ಈ ವರ್ಷ ಮಳೆಯಲ್ಲ ಚಳಿಯೂ ಜಾಸ್ತಿ ಎಂದ ಹವಾಮಾನ ಇಲಾಖೆ!
ಬೆಂಗಳೂರು, ನವೆಂಬರ್ 19: ಈ ಬಾರಿಯ ನೈಋತ್ಯ ಮುಂಗಾರು ಮಳೆ ಉತ್ತಮವಾಗಿ ಸುರಿದಿದೆ. ಬಳಿಕ ಹಿಂಗಾರು ಮಳೆಯೂ ಸಹ ಅಬ್ಬರಿಸಿದ್ದು, ರಾಜ್ಯಾದ್ಯಂತ ಭಾರೀ ಮಳೆಯಾಗಿದೆ. ಮಳೆಗಾಲ ಮುಗಿದು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಚಳಿಯ ಅನುಭವವಾಗುತ್ತಿದೆ. ಇಂತಹ ಸಮಯದಲ್ಲಿಯೇ ಭಾರತೀಯ ಹವಾಮಾನ ಇಲಾಖೆ ಚಳಿಯ ಕುರಿತು ಅಪ್‌ಡೇಟ್ ನೀಡಿದೆ. ಅಧಿಕವಾಗಿ ಮಳೆ ಸುರಿದ ಕಾರಣ ಸಲ ಚಳಿಯೂ ಅಧಿಕವಾಗಿರಲಿದೆ ಎಂದು ಹೇಳಿದೆ.
ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ ನವೆಂಬರ್ ತಿಂಗಳ ಅಂತ್ಯದಿಂದ ರಾಜ್ಯದಲ್ಲಿ ಚಳಿಯು ಹೆಚ್ಚಲಿದೆ. ಈಗಾಗಲೇ ಕೆಲವು ಜಿಲ್ಲೆಗಳಲ್ಲಿ ಮುಂಜಾನೆ ಇಬ್ಬನಿ ಬೀಳುತ್ತಿದ್ದು, ಸಂಜೆ ಚಳಿಯ ಅನುಭವವಾಗುತ್ತಿದೆ. ತಿಂಗಳ ಅಂತ್ಯಕ್ಕೆ ಕೊರೆಯುವ ಚಳಿ ಜನರನ್ನು ಕಾಡಲಿದೆ.

ಮುಂಗಾರು ಅವಧಿ (ಜೂನ್-ಸೆಪ್ಟೆಂಬರ್)ಯಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಿದೆ. ಆದ್ದರಿಂದ ಮಣ್ಣು ಮತ್ತು ವಾತಾವರಣ ಹೆಚ್ಚು ತೇವಾಂಶಗೊಂಡಿದೆ. ಇನ್ನೂ ಹಲವು ಕಾರಣಗಳಿಂದಾಗಿ ಈ ಬಾರಿ ಚುಮು ಚುಮು ಚಳಿ ಜನರನ್ನು ಕಾಡಲಿದೆ. ಆಗಾಗ ಮೋಡ ಕವಿದ ವಾತಾವರಣವೂ ಇರಲಿದ್ದು, ಸಂಜೆ ವೇಳೆಗೆ ತಣ್ಣನೆಯ ಗಾಳಿ ಬೀಸಲಿದೆ.
ಮಳೆ ಮಾತ್ರವಲ್ಲ ಚಳಿಯೂ ಹೆಚ್ಚಳ: ಈಗಾಗಲೇ ಬೆಂಗಳೂರು ನಗರ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಸಂಜೆ ಚಳಿಯ ಅನುಭವವಾಗುತ್ತಿದೆ. ಚಳಿಗಾಲದಲ್ಲಿ ನವೆಂಬರ್‌ನಿಂದ ಉತ್ತರ ಭಾಗದಿಂದ ದಕ್ಷಿಣಕ್ಕೆ ಬೀಸುವ ಗಾಳಿಯ ಪರಿಣಾಮ ಚಳಿಯು ಹೆಚ್ಚಲಿದೆ. ಅಲ್ಲದೇ ನವೆಂಬರ್ ಅಂತ್ಯಕ್ಕೆ ಮಳೆ ಕಡಿಮೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಚಳಿಗಾಲದಲ್ಲಿರುವ ಕನಿಷ್ಠ ಮತ್ತು ಗರಿಷ್ಠ ತಾಪಮಾನಕ್ಕಿಂತ ಉಷ್ಣಾಂಶ ಸರಾಸರಿ 2-3 ಡಿಗ್ರಿ ಸೆಲ್ಸಿಯಸ್ ಕಡಿಮೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಅಲ್ಲದೆ ಹವಾಮಾನ ಇಲಾಖೆ ತಜ್ಞರ ಪ್ರಕಾರ ರಾಜ್ಯದಲ್ಲಿ ಚಳಿ ಹೆಚ್ಚಾಗಲು ಲಾ-ನಿನಾ ಸಹ ಕಾರಣವಾಗಲಿದೆ. ಪೂರ್ವ, ಮಧ್ಯ ಪೆಸಿಫಿಕ್ ಮಹಾಸಾಗರದಲ್ಲಿ ಉಷ್ಣಾಂಶ ಕಡಿಮೆಯಾದಾಗ ಲಾ-ನಿನಾ ಉಂಟಾಗಲಿದೆ.
ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಹವಾಮಾನ ತಜ್ಞ ಡಾ. ಶ್ರೀನಿವಾಸ ರೆಡ್ಡಿ, "ಕಳೆದ ವರ್ಷ ಮಳೆ ಕಡಿಮೆಯಾಗಿತ್ತು. ಈ ಬಾರಿ ವಾಡಿಕೆಗಿಂತ ಅಧಿಕ ಮಳೆಯಾಗಿದೆ. ಲಾ-ನಿನಾ ಕೂಡಾ ಶುರುವಾಗುತ್ತಿದೆ. ಈ ಎಲ್ಲಾ ಕಾರಣಗಳಿಂದ ಕನಿಷ್ಠ ಉಷ್ಣಾಂಶ ಕುಸಿಯಲಿದೆ" ಎಂದು ಹೇಳಿದ್ದಾರೆ.
2023ರಲ್ಲಿ ಮಳೆ ಮತ್ತು ಚಳಿ ಕಡಿಮೆ ಇತ್ತು. ಮಳೆಗಾಲ ಜುಲೈನಲ್ಲಿ ಸ್ವಲ್ಪ ಸುರಿದು ಕೈಕೊಟ್ಟಿತ್ತು. ಮಳೆ ಕಡಿಮೆಯಾದ ಕಾರಣ ಉಷ್ಣಾಂಶ ಏರಿಕೆಯಾಗಿತ್ತು. ಬೇಸಿಗೆಗೂ ಮೊದಲೇ ರಾಜ್ಯದಲ್ಲಿ ವಾಡಿಕೆಗಿಂತ ಅಧಿಕ ಉಷ್ಣಾಂಶ ದಾಖಲಾಗಿತ್ತು. ಬೇಸಿಗೆಯಲ್ಲಿ ಬಿಸಿಲಿನ ತಾಪದ ಕಾರಣ ಜನರು ಹೈರಾಣಾಗಿದ್ದರು. ಆದರೆ ಈ ಬಾರಿ ಉತ್ತಮ ಮಳೆಯಾಗಿದ್ದು, ಸದ್ಯ ಸಾಮಾನ್ಯ ಉಷ್ಣಾಂಶವಿದೆ.
ಉತ್ತರ ಭಾರತದ ರಾಜ್ಯಗಳಲ್ಲಿ ಈಗ ಚಳಿಯ ವಾತಾವರಣ ಆರಂಭವಾಗಿದೆ. ಆ ಕಡೆಯಿಂದ ಬೀಸುವ ಗಾಳಿಯ ಪರಿಣಾಮ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ವಾತಾವರಣದಲ್ಲಿ ಬದಲಾವಣೆಯಾಗಲಿದೆ. ಈ ಬಾರಿ ಅತಿ ಹೆಚ್ಚು ಮಳೆಗೆ ಸಾಕ್ಷಿಯಾಗಿದ್ದ ಜನರು ಈಗ ನಡುಗುವ ಚಳಿಯನ್ನು ಸಹ ನೋಡಬೇಕಿದೆ.












Click it and Unblock the Notifications