ಯಾವುದೇ ಒಂದು ಕ್ಷೇತ್ರ ಲಕ್ಕಿ ಅಂತ ಇಲ್ಲ; ನನ್ನ ಕೊನೆ ಚುನಾವಣೆ ಹುಟ್ಟೂರುನಲ್ಲಿ ಆಗಬೇಕೆಂಬ ಆಸೆ: ಸಿದ್ದರಾಮಯ್ಯ
ಮೈಸೂರು, ಮಾರ್ಚ್28: ರಾಜ್ಯ ವಿಧಾನಸಭಾ ಚುನಾವಣಾ ಕಣ ರಂಗೇರಿದ್ದು, ಚುನಾವಣಾ ಪ್ರಚಾರ ಜೋರಾಗಿದೆ. ಇಷ್ಟು ದಿನಗಳ ಕಾಲ ಯಾವ ಕ್ಷೇತ್ರದಿಂದ ಸ್ಪರ್ಧೆ ನಡೆಸಬೇಕು ಎಂದು ಗೊಂದಲದಲ್ಲಿದ್ದ ಸಿದ್ದರಾಮಯ್ಯ ಅವರಿಗೆ ಹೈಕಮಾಂಡ್ ವರುಣಾ ಕ್ಷೇತ್ರದಿಂದ ಟಿಕೆಟ್ ನೀಡಿದ್ದು, ಕೋಲಾರ ಕ್ಷೇತ್ರಕ್ಕೂ ಟಿಕೆಟ್ ನೀಡುವಂತೆ ಸಿದ್ದರಾಮಯ್ಯ ಹೈಕಮಾಂಡ್ ನಾಯಕರನ್ನ ಕೇಳಿದ್ದಾರೆ.
ಈಗಾಗಲೇ ಕಾಂಗ್ರೆಸ್ ನ 124 ಅಭ್ಯರ್ಥಿಗಳ ಟಿಕೆಟ್ ಬಿಡುಗಡೆ ಮಾಡಿದ್ದು, ಏಪ್ರಿಲ್ ಮೊದಲ ವಾರದಂದು ಎರಡನೇ ಪಟ್ಟಿ ಬಿಡುಗಡೆಗೆ ಕಾಂಗ್ರೆಸ್ ತಯಾರಿ ನಡೆಸಿದೆ. ಇನ್ನೂ ಮಂಗಳವಾರ ಮೈಸೂರು ಜಿಲ್ಲೆಯ ಎಚ್ ಡಿ ಕೋಟೆಯಲ್ಲಿ ಚುನಾವಣಾ ಪ್ರಚಾರದ ವೇಳೆ ನನ್ನ ಕೊನೆ ಚುನಾವಣೆ ಹುಟ್ಟೂರುನಲ್ಲಿ ಆಗಬೇಕೆಂಬ ಆಸೆ ಎಂದು ಹೇಳಿದ್ದಾರೆ.

ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ನನ್ನ ಕೊನೆ ಚುನಾವಣೆ ಹುಟ್ಟೂರುನಲ್ಲಿ ಆಗಬೇಕೆಂಬ ಆಸೆ. ವರುಣಾ ಜೊತೆಗೆ ಕೋಲಾರ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ. ಕೋಲಾರ ಕ್ಷೇತ್ರದ ಜನರಿಂದ ಹೆಚ್ಚು ಒತ್ತಡ ಬರುತ್ತಿದೆ. ಈ ಬಾರಿ ಎರಡು ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವ ಬಗ್ಗೆ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಕಳೆದ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮ್ಯಾಚ್ ಫಿಕ್ಸ್ ಮಾಡಿಕೊಂಡಿತ್ತು. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ಮಾಡಿಕೊಂಡರೂ ಅಚ್ಚರಿ ಇಲ್ಲ. ವರುಣಾ ಕ್ಷೇತ್ರದಿಂದ ಗೆದ್ದಾಗಲೇ ನಾನು ಮುಖ್ಯಮಂತ್ರಿ ಆಗಿದ್ದು. ಯಾವುದೇ ಒಂದು ಕ್ಷೇತ್ರ ಲಕ್ಕಿ ಅಂತ ಇಲ್ಲ. ವರುಣಾ ನನ್ನ ಹುಟ್ಟೂರು. ವರುಣಾ ಹೋಬಳಿ ಕಾರಣಕ್ಕೆ ವರುಣಾ ಕ್ಷೇತ್ರ ಅಂಥಾ ಕರೆಯುತ್ತಿದ್ದಾರೆ ಎಂದರು.

ಕಾಂಗ್ರೆಸ್ ಹಾಗೂ ಬಿಜೆಪಿ ಹೈಕಮಾಂಡ್ ಗಳ ಜೊತೆ ಮಾತನಾಡಿದ್ದೇನೆ ಎಂಬ ಕುಮಾರಸ್ವಾಮಿ ಹೇಳಿಕೆ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ನಮ್ಮ ಹೈಕಮಾಂಡ್ ಜೊತೆಗೆ ಯಾರೂ ಮಾತನಾಡಿಲ್ಲ. ಈ ಬಾರಿ ನಾವು ಯಾರ ಜೊತೆಯೂ ಮಾತುಕತೆ ಮಾಡಲ್ಲ. ಕಾಂಗ್ರೆಸ್ ಏಕಾಂಗಿಯಾಗಿ ಅಧಿಕಾರಕ್ಕೆ ಬರುತ್ತೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಗೆ ತಿರುಗೇಟು ನೀಡಿದರು
ಯಡಿಯೂರಪ್ಪ ಮನೆ ಮೇಲೆ ಕಲ್ಲು ತೂರಾಟ ಮಾಡಿದಆರೋಪಿ ಜತೆಗಿನ ಫೋಟೋ ಕುರಿತು ಮಾತನಾಡಿ, ಯಾರೋ ಬರ್ತಾರೆ, ಫೋಟೋ ತೆಗೆದುಕೊಳ್ಳುತ್ತಾರೆ. ಅವರು ಒಳ್ಳೆಯವರ, ಕೆಟ್ಟವರ ಅಂತ ನನಗೆ ಏನು ಗೊತ್ತು ಎಂದು ಹೇಳಿದ ಅವರು, ಕಲ್ಲು ತೂರಾಟದ ಬಗ್ಗೆ ಯಡಿಯೂರಪ್ಪ ಏನು ಹೇಳಿದ್ದಾರೆ ? ಇದಕ್ಕೂ ಕಾಂಗ್ರೆಸ್‌ನವರಿಗೂ ಸಂಬಂಧ ಇಲ್ಲ ಅಂದಿದ್ದಾರೆ. ಅಂದ ಮೇಲೂ ರಾಜಕೀಯಕ್ಕಾಗಿ ಏನೇನೋ ಹೇಳುತ್ತಿದ್ದಾರೆ ಎಂದರು.
ಯಡಿಯೂರಪ್ಪ ಅವರ ಮನೆ ಮೇಲೆ ಕಲ್ಲು ತೂರಿರುವುದರ ಹಿಂದೆ ಬಿಜೆಪಿಯದೇ ಕೈವಾಡ ಇರಬಹುದು. ಈ ಬಗ್ಗೆ ಯಡಿಯೂರಪ್ಪ ಅವರು ಬಂಜಾರ ಸಮುದಾಯದ ಜನ ತಪ್ಪು ಗ್ರಹಿಕೆಯಿಂದ ಕಲ್ಲು ತೂರಾಟ ಮಾಡಿದ್ದಾರೆ ಎಂದಿದ್ದಾರೆ, ಆದರೆ ಒಳಮೀಸಲಾತಿಯನ್ನು ಬಂಜಾರ ಸಮುದಾಯ ಮೊದಲಿಂದಲೂ ವಿರೋಧ ಮಾಡಿಕೊಂಡು ಬಂದಿದೆ, ಈ ಉದ್ದೇಶಕ್ಕೆ ಈಗ ವಿರೋಧ ಮಾಡಿರಬಹುದು.
ಮಾಡಾಳ್ ವಿರೂಪಾಕ್ಷಪ್ಪ ಬಂಧನ ಕುರಿತು ಮಾತನಾಡಿ, ಮಾಡಾಳ್ ವಿರೂಪಾಕ್ಷಪ್ಪ ಬಂಧನ ಮೊದಲ ದಿನವೇ ಆಗಬೇಕಿತ್ತು, ತಡವಾಗಿ ಆಗಿದೆ. ಕಾನೂನು ರೀತಿಯ ನಿರ್ಣಯದಂತೆ ಆಗಿದೆ. ರೆಡ್ ಹ್ಯಾಂಡ್ ಆಗಿ ಅವರ ಮಗ ಸಿಕ್ಕಿಬಿದ್ದಿರುವುದರಿಂದ ಈ ಪ್ರಕರಣದಲ್ಲಿ ವಿರೂಪಾಕ್ಷಪ್ಪ ಬಂಧನ ಸರಿಯಾಗಿದೆ ಎಂದರು.












Click it and Unblock the Notifications