ಕರ್ನಾಟಕ; ಭಾರೀ ಮಳೆ ಎಚ್ಚರಿಕೆ ಅ. 5, 6ರಂದು ಆರೆಂಜ್ ಅಲರ್ಟ್
ಬೆಂಗಳೂರು, ಅಕ್ಟೋಬರ್ 03; ಕರ್ನಾಟಕದಲ್ಲಿ ನೈಋತ್ಯ ಮುಂಗಾರು ಅವಧಿ ಪೂರ್ಣಗೊಂಡಿದೆ. ಆದರೆ ಚಂಡಮಾರುತದ ಪ್ರಭಾವದಿಂದ ಹಲವು ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಅಕ್ಟೋಬರ್ 6ರ ತನಕ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಭಾನುವಾರ ಮತ್ತು ಸೋಮವಾರ ಮಲೆನಾಡು, ಕರಾವಳಿ ಪ್ರದೇಶಗಳಲ್ಲಿ ಹಗುರವಾದ ಮಳೆಯಾಗಲಿದೆ. ಅಕ್ಟೋಬರ್ 5 ಮತ್ತು 6ರಂದು ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ಇದ್ದು, ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಅಕ್ಟೋಬರ್ 3 ಮತ್ತು 4ರಂದು ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಹಾಸನ, ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಅಕ್ಟೋಬರ್ 5 ಮತ್ತು 6ರಂದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

ಶಾಹೀನ್ ಮತ್ತು ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಚಂಡಮಾರುತದ ಪರಿಣಾಮ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಬೀದರ್, ಕೊಪ್ಪಳ, ರಾಯಚೂರು, ಕಲಬುರಗಿ, ವಿಜಯಪುರ, ಧಾರವಾಡ, ಗದಗ ಜಿಲ್ಲೆಗಳಲ್ಲಿ ಭಾನುವಾರ ಸಾಧರಣ ಮಳೆಯಾಗುವ ಸಾಧ್ಯತೆ ಇದೆ.
ದಕ್ಷಿಣ ಕನ್ನಡ, ಉಡುಪಿ, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ಮಂಡ್ಯ, ಮೈಸೂರು, ರಾಮನಗರ, ಚಾಮರಾಜನಗರ, ಕೊಡಗು ಜಿಲ್ಲೆಗಳಲ್ಲಿ ಅಕ್ಟೋಬರ್ 6ರ ತನಕ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಶಾಹೀನ್ ಚಂಡಮಾರುತದ ಪರಿಣಾಮ ಗುಜರಾತ್ ಕರಾವಳಿ ಪ್ರದೇಶ, ಕೇರಳ, ತಮಿಳುನಾಡು ರಾಜ್ಯಗಳಲ್ಲಿ ಭಾನುವಾರ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಅರುಣಾಚಲ ಪ್ರದೇಶ, ಪಶ್ಚಿಮ ಬಂಗಾಳ, ಅಸ್ಸಾಂ, ಮೇಘಾಲಯ, ನ್ಯಾಗಾಲ್ಯಾಂಡ್, ತ್ರಿಪುರ, ಲಕ್ಷದ್ವೀಪ, ಜಾರ್ಖಂಡ್, ಕೇರಳ, ತಮಿಳುನಾಡು, ಗೋವಾ, ಉತ್ತರ ಪ್ರದೇಶ, ಸಿಕ್ಕಿಂ ರಾಜ್ಯಗಳಲ್ಲಿ ಭಾನುವಾರ ಮಳೆಯ ಮುನ್ಸೂಚನೆ ಕೊಡಲಾಗಿದೆ.
ಬಂಗಾಳಕೊಲ್ಲಿಯಲ್ಲಿ ಉಂಟಾಗಿದ್ದ ಗುಲಾಬ್ ಚಂಡಮಾರುತದ ಪರಿಣಾಮ ಆಂಧ್ರ ಪ್ರದೇಶ, ಒಡಿಶಾ, ತೆಲಂಗಾಣ, ಮಹಾರಾಷ್ಟ್ರ, ಪಶ್ಚಿಮ ಬಂಗಾಳದಲ್ಲಿ ಭಾರೀ ಮಳೆಯಾಗಿತ್ತು. ಈಗ ಗುಲಾಬ್ ಚಂಡಮಾರುತ ಶಾಹೀನ್ ಆಗಿ ಪರಿವರ್ತನೆಯಾಗಿದ್ದು, ಇನ್ನೂ ಹಲವು ದಿನ ಇದರ ಪರಿಣಾಮ ಮಳೆಯಾಗಲಿದೆ ಎಂದು ಅಂದಾಜಿಸಲಾಗಿದೆ.
ಜೂನ್‌ನಿಂದ ಸೆಪ್ಟೆಂಬರ್ ಅಂತ್ಯದ ತನಕ ನೈಋತ್ಯ ಮುಂಗಾರು ಅವಧಿಯಲ್ಲಿ ಕರ್ನಾಟಕದಲ್ಲಿ ಶೇ 8ರಷ್ಟು ಮಳೆ ಕೊರತೆಯಾಗಿದೆ. ಜೂನ್ ಮತ್ತು ಜುಲೈನಲ್ಲಿ ಮಳೆಯಾದರೂ ಆಗಸ್ಟ್‌ನಲ್ಲಿ ಮಳೆ ಕೈಕೊಟ್ಟಿತ್ತು. ಸೆಪ್ಟೆಂಬರ್‌ನಲ್ಲಿ ಚಂಡಮಾರುತದ ಪರಿಣಾಮ ಮಳೆಯಾಗಿದೆ.
ಜುಲೈ ತಿಂಗಳಿನಲ್ಲಿ ಸುರಿದ ಮಳೆಯಿಂದಾಗಿ ಕರ್ನಾಟಕದ ಬಹುತೇಕ ಜಲಾಶಯಗಳು ಭರ್ತಿಯಾಗಿವೆ. ಆದರೆ ವಿದ್ಯುತ್ ಉತ್ಪಾದನೆಗೆ ಆಧಾರವಾಗಿರುವ ಲಿಂಗನಮಕ್ಕಿ ಇನ್ನೂ ಭರ್ತಿಯಾಗಿಲ್ಲ. ಡ್ಯಾಂನಲ್ಲಿ 553.44 ಮೀಟರ್ ನೀರಿನ ಸಂಗ್ರಹವಿದೆ.
38.04 ಮೀಟರ್‌ನ ಕೆಆರ್‌ಎಸ್ ಜಲಾಶಯ ಸಹ ಇನ್ನೂ ಭರ್ತಿಯಾಗಿಲ್ಲ. ಜಲಾಶಯದಲ್ಲಿ 34.36 ಮೀಟರ್ ನೀರಿನ ಸಂಗ್ರಹವಿದೆ. 6334 ಕ್ಯುಸೆಕ್ ನೀರು ಹರಿದು ಬರುತ್ತಿದ್ದು, 6172 ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ.
ಕೊಡಗು ಜಿಲ್ಲೆಯಲ್ಲಿ ಹೆಚ್ಚು ಮಳೆಯಾದರೂ ಕೆಆರ್‌ಎಸ್ ಇನ್ನೂ ಭರ್ತಿಯಾಗಿಲ್ಲ. ಅಕ್ಟೋಬರ್ ತಿಂಗಳಿನಲ್ಲಿ ಜಲಾಶಯ ಭರ್ತಿಯಾದ ಉದಾಹರಣೆಗಳು ಇವೆ. ಆದ್ದರಿಂದ ಈ ತಿಂಗಳು ಕಾವೇರಿ ಒಡಲು ತುಂಬಬಹುದು ಎಂದು ರೈತರ ಆಶಯವಾಗಿದೆ. ಕೆಆರ್‌ಎಸ್ ಭರ್ತಿಯಾದರೆ ಮಂಡ್ಯ, ಮೈಸೂರು, ಬೆಂಗಳೂರು ನಗರಕ್ಕೆ ಬೇಸಿಗೆಯಲ್ಲಿ ಕುಡಿಯುವ ನೀರಿನ ಕೊರತೆ ಉಂಟಾಗುವುದಿಲ್ಲ.
ಮಹಾರಾಷ್ಟ್ರದಲ್ಲಿ ಮಳೆಯಾಗುತ್ತಿರುವ ಪರಿಣಾಮ ಆಲಮಟ್ಟಿ ಜಲಾಶಯಕ್ಕೆ 10366 ಕ್ಯುಸೆಕ್ ನೀರು ಹರಿದು ಬರುತ್ತಿದೆ. ನಾರಾಯಣಪುರ ಜಲಾಶಯಕ್ಕೆ 7756 ಕ್ಯುಸೆಕ್ ಒಳಹರಿವು ಇದೆ.
ಕೊಡಗು ಜಿಲ್ಲೆಯಲ್ಲಿ ಶನಿವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಸರಾಸರಿ 29.26 ಮಿ.ಮೀ.ಮಳೆಯಾಗಿದೆ. ಜನವರಿಯಿಂದ ಇಲ್ಲಿಯವರೆಗಿನ ಮಳೆ 2459.81 ಮಿ. ಮೀ. ಮಳೆಯಾಗಿದೆ.
ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು. ಈಗ ಜಲಾಶಯದಲ್ಲಿ 2857.60 ಅಡಿಗಳ ನೀರಿನ ಸಂಗ್ರಹವಿದೆ.ನೀರಿನ ಒಳಹರಿವು 1837 ಕ್ಯುಸೆಕ್ ಆಗಿದೆ. ಹೊರ ಹರಿವು ನದಿಗೆ 700 ಕ್ಯುಸೆಕ್, ನಾಲೆಗೆ 550 ಕ್ಯುಸೆಕ್.












Click it and Unblock the Notifications