಲಾಗಿದೆ. ಈ ಭಾಗದಲ್ಲಿ ಮಳೆ ಹೀಗೆ ಮುಂದುವರಿಯಲಿದೆ ಎನ್ನಲಾಗಿದೆ.
ಹೀಗಾಗಿ ಕರಾವಳಿ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಐದು ದಿನ ಪೈಕಿ ಜು.5, 6 ಮತ್ತು 9ರಂದು ಗುಡುಗು ಸಹಿತ ಅತ್ಯಧಿಕ ಮಳೆ ನಿರೀಕ್ಷೆ ಹಿನ್ನೆಲೆ 'ಆರೆಂಜ್ ಅಲರ್ಟ್' ಎಚ್ಚರಿಕೆ ನೀಡಲಾಗಿದೆ. ಇನ್ನು ಜು.7 ಹಾಗೂ 8ರಂದು ಈ ಜಿಲ್ಲೆಗಳಲ್ಲಿ ಮಳೆ ಅಬ್ಬರ ತುಸು ಕಡಿಮೆ ಆಗುವ ಸಂಭವ ಹಿನ್ನೆಲೆ ಈ ಎರಡು ದಿನ 'ಯೆಲ್ಲೋ ಅಲರ್ಟ್' ಮನ್ಸೂಚನೆ ನೀಡಲಾಗಿದೆ ಎಂದು ಹವಾಮಾನ ಇಲಾಖೆ ಬೆಂಗಳೂರು ಪ್ರಾದೇಶಿಕ ಕಚೇರಿ ಅಧಿಕಾರಿಗಳು ತಿಳಿಸಿದ್ದಾರೆ.

ಮಲೆನಾಡಿಗೆ ಅಧಿಕ ಮಳೆ ಭೀತಿ
ಭಾರಿ ಮಳೆ ಆಗುವ ನಿರೀಕ್ಷೆ ಇರುವುದರಿಂದ ಮಲೆನಾಡಿನ ಜಿಲ್ಲೆಗಳಾದ ಶಿವಮೊಗ್ಗ, ಹಾಸನ, ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಗಳಿಗೆ ಮುಂದಿನ ಐದು ದಿನಗಳು 'ಯೆಲ್ಲೋ ಅಲರ್ಟ್' ಎಚ್ಚರಿಕೆ ನೀಡಲಾಗಿದೆ. ಈ ಭಾಗದಲ್ಲಿ ತಾಪಮಾನ ಕಡಿಮೆ ಇರಲಿದ್ದು, ಎಲ್ಲೆಡೆ ತಂಪು ವಾತಾವರಣ ಕಂಡು ಬರಲಿದೆ. ಸ್ಟ್ರಫ್ ನ ಪ್ರಭಾವ ಹೆಚ್ಚಾದರೆ ಮಲೆನಾಡಿನ ಜಿಲ್ಲೆಗಳಲ್ಲಿ ಮಳೆ ಇನ್ನಷ್ಟು ಜಾಸ್ತಿ ಆಗುವ ನಿರೀಕ್ಷೆ ಎಂದು ತಿಳಿದು ಬಂದಿದೆ.

ನಾಲ್ಕು ಜಿಲ್ಲೆಗೆ ಭಾರಿ ಮಳೆ
ಮುಂಗಾರು ಮಾರುತಗಳು ದುರ್ಬಲ ಇರುವ ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಮುಂದಿನ ಮೂರು ದಿನ ಮುಂಗಾರು ಚುರುಕಾಗಲಿದೆ. ಈ ಪೈಕಿ ಜು. 7ರವರೆಗೆ ಬೆಳಗಾವಿ ಬೀದರ್, ಕಲಬುರಗಿ, ವಿಜಯಪುರ ಮತ್ತು ಯಾದಗಿರಿಗಳಲ್ಲಿ ಧಾರಾಕಾರ ಮಳೆ ನಿರೀಕ್ಷಿಸಲಾಗಿದ್ದು, ಅವುಗಳಿಗೆ 'ಯೆಲ್ಲೋ ಅಲರ್ಟ್' ಕೊಡಲಾಗಿದೆ. ಉಳಿದ ಪ್ರದೇಶಗಳಲ್ಲಿ ಅಲ್ಲಲ್ಲಿ ಚದುರಿದಂತೆ ಸಾಮಾನ್ಯ ಮಳೆ ಆಗಬಹುದು ಎಂದು ಅಂದಾಜಿಸಲಾಗಿದೆ.

ಕರಾವಳಿ-ಮಲೆನಾಡಿನಲ್ಲಿ ಉತ್ತಮ ಮಳೆ ದಾಖಲು:
ಸಣ್ಣ ಪ್ರಮಾಣದ ಸ್ಟ್ರಫ್ ಉಂಟಾಗಿರುವ ಪರಿಣಾಮ ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಕಳೆದ 24ಗಂಟೆಯಲ್ಲಿ ಅತ್ಯಧಿಕ ಮಳೆ ಆಗಿದೆ. ಈ ಪೈಕಿ ಕೊಟ್ಟಿಗೆಹಾರ, ಭಾಗಮಂಡಲ, ಶೃಂಗೇರಿ ಯಲ್ಲಿ ತಲಾ 13ಸೆಂ.ಮೀ, ಶಿವಮೊಗ್ಗದಲ್ಲಿ 12ಸೆಂ.ಮೀ, ಕ್ಯಾಸಲ್‌ರಾಕ್ ನಲ್ಲಿ 11ಸೆಂ.ಮೀ, ಉಡುಪಿ, ಪುತ್ತೂರು, ಕೊಲ್ಲೂರು, ಧರ್ಮಸ್ಥಳಗಳಲ್ಲಿ ತಲಾ 10ಸೆಂ.ಮೀ ಮಳೆ ಆದರೆ, ಮಂಗಳೂರು, ಮಂಗಳೂರು ವಿಮಾನ ನಿಲ್ದಾಣ, ಬಾಳೆ ಹೊನ್ನೂರು , ಔರಾದ್ ಗಳಲ್ಲಿ ತಲಾ 9ಸೆಂ.ಮೀ. ಮಳೆ ಬಿದ್ದಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ.

ಬೆಂಗಳೂರಿನ ಮುನ್ಸೂಚನೆ ಏನಿದೆ?
ಸೋಮವಾರ ಬೆಳಗ್ಗೆ 8.30 ಕ್ಕೆ ಕೊನೆಗೊಂಡಂತೆ ಹಿಂದಿನ 24ಗಂಟೆಯಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾತ್ರ 1.3ಮಿ.ಮೀ. ಮಳೆ ಆಗಿದೆ. ಉಳಿದ ಪ್ರದೇಶಗಳಲ್ಲಿ ಎಲ್ಲಿಯೂ ಮಳೆ ದಾಖಲಾಗಿಲ್ಲ. ಆದರೆ ಬೆಂಗಳೂರಿನಾದ್ಯಂತ ಕಳೆದ ಕೆಲವು ದಿನಗಳಿಂದ ತಂಪು ಹಾಗೂ ಮೋಡ ಮುಸುಕಿದ ವಾತಾವರಣ ಕಂಡು ಬಂದಿದೆ. ಅಷ್ಟಾಗಿ ಬಿಸಿಲಿನ ದರ್ಶನವಾಗಿಲ್ಲ.
ಮುಂದಿನ ಎರಡು ದಿನಗಳ ಕಾಲ ಇದೇ ರೀತಿಯ ವಾತಾವರಣ ಮುಂದುವರಿಯಲಿದ್ದು, ತಾಪಮಾನ ಗರಿಷ್ಠ 27ಡಿ.ಸೆ. ಮತ್ತು ಕನಿಷ್ಠ 20ಡಿ.ಸೆ. ದಾಖಲಾಗಬಹುದು ಎಂದು ಹವಾಮಾನ ತಜ್ಞರು ಮುನ್ಸೂಚನೆ ನೀಡಿದ್ದಾರೆ.












Click it and Unblock the Notifications