ವಸತಿ ಇಲಾಖೆಯಲ್ಲಿ ಭ್ರಷ್ಟಾಚಾರ; ರಾಜೀನಾಮೆಗೆ ಸಿದ್ದ ಎಂದ ಜಮೀರ್ ಅಹಮದ್
ಬೆಂಗಳೂರು, ಜೂನ್ 24: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಒಂದಲ್ಲ ಒಂದು ಭ್ರಷ್ಟಾಚಾರದ ಆರೋಪಗಳು ಕೇಳಿ ಬರುತ್ತಿವೆ. ರಾಜ್ಯ ರಾಜಕೀಯದಲ್ಲಿ ದೊಡ್ಡದಾಗಿ ಸದ್ದು ಮಾಡಿರುವ ಕರ್ನಾಟಕ ವಸತಿ ಇಲಾಖೆಯ ವಿರುದ್ಧದ ಹಗರಣಗಳ ಕುರಿತು ಬಿ ಆರ್ ಪಾಟೀಲ್ ಅವರು ಬಹಿರಂಗವಾಗಿ ಆರೋಪಿಸಿದ್ದು, ಈ ಆರೋಪಕ್ಕೆ ಖುದ್ದು ವಸತಿ ಸಚಿವ ಜಮೀರ್ ಅಹ್ಮದ್ ಅವರು ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಬಡವರಿಂದ ಹಣ ಪಡೆದು ಮನೆ ನೀಡಿದರೆ ಹೊಟ್ಟೆಗೆ ಹುಳ ಬಿದ್ದು ಸಾಯ್ತಾರೆ ಎಂದು ಹೇಳಿದ್ದಾರೆ. ಬಡವರಿಗೆ ಕೊಡುವ ಮನೆಗೆ ಹಣ ಪಡೆದು ಬದುಕುವ ದರಿದ್ರ ನನಗೆ ಬಂದಿಲ್ಲ ಎಂದು ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದ್ದಾರೆ. ಬಡವರಿಗೆ ಮನೆ ಹಂಚಿಕೆ ಮಾಡಲು ನಾನು ಹಣ ಪಡೆದಿರುವುದು ಸಾಬೀತು ಮಾಡಿದರೆ ಬೇರೆಯವರು ಕೇಳುವುದು ಬೇಡ ನಾನೇ ಸ್ವಯಂ ಪ್ರೇರಿತವಾಗಿ ರಾಜೀನಾಮೆ ಕೊಡಲು ಸಿದ್ಧ ಎಂದು ಹೇಳಿದ್ದಾರೆ.

ಬಡವರ ಮನೆಗೆ ಹಣ ಪಡೆಯುವುದು ಅಕ್ಷಮ್ಯ ಅಪರಾಧ. ಅದಕ್ಕೆ ನಮ್ಮ ಇಲಾಖೆ ಯಲ್ಲಿ ಅವಕಾಶ ಇಲ್ಲ. ಹಿರಿಯ ಶಾಸಕರಾದ ಬಿ. ಆರ್. ಪಾಟೀಲ್ ಅವರು ಮಾಡಿರುವ ಆರೋಪ ಸಂಬಂಧ ತನಿಖೆ ಗೆ ಆದೇಶಿಸಲಾಗುವುದು. ತನಿಖೆ ನಂತರ ಯಾರಾದರೂ ತಪ್ಪು ಮಾಡಿದ್ದರೆ ಕಠಿಣ ಕ್ರಮ ಕೈಗೊಳ್ಳ ಲಾಗುವುದು. ಬಿ. ಆರ್. ಪಾಟೀಲರ ಜತೆಯೂ ಮಾತನಾಡುತ್ತೇನೆ ಎಂದು ತಿಳಿಸಿದರು. ಬಿ. ಆರ್. ಪಾಟೀಲ್ ಅವರು ಸಹ ಸಚಿವರು ಹಣ ಪಡೆದಿದ್ದಾರೆ ಎಂದು ಹೇಳಿಲ್ಲ. ಅಧಿಕಾರಿಗಳ ಹೆಸರು ಸಹ ಹೇಳಿಲ್ಲ. ಪಂಚಾಯಿತಿಯಲ್ಲಿ ಯಾರಾದರೂ ಹಣ ಪಡೆದಿದ್ದರೆ ಮಾಹಿತಿ ಕೊಟ್ಟರೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಈ ವಿಚಾರದ ಬಗ್ಗೆ ಎಲ್ಲ ಮಾಹಿತಿ ತಿಳಿಸಿದ್ದೇನೆ. ನಾನು ಪ್ರವಾಸ ದಲ್ಲಿ ಇದ್ದ ಕಾರಣ ಮಾತನಾಡಲು ಸಾಧ್ಯವಾಗಿರಲಿಲ್ಲ. ಇದೀಗ ಅಧಿಕಾರಿಗಳ ಸಭೆ ಕರೆದು ಮಾಹಿತಿ ಪಡೆದುಕೊಂಡಿದ್ದೇನೆ. ನಾನು ಏನಾದ್ರೂ ತಪ್ಪು ಮಾಡಿದ್ರೆ, ಆ ತಪ್ಪು ಸಾಬೀತು ಮಾಡಿದ್ರೆ ನಾನೇ ರಾಜೀನಾಮೆ ನೀಡುತ್ತೇನೆ ಎಂದು ತಿಳಿಸಿದರು.
ಶಾಸಕ ಬೇಳೂರು ಗೋಪಾಲಕೃಷ್ಣ ರಾಜೀನಾಮೆ ಗೆ ಆಗ್ರಹ ಮಾಡಿರುವ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಅವರಿಗೆ ವಾಸ್ತವ ಬಗ್ಗೆ ಮಾಹಿತಿ ಇಲ್ಲ. ಮನೆ ಹಂಚಿಕೆ ವಿಚಾರದಲ್ಲಿ ನಮ್ಮ ಪಾತ್ರವೇ ಇರುವುದಿಲ್ಲ. ಫಲಾನುಭವಿ ಆಯ್ಕೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನಡೆಯುತ್ತದೆ. ಶಾಸಕರ ಪತ್ರದ ಆಧಾರದಲ್ಲೇ ಮನೆ ಹಂಚಿಕೆ ಮಾಡಲಾಗುವುದು. ಆಳಂದ ಕ್ಷೇತ್ರಕ್ಕೂ ಬಿ. ಆರ್. ಪಾಟೀಲ್ ಅವರ ಪತ್ರದ ಆಧಾರದಲ್ಲೇ ನೀಡಲಾಗಿದೆ. 950 ಮನೆ ಹಂಚಿಕೆ ಮಾಡಲಾಗಿದೆ ಎಂದು ಜಮೀರ್ ಅಹಮದ್ ಅವರು ಹೇಳಿದರು.












Click it and Unblock the Notifications