ಹಾವೇರಿ ಲೋಕಸಭಾ ಟಿಕೆಟ್ ಗಾಗಿ ಫೈಟ್; ನನ್ನ ಮಗ ಕೂಡ ಟಿಕೆಟ್ ಆಕಾಂಕ್ಷಿ: ಕೆ ಎಸ್ ಈಶ್ವರಪ್ಪ ಹೇಳಿದಿಷ್ಟು!
ಮೈಸೂರು, ಸೆಪ್ಟೆಂಬರ್ 04: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸೋತ ಬಿಜೆಪಿಯ ಮಾಜಿ ಸಚಿವ ಬಿ ಸಿ ಪಾಟೀಲ್ ಹಾವೇರಿ ಲೋಕಸಭಾ ಚುನಾವಣೆಗೆ ತಯಾರಿ ನಡೆಸುತ್ತಿದ್ದು, ಇತ್ತ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಅವರು ಪುತ್ರನ ರಾಜಕೀಯ ಭವಿಷ್ಯಕ್ಕಾಗಿ ಪಣ ತೊಟ್ಟಿದ್ದಾರೆ.
ಹೌದು, ಈ ಕುರಿತು ಸೋಮವಾರ ಮೈಸೂರಿನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಕೆ ಎಸ್ ಈಶ್ವರಪ್ಪ, ನನ್ನ ಮಗ ಕೂಡ ಎಂಪಿ ಟಿಕೆಟ್ ಆಕಾಂಕ್ಷಿ. ನನ್ನ ಮಗನಿಗೆ ಹಾವೇರಿಯಿಂದ ಟಿಕೆಟ್ ಕೇಳಿದ್ದೇನೆ. ಹೈ ಕಮಾಂಡ್ ಯಾವ ತೀರ್ಮಾನ ಮಾಡುತ್ತೋ ಕಾದು ನೋಡುತ್ತೇವೆ, ಟಿಕೆಟ್ ಕೊಟ್ಟರೆ ಸ್ಪರ್ದೆ ಮಾಡ್ತಾನೆ. ಇಲ್ಲದಿದ್ದರೆ ಟಿಕೆಟ್ ಕೊಟ್ಟವರಿಗೆ ಸಪೋರ್ಟ್ ಮಾಡುತ್ತೇವೆ ಎಂದು ಹೇಳಿದ್ದಾರೆ.

ಇನ್ನೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುರಿತು ತೀವ್ರ ವಾಗ್ದಾಳಿ ನಡೆಸಿದ ಅವರು, ಸಿದ್ದರಾಮಯ್ಯ ಲಾಟರಿ ಮುಖ್ಯಮಂತ್ರಿ. ಸಿದ್ದರಾಮಯ್ಯ ಯಾವಾಗಲೂ ತಮ್ಮ ಶಕ್ತಿ ಮೇಲೆ ಸಿಎಂ ಆಗಿಲ್ಲ. 2013ರಲ್ಲಿ ಕೆಜೆಪಿ- ಬಿಜೆಪಿ ಅಂತ ವಿಭಾಗ ಆಗಿತ್ತು. ಹೀಗಾಗಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದರು, ಈ ಬಾರಿ ಗ್ಯಾರಂಟಿ ಅಂತ ಹೇಳಿಕೊಂಡು ಮುಖ್ಯಮಂತ್ರಿ ಆಗಿಬಿಟ್ಟರು. ಸಿದ್ದರಾಮಯ್ಯ ಅಪ್ಪಿತಪ್ಪಿ ಮುಖ್ಯಮಂತ್ರಿ ಆಗಿದ್ದಾರೆ ಎಂದು ಕಿಡಿಕಾರಿದರು.
ಮುಂದೆ ಲೋಕಸಭೆ ಚುನಾವಣೆ ಬರುತ್ತಿದೆ. ಕಾಂಗ್ರೆಸ್‌ನವರ ಸ್ಥಿತಿ ಏನು ಅಂತ ಗೊತ್ತಾಗುತ್ತೆ, ಗ್ಯಾರಂಟಿ ಯೋಜನೆಗಳು ಏನಾಗುತ್ತೆ ಅಂತ ನೋಡುತ್ತಿರಿ. ಸಿದ್ದರಾಮಯ್ಯ ಮುಸಲ್ಮಾನರ ದತ್ತು ಪುತ್ರ ಆಗಿದ್ದಾರೆ. ಮುಸಲ್ಮಾನರ ಜಾಗದಲ್ಲಿ ನಿಂತು ಪ್ರಧಾನಿ ನರೇಂದ್ರ ಮೋದಿ ಹಾಗೂ ಪ್ರತಾಪ್ ಸಿಂಹ ವಿರುದ್ಧ ಮಾತನಾಡಿಬಿಟ್ಟರೆ ಕಾಂಗ್ರೆಸ್‌ಗೆ ಮತ ಬರುತ್ತೆ ಅಂದುಕೊಂಡಿದ್ದಾರೆ. ಅದೇ ಕಾರಣಕ್ಕೆ ಮುಸಲ್ಮಾನರ ಎದುರು ಭಾಷಣ ಮಾಡಿದ್ದಾರೆ. ಇದೆಲ್ಲ ಮುಂದಿನ ಚುನಾವಣೆಯಲ್ಲಿ ನಡೆಯಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದರು.
ಸನಾತನ ಹಿಂದುಧರ್ಮ ಮಲೇರಿಯಾ ಡೆಂಗ್ಯೂ ಇದ್ದಂತೆ ಎಂಬ ಉದಯ ಸ್ಟಾಲಿನ್ ಹೇಳಿಕೆ ವಿಚಾರವಾಗಿ ಮಾತನಾಡಿ, ಹಿಂದೂ ಧರ್ಮದ ಬಗ್ಗೆ ಅವಹೇಳನ ಮಾಡಿದ್ರೆ ಭಸ್ಮ ಆಗುತ್ತಾರೆ. ಇವನೇನು ಆಕಾಶದಿಂದ ಇಳಿದು ಬಂದಿಲ್ಲ. ಮುಖ್ಯಮಂತ್ರಿ ತಮ್ಮ ಆದ್ರೇನು, ತಾಕತ್ ಇದ್ರೆ ಅವನ ಧರ್ಮ ಟೀಕೆ ಮಾಡ್ಲಿ. ಮುಸ್ಲಿಂ ಧರ್ಮ ಟೀಕೆ ಮಾಡ್ಲಿ ನೋಡೋಣ ಎಂದು ಈಶ್ವರಪ್ಪ ಕೆಂಡಾಮಂಡಲರಾಗಿದ್ದಾರೆ.












Click it and Unblock the Notifications