ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮಹಿಳೆಯರಿಗೆ ಹೆಚ್ಚಿನ ಟಿಕೆಟ್!
ಬೆಂಗಳೂರು, ಸೆ. 29: ಮುಂದಿನ ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಎಲ್ಲರಿಗಿಂತ ಮೊದಲೇ ತಯಾರಿಯನ್ನು ಜೆಡಿಎಸ್ ಆರಂಭಿಸಿದೆ. ಬಿಡದಿ ಬಳಿ ತೋಟದ ಮನೆಯಲ್ಲಿ ಜನತಾ ಪರ್ವ ಕಾರ್ಯಾಗಾರವನ್ನು ನಾಯಕರು ಹಾಗೂ ಕಾರ್ಯಕರ್ತರಿಗಾಗಿ ಮಾಜಿ ಸಿಎಂ ಕುಮಾರಸ್ವಾಮಿ ಆಯೋಜಿಸಿದ್ದಾರೆ. ನಾಳೆ (ಸೆ. 30) ದಿನಗಳ ಕಾರ್ಯಾಗಾರ ಮುಕ್ತಾಯವಾಗಲಿದೆ.
ಅದಕ್ಕೂ ಮೊದಲು ಮೂರನೇ ದಿನ ಕಾರ್ಯಾಗಾರ ಆರಂಭವಾಗುವ ಮೊದಲು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮಹತ್ವದ ಘೋಷಣೆ ಮಾಡಿದ್ದಾರೆ.
2023ರ ವಿಧಾನಸಭಾ ಚುನಾವಣೆಯಲ್ಲಿ 30 ರಿಂದ 35 ವಿಧಾನಸಭೆ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಜೆಡಿಎಸ್ ಟಿಕೆಟ್ ಮೀಸಲು ಇಡುತ್ತೇವೆ ಎಂದು ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಘೋಷಣೆ ಮಾಡಿದ್ದಾರೆ. ಅದಕ್ಕೆ ಕಾರಣವನ್ನೂ ವಿವರಿಸಿದ್ದಾರೆ.

ಮಹಿಳೆಯರಿಗೆ ಮೊದಲ ಆದ್ಯತೆ: ಎಚ್‌ಡಿಕೆ!
"ಮುಂದಿನ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳನ್ನು ಗುರುತಿಸುವ ಕೆಲಸ ಆರಂಭವಾಗಿದೆ. ಈಗಾಗಲೇ ಮೊದಲ ಹಂತದಲ್ಲಿ 7-8 ಜನ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದೇವೆ. ಮಹಿಳೆಯರಿಗೂ ಹೆಚ್ಚಿನ ಶಕ್ತಿ ತುಂಬಲು ಈ ಬಾರಿ 30-35 ಸೀಟುಗಳನ್ನು ಮಹಿಳೆಯರಿಗೆ ಕೊಡಲಾಗುವುದು" ಎಂದು ಕಾರ್ಯಾಗಾರದ ಆರಂಭಕ್ಕೂ ಮೊದಲು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.
ಬಿಜೆಪಿ, ಕಾಂಗ್ರೆಸ್ ಪಕ್ಷಗಳಿಗೆ ಹೋಲಿಕೆ ಮಾಡಿದರೆ ನಮ್ಮ ಮಹಿಳಾ ಘಟಕ ಸ್ವಲ್ಪ ಹಿಂದೆ ಉಳಿದಿದೆ. ಇದನ್ನು ಸರಿ ಮಾಡುವ ಕೆಲಸ ಮಾಡಲಾಗುವುದು ಎಂದ ಅವರು, ಮಹಿಳಾ ಘಟಕಕ್ಕೆ ಹೆಚ್ಚಿನ ಶಕ್ತಿ ತುಂಬುವ ಕೆಲಸ ಈ ಕಾರ್ಯಾಗಾರದಿಂದ ಪ್ರಾರಂಭ ಮಾಡುತ್ತೇವೆ ಎಂದು ವಿವರಿಸಿದ್ದಾರೆ.

ನಾಯಕಿಯರಿಗೆ ಸೂಕ್ತ ತರಬೇತಿ
ಬೂತ್ ಮಟ್ಟದಿಂದ ಮಹಿಳಾ ಘಟಕಕ್ಕೆ ಶಕ್ತಿ ತುಂಬುವ ಕೆಲಸ ಕೊಡಲಾಗುವುದು. 3ನೇ ದಿನದ ಇಂದಿನ ಕಾರ್ಯಾಗಾರದಲ್ಲಿ ಮಹಿಳಾ ಘಟಕದ ಸದಸ್ಯರಿಗೆ ಪಕ್ಷ ಹಾಗೂ ಚುನಾವಣೆಗಾಗಿ ಒಂದು ದಿಕ್ಸೂಚಿ ನಿಗದಿ ಮಾಡಲಾಗುವುದು. 30 ಜಿಲ್ಲೆಗಳಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ಗೆದ್ದಿರುವ ಮಹಿಳಾ ಸದಸ್ಯರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದಾರೆ ಎಂದು ಕುಮಾರಸ್ವಾಮಿ ತಿಳಿಸಿದರು.
ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆ ಬಗ್ಗೆ ಇಂದು ಚರ್ಚೆ ಮಾಡುವುದರ ಜತೆಗೆ, ಎಲ್ಲ ಮಹಿಳಾ ನಾಯಕಿಯರಿಗೆ ಸೂಕ್ತ ತರಬೇತಿ ಕೊಡಲಾಗುವುದು. ಪ್ರತಿ ಕ್ಷೇತ್ರದಲ್ಲಿ 100 ಕುಟುಂಬಗಳ ಸಮಸ್ಯೆಗೆ ಪರಿಹಾರ ನೀಡುವ ಜವಾಬ್ದಾರಿಯನ್ನ ಪ್ರತಿ ಮಹಿಳಾ ನಾಯಕಿಯರಿಗೆ ನೀಡಲಾಗುತ್ತದೆ ಎಂದರು.

ಮಹಿಳಾ ಮೀಸಲಾತಿ ಮಂಡನೆ ಮಾಡುತ್ತೇವೆ!
ಮಾಜಿ ಪ್ರಧಾನಮಂತ್ರಿಗಳಾದ ದೇವೇಗೌಡರು ಮಹಿಳೆಯರಿಗೆ ಚುನಾವಣೆಯಲ್ಲಿ ಶೇಕಡಾ 33ರಷ್ಟು ಮೀಸಲಾತಿ ಕೊಡಬೇಕು ಎಂದು ಧ್ವನಿ ಎತ್ತಿದ್ದರು. ಆದರೆ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್-ಬಿಜೆಪಿ ಸರ್ಕಾರಗಳು ಮೀಸಲಾತಿ ಜಾರಿ ಮಾಡಲಿಲ್ಲ. ಕರ್ನಾಟಕದಿಂದಲೇ ಮಹಿಳಾ ಮೀಸಲಾತಿಗೆ ಧ್ವನಿ ಎತ್ತುವ ಕೆಲಸವನ್ನು ನಾವು ಆರಂಭಿಸುತ್ತೇವೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಮಹಿಳೆಯರಿಗೆ ಶೇಕಡಾ 33ರಷ್ಟು ಮೀಸಲಾತಿ ವಿಧೇಯಕಕ್ಕೆ ಜೀವ ತುಂಬುತ್ತೇವೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅವರು ಹೇಳಿದರು.

ದೇವದುರ್ಗದ ಮುಂದಿನ ಅಭ್ಯರ್ಥಿ ಕರಿಯಮ್ಮ
ಶಾಸಕಿ ಅನಿತಾ ಕುಮಾರಸ್ವಾಮಿ ಹಾಗೂ ರಾಜ್ಯ ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಲೀಲಾದೇವಿ ಆರ್. ಪ್ರಸಾದ್ ಅವರು ಸಸಿಗೆ ನೀರು ಎರೆಯುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ದೇವದುರ್ಗ ವಿಧಾನಸಭಾ ಕ್ಷೇತ್ರದ ಮುಂದಿನ ವಿಧಾನಸಭೆ ಚುನಾವಣಾ ಅಭ್ಯರ್ಥಿ ಕರಿಯಮ್ಮ, ಜೆಡಿಎಸ್ ಬೆಂಗಳೂರು ಘಟಕದ ಅಧ್ಯಕ್ಷೆ ರುತ್ ಮನೋರಮಾ ಭಾಗಿಯಾಗಿದ್ದರು. ಸಂಜೆಯವರೆಗೆ ಮಹಿಳಾ ಕಾರ್ಯಾಗಾರದಲ್ಲಿ ಜೆಡಿಎಸ್ ಮಹಿಳಾ ಘಟಕಕ್ಕೆ ಶಕ್ತಿ ತುಂಬುವ ಬಗ್ಗೆ ಚರ್ಚೆ ನಡೆಯಲಿದ್ದು, ಪ್ರತಿ ವಿಧಾನಸಭೆ ಕ್ಷೇತ್ರದಿಂದ ತಲಾ ಇಬ್ಬರಂತೆ ಮಹಿಳಾ ಪ್ರತಿನಿಧಿಗಳು ಕಾರ್ಯಗಾರದಲ್ಲಿ ಭಾಗಿಯಾಗಿದ್ದಾರೆ.












Click it and Unblock the Notifications