ಸಂಡೂರಿನಲ್ಲಿ ಮತ್ತೆ ಅಕ್ರಮ ಗಣಿಗಾರಿಕೆ: ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್
ಬೆಂಗಳೂರು, ಜನವರಿ 06; ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಪುರಾತನ ಮತ್ತು ಸಂರಕ್ಷಿತ ಸ್ಮಾರಕವಾಗಿರುವ ಕುಮಾರಸ್ವಾಮಿ ದೇವಸ್ಥಾನ ಸುತ್ತಲಿನ ಸ್ವಾಮಿಮಲೈ ಬೆಟ್ಟದಲ್ಲಿ ಮತ್ತೆ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ಸ್ಥಳೀಯರೇ ಅಕ್ರಮ ಗಣಿಗಾರಿಕೆ ವಿರುದ್ಧ ಮತ್ತೆ ಹೋರಾಟ ಆರಂಭಿಸಿ ಕರ್ನಾಟಕ ಹೈಕೋರ್ಟ್ ಮೊರೆ ಹೋಗಿದ್ದಾರೆ.
ಅವ್ಯಾವಹತವಾಗಿ ನಡೆಯುತ್ತಿರುವ ಗಣಿಗಾರಿಕೆಯನ್ನು ತಡೆಯಲು ಆದೇಶಿಸುವಂತೆ ಕೋರಿ ಸಂಡೂರಿನ ಶ್ರೀಶೈಲ ಆಳದಹಳ್ಳಿ ಸೇರಿದಂತೆ ಐವರು ನಿವಾಸಿಗಳು ಸಲ್ಲಿಸಿರುವ ಅರ್ಜಿ ಸಂಬಂಧ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಈ ಬಗೆಗಿನ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪಿ. ಬಿ. ವರಳೆ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿ, ಕೇಂದ್ರ ಸಂಸ್ಕೃತಿ ಸಚಿವಾಲಯ, ರಾಜ್ಯ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿರ್ದೇಶಕರು, ಭಾರತೀಯ ಸರ್ವೇಕ್ಷಣಾ ಇಲಾಖೆ ಹಾಗೂ ಐದು ಗಣಿ ಕಂಪನಿಗಳಿಗೆ ಸೇರಿದಂತೆ ಒಟ್ಟು 12 ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿ ನಾಲ್ಕು ವಾರದಲ್ಲಿ ಆಕ್ಷೇಪಣೆ ಸಲ್ಲಿಸಲು ನಿರ್ದೇಶಿಸಿದೆ.

ಸಂರಕ್ಷಿತ ಪ್ರದೇಶಕ್ಕೆ ಧಕ್ಕೆ: ಅರ್ಜಿದಾರರ ಪರ ವಕೀಲರು, ಏಳು ಮತ್ತು ಎಂಟನೇ ಶತಮಾನದ ಬಾದಾಮಿ ಚಾಲುಕ್ಯರ ಅವಧಿಯಲ್ಲಿ ಕುಮಾರಸ್ವಾಮಿ ದೇವಸ್ಥಾನ ನಿರ್ಮಿಸಲಾಗಿದೆ. ದೇವಸ್ಥಾನದ ಸುತ್ತಲು ಜೀವ ವೈವಿದ್ಯ ಮತ್ತು ಔಷಧೀಯ ಗುಣವುಳ್ಳ ಸಸಿಗಳನ್ನು ಹೊಂದಿರುವ ಸ್ವಾಮಿಮೈಲೈ ವೈವಿಧ್ಯ ಕಾಡಿದೆ.
ಸ್ವಾಮಿಮಲೈ ಬೆಟ್ಟದ 2.5 ಎಕರೆ ಜಾಗದಲ್ಲಿ ಈ ಕುಮಾರಸ್ವಾಮಿ ದೇವಸ್ಥಾನವನ್ನು ರಾಷ್ಟ್ರೀಯ ಸಂರಕ್ಷಿತ ಮತ್ತು ಪುರಾತನ ಸ್ಮಾರಕವಾಗಿ ಕೇಂದ್ರ ಸರ್ಕಾರ ಘೋಷಿಸಿದೆ. ದಕ್ಷಿಣ ಪ್ರಸ್ಥಭೂಮಿಯ ಪಶ್ಚಿಮಘಟ್ಟವೆಂದೇ ಸ್ವಾಮಿಮಲೈ ಬೆಟ್ಟವು ಖ್ಯಾತಿ ಪಡೆದಿದೆ ಎಂದರು.
ಅಲ್ಲದೆ, ಇತ್ತೀಚಿನ ದಿನಗಳಲ್ಲಿ ಸ್ವಾಮಿಮಲೈ ಕಾಡಿನಲ್ಲಿ ಗಣಿಗಾರಿಕೆ ಅವ್ಯಾವಹತವಾಗಿ ನಡೆಯುತ್ತಿದೆ. ಸದ್ಯ ದೇವಸ್ಥಾನದ ಬಾಗಿಲ ಸಮೀಪದವರೆಗೂ ಗಣಿಗಾರಿಕೆ ಬಂದಿದೆ. ನಿರಂತರ ಗಣಿ ಚಟುವಟಿಕೆಯಿಂದಾಗಿ ದೇವಸ್ಥಾನದ ರಚನೆಗಳಿಗೆ ಗಂಭೀರ ಸ್ವರೂಪದ ಹಾನಿ ಉಂಟು ಮಾಡುತ್ತಿದೆ. ದೇವಸ್ಥಾನದ ಹಲವು ಭಾಗಗಳು ದುಸ್ಥಿತಿಗೆ ತಲುಪಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.
ಜತೆಗೆ ಅರ್ಜಿದಾರರು ಗಣಿ ಸ್ಫೋಟದಿಂದ ದೇವಸ್ಥಾನದ ಕಲ್ಲಿನ ಕಂಬಗಳಲ್ಲಿ ಬಿರುಕು ಮೂಡಿದ್ದು, ಗೋಪುರ ವಾಲಿದೆ. ಸ್ಥಳೀಯ ಗ್ರಾಮಗಳ ಕುಡಿಯುವ ನೀರಿನ ಮೂಲ ಕಲುಷಿತವಾಗಿವೆ. ಕಬ್ಬಿಣದ ಅದಿರು ಕಣಗಳಿಂದ ವಾಯು ಮಾಲಿನ್ಯ ಪ್ರಮಾಣ ಹೆಚ್ಚುತಿದೆ. ಗಣಿದೂಳಿನಿಂದ ದೇವಸ್ಥಾನ ಸಂಪೂರ್ಣವಾಗಿ ಮುಚ್ಚುಹೋಗಿದೆ ಎಂದು ಹೇಳಿದೆ.
ಸ್ವಾಮಿಮಲೈ ಬೆಟ್ಟದಲ್ಲಿ ನಡೆಯುತ್ತಿರುವ ಗಣಿಗಾರಿಕೆಯನ್ನು ನಿಲ್ಲಿಸಬೇಕು. ದೇವಸ್ಥಾನವನ್ನು ಸಂರಕ್ಷಣೆ ಮಾಡಬೇಕೆಂದು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಆದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಿದ್ದಾರೆ.












Click it and Unblock the Notifications