ಪೂರ್ತಿ ಆಡಿಯೋ ಬಿಟ್ಟರೆ ಇವರ ಬಂಡವಾಳ ಗೊತ್ತಾಗುತ್ತದೆ: ಡಿಕೆ ಸುರೇಶಗೆ ತಿರುಗೇಟು ಕೊಟ್ಟ ಹೆಚ್ ಡಿ ಕುಮಾರಸ್ವಾಮಿ
ಚನ್ನಪಟ್ಟಣ, ನವೆಂಬರ್ 07: ಸಿಡಿ ಬ್ರದರುಗಳಿಗೆ ಸಿಡಿ, ವಿಡಿಯೋ, ಆಡಿಯೋ ಮಾಡುವುದೇ ಕೆಲಸ. ಹಾಸನದಲ್ಲಿ ಇಂಥದೇ ಷಡ್ಯಂತ್ರ ಮಾಡಿದರು. ಚನ್ನಪಟ್ಟಣದಲ್ಲಿಯೂ ಅದನ್ನೇ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.
ಚುನಾವಣಾ ಪ್ರಚಾರದ ನಡುವೆ ಚನ್ನಪಟ್ಟಣದ ಸೋಗಾಲಪಾಳ್ಯದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಹೆಚ್ ಡಿ ಕುಮಾರಸ್ವಾಮಿ ಅವರು ಮಾತನಾಡಿ, ನಾನು ವಿಧಾನಸೌಧದಲ್ಲಿ ಮಾತಾಡಿರುವ ಆಡಿಯೋವನ್ನು ಅವರು ಎಲ್ಲಾ ಸಭೆಗಳಲ್ಲಿ ಕೇಳಿಸುತ್ತಿದ್ದಾರೆ. ಅವರಿಗೆ ಎಷ್ಟು ಹತಾಶೆ, ಸೋಲಿನ ಭೀತಿ ಕಾಡುತ್ತಿದೆ ಎನ್ನುವುದಕ್ಕೆ ಇದೇ ಸಾಕ್ಷಿ. ಕೇವಲ ಒಂದು ತುಣುಕು ಕತ್ತರಿಸಿ ಬಿಡುವುದಲ್ಲ, ಪೂರ್ಣ ಆಡಿಯೋ ಬಿಡಲಿ, ಆಗ ಅವರ ಮರ್ಯಾದೆ ಏನು ಎನ್ನುವುದು ಗೊತ್ತಾಗುತ್ತದೆ ಎಂದು ಅವರು ಕಿಡಿಕಾರಿದರು.

ಆಡಿಯೋ ಬಿಡುಗಡೆ ಡಿಕೆ ಸುರೇಶ್ ಬಗ್ಗೆ ಕೆಂಡಾಮಂಡಲರಾದ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು ಮಾತನಾಡಿ, ಸಿಡಿ ಆಡಿಯೋ, ವಿಡಿಯೋ ಬಿಡುವುದಲ್ಲಿ ಡಿಕೆ ಸಹೋದರರು ನಿಪುಣರು. ಅವರು ಇಂಥ ದಂಧೆಗಳನ್ನೇ ಮಾಡಿಕೊಂಡು ಬರುತ್ತಿದ್ದಾರೆ ಎಂದು ಹೆಚ್ ಡಿ ಕುಮಾರಸ್ವಾಮಿ ಅವರು ಹೇಳಿದರು.
ಆ ಆಡಿಯೋ ಹಳೆಯದು. ನಾನು ವಿಧಾನಸಭೆಯಲ್ಲಿ ಮಾತನಾಡಿದ್ದು. ಒಂದು ವಾರದಿಂದ ಅದನ್ನು ಕತ್ತರಿಸಿ ಹಂಚುತ್ತಿದ್ದಾರೆ. ವಾಸ್ತವ ಪರಿಸ್ಥಿತಿ ಬಗ್ಗೆ ಮಾತನಾಡಿದ್ದೆ. ಪಕ್ಕದ ಮದ್ದೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿಚಾರವಾಗಿ ಹೇಳಿದ್ದ ಆಡಿಯೋ ಅದು. ಇಸ್ಪೀಟ್, ಕ್ರಿಕೆಟ್ ಬೆಟ್ಟಿಂಗ್ ದಂಧೆ ನಡೆಸುವವರು ಐದು ವರ್ಷ ಅವರು ಕೆಲಸ ಮಾಡಲಿ. ನಾನು ಎರಡು ದಿನದಲ್ಲಿ ಬದಲಾವಣೆ ಮಾಡುತ್ತೇನೆ ಎಂದು ನಾನು ಹೇಳಿದ್ದೆ. ಅದನ್ನೇ ಇವರು ಚನ್ನಪಟ್ಟಣಕ್ಕೆ ತಂದು ಹೇಳುತ್ತಿದ್ದಾರೆ ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು ಲೇವಡಿ ಮಾಡಿದರು.
ಇವರಂತೆ ನಾನು ಅಕ್ರಮ ಮಾಡಿ ಚುನಾವಣೆ ಮಾಡುವುದಿಲ್ಲ. ನನ್ನ ಚುನಾವಣೆಯನ್ನು ಕಾರ್ಯಕರ್ತರೇ ಮಾಡುತ್ತಾರೆ, ಅವರೇ ಮತ ಕೇಳುತ್ತಾರೆ. ನಾನು ಆ ರೀತಿ ಮಾತನಾಡುವ ಅವಶ್ಯಕತೆ ಇಲ್ಲ. ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಉತ್ತಮ ಕೆಲಸ ಮಾಡಿದವರು ಇಂತವರಿಂದ ನಗಣ್ಯ ಆಗುತ್ತಾರೆ ಎನ್ನುವ ಹಿನ್ನೆಲೆಯಲ್ಲಿ ಹೇಳಿದ್ದೆ. ಆ ಆಡಿಯೋವನ್ನು ಪೂರ್ತಿ ಹಾಕಿ ಕೇಳಿಸಿದರೆ ಇವರ ಬಂಡವಾಳ, ಯೋಗ್ಯತೆ ಗೊತ್ತಾಗುತ್ತದೆ ಎಂದು ಅವರು ತಿರುಗೇಟು ನೀಡಿದರು.
ಹಾಸನದಲ್ಲೂ ಇದಕ್ಕಿಂತ ಕೆಟ್ಟದಾಗಿ ಮಾಡಿದರು. ನನ್ನ ಮೇಲೆ ಹೇಳಲು ಇವರಿಗೆ ಏನೂ ಇಲ್ಲವಲ್ಲ, ಅದಕ್ಕಾಗಿ ಇಂಥ ಕೆಟ್ಟ ಚೇಷ್ಟೆ ಮಾಡುತ್ತಿದ್ದಾರೆ. ಯೋಗೇಶ್ವರ ಅವರ ಸಂಸ್ಕೃತಿ ಏನು ಎಂಬುದು ಎಲ್ಲರಿಗೂ ಗೊತ್ತಿದೆ. ಇವರೆಲ್ಲಾ ಸಿಡಿ ಪ್ಲೈಯರ್ಸ್ ಆ ಸಂತತಿಯಲ್ಲಿ ಬಂದವರು. ಇದಕ್ಕೆಲ್ಲಾ ನಮ್ಮ ಜನ ಬೆಲೆ ಕೊಡುತ್ತಾರಾ? ನಾನು ಅಭಿವೃದ್ಧಿ ವಿಚಾರ ಇಟ್ಟುಕೊಂಡು ಹೊರಟಿದ್ದೇನೆ. ಅವರು ಏನೇ ಮಾತನಾಡಿದರೂ ಚನ್ನಪಟ್ಟಣದ ಜನ ನವೆಂಬರ್ 13ಕ್ಕೆ ಉತ್ತರ ಕೊಡುತ್ತಾರೆ ಎಂದು ಹೆಚ್ ಡಿ ಕುಮಾರಸ್ವಾಮಿ ಹೇಳಿದರು.












Click it and Unblock the Notifications