ಕರ್ನಾಟಕ ಮಳೆ: 4 ದಿನ ಕರಾವಳಿ, ಮಲೆನಾಡಿಗೆ ಭಾರೀ ಮಳೆ, 'ಆರೆಂಜ್ ಅಲರ್ಟ್' ಘೋಷಣೆ: IMD ಮುನ್ಸೂಚನೆ
ಬೆಂಗಳೂರು, ಜುಲೈ 04: ಕರ್ನಾಟಕದಲ್ಲಿ ಹವಾಮಾನದ ಏರಳಿತ ಮುಂದುವರೆದಿದ್ದು, ಮುಂಗಾರು ಮಳೆ ಅಬ್ಬರ ಜೋರಾಗಿದೆ. ಒಂದೊಂದು ದಿನ ಒಂದೊಂದು ಕಡೆಗಳಲ್ಲಿ ಮಳೆ ಅತ್ಯಧಿಕ ಪ್ರಮಾಣದಲ್ಲಿ ಸುರಿಯುತ್ತಿದೆ. ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ಭಾರಿ ಮಳೆ, ಇನ್ನಷ್ಟು ದಿನ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.
ಮುನ್ಸೂಚನೆ ಪ್ರಕಾರ, ರಾಜ್ಯದಲ್ಲಿ ಮುಂದಿನ 4-5 ದಿನಗಳ ಕಾಲ ವಿವಿಧ ಜಿಲ್ಲೆಗಳ ಭರ್ಜರಿ ಮಳೆ ಸುರಿಯಲಿದೆ. ಈಗಾಗಲೇ ಸುರಿಯುತ್ತಿರುವ ಮಳೆಗೆ ಕರಾವಳಿ ಹಾಗೂ ಮಲೆನಾಡಿನ ಜಿಲ್ಲೆಗಳು ಅಕ್ಷರಶಃ ನಲುಗಿವೆ. ನದಿಗಳು, ಜಲಪಾತಗಳು ತುಂಬಿ ಹರಿಯುತ್ತಿವೆ. ಕೆಲವು ಮೇಲ್ಸೇತುವೆ, ರಸ್ತೆಗಳು ಮಳೆಗೆ ಕೊಚ್ಚಿ ಹೋಗಿವೆ.

ಇದರ ಬೆನ್ನಲ್ಲೆ ಮತ್ತೆ 4-5 ದಿನ ಮುಂಗಾರು ಮಳೆ ಕರಾವಳಿಯ ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳು, ಕೊಡಗು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಆರ್ಭಟಿಸಲಿದೆ. ಹೀಗಾಗಿ ಈ ಜಿಲ್ಲೆಗಳಿಗೆ 'ಆರೆಂಜ್ ಅಲರ್ಟ್' ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ಬೆಂಗಳೂರಿನ ತಜ್ಞರು ಮಾಹಿತಿ ನೀಡಿದ್ದಾರೆ.
ಒಳನಾಡು ಜಿಲ್ಲೆಗಳ ಮಳೆ ಮುನ್ಸೂಚನೆ
ರಾಜ್ಯದಲ್ಲಿ ಕಳೆದ ಎರಡು ವಾರಗಳಿಂದ ಮಳೆ ಅಬ್ಬರ ಜೋರಾಗಿದೆ. ಆದರೆ ಮಳೆ ರಾಜ್ಯಾದ್ಯಂತ ಅಬ್ಬರಿಸದೇ ಕೇವಲ ಕರಾವಳಿ ಹಾಗೂ ಮಲೆನಾಡಿನ ಜಿಲ್ಲೆಗಳಲ್ಲಿ ದರ್ಶನ ನೀಡುತ್ತಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಾಮರಾಜನಗರ, ಮೈಸೂರು, ಹಾಸನ, ತುಮಕೂರು ಹಾಗೂ ಇನ್ನಿತರ ಕಡೆಗಳಲ್ಲಿ ಮಳೆಯು ಅಷ್ಟಾಗಿ ಭಾರದೇ ಮಬ್ಬು ವಾತಾವರಣ ಕಂಡು ಬರುತ್ತಿದೆ.

ಈ ಜಿಲ್ಲೆಗಳಲ್ಲಿ ವಾತಾವರಣ ತಂಪಿನಿಂದ ಕೂಡಿದ್ದು, ಚಳಿಯ ಅನುಭವ ಆಗುತ್ತಿದೆ. ಆಗಾಗ ಒಂದಷ್ಟು ಕಡೆಗಳಲ್ಲಿ ತಕ್ಕಮಟ್ಟಿನ ಮಳೆ ಆಗುತ್ತಿದೆ. ದಕ್ಷಿಣ ಒಳನಾಡಿನಲ್ಲಿ ಎಲ್ಲಿಯೂ ಭಾರೀ ಮಳೆ ಆಗಿಲ್ಲ.
ಉತ್ತರ ಕರ್ನಾಟಕಕ್ಕೆ ಕರುಣೆ ತೋರದ ವರುಣ
ಇನ್ನೂ ಇದಕ್ಕೆ ವಿರುದ್ಧ ಎಂಬಂತೆ ಉತ್ತರ ಕರ್ನಾಟಲದಲ್ಲಿ ಮಳೆಯೇ ಆಗುತ್ತಿಲ್ಲ. ಹಾವೇರಿ, ಕೊಪ್ಪಳ, ಗದಗ, ರಾಯಚೂರು, ಕಲಬುರಗಿ, ಬಾಗಲಕೋಟೆ, ವಿಜಯಪುರ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಮಳೆಯೇ ಇಲ್ಲ. ಒಂದೆರಡು ಕಡೆಗಳಲ್ಲಿ ತುಂತುರು ಮಳೆ ಆಗಿದೆ. ಇದರ ಹೊರತು ಎಲ್ಲಿಯೂ ವ್ಯಾಪಕ ಮಳೆ ಆಗಿಲ್ಲ.
ಸದ್ಯದ ಮುನ್ಸೂಚನೆಯಲ್ಲೂ ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕದ ಜಿಲ್ಲೆಗಳಲ್ಲಿ ಹೆಚ್ಚು ಮಳೆ ಮುನ್ಸೂಚನೆ ಇಲ್ಲ. ಹಗುರದಿಂದ ಸಾಧಾರಣ ಮಳೆ ಆಗಬಹುದು ಎಂದು ಅಂದಾಜಿಸಲಾಗಿದೆ.












Click it and Unblock the Notifications