BJP V/S BJP: ಹೈಕಮಾಂಡ್ ಹೇಳಿದರು ನಾನು ಯತ್ನಾಳ್ ಪರ ಪ್ರಚಾರ ಮಾಡಲ್ಲ; ಅಸಮಾಧಾನ ಹೊರಹಾಕಿದ ಮಾಜಿ ಸಚಿವ ಪಟ್ಟಣಶೆಟ್ಟಿ
ವಿಜಯಪುರ,ಏಪ್ರಿಲ್22: ರಾಜ್ಯ ವಿಧಾನಸಭಾ ಚುನಾವಣೆಗೆ ಭರ್ಜರಿ ತಯಾರಿ ನಡೆಸಿರುವ ರಾಜ್ಯ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲು ಪಣತೊಟ್ಟಿದೆ. ಟಿಕೆಟ್ ಹಂಚಿಕೆಯಿಂದಾಗಿ ರಾಜ್ಯ ಬಿಜೆಪಿಯಲ್ಲಿ ಬಂಡಾಯ ಭುಗಿಲೆದಿದ್ದು, ವಿಜಯಪುರ ನಗರದಲ್ಲೂ ಯತ್ನಾಳ್ ಹಾಗೂ ಮಾಜಿ ಸಚಿವ ಪಟ್ಟಣಶೆಟ್ಟಿ ನಡುವೆ ಫೈಪೋಟಿ ಏರ್ಪಟ್ಟಿತ್ತು.
ಈಗಾಗಲೇ ವಿಜಯಪುರ ನಗರ ಕ್ಷೇತ್ರಕ್ಕೆ ಬಿಜೆಪಿ ಹೈಕಮಾಂಡ್ ಬಸವನಗೌಡ ಪಾಟೀಲ್ ಯತ್ನಾಳ್ ಗೆ ಟಿಕೆಟ್ ನೀಡಿದ್ದು, ಈ ಬಾರಿಯೂ ಟಿಕೆಟ್ ನಿರೀಕ್ಷೆಯಲ್ಲಿದ್ದ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಎರಡು ದಿನಗಳಲ್ಲಿ ನನ್ನ ನಿರ್ಧಾರವನ್ನ ತಿಳಿಸುತ್ತೇನೆ ಎಂದು ಹೇಳಿದ್ದು, ಇದೀಗ ತಮ್ಮ ನಿರ್ಧಾರವನ್ನ ಸ್ಪಷ್ಟಪಡಿಸಿದ್ದಾರೆ.

ಈಗಾಗಲೇ ಟಿಕೆಟ್ ಸಿಗದಿದ್ದರೆ ಪಕ್ಷ ಬಿಟ್ಟು ಹೋಗುತ್ತೀರಾ? ಬೇರೆ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಎಲ್ಲರೂ ಕೇಳುತ್ತಿದ್ದರು. ಆಗ ನಾನು ಬೆಂಬಲಿಗರು ಮತ್ತು ಹಿತೈಷಿಗಳೊಂದಿಗೆ ಮಾತನಾಡಿ ತಿಳಿಸುವುದಾಗಿ ಹೇಳಿದ್ದೆ. ಈಗ ಕಳೆದ ಎರಡು ದಿನಗಳಿಂದ ಪಕ್ಷದ ಚಟುವಟಿಕೆಯಲ್ಲಿ ಭಾಗವಹಿಸಿದ್ದೇನೆ. ನಾನು ಪಕ್ಷವನ್ನ ಬಿಡಲ್ಲ, ಪಕ್ಷದಲ್ಲೇ ಉಳಿದುಕೊಂಡು ಕೆಲಸ ಮಾಡಲು ನಿರ್ಧರಿಸಿದ್ದೇನೆ ಎಂದು ಸ್ಪಷ್ಟ ಪಡಿಸಿದ್ದಾರೆ.
ಇನ್ನೂ ವಿಜಯಪುರ ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯತ್ನಾಳ್ ವಿರುದ್ದ ಅಸಮಾಧಾನ ಹೊರ ಹಾಕಿದ್ದು, ವಿಜಯಪುರ ನಗರ ಮತಕ್ಷೇತ್ರದಲ್ಲಿ ಮಾತ್ರ ಯಾರು ಹೇಳಿದರೂ ಪ್ರಚಾರ ಮಾಡುವುದಿಲ್ಲ. ಬಿಜೆಪಿ ಅಭ್ಯರ್ಥಿ ಯತ್ನಾಳ ಅವರು ನನ್ನನ್ನು ಪ್ರಚಾರಕ್ಕೆ ಕರೆದಿಲ್ಲ. ಅವರು ಕರೆದರೂ ನಾನು ಹೋಗುವುದಿಲ್ಲ. ವಿಜಯಪುರ ನಗರ ಬಿಟ್ಟು ಉಳಿದ ಎಲ್ಲ ಕ್ಷೇತ್ರಗಳಲ್ಲಿ ಪ್ರಚಾರ ಮಾಡುತ್ತೇನೆ. ಹೈಕಮಾಂಡ್ ಯತ್ನಾಳ ಜೊತೆ ಪ್ರಚಾರಕ್ಕೆ ಹೋಗು ಎಂದು ಹೇಳಿದರೂ ನಾನು ಪ್ರಚಾರಕ್ಕೆ ಹೋಗುವುದಿಲ್ಲ ಎಂದು ಅಪ್ಪು ಪಟ್ಟಣಶೆಟ್ಟಿ ಹೇಳಿದರು.

ವಿಜಯಪುರ ನಗರ ಕ್ಷೇತ್ರವನ್ನ ಬಿಟ್ಟು ಬೇರೆ ಬೇರೆ ಮತಕ್ಷೇತ್ರಗಳ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಸೇರಿದಂತೆ ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದೇನೆ. ಬೇರಾವ ಪಕ್ಷವನ್ನೂ ಸೇರುವುದಿಲ್ಲ ಎಂದು ಬಿಜೆಪಿ ಟಿಕೆಟ್ ವಂಚಿತರಾದ ಮಾಜಿ ಸಚಿವ ಪಟ್ಟಣಶೆಟ್ಟಿ ಸ್ಪಷ್ಟಪಡಿಸಿದ್ದಾರೆ.
ಕಳೆದ ಬಾರಿ ಟಿಕೆಟ್ ನೀಡದಿದ್ದಾಗ ಮಾನಸಿಕವಾಗಿ ಸಾಕಷ್ಟು ತೊಂದರೆಯಾಗಿದೆ. ಈ ಬಾರಿಯೂ ಅವಕಾಶ ಸಿಗಬಹುದು ಎಂಬ ನಿರೀಕ್ಷೆಯಿತ್ತು. ಆದರೆ ಸಿಗಲಿಲ್ಲ, ಕಾರ್ಯಕರ್ತರ ನಿರೀಕ್ಷೆಯೂ ಹುಸಿಯಾಗಿದೆ. ಆದರೂ ನಾನು ಎಲ್ಲವನ್ನೂ ಸಹನೆಯಿಂದ ನಡೆದುಕೊಂಡಿದ್ದೇನೆ ಎಂದು ತಿಳಿಸಿದರು.
ಟಿಕೆಟ್ ಕೈ ತಪ್ಪಿದ ಹಿನ್ನಲೆ ಬಹಳಷ್ಟು ಜನ ಬಿಜೆಪಿಯಲ್ಲಿ ಇರುವುದು ಸಾಕು ಎಂದು ಹೇಳಿದ್ದರೂ, ಇನ್ನೂ ಕೆಲವರು ಇಲ್ಲಿಯೇ ಇರಬೇಕು ಎಂದು ಸಲಹೆ ನೀಡಿದರೆ ಮತ್ತೆ ಹಲವರು ಪಕ್ಷೇತರರಾಗಿ ಸ್ಪರ್ಧಿಸಿ ಎಂದು ಸಲಹೆ ಕೊಟ್ಟಿದ್ದರು. ಆದರೆ ಈ ಸಲ ಅವಕಾಶ ಸಿಗುವ ನಿರೀಕ್ಷೆಯಿತ್ತು. ಆದರೆ ಈ ಆಸೆ ನೆರವೇರಿಲ್ಲ. ಈ ಬಾರಿಯೂ ಸ್ಪರ್ಧೆ ಮಾಡಲು ಅವಕಾಶ ಸಿಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ವಿಜಯಪುರ ನಗರ ಮತಕ್ಷೇತ್ರದ ಬದಲು ಬೇರೆ ಕ್ಷೇತ್ರದಿಂದ ಸ್ಪರ್ಧಿಸುವಂತೆ ನನಗೆ ಹೈಕಮಾಂಡ್ ಕೇಳಿತ್ತು. ಆದರೆ, ನಾನು ತಯಾರಿ ಮಾಡಿಕೊಂಡಿರಲಿಲ್ಲ. ನನಗೆ ಹೈಕಮಾಂಡ್ ಈ ಕುರಿತು ಕೇಳಿದಾಗ ನನ್ನ ಬಳಿ ಉತ್ತರ ಇರಲಿಲ್ಲ. ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಕಷ್ಟು ಜನ ಆಕಾಂಕ್ಷಿಗಳಿರುವ ಹಿನ್ನೆಲೆಯಲ್ಲಿ ಮತ್ತು ಅವರ ನಡುವೆ ಹೋಗುವುದು ಸರಿ ಎನಿಸಲಿಲ್ಲ. ನಮ್ಮದೇ ಕಾರ್ಯಕರ್ತರು ಅಲ್ಲಿರುವುದರಿಂದ ನಾನು ಆ ಪ್ರಯತ್ನ ಮಾಡಲಿಲ್ಲ ಎಂದರು.
ಯಾವುದೋ ಒಬ್ಬ ವ್ಯಕ್ತಿಯಿಂದ ತೊಂದರೆಯಾದಾಗ ಪಕ್ಷ ಬಿಡುವುದು ಸರಿಯಲ್ಲ. ಈ ಹಿನ್ನೆಲೆಯಲ್ಲಿ ಈ ಬಾರಿಯೂ ಪಕ್ಷದಲ್ಲಿಯೇ ಮುಂದುವರೆಯಲು ನಿರ್ಧರಿಸಿದ್ದೇನೆ. 30 ವರ್ಷ ಇದೇ ಪಕ್ಷದಿಂದ ರಾಜಕೀಯ ಆರಂಭಿಸಿದ್ದೇನೆ. ಕಳೆದ ಬಾರಿ ಟಿಕೆಟ್ ತಪ್ಪಿದರೂ ನಾನು ಯಾವುದೇ ನಿರ್ಣಯ ಕೈಗೊಳ್ಳಲಿಲ್ಲ. ಈ ಬಾರಿ ಬಹಳ ಜನರ ನಿರೀಕ್ಷೆ ಹುಸಿಯಾಗಿದೆ ಎಂದರು.












Click it and Unblock the Notifications