Karnataka Rains: ರಾಜ್ಯದ 20ಕ್ಕೂ ಅಧಿಕ ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಮಳೆ, ಹವಾಮಾನ ಮುನ್ಸೂಚನೆ
ಬೆಂಗಳೂರು, ಜೂನ್ 09: ಕರ್ನಾಟಕದಾದ್ಯಂತ ಮಳೆ ಕಡಿಮೆಯಾಗಿ ಬಿಸಿಲಿನ ಪ್ರಮಾಣ ಹೆಚ್ಚಾಗಿತ್ತು. ಇದೀಗ ಮುಂದಿನ 5ರಿಂದ 7ದಿನ ರಾಜ್ಯದ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಭಾರೀಯಿಂದ ಅತೀ ಭಾರೀ ಮಳೆ ಆಗಲಿದೆ. ಕನಿಷ್ಠ 110 ಮಿಲಿ ಮೀಟರ್‌ನಿಂದ 200 ಮಿಲಿ ಮೀಟರ್‌ವರೆಗೆ ಮಳೆ ಆಗುವ ನಿರೀಕ್ಷೆ ಹಿನ್ನೆಲೆ ವಿವಿಧ ಜಿಲ್ಲೆಗಳಿಗೆ 'ಆರೆಂಜ್ ಮತ್ತು ಯೆಲ್ಲೋ ಅಲರ್ಟ್' ಘೋಷಿಸಲಾಗಿದೆ. ಮತ್ತೊಂದು ಬಾರಿ ಮುಂಗಾರು ಮಳೆ ಅಬ್ಬರಿಸುವುದು ಖಚಿತ ಎಂದು ಭಾರತೀಯ ಹವಾಮಾನ ಇಲಾಖೆಯು (IMD) ಮುನ್ಸೂಚನೆ ನೀಡಿದೆ.
ರಾಜ್ಯದಲ್ಲಿ ಭಾನುವಾರ ಅಲ್ಲಲ್ಲಿ ಹಗುರ ಮಳೆ ಆಗಿದೆ. ಜೂನ್ 11 ರಿಂದ ಧಾರಾಕಾರ ಮಳೆ ಆರಂಭವಾದರೂ ಅಂದು ನಾಲ್ಕು ಜಿಲ್ಲೆಗಳಲ್ಲಿ ಮಾತ್ರ ಭಾರೀ ಮಳೆ ಇದ್ದು, ಯೆಲ್ಲೋ ಅಲರ್ಟ್ ನೀಡಲಾಗಿದೆ. ಅದರ ಹೊರತು ಎಲ್ಲಿಯೂ ಅಷ್ಟಾಗಿ ಮಳೆ ಬಾರದು. ಜೂನ್ 12ರಂದು ಎಲ್ಲಿಯೂ ಮಳೆ ಮುನ್ಸೂಚನೆ ಇಲ್ಲ. ಅಲ್ಲಿಯವರೆಗೆ ಹಗುರ, ತುಂತುರು ಮಳೆ ಬರುವ ಮುನ್ಸೂಚನೆ ಇದೆ ಎಂದು ಐಎಂಡಿ ತಿಳಿಸಿದೆ.

ಜೂನ್ 13 ರಿಂದ ಮೂರು ದಿನ (ಜೂನ್ 15ರವರೆಗೆ) ರಾಜ್ಯದ ಕರಾವಳಿ, ಒಳನಾಡು, ಮಲೆನಾಡು ಸೇರಿದಂತೆ ಒಟ್ಟು 20 ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಮಳೆ ಆರ್ಭಟ ಕಂಡು ಬರಲಿದೆ. ಇದರಿಂದ ಕನಿಷ್ಠ 110 ಮಿಲಿ ಮೀಟರ್ ಹಾಗೂ ಗರಿಷ್ಠ 200 ಮಿಲಿ ಮೀಟರ್‌ವರೆಗೆ ಮಳೆಗೆ ಸಾಕ್ಷಿ ಆಗುವ ಜಿಲ್ಲೆಗಳು ಸೇರಿದಂತೆ ಎಂದು ಐಎಂಡಿ ಮುನ್ಸೂಚನೆ ವರದಿ ಅಪ್ಡೇಟ್ಸ್ ನೀಡಿದೆ.
ಯಾವ್ಯಾವ ಜಿಲ್ಲೆಗಳಿಗೆ ಭಾರೀ ಮಳೆ ಎಚ್ಚರಿಕೆ?
ಕರಾವಳಿಯ ಉಡುಪಿ ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮರೆಯಾಗಿದ್ದ ಮುಂಗಾರು ಜೂನ್ 13ರಿಂದ ಮೂರು ದಿನ ಧಾರಾಕಾರವಾಗಿ ನಿರಂತರವಾಗಿ ಸುರಿಯಲಿದೆ. ಹೀಗಾಗಿ ಮೊದಲ ಎರಡು ದಿನ ಯೆಲ್ಲೋ ಅಲರ್ಟ್ ನಂತರ ಒಂದು ದಿನ ಆರೆಂಜ್ ಅಲರ್ಟ್ ನೀಡಲಾಗಿದೆ.
ಒಳನಾಡು ಜಿಲ್ಲೆಗಳಾದ ಬೆಳಗಾವಿ, ಬೀದರ್, ಧಾರವಾಡ, ಗದಗ, ಕಲಬುರಗಿ, ವಿಜಯಪುರ, ಹಾವೇರಿ, ಬಳ್ಳಾರಿ, ಚಿಕ್ಕಮಗಳೂರು, ದಾವಣಗೆರೆ, ಹಾಸನ, ಕೊಡಗು, ಮೈಸೂರು, ಶಿವಮೊಗ್ಗ, ವಿಜಯನಗರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ 110 ಮಿಲಿ ಮೀಟರ್‌ಗಿಂತಲೂ ಹೆಚ್ಚಿನ ಮಳೆ ಆಗಲಿದೆ. ಈ ಜಿಲ್ಲೆಗಳಿಗೆ ಒಂದು ದಿನ ಆರೆಂಜ್ ಅಲರ್ಟ್, ಎರಡು ದಿನ ಯೆಲ್ಲೋ ಅಲರ್ಟ್ ನೀಡಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಈ ಒಳನಾಡು ಭಾಗಗಳಲ್ಲಿನ ತಾಪಮಾನ ಕಡಿಮೆಯಾಗಿ ಮಳೆಗಾಲದ ವಾತಾವರಣ ಸೃಷ್ಟಿಯಾಗಲಿದೆ. ಉತ್ತರ ಕರ್ನಾಟಕದಲ್ಲಿ ಮುಂಗಾರು ಹಂಗಾಮು ಬಿತ್ತನೆ ಮಾಡಿದ್ದ ರೈತರಿಗೆ ಮಳೆ ಅಗತ್ಯವಿದೆ. ಮುಂದಿನ ವಾರದ ಮಳೆ ಅವರ ಮೊಗದಲ್ಲಿ ಮಂದಹಾಸ ಮೂಡಿಸಲಿದೆ.












Click it and Unblock the Notifications