ಪಿಯುಸಿ ಫಲಿತಾಂಶ ಗೊಂದಲ, ನಾಲ್ವರ ಅಮಾನತು
ಬೆಂಗಳೂರು, ಜೂ. 03 : ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶದಲ್ಲಿ ಉಂಟಾದ ಗೊಂದಲಕ್ಕೆ ಸಂಬಂಧಿಸಿದಂತೆ 12 ಸಿಬ್ಬಂದಿಗಳ ವಿರುದ್ಧ ಕ್ರಮ ಕೈಗೊಳ್ಳಲು ಪದವಿ ಪೂರ್ಣ ಶಿಕ್ಷಣ ಇಲಾಖೆ ಮುಂದಾಗಿದೆ. ಮೊದಲ ಹಂತದಲ್ಲಿ ನಾಲ್ವರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.
ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕಿ ಸುಷಮಾ ಗೋಡಬೋಲೆ ಅವರು ಮಂಗಳವಾರ ಈ ಕುರಿತು ಆದೇಶ ಹೊರಡಿಸಿದ್ದಾರೆ. ಪರೀಕ್ಷಾ ಕೊಠಡಿ ಮೇಲ್ವಿಚಾರಕರಾಗಿ ಕಾರ್ಯ ನಿರ್ವಹಿಸಿದ್ದ ನಾಲ್ವರು ಉಪನ್ಯಾಸಕರನ್ನು ಅಮಾನತು ಮಾಡಲಾಗಿದೆ. [ದ್ವಿತೀಯ ಪಿಯುಸಿ ಅಂಕಗಳ ಗೊಂದಲ, ಪ್ರತಿಭಟನೆ]

ಅಮಾನತುಗೊಂಡವರು : ಎಸ್.ಜಿ. ಖೋತ್ (ಪಿಇಎಸ್ ಪಿಯು ಕಾಲೇಜು ಚಿಕ್ಕೋಡಿ), ಬಿ. ಶಶಿಕಲಾ (ಸೇಂಟ್ ಆಂಥೋಣಿ ಪಿಯು ಕಾಲೇಜು ನಜರ್‌ಬಾದ್ ಮೈಸೂರು), ಅನಿತಾ ಬಿ. ತಳವಾರ (ಬಾಲಕರ ಸರ್ಕಾರಿ ಪಿಯು ಕಾಲೇಜು, ಜಮಖಂಡಿ) ಶ್ವೇತಾ (ವಿಜಯ ಪಿಯು ಕಾಲೇಜು, ಪಾಂಡವಪುರ). [ಫಲಿತಾಂಶ : ಯಾವ ಜಿಲ್ಲೆಗೆ ಯಾವ ಸ್ಥಾನ]
12 ಸಿಬ್ಬಂದಿಗಳಲ್ಲಿ ಉಳಿದ 8 ಮಂದಿ ಸಂಯುಕ್ತ ಪಿಯು ಕಾಲೇಜುಗಳ ಪ್ರೌಢ ಶಾಲಾ ವಿಭಾಗಗಳ ಹಿರಿಯ ಶಿಕ್ಷಕರಾಗಿದ್ದಾರೆ. ಆದ್ದರಿಂದ ಇವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಗೆ ಶಿಫಾರಸು ಮಾಡಲಾಗಿದೆ. [ಪಿಯುಸಿ ಮೌಲ್ಯಮಾಪನದಲ್ಲಿ ನಿಜಕ್ಕೂ ಲೋಪವಾಗಿದೆಯೇ?]
ಸಚಿವರ ಆದೇಶ : ಫಲಿತಾಂಶದಲ್ಲಿ ಗೊಂದಲ ಉಂಟಾದ ಹಿನ್ನಲೆಯಲ್ಲಿ 12 ಸಿಬ್ಬಂದಿಯನ್ನು ಅಮಾನತು ಮಾಡಿ ತನಿಖೆ ನಡೆಸಿ ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳುವಂತೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಸೂಚಿಸಿದ್ದರು. ಸಚಿವ ಆದೇಶದ ಮೇರೆಗೆ ಈ ಕ್ರಮವನ್ನು ಕೈಗೊಳ್ಳಲಾಗಿದೆ.
ಅರ್ಜಿ ಸಲ್ಲಿಸುವ ಅವಧಿ ವಿಸ್ತರಣೆ : ದ್ವಿತೀಯ ಪಿಯುಸಿ ಉತ್ತರ ಪತ್ರಿಕೆಗಳ ಮರು ಮೌಲ್ಯಮಾಪನ ಮತ್ತು ಮರುಎಣಿಕೆಗೆ ಅರ್ಜಿ ಸಲ್ಲಿಸುವ ಅವಧಿಯನ್ನು ಜೂನ್ 9 ರವರೆಗೆ ವಿಸ್ತರಣೆ ಮಾಡಲಾಗಿದೆ. ಇದಕ್ಕೂ ಮುನ್ನ ಜೂನ್ 3ರ ಗಡುವು ನೀಡಲಾಗಿತ್ತು. ಮರು ಎಣಿಕೆ ಫಲಿತಾಂಶ ಜೂನ್ 14ರಂದು ಪ್ರಕಟಗೊಳ್ಳಲಿದೆ.












Click it and Unblock the Notifications