Highway Rain: ಕರ್ನಾಟಕದ ವಿವಿಧ ಹೆದ್ದಾರಿಗಳಲ್ಲಿ ಮುಂದಿನ 24 ಗಂಟೆ ಭಾರೀ ಮಳೆ ನಿರೀಕ್ಷೆ
ಬೆಂಗಳೂರು, ಜೂನ್ 27: ಕರ್ನಾಟಕ ರಾಜ್ಯದ ಅರ್ಧ ಭಾಗದಲ್ಲಿ ಮುಂಗಾರು ಮಳೆ ಮತ್ತಷ್ಟು ಚುರುಕುಗೊಂಡಿದೆ. ವಿವಿಧ ಜಿಲ್ಲೆಗಳಲ್ಲಿ ವಿಪರೀತ ಮಳೆ ಆಗುತ್ತಿದೆ. ರಾಜ್ಯದ ಉಳಿದರ್ಧ ಕಡೆಗೆ ಮೋಡ ಮುಸುಕಿನ ವಾತಾವರಣ ಇದ್ದು, ತುಂತುರು ಮಳೆ ಆಗುತ್ತಿದೆ. ಈ ಮಧ್ಯೆ ಕರ್ನಾಟಕದ ರಾಜ್ಯದಲ್ಲಿರುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ (National Highway Rain) ಸಹ ವ್ಯಾಪಕ ಮಳೆ ಆಗುವುದರ ಬಗ್ಗೆ IMD ಮಹತ್ವದ ಮುನ್ಸೂಚನೆ ನೀಡಿದೆ.
ರಾಷ್ಟ್ರೀಯ ಹೆದ್ದಾರಿಗಳಲ್ಲಿ ಓಡಾಡುವ ದಿನನಿತ್ಯದ ಲಾರಿ, ಟ್ರಕ್, ಬಸ್, ಕಾರು ಇನ್ನಿತರ ಖಾಸಗಿ, ಸರ್ಕಾರಿ ವಾಹನಗಳ ಚಾಲಕರು ಮಳೆಯ ಮುನ್ಸೂಚನೆ ಅರಿತು ತೆರಳಿದರೆ ಒಳಿತು. ಕಾರಣ ಬದಲಾದ ಹವಾಮಾನ ವೈಪರಿತ್ಯಗಳ ಪ್ರಭಾವದಿಂದಾಗಿ ಹೆದ್ದಾರಿಗಳಲ್ಲಿ ಮುಂದಿನ 24 ಗಂಟೆಗಳವರೆಗೆ ಭಾರೀ ಮಳೆ ಆಗಲಿದೆ.

ಈ ಪೈಕಿ ಕರ್ನಾಟಕ ಕರಾವಳಿ ಭಾಗಕ್ಕೆ ಸಂಪರ್ಕಿಸುವಂತೆ ಅಂದರೆ ಬೆಂಗಳೂರು-ಹಾಸನ ಮಾರ್ಗವಾಗಿ ಮಂಗಳೂರಿಗೆ ಸಾಗುವ ಹೆದ್ದಾರಿ, ಬೆಂಗಳೂರಿನಿಂದ ಹುಬ್ಬಳ್ಳಿ ಕಡೆಗೆ ಸಾವು ಹೆದ್ದಾರಿಯಲ್ಲಿ ಸಾಧಾರಣದಿಂದ ಭಾರೀ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮಲೆನಾಡು ಭಾಗದಲ್ಲಿ ಹೆದ್ದಾರಿಯಲ್ಲಿ ಭಾರೀ ಮಳೆ
ಬೆಂಗಳೂರಿನಿಂದ ಮೈಸೂರು ಕಡೆಗಿನ ಹೆದ್ದಾರಿಯಲ್ಲಿ ತುಂತುರು ಮಳೆ ಆಗುವ ಸಾಧ್ಯತೆ ಇದೆ. ಮೈಸೂರಿನಿಂದ ಸೋಮವಾರಪೇಟೆ ಸೇರಿದಂತೆ ಕೊಡಗು ಜಿಲ್ಲೆಗಳತ್ತ ಸಾಗುವ ದಾರಿಯಲ್ಲಿ, ಶಿವಮೊಗ್ಗ-ಆಗುಂಬೆ ಹೆದ್ದಾರಿಗಳಲ್ಲಿ ಗುಡುಗು ಸಹಿತ ಮಳೆ ಅಬ್ಬರಿಸುವ ಮುನ್ಸೂಚನೆ ಇದೆ. ಈ ವೇಳೆ ಸಂಚರಿಸುವವರು ಜೋರು ಮಳೆಯಲ್ಲಿ ಸಿಲುಕ ಬೇಕಾಗುತ್ತದೆ. ನಿರಂತರ ಮಳೆಯಲ್ಲಿ ಚಾಲನೆ ಮಾಡಿದರೆ, ಆನಾರೋಗ್ಯದಂತ ಸಂಕಷ್ಟಗಳು ಎದುರಾಗುವ ಸಾಧ್ಯತೆ ಇರುತ್ತದೆ.
ಅಗತ್ಯ ಎಚ್ಚರಿಕೆ ವಹಿಸುವುದು ಅವಶ್ಯಕ
ಇನ್ನೂ ಹುಬ್ಬಳ್ಳಿಯಿಂದ ಬೆಳಗಾವಿ, ಬೆಳಗಾವಿಯಿಂದ ಕಾರವಾರ ಕಡೆಗಳಲ್ಲಿ ಅತೀವ ಮಳೆ ಆರ್ಭಟ ಉಂಟಾಗಲಿದೆ. ಹೀಗಾಗಿ ಸಂಚಾರದ ಅನಿವಾರ್ಯತೆ ಇರುವ ಸರಕು ಸೇವೆಗಳ ವಾಹನಗಳ ಹೊರತಾಗಿ, ಪ್ರವಾಸ, ಮೋಜು ಮಸ್ತಿ, ಇನ್ನಿತರ ಕಾರಣಗಳಿಗೆ ತೆರಳುವವರು ಅಗತ್ಯ ಎಚ್ಚರಿಕೆ ವಹಿಸಬೇಕಿದೆ.

ಈ ಮಾರ್ಗದ ಹೆದ್ದಾರಿಗಳಲ್ಲಿ ಹಗುರ ಮಳೆ ಸಾಧ್ಯತೆ
ಇನ್ನೂ ಬೆಂಗಳೂರಿನಿಂದ ಬೀದರ್ ಹೆದ್ದಾರಿ ಮಾರ್ಗ, ಹುಬ್ಬಳ್ಳಿಯಿಂದ ಕಲಬುರಗಿ, ಬಳ್ಳಾರಿ ಮಾರ್ಗದ ಹೆದ್ದಾರಿ ರಸ್ತೆಗಳಲ್ಲಿ ಅಷ್ಟಾಗಿ ಮಳೆ ಆಗುವ ಲಕ್ಷಣ ಇಲ್ಲ. ಬದಲಾಗಿ ಆಗಾಗ ತುಂತುರು ಮಳೆ ಬರಲಿದೆ. ಇನ್ನೂ ಕೆಲವು ರಾಜ್ಯದ ರಾಜ್ಯ ಹೆದ್ದಾರಿಗಳಲ್ಲಿ ಹಗುರದಿಂದ ಸಾಧಾರಣ ಮಳೆ ಆಗಲಿದೆ ಎಂದು ಹವಾಮಾನ ತಜ್ಞರು ಮಾಹಿತಿ ನೀಡಿದ್ದಾರೆ.
ಈ ಮೇಲಿನ ಎಲ್ಲ ರಾಷ್ಟ್ರೀಯ ಹೆದ್ದಾರಿಗಳ ಪೈಕಿ ಬೆಂಗಳೂರು-ಹಾಸನ-ಮಂಗಳೂರು ಹೆದ್ದಾರಿ, ಮೈಸೂರು-ಕೊಡಗು, ಮೈಸೂರು-ಚಾಮರಾಜನಗರ, ಉಡುಪಿ-ಮಂಗಳೂರು ಸೇರಿ ಕರಾವಳಿ ಭಾಗದ ಹೆದ್ದಾರಿಗಳಲ್ಲಿ ಭಾರೀ ಮಳೆ ಮುನ್ಸೂಚನೆ ನೀಡಲಾಗಿದೆ.
ಈ ಭಾಗದಲ್ಲಿ ಓಡಾಡುವ ವಾಹನ ಸವಾರರು ಅಗತ್ಯ ಸಿದ್ಧತೆಗಳೊಂದಿಗೆ ತೆರಳಬೇಕಿದೆ. ಕಳೆದ ಕೆಲವು ದಿನಗಳಿಂದ ರಾತ್ರಿಯಿಡಿ ಹೆದ್ದಾರಿಗಳಲ್ಲಿ ರಸ್ತೆ ಕಾಣದಂತೆ ಮಳೆ ಸುರಿಯುತ್ತಿದೆ. ಜಿಟಿ ಜಿಟಿ ಮಳೆ ಬೆಳಗ್ಗವರೆಗೆ ಮುಂದುವರಿಯುತ್ತಿದೆ.
ಕೇವಲ ರಾಜ್ಯದ ಹೈವೇಗಳಲ್ಲಿ ಮಾತ್ರವಲ್ಲದೇ ಜಿಲ್ಲೆಗಳು, ತಾಲೂಕು ಮಟ್ಟದ ಗ್ರಾಮೀಣ ಪ್ರದೇಶ, ಮಲೆನಾಡು, ಕರಾವಳಿ ಭಾಗದಲ್ಲೂ ಅತ್ಯಧಿಕ ಮಳೆ ಬೀಳಲಿದೆ. ಇನ್ನೂ ಕೆಲವು ದಿನ ಮುಂಗಾರು ಮಳೆ ಆರ್ಭಟ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.












Click it and Unblock the Notifications