ಕರ್ನಾಟಕ; ಕಡಿಮೆಯಾದ ಮಳೆ, ಉಷ್ಣಾಂಶದಲ್ಲಿ ಏರಿಕೆ
ಬೆಂಗಳೂರು, ನವೆಂಬರ್ 04 : ಕರ್ನಾಟಕದ ಕರಾವಳಿ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಮಳೆಯ ಅಬ್ಬರ ಕಡಿಮೆಯಾಗಿದೆ. 30 ರಿಂದ 40 ಕಿ. ಮೀ. ವೇಗದಲ್ಲಿ ಗಾಳಿ ಬೀಸುತ್ತಿದ್ದು, ಗುಡುಗು, ಸಿಡಿಲಿನ ಮುನ್ಸೂಚನೆ ನೀಡಲಾಗಿದೆ.
ಹವಾಮಾನ ಇಲಾಖೆ ನವೆಂಬರ್ 4 ಮತ್ತು 5 ರಂದು ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲಿ ಗಂಟೆಗೆ 30 ರಿಂದ 40 ಕಿ. ಮೀ. ವೇಗದಲ್ಲಿ ಗಾಳಿ ಬೀಸಲಿದೆ ಎಂದು ಹೇಳಿದೆ. ಗುಡುಗು ಮತ್ತು ಸಿಡಿಲು ಮಾತ್ರ ಇರಲಿದ್ದು, ಮಳೆ ಇರುವುದಿಲ್ಲ.
ಕರಾವಳಿ, ಮಲೆನಾಡು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ನವೆಂಬರ್ 6ರ ತನಕ ಕಡಿಮೆ ಇರಲಿದೆ. ಕಳೆದ ಮೂರು ದಿನಗಳಿಂದ ಮಳೆ ಕಡಿಮೆಯಾಗಿದ್ದು, ಉಷ್ಣಾಂಶ ಏರಿಕೆಯಾಗಿದೆ.

ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ ಭಾನುವಾರ 1 ಸೆಂ.ಮೀ. ಮಳೆಯಾಗಿದೆ. ಬೀದರ್‌ನಲ್ಲಿ ನವೆಂಬರ್ 3ರಂದು 17.8 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು.
ಈ ಬಾರಿಯ ಮುಂಗಾರು ಋತುವಿನಲ್ಲಿ ಕರ್ನಾಟಕದಲ್ಲಿ ವಾಡಿಕೆಗಿಂತ ಶೇ 23ರಷ್ಟು ಹೆಚ್ಚು ಮಳೆಯಾಗಿದೆ. ಆಗಸ್ಟ್ ತಿಂಗಳಿನಲ್ಲಿ 10 ದಿನ ಸುರಿದ ಮಳೆಗೆ ರಾಜ್ಯದ 22 ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿತ್ತು. ಅಕ್ಟೋಬರ್ ಅಂತ್ಯದ ತನಕವೂ ಮಳೆ ಮುಂದುವರೆದಿತ್ತು.
ಕರ್ನಾಟಕದಲ್ಲಿ ಹೆಚ್ಚು ಮಳೆಯಾದರೂ 18 ಜಿಲ್ಲೆಗಳ 49 ತಾಲೂಕುಗಳನ್ನು ಬರಪೀಡಿತ ಎಂದು ಸರ್ಕಾರ ಘೋಷಣೆ ಮಾಡಿದೆ. ಆಗಸ್ಟ್ 30ರ ತನಕ ಸುರಿದ ಮಳೆಯ ಆಧಾರದ ಮೇಲೆ ಬರಪೀಡಿತ ತಾಲೂಕುಗಳನ್ನು ಘೋಷಿಸಲಾಗಿದೆ.












Click it and Unblock the Notifications