IAS: ಐಎಎಸ್ ಅಧಿಕಾರಿಗಳ ವರ್ಗಾವಣೆ, ಕೆಎಸ್ಆರ್‌ಟಿಸಿಗೆ ಹೊಸ ಎಂಡಿ
ಬೆಂಗಳೂರು, ಜನವರಿ 04: ಕರ್ನಾಟಕ ಸರ್ಕಾರ ಹೊಸ ವರ್ಷ ಆಡಳಿತ ಯಂತ್ರದಲ್ಲಿ ಹಲವು ಬದಲಾವಣೆ ಮಾಡಿದೆ. ಐಎಎಸ್, ಐಪಿಎಸ್ ಮತ್ತು ಐಎಫ್‌ಎಸ್ ಅಧಿಕಾರಿಗಳಿಗೆ ಬಡ್ತಿ ನೀಡಿದೆ, ವರ್ಗಾವಣೆಯನ್ನು ಮಾಡಿದೆ. ಕೆಲವು ಐಎಎಸ್ ಅಧಿಕಾರಿಗಳ ವರ್ಗಾವಣೆ ಮಾಡಲಾಗಿದ್ದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್‌ಟಿಸಿ)ಕ್ಕೆ ಹೊಸ ವ್ಯವಸ್ಥಾಪಕ ನಿರ್ದೇಶಕರನ್ನು ನೇಮಕ ಮಾಡಲಾಗಿದೆ.
ಈ ಕುರಿತು ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಟಿ. ಮಹಾಂತೇಶ್ ಸರ್ಕಾರದ ಅಧೀನ ಕಾರ್ಯದರ್ಶಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಸೇವೆಗಳು-1) ಆದೇಶವನ್ನು ಹೊರಡಿಸಿದ್ದಾರೆ.

ವರ್ಗಾವಣೆಗೊಂಡ ಅಧಿಕಾರಿಗಳ ಪಟ್ಟಿ
* ಡಾ. ರವಿಶಂಕರ್ ಜೆ. (ಕೆಎನ್: 2001) ಅಬಕಾರಿ ಇಲಾಖೆಯ ಆಯುಕ್ತರು, ಬೆಂಗಳೂರು. ತತ್‌ಕ್ಷಣದಿಂದ ಮತ್ತು ಮುಂದಿನ ಆದೇಶದ ತನಕ ಸರ್ಕಾರದ ಕಾರ್ಯದರ್ಶಿ, ಕೃಷಿ ಇಲಾಖೆ ಬೆಂಗಳೂರು ಹುದ್ದೆಗೆ ವರ್ಗಾವಣೆ. ಈ ಹುದ್ದೆಯಲ್ಲಿದ್ದ ವಿ. ಅನ್ಬುಕುಮಾರ್ ವರ್ಗಾವಣೆ.
* ವಿ. ಅನ್ಬುಕುಮಾರ್ (ಕೆಎನ್: 2004) ಸರ್ಕಾರದ ಕಾರ್ಯದರ್ಶಿ, ಕೃಷಿ ಇಲಾಖೆ ಬೆಂಗಳೂರು. ತತ್‌ಕ್ಷಣದಿಂದ ಮತ್ತು ಮುಂದಿನ ಆದೇಶದ ತನಕ ವ್ಯವಸ್ಥಾಪಕ ನಿರ್ದೇಶಕರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್‌ಟಿಸಿ) ಹುದ್ದೆಗೆ ನೇಮಕ.
* ವೆಂಕಟೇಶ್ ಕುಮಾರ್ ಆರ್. (ಕೆಎನ್: 2010) ಹೆಚ್ಚುವರಿ ಮುಖ್ಯ ಚುನಾವಣಾ ಅಧಿಕಾರಿ (ವೆಚ್ಚ) ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಚುನಾವಣೆಗಳು) ಬೆಂಗಳೂರು ವರ್ಗಾವಣೆ. ತತ್‌ಕ್ಷಣದಿಂದ ಮತ್ತು ಮುಂದಿನ ಆದೇಶದ ತನಕ ಆಯುಕ್ತರು ಅಬಕಾರಿ ಇಲಾಖೆ ಹುದ್ದೆಗೆ ನೇಮಕ.
* ಅಕ್ರಂ ಪಾಷಾ (ಕೆಎನ್: 2012) ಆಯುಕ್ತರು ಕರ್ನಾಟಕ ಹೌಸಿಂಗ್ ಬೋರ್ಡ್ ತತ್‌ಕ್ಷಣದಿಂದ ಮತ್ತು ಮುಂದಿನ ಆದೇಶದ ತನಕ ವರ್ಗಾವಣೆ. ಆಯುಕ್ತರು ಹಿಂದುಳಿದ ವರ್ಗಗಳ ಇಲಾಖೆ ಹುದ್ದೆಗೆ ನೇಮಕ. ಈ ಹುದ್ದೆಯಲ್ಲಿದ್ದ ಕೆ. ಶ್ರೀನಿವಾಸ ಐಎಎಸ್ ಬಿಡುಗಡೆ.
ಡಿಸೆಂಬರ್ 26ರಂದು ಕರ್ನಾಟಕ ಸರ್ಕಾರ ಕೆಲವು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿತ್ತು.
ಕೋಲಾರ ಜಿಲ್ಲಾಧಿಕಾರಿಯಾಗಿದ್ದ ಅಕ್ರಂ ಪಾಷ ಅವರನ್ನು ವರ್ಗಾವಣೆ ಮಾಡಿ, ಕರ್ನಾಟಕ ಗೃಹ ಮಂಡಳಿ (ಕೆಹೆಚ್‌ಬಿ) ಆಯುಕ್ತರಾಗಿ ನೇಮಕ ಮಾಡಿ ಆದೇಶವನ್ನು ಹೊರಡಿಸಿತ್ತು.
ಅಲ್ಲದೇ ಕೋಲಾರ ಜಿಲ್ಲಾಧಿಕಾರಿಯಾಗಿ ಡಾ. ರವಿ ಎಂ. ಆರ್. (ಕೆಎನ್: 2012) ಅವರನ್ನು ನೇಮಕ ಮಾಡಿತ್ತು. ಅವರು ಮಕ್ಕಳ ರಕ್ಷಣಾ ನಿರ್ದೇಶನಾಲಯದ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದರು.
ಡಿಸೆಂಬರ್ 31ರಂದು ಕರ್ನಾಟಕ ಸರ್ಕಾರ 67 ಐಎಎಸ್, 65 ಐಪಿಎಸ್ ಮತ್ತು 21 ಐಎಫ್‌ಎಸ್ ಅಧಿಕಾರಿಗಳಿಗೆ ಬಡ್ತಿ ನೀಡಿತ್ತು. ಕೆಲವು ಅಧಿಕಾರಿಗಳನ್ನು ಬಡ್ತಿ ನೀಡಿ ವರ್ಗಾವಣೆಗೊಳಿಸಲಾಗಿತ್ತು. ಇನ್ನೂ ಹಲವು ಅಧಿಕಾರಿಗಳಿಗೆ ಬಡ್ತಿ ನೀಡಿ ಅದೇ ಹುದ್ದೆಯಲ್ಲಿ ಮುಂದುವರೆಸಿ ಆದೇಶಿಸಿತ್ತು.
ಜನವರಿ 1ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಹಿರಿಯ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳಿಗೆ ಹೊಸವರ್ಷದ ಶುಭ ಕೋರಿ ಸಭೆಯಲ್ಲಿ ಮಾತನಾಡಿದ್ದರು. "ರಾಜ್ಯದ ಜನರ ಆರ್ಥಿಕ ಶಕ್ತಿ ಹೆಚ್ಚಿಸಲು ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಿ, ಪ್ರಾದೇಶಿಕ ಅಸಮತೋಲನ, ಅಸಮಾನತೆ ತೊಡೆಯಲು ಅಧಿಕಾರಿಗಳ ಸಹಕಾರ ಹೆಚ್ಚು ಬೇಕು" ಎಂದು ಹೇಳಿದ್ದರು.
"ಬದುಕಿನಲ್ಲಿ ಏಳು ಬೀಳು ಸಹಜ ಮತ್ತು ನಿರಂತರ. ಪರಿಸ್ಥಿತಿಗಳು ಸದಾ ನಮ್ಮ ಪರವಾಗಿ ಇರುವುದಿಲ್ಲ. ಆದರೆ ಆತ್ಮವಿಶ್ವಾಸ ಕಳೆದುಕೊಳ್ಳದೆ ಧೈರ್ಯದಿಂದ ಸಮಸ್ಯೆಗಳನ್ನು, ಸಂದರ್ಭಗಳನ್ನು ನಿರ್ವಹಿಸಿ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ" ಎಂದು ತಿಳಿಸಿದ್ದರು.
"ಆಡಳಿತಾಂಗದಲ್ಲಿ ಐಎಎಸ್, ಐಪಿಎಸ್, ಐಆರ್‌ಎಸ್ ಹಾಗೂ ಐಎಫ್‌ಎಸ್ ಅಧಿಕಾರಿಗಳ ಜವಾಬ್ದಾರಿ ಹೆಚ್ಚು. ನಾವು ಕಾನೂನುಗಳನ್ನು ರಚಿಸಿ, ಜಾರಿ ಆಗುವ ದಿಕ್ಕಿನಲ್ಲಿ ನಿರಂತರ ನಿಗಾ ವಹಿಸುತ್ತೇವೆ. ಅಧಿಕಾರಿ ವರ್ಗ ಸಮಾಜಕ್ಕೆ ಪೂರಕವಾಗಿ ಕ್ರಿಯಾಶೀಲತೆಯಿಂದ ಕರ್ತವ್ಯ ನಿರ್ವಹಿಸಬೇಕು" ಎಂದು ಕರೆ ನೀಡಿದ್ದರು.












Click it and Unblock the Notifications