Siddaramaiah: ಬರೀ ಈ 5 ವರ್ಷ ಅಲ್ಲ, ಮುಂದೈದು ವರ್ಷವೂ ನಾನೇ ಸಿಎಂ: ವಿಧಾನಸಭೆಯಲ್ಲಿ ಗುಡುಗಿದ ಸಿದ್ದರಾಮಯ್ಯ
ಬೆಂಗಳೂರು, ಮಾರ್ಚ್ 12: ರಾಜ್ಯ ಕಾಂಗ್ರೆಸ್‌ನಲ್ಲಿ ಅಧಿಕಾರ ಹಂಚಿಕೆ ಕುರಿತು ಭಾರೀ ಚರ್ಚೆ ನಡೆಯುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗದ್ದುಗೆ ವಿಚಾರವಾಗಿ ಎರಡು ಬಣಗಳ ನಡುವೆ ಸದ್ಯ ಚರ್ಚೆ ನಡೆಯುತ್ತಿದೆ. ಮುಖ್ಯಮಂತ್ರಿ ಸ್ಥಾನದ ಮೇಲೆ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಕಣ್ಣೀಟ್ಟಿದ್ದು, ಡಿ ಕೆ ಶಿವಕುಮಾರ್ ಸಿಎಂ ಆಗ್ಬೇಕು ಎಂದು ಡಿಕೆಶಿ ಬಣ ಬಹಿರಂಗವಾಗಿ ಹೇಳಿಕೆ ನೀಡುತ್ತಿದ್ದು, ಇದೀಗ ಸದನದಲ್ಲಿ ಸಿಎಂ ಸ್ಥಾನದ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುಡುಗಿದ್ದಾರೆ.
ವಿಧಾನಸಭೆಯಲ್ಲಿ ಇಂದು(ಬುಧವಾರ) ಐದು ವರ್ಷಗಳ ಕಾಲ ನಾನೇ ಮುಖ್ಯಮಂತ್ರಿ ಆಗಿರುತ್ತೇನೆ ಎಂದು ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ನಾವು ಮತ್ತೆ ಗೆದ್ದು ಬರುತ್ತೇವೆ. ಐದು ವರ್ಷ ಪೂರ್ಣಗೊಳಿಸುತ್ತೇವೆ ಎಂದು ತಿಳಿಸಿದ್ದಾರೆ. ವಿಧಾನಸಭೆಯಲ್ಲಿ ಸಿಎಂ ಆಗಿ ನೀವೇ ಇರುತ್ತೀರಾ ಎಂದು ಬಿಜೆಪಿ ಪ್ರಶ್ನೆ ಮಾಡಿದಾಗ ಹೌದು ಸಿಎಂ ಆಗಿ ನಾನೇ ಇರುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟ ಪಡಿಸಿದ್ದಾರೆ. ಮತ್ತೆ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.

ವಿಪಕ್ಷ ನಾಯಕ ಆರ್ ಅಶೋಕ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 5 ವರ್ಷ ಸಿಎಂ ಇರಲಿ ಎಂದು ನಾವು ಬಯಸುತ್ತೇವೆ. ಆದರೆ ಇದೀಗ ರಾಜ್ಯದಲ್ಲಿ ಪವರ್ ಶೇರಿಂಗ್ ವಿಚಾರವಾಗಿ ಅನೇಕ ಕಾಂಗ್ರೆಸ್ ನಾಯಕರೇ ಅಧಿಕಾರ ಬದಲಾವಣೆ ಕುರಿತು ಹೇಳಿಕೆ ನೀಡುತ್ತಿದ್ದಾರೆ ಎಂದು ಆರ್ ಅಶೋಕ್ ಹೇಳಿಕೆ ನೀಡಿದಾಗ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಕ್ರಿಯೆ ನೀಡಿ ಹೌದಪ್ಪ ನಾನೇ ಮುಂದಿನ ಐದು ವರ್ಷ ಸಿಎಂ ಆಗಿರುತ್ತೇನೆ ಎಂದು ಹೇಳಿಕೆ ನೀಡಿದರು.
ಗ್ಯಾರಂಟಿ ಸಮಿತಿಗಳಿಂದ ಶಾಸಕರ ಘನತೆಗೆ ಕುಂದಿಲ್ಲ
ಗ್ಯಾರಂಟಿ ಸಮಿತಿಗಳಿಂದ ಶಾಸಕರ ಘನತೆಗೆ ಕುಂದಿಲ್ಲ. ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ವಿಧಾನಸಭೆಯಲ್ಲಿ ಪ್ರತಿಪಕ್ಷದ ನಾಯಕರ ಆರೋಪಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. ಅಧಿವೇಶನ ಮುಗಿಯುತ್ತಿದ್ದಂತೆ ಈ ಬಗ್ಗೆ ಸಭೆ ಕರೆದು ತಕರಾರುಗಳನ್ನು ಪರಿಹರಿಸಲಾಗುವುದು ಎಂದರು.
ಅಧಿಕಾರಕ್ಕೆ ಬಂದಾಗ ಪಕ್ಷದ ಕಾರ್ಯಕರ್ತರಿಗೆ ಅಧಿಕಾರದಲ್ಲಿ ಅವಕಾಶ ನೀಡುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಮಹಾರಾಷ್ಟ್ರದಲ್ಲಿ ಎಲ್ಲಾ ಶಾಸಕರ ಕಚೇರಿಗೂ RSS ಕಾರ್ಯಕರ್ತರನ್ನು ನೇಮಿಸಿಕೊಳ್ಳುತ್ತಿರುವದನ್ನು ಉಲ್ಲೇಖಿಸಿದರು. ತಾಲ್ಲೂಕುಗಳಲ್ಲಿ ಶಾಸಕರ ಘನತೆಗೆ, ಅಧಿಕಾರಕ್ಕೆ ಯಾವುದೇ ಚ್ಯುತಿ ಬರುವುದಿಲ್ಲ. ಈ ಬಗ್ಗೆ ಎಲ್ಲಾ ಜಿಲ್ಲಾಡಳಿತಕ್ಕೂ ಸೂಚನೆ ನೀಡಲಾಗಿದೆ ಎಂದರು. ರಾಜ್ಯ ಮತ್ತು ಜಿಲ್ಲಾ, ತಾಲ್ಲೂಕು ಗ್ಯಾರಂಟಿ ಜಾರಿ ಸಮಿತಿಗಳಲ್ಲಿ ಬದಲಾವಣೆ ಇಲ್ಲ ಎಂದು ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಷ್ಟಪಡಿಸಿದರು.












Click it and Unblock the Notifications