G Parameshwar: ನನಗೆ ಹೋಮ್ ಮಿನಿಸ್ಟರ್ ಖಾತೆ ಬೇಡ ಎಂದ್ರಾ ಪರಮೇಶ್ವರ್?
ಬೆಂಗಳೂರು, ಜೂ 09 : ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಸಂಭ್ರಮಾಚರಣೆಯ ವೇಳೆ ನಡೆದ ಕಾಲ್ತುಳಿತ ಪ್ರಕರಣ ಕಾಂಗ್ರೆಸ್ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಗೃಹ ಸಚಿವ ಪರಮೇಶ್ವರ್ಗೆ ತಿಳಿಸದೇ ಈ ಆರ್ಸಿಬಿ ವಿಜಯೋತ್ಸವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ ಕೆ ಶಿವಕುಮಾರ್ ನಡೆಸಿದ್ದಾರೆ ಎನ್ನುವ ಮಾತು ಕೇಳಿ ಬರ್ತಿದ್ದು, ಈ ಕುರಿತು ಗೃಹ ಸಚಿವರಾದ ಪರಮೇಶ್ವರ್ ಅವರಿಂದ ಹೈಕಮಾಂಡ್ ಮಾಹಿತಿ ಪಡೆದಿದೆ ಎನ್ನಲಾಗ್ತಿದೆ.
ಇತ್ತ ಆರ್ ಸಿಬಿ ಸಂಭ್ರಮಾಚರಣೆ ವೇಳೆ ನಡೆದ ಕಾಲ್ತುಳಿತ ಘಟನೆಗೂ ನನಗೂ ಸಂಬಂಧವಿಲ್ಲ ಎಲ್ಲಾ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ನಡೆದಿದೆ ಎಂದು ಮಾಹಿತಿ ನೀಡಿದ್ದಾರೆ ಎನ್ನಲಾಗ್ತಿದೆ. ಈ ನಡುವೆ ರಾಜ್ಯ ರಾಜಕೀಯದಲ್ಲಿ ಪರಮೇಶ್ವರ್ ಅವರು ನನಗೆ ಗೃಹ ಖಾತೆ ಬೇಡ ಅಂತಿದ್ದಾರೆ ಎನ್ನುವ ಸುದ್ದಿ ಹಬ್ಬಿದೆ. ಈ ಕುರಿತು ಡಾ. ಜಿ ಪರಮೇಶ್ವರ್ ಅವರು ಮಾಧ್ಯಮಗಳ ಮುಂದೆ ಗರಂ ಆಗಿದ್ದಾರೆ.

ಈ ಕುರಿತು ಸೋಮವಾರ ಮಾಧ್ಯಮಗಳ ಜೊತೆಗೆ ಗೃಹ ಸಚಿವರಾದ ಡಾ. ಜಿ ಪರಮೇಶ್ವರ್ ಅವರು ಮಾತನಾಡಿ, ನಾನು ಯಾವತ್ತು ಕೂಡ ಇಂತಹ ಖಾತೆ ಬೇಕು ಎಂದು ಮುಖ್ಯಮಂತ್ರಿಯವರನ್ನು ಕೇಳಿಲ್ಲ. ಖಾತೆ ಬದಲಾವಣೆ ಕುರಿತಂತೆ ನಿಮಗೆ ಯಾರು ಹೇಳಿದರು. ಒಂದು ವೇಳೆ ನಿಮ್ಮ ಕಿವಿಗೆ ಬಿತ್ತು ಅಥವಾ ಯಾರೋ ಹೇಳಿದರು ಎಂಬ ಮಾತು ಬಂದಾಗ ನನ್ನನ್ನು ನೇರವಾಗಿ ಕೇಳಿ ಸ್ಪಷ್ಟಪಡಿಸಿಕೊಳ್ಳಬಹುದಲ್ಲವೆ. ಸುದ್ದಿ ಮಾಡುವ ಮೊದಲು ನನ್ನನ್ನು ನೇರವಾಗಿ ಕೇಳಬಹುದಲ್ಲವೇ ಎಂದರು.
ನಾನು 30 ವರ್ಷದಿಂದ ನಿಮ್ಮೊಂದಿಗೆ ಸಂಯಮದಿಂದ ನಡೆದುಕೊಂಡಿದ್ದೇನೆ. ನೀವು ಅಷ್ಟೇ ಗೌರವಿಸಿದ್ದೀರಿ. ಇದಕ್ಕೆ ನಾನು ಅಭಾರಿಯಾಗಿದ್ದೇನೆ. ವ್ಯಕ್ತಿಯ ವ್ಯಕ್ತಿತ್ವವನ್ನು ನಾಶ ಮಾಡುವುದು ಒಳ್ಳೆಯದಾಗಿ ಕಾಣಿಸುವುದಿಲ್ಲ, ಶೋಭೆ ತರುವುದಿಲ್ಲ ಎಂದರು. ನಾನು ನನ್ನ ಶ್ರೀಮತಿಯವರು ಸೇರಿದಂತೆ ಯಾರ ಬಳಿಯೂ ರಾಜಕೀಯದ ಬಗ್ಗೆ ಮಾತನಾಡುವುದಿಲ್ಲ. ಖಾತೆ ಬದಲಾಯಿಸುವಂತೆ ಆಪ್ತರ ಬಳಿ ಹೇಳಿದರು, ಮುಖ್ಯಮಂತ್ರಿಯವರ ಬಳಿ ಕೇಳಿದರು. ಅವರು ಸುಮ್ಮನೆ ಇರಿ ಎಂದು ಎಂದೆಲ್ಲ ಸುದ್ದಿ ಮಾಡಲಾಗಿದೆ. ಇದನ್ನು ಯಾರು ಹೇಳಿದರು. ಸುದ್ದಿ ಮಾಡುವ ಮೊದಲೇ ಸ್ಪಷ್ಟನೆ ಪಡೆದುಕೊಳ್ಳಬೇಕಿತ್ತು ಎಂದು ಹೇಳಿದರು.
ನಮ್ಮನ್ನು ಅಭಿಮಾನಿಗಳು, ಜನ ಅನುಕರಿಸುವವರು ಇದ್ದಾರೆ. ಕ್ಷೇತ್ರದ ಮತದಾರರು ಏನೆಂದುಕೊಳ್ಳುತ್ತಾರೆ. ಮುಂದೆ ಈ ರೀತಿ ಊಹಾಪೋಹಾ ಸುದ್ದಿ ನಿಮ್ಮ ಕಿವಿಗೆ ಬಿದ್ದಾಗ ನನ್ನನ್ನು ಕೇಳಿ ಸ್ಪಷ್ಟಪಡಿಸಿಕೊಳ್ಳಬಹುದು.
ನಾನು ಯಾವತ್ತು ಇಂತಹ ಖಾತೆ ಬೇಕು ಎಂದು ಮುಖ್ಯಮಂತ್ರಿಯವರನ್ನು ಕೇಳಿಲ್ಲ. ಬೆಂಗಳೂರಿನಲ್ಲಿ ದುರದೃಷ್ಟಕರ ಘಟನೆ ನಡೆದಿದೆ. ಇಂತಹ ಘಟನೆಗಳಾಗಬಾರದು. ಈ ಘಟನೆಯಿಂದ ನಾವು ನೋವನ್ನು ಅನುಭವಿಸುತ್ತಿದ್ದೇವೆ. ಇಂತಹ ಸವಾಲುಗಳನ್ನು ಎದುರಿಸಬೇಕು. ಖಾತೆ ಬದಲಾಯಿಸುವಂತೆ ಮುಖ್ಯಮಂತ್ರಿಯವರು ಸೇರಿದಂತೆ ಯಾರ ಬಳಿಯೂ ಮಾತನಾಡೇ ಇಲ್ಲ. ಇದೆಲ್ಲ ಸತ್ಯಕ್ಕೆ ದೂರವಾಗಿದ್ದು. ಈ ವಿಚಾರವನ್ನು ಯಾರು ಕೂಡ ಗಣನೆಗೆ ತೆಗೆದುಕೊಳ್ಳಬಾರದು ಎಂದು ಮನವಿ ಮಾಡಿದರು.
ಕಾಲ್ತುಳಿತ ಘಟನೆಯ ಬಗ್ಗೆ ನಾನು ಏನನ್ನು ಮಾತನಾಡುವುದಿಲ್ಲ. ಈ ಪ್ರಕರಣವನ್ನು ನಿವೃತ್ತ ನ್ಯಾಯಾದೀಶರಾದ ಮೈಕೆಲ್ ಡಿ.ಕುನ್ಹಾ ಅವರ ಏಕವ್ಯಕ್ತಿ ಆಯೋಗಕ್ಕೆ ವಹಿಸಿದ್ದೇವೆ. ಅವರು ತನಿಖೆ ಮಾಡಿ ವರದಿ ಕೊಡುತ್ತಾರೆ. ನಾವು ಹೇಳಿಕೆ ಕೊಟ್ಟರೆ ಬೇರೆ ರೀತಿಯ ಪರಿಣಾಮ ಬೀರುತ್ತದೆ. ತನಿಖೆ ವೇಳೆ ನಮ್ಮನ್ನು ಕೇಳಿದರೆ ಹೇಳುತ್ತೇವೆ. ಈಗ ಹೇಳಿಕೆ ನೀಡಿದರೆ ತನಿಖೆಯ ದಿಕ್ಕು ಬೇರೆ ಕಡೆ ಹೋಗುತ್ತದೆ ಎಂದರು.
ಇನ್ನೂ ಹೈಕಮಾಂಡ್ ನಾಯಕ ಭೇಟಿ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿ, ಕಾಂಗ್ರೆಸ್ ಪಕ್ಷದ ವರಿಷ್ಟರು ನನ್ನನ್ನು ದೆಹಲಿಗೆ ಕರೆದಿಲ್ಲ. ಫೋನ್‌ನಲ್ಲಿ ಮಾತನಾಡುತ್ತಿರುತ್ತಾರೆ. ಘಟನೆಯ ಬಗ್ಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೇಳುತ್ತಾರೆ. ಸಿಎಂ, ಡಿಸಿಎಂ ಅವರನ್ನು ಕೇಳಿ ಮಾಹಿತಿ ಪಡೆಯುತ್ತಾರೆ ಎಂದು ಪರಮೇಶ್ವರ್ ಅವರು ತಿಳಿಸಿದರು.












Click it and Unblock the Notifications