Karnataka Rains: ಚಂಡಮಾರುತ ಪರಿಚಲನೆ ಸೃಷ್ಟಿ: ಮುಂದಿನ 3-5 ದಿನ ರಾಜ್ಯಕ್ಕೆ ಭಾರೀ ಮಳೆ ಎಚ್ಚರಿಕೆ
ಬೆಂಗಳೂರು, ಏಪ್ರಿಲ್ 24: ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಸಕ್ರಿಯವಾಗಿದ್ದ ಪೂರ್ವ ಮುಂಗಾರು ಮಳೆ ಕೊಂಚ ತಣ್ಣಗಾಗಿದೆ. ಉತ್ತರ ಒಳನಾಡು ಮತ್ತು ಮಲೆನಾಡು ಭಾಗದಲ್ಲಿ ಆಗಾಗ ಸುರಿಯುತ್ತಿದೆ. ಬುಧವಾರ ಉತ್ತರ ಕರ್ನಾಟಕದ ವಿವಿಧೆಡೆ ಭರ್ಜರಿ ಮಳೆ ದಾಖಲಾಗಿದೆ. ಮುಂದಿನ 3 ರಿಂದ 5 ದಿನ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಉತ್ತಮ ಮಳೆ ಮುನ್ಸೂಚನೆ ಇದೆ. ಏಪ್ರಿಲ್ 27ರಿಂದ ಮೂರು ದಿನ ಬೆಂಗಳೂರಿನಲ್ಲಿ ವ್ಯಾಪಕ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಅರ್ಧ ರಾಜ್ಯಕ್ಕೆ ಉಷ್ಣದ ಅಲೆ ಎಚ್ಚರಿಕೆ ಇದ್ದು, ಮುಂದೆ ಎಲ್ಲ ಭಾಗಗಳಲ್ಲೂ ಸಹ ವ್ಯಾಪಕ ಮಳೆ ಆಗುವ ನಿರೀಕ್ಷೆಗಳು ಇವೆ. ಹವಾಮಾನ ಇಲಾಖೆ ಪ್ರಕಾರ, ದಾವಣಗೆರೆ, ಚಿತ್ರದುರ್ಗ, ಹಾಸನ, ಶಿವಮೊಗ್ಗ, ಚಿಕ್ಕಮಗಳೂರು, ಬೆಳಗಾವಿ, ಧಾರವಾಡ, ಬಳ್ಳಾರಿ, ತುಮಕೂರು ಭಾಗಗಳಲ್ಲಿ ಮುಂದಿನ ಮೂರು ದಿನ ಆಗಾಗ ಸಾಧಾರಣದಿಂದ ಜೋರು ಮಳೆ ಆಗುವ ಸಂಭವವಿದೆ.

ರಾಜ್ಯದ ಗರಿಷ್ಠ ತಾಪಮಾನದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಕಲಬುರಗಿ, ಬೀದರ್, ಕಾರವಾರ, ಬೆಳಗಾವಿ, ಹಾವೇರಿ, ಬಳ್ಳಾರಿ, ದಕ್ಷಿಣ ಕನ್ನಡ, ಬೆಂಗಳೂರು ಸೇರಿದಂತೆ ರಾಜ್ಯದ ಯಾವ ಭಾಗದಲ್ಲೂ ಗರಿಷ್ಠ ತಾಪಮಾನದಲ್ಲಿ ತೀವ್ರ ಇಳಿಕೆ ಸೂಚನೆಗಳು ಇಲ್ಲ. ಆಗಾಗ ಕೆಲವು ಹೊತ್ತು ಮಬ್ಬು ವಾತಾವರಣ ಸೃಷ್ಟಿಯಾದರೂ ಸಹಿತ ಇಡೀ ದಿನ ಸೆಕೆ, ಉಷ್ಣ ಅಲೆಯ ಪ್ರಭಾವ ಇರಲಿದೆ.
ಲಘು ಮಳೆ, ಗಾಳಿಯ ವೇಗದಲ್ಲಿ ಬದಲಾವಣೆ
ವಿಜಯಪುರ, ಕೊಪ್ಪಳ, ಯಾದಗಿರಿ, ಕಲಬುರಗಿ, ಧಾರವಾಡ, ಹಾವೇರಿ, ಗದಗ ಜಿಲ್ಲೆಗಳಲ್ಲಿ ಮುಂದಿನ ನಾಲ್ಕು ದಿನಗಳಲ್ಲಿ ಅಲ್ಲಲ್ಲಿ ಗುಡುಗು ಮಿಂಚು ಸಹಿತ ಲಘು ಮಳೆ ಆಗಲಿದೆ. ಈ ಭಾಗದಲ್ಲಿ ಗಾಳಿಯ ವೇಗವು ಪ್ರತಿ ಗಂಟೆಗೆ 50-60 ಕಿಲೋ ಮೀಟರ್‌ವೇಗದಲ್ಲಿ ಬೀಸಲಿದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.

ಭರ್ಜರಿ ಮಳೆ ದಾಖಲು..
ಕಳೆದ 24 ಗಂಟೆಗಳಲ್ಲಿ (ಬುಧವಾರ) ಬೆಳಗಾವಿಯಲ್ಲಿ ಅತ್ಯಧಿಕ ಮಳೆ ದಾಖಲಾಗಿದೆ. ಅಲ್ಲಿ 64 ಮಿಲಿ ಮೀಟರ್, ದಕ್ಷಿಣ ಕನ್ನಡದಲ್ಲಿ 57.5 ಮಿ.ಮೀ, ಧಾರವಾಡದಲ್ಲಿ 44.5 ಮಿ.ಮೀ, ಉಡುಪಿ - 31.5 ಮಿ.ಮೀ, ಚಿಕ್ಕಮಗಳೂರು - 24.5 ಮಿ.ಮೀ, ವಿಜಯಪುರ 23.5 ಮಿ.ಮೀ. ಮಳೆ ಆಗಿದೆ. ಇನ್ನುಳಿದಂತೆ ಉತ್ತರ ಕನ್ನಡ 23 ಮಿ.ಮೀಟರ್, ಶಿವಮೊಗ್ಗ 20.5 ಮಿ.ಮೀ. ಮಳೆ ಆಗಿದ್ದರೆ, ಬಿಸಿಲು ಹೆಚ್ಚಿರುವ ಕಲಬುರಗಿಯಲ್ಲೂ ಸಹ ನೆನ್ನೆ 19.5 ಮಿಲಿ ಮೀಟರ್ ಮಳೆ ಆಗಿದೆ.
ಚಂಡಮಾರುತ ವೈಪರೀತ್ಯ ಮುಂದುವರಿಕೆ...
ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಕೊಂಚ ಮಳೆ ಕಡಿಮೆ ಆಗಿದೆ. ಮುಂದಿನ ವಾರದ ಮತ್ತೆ ಭಾರೀ ಮಳೆ ಸಂಭವವಿದೆ. ಉತ್ತರದಿಂದ ದಕ್ಷಿಣ ವರೆಗೆ ಛತ್ತೀಸ್‌ಗಢ ಭಾಗದಿಂದ ಮನ್ನಾರ್ ಕೊಲ್ಲಿಎವರೆಗೆ ತೆಲಂಗಾಣ, ವಿದರ್ಭ ಆತಂಕರಿಗೆ ಒಳನಾಡು ಪ್ರದೇಶಗಳಲ್ಲಿ ಹಾಗೂ ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಸಮುದ್ರ ಮಟ್ಟದಿಂದ ಸರಾಸರಿ 0.9 ಕೀಮೀ. ಎತ್ತರದಲ್ಲಿ ವೈಪರೀತ್ಯದ ಗಾಳಿ ಬೀಸುತ್ತಿದೆ. ತಮಿಳುನಾಡಿನ ದಕ್ಷಿಣ ಕರಾವಳಿ ಸಮುದ್ರ ಮೇಲ್ಮೈನಲ್ಲಿ 1.5 ಕಿಮೀ ನಿಂದ 3.1 ಕಿಲೋ ಮೀಟರ್‌ವರೆಗೆ ಚಂಡಮಾರುತ ಪರಿಚಲನೆ ಇದೆ. ಹೀಗಾಗಿ ರಾಜ್ಯದಲ್ಲಿ ಮಳೆ ಆರ್ಭಟ ಮುಂದುವರಿದಿದೆ.
ಬೆಂಗಳೂರಿಗೆ ಮೂರು ದಿನ ಭಾರೀ ಮಳೆ
ಏಪ್ರಿಲ್ 26 ರವರೆಗೆ ವ್ಯಾಪಕ ಬಿಸಿಲು ಹಾಗೂ ಸೆಕೆ ಅನುಭವಿಸಲಿರುವ ಬೆಂಗಳೂರು ನಗರ ಏಪ್ರಿಲ್ 27, 28 ಮತ್ತು 29 ರಂದು ಮೂರು ದಿನಗಳ ಕಾಲ ಸಾಧಾರಣದಿಂದ ಜೋರು ಮಳೆಗೆ ಸಾಕ್ಷಿಯಾಗಲಿದೆ. ಸಂಜೆ ನಂತರ ಮಳೆ ಆವರಿಸಲಿದ್ದು, ಗುಡುಗು ಮಿಂಚು ಸಹಿತ ಮಳೆ ಅಬ್ಬರಿಸಲಿದೆ. ಈ ವೇಳೆ ನಗರದ ತಾಪಮಾನ ಗರಿಷ್ಠ 33 ಹಾಗೂ ಕನಿಷ್ಠ 21 ಮಿಲಿ ಮೀಟರ್ ಮುಂದುವರಿಯಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಮಾಹಿತಿ ನೀಡಿದೆ.












Click it and Unblock the Notifications