ಮುಖ್ಯಮಂತ್ರಿ ಆಗಿದ್ದು, ಹೇಗೆ ಎಂಬುದನ್ನ ವಿವರಸಿದ ಸಿದ್ದರಾಮಯ್ಯ
ಬೆಂಗಳೂರು, ಜುಲೈ1: ಶಾಸಕ ಬಿ.ಆರ್.ಪಾಟೀಲ್ ರವರು ಸಿದ್ದರಾಮಯ್ಯರವರು ಅದೃಷ್ಟದಿಂದ ಮುಖ್ಯಮಂತ್ರಿಯಾಗಿದ್ದಾರೆ ಎಂಬ ಹೇಳಿಕೆ ಕುರಿತು ರಾಜ್ಯ ರಾಜಕೀಯದಲ್ಲಿ ಚರ್ಚೆ ನಡೆಯುತ್ತಿದೆ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಪ್ರತಿಕ್ರಿಯಿಸಿದ್ದಾರೆ. ಬಿ ಆರ್ ಪಾಟೀಲ್ ಅವರ ಹೇಳಿಕೆ ಬಗ್ಗೆ ಮಾಹಿತಿಯಿಲ್ಲ. ಬಿ.ಆರ್.ಪಾಟೀಲ್ ಹಾಗೂ ನಾನು ಒಟ್ಟಿಗೆ ಶಾಸಕರಾಗಿದ್ದರಿಂದ ಹಾಗೂ ನನಗೆ ಮುಖ್ಯಮಂತ್ರಿಯಾಗಲು ಅವಕಾಶ ದೊರೆತಿದ್ದರಿಂದ, ಬಿ.ಆರ್.ಪಾಟೀಲ್ ರವರು ಈ ರೀತಿ ಹೇಳಿಕೆ ನೀಡಿರಬಹುದು ಎಂದು ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.
ಇಂದು(ಮಂಗಳವಾರ) ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕೇಂದ್ರ ಕಚೇರಿ 'ವಾರ್ತಾ ಸೌಧ'ದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತದ ಪ್ರಕರಣಕ್ಕೆ ಸಂಬಂಧಿಸಿದಂತೆ,ಕೇಂದ್ರ ಆಡಳಿತ ನ್ಯಾಯಮಂಡಳಿಯ ಐಪಿಎಸ್ ಅಧಿಕಾರಿಗಳ ಅಮಾನತ್ತು ಆದೇಶವನ್ನು ರದ್ದು ಮಾಡಿರುವ ಬಗ್ಗೆ ಮೇಲ್ಮನವಿ ಸಲ್ಲಿಸುವ ಅವಕಾಶವಿದ್ದು, ಈ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಜಾತಿಗಣತಿ ನಡೆಸಲಾಗಿದೆ ಎಂಬ ಪೋಸ್ಟರ್ ಗಳನ್ನು ಮನೆಗಳಿಗೆ ಭೇಟಿ ನೀಡದೇ, ಮನೆಯ ಮುಂದೆ ಅಂಟಿಸುತ್ತಿರುವ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸುತ್ತಾ, ಜಾತಿಗಣತಿಯನ್ನು ನಡೆಸಲು ಹಲವು ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಆನ್ ಲೈನ್ ಮೂಲಕವೂ ಜಾತಿವಿವರಗಳನ್ನು ನೀಡಬಹುದು ಅಥವಾ ಮನೆಗಳಿಗೆ ಭೇಟಿ ನೀಡಿ ವಿವರಗಳನ್ನು ಪಡೆಯಬಹುದು. ಈ ಬಗ್ಗೆ ಸತ್ಯಾಸತ್ಯತೆ ತಿಳಿದು ಮಾಧ್ಯಮದವರು ಪ್ರಶ್ನಿಸಬೇಕು ಎಂದರು.
ಕಳೆದೊಂದು ತಿಂಗಳಿನಲ್ಲಿ ಹಾಸನ ಜಿಲ್ಲೆಯೊಂದರಲ್ಲೇ ಇಪ್ಪತ್ತಕ್ಕೂ ಅಧಿಕ ಮಂದಿ ಹೃದಯಾಘಾತಕ್ಕೆ ಒಳಗಾಗಿ ಸಾವಿಗೀಡಾದ ವಿಚಾರವನ್ನು ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಈ ಸರಣಿ ಸಾವುಗಳಿಗೆ ನಿಖರ ಕಾರಣವನ್ನು ಪತ್ತೆಹಚ್ಚಿ, ಅದಕ್ಕೆ ಪರಿಹಾರ ಮಾರ್ಗೋಪಾಯಗಳನ್ನು ಕಂಡುಕೊಳ್ಳಲು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕರಾದ ಡಾ. ರವೀಂದ್ರನಾಥ್ ಅವರ ನೇತೃತ್ವದಲ್ಲಿ ತಜ್ಞರ ಸಮಿತಿ ರಚಿಸಿ, 10 ದಿನಗಳ ಒಳಗಾಗಿ ಅಧ್ಯಯನ ವರದಿ ನೀಡುವಂತೆ ಸೂಚಿಸಲಾಗಿದೆ.
ರಾಜ್ಯದಲ್ಲಿ ಎಳೆಯ ವಯಸ್ಸಿನವರ, ಯುವ ಜನರ ಹಠಾತ್ ನಿಧನಕ್ಕೆ ಕಾರಣಗಳೇನು? ಕೋವಿಡ್ ಲಸಿಕೆಯ ದುಷ್ಪರಿಣಾಮಗಳೇನಾದರೂ ಇರಬಹುದೇ? ಎಂದು ಕೂಲಂಕಷವಾಗಿ ಅಧ್ಯಯನ ನಡೆಸಲು ಇದೇ ಸಮಿತಿಗೆ ಕಳೆದ ಫೆಬ್ರವರಿ ತಿಂಗಳಲ್ಲೇ ಆದೇಶ ನೀಡಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಹೃದ್ರೋಗಿಗಳನ್ನು ಪರಿಶೀಲನೆಗೊಳಪಡಿಸಿ, ವಿಶ್ಲೇಷಣೆ ಮಾಡುವ ಕಾರ್ಯ ಕೂಡ ಪ್ರಗತಿಯಲ್ಲಿದೆ.
ಬದುಕಿ ಬಾಳಬೇಕಾದ ಚಿಕ್ಕಮಕ್ಕಳು, ಯುವಜನರು, ಅಮಾಯಕರ ಜೀವಗಳ ಬೆಲೆ, ಅವರ ಕುಟುಂಬಸ್ಥರ ಕಾಳಜಿ ನಮಗೂ ಇದೆ. ಇಂತಹ ವಿಚಾರಗಳನ್ನು ಕೂಡ ತಮ್ಮ ರಾಜಕೀಯ ಸಾಧನೆಗೆ ಬಳಕೆ ಮಾಡಿಕೊಳ್ಳುತ್ತಿರುವ ಬಿಜೆಪಿ ನಾಯಕರ ನಡೆಯನ್ನು ನಾನು ಖಂಡಿಸುತ್ತೇನೆ. ಆತುರಾತುರದಲ್ಲಿ ಕೊರೊನಾ ಲಸಿಕೆಗೆ ಅಧಿಕೃತ ಅನುಮೋದನೆ ಕೊಟ್ಟು, ಜನರಿಗೆ ಹಂಚಿದ್ದು ಕೂಡ ಈ ಸಾವುಗಳಿಗೆ ಕಾರಣವಿರಬಹುದು ಎಂಬುದನ್ನು ಅಲ್ಲಗಳೆಯಲಾಗದು, ಕಾರಣ ವಿಶ್ವದ ಅನೇಕ ಅಧ್ಯಯನಗಳು ಇತ್ತೀಚೆಗೆ ಹೆಚ್ಚಾಗಿರುವ ಹೃದಯ ಸ್ತಂಭನಕ್ಕೆ ಕೊವಿಡ್ ಲಸಿಕೆ ಕಾರಣ ಎಂಬುದನ್ನು ಹೇಳಿವೆ. ಈ ವಿಚಾರದಲ್ಲಿ ಬಿಜೆಪಿಯವರು ನಮ್ಮನ್ನು ಟೀಕಿಸುವ ಮುನ್ನ ಆತ್ಮಸಾಕ್ಷಿಯನ್ನೊಮ್ಮೆ ಕೇಳಿಕೊಳ್ಳಲಿ.
ಹಾಸನ ಜಿಲ್ಲೆಯು ಸೇರಿದಂತೆ ರಾಜ್ಯದಲ್ಲಿ ಸಂಭವಿಸುತ್ತಿರುವ ಹಠಾತ್ ಸರಣಿ ಸಾವುಗಳಿಗೆ ನೈಜ ಕಾರಣ ಪತ್ತೆಮಾಡಿ, ತಡೆಯುವ ನಿಟ್ಟಿನಲ್ಲಿ ನಾವು ಸಂಪೂರ್ಣ ಬದ್ಧರಿದ್ದೇವೆ. ಈ ಉದ್ದೇಶದಿಂದಲೇ ಹೃದಯ ಜ್ಯೋತಿ ಮತ್ತು ಗೃಹ ಆರೋಗ್ಯದಂತಹ ಯೋಜನೆಗಳನ್ನು ಈಗಾಗಲೇ ಜಾರಿಗೆಕೊಟ್ಟು, ಸಾರ್ವಜನಿಕರ ಆರೋಗ್ಯದ ಮೇಲೆ ನಿಗಾ ವಹಿಸಲಾಗಿದೆ. ಡಾ. ರವೀಂದ್ರನಾಥ್ ಅವರ ನೇತೃತ್ವದ ತಜ್ಞರ ಸಮಿತಿ ವರದಿ ಆಧರಿಸಿ ಅಗತ್ಯ ಕ್ರಮಗಳನ್ನು ಕೂಡ ಕೈಗೊಳ್ಳಲಾಗುವುದು.
ಜನರ ಆರೋಗ್ಯ ರಕ್ಷಣೆಗಾಗಿ ಒಂದು ಸರ್ಕಾರವಾಗಿ ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನು ನಾವು ಮಾಡುತ್ತಿದ್ದು, ಸಾರ್ವಜನಿಕರು ಎದೆನೋವು, ಉಸಿರಾಟದ ತೊಂದರೆ ಕಂಡುಬಂದರೆ ಅಲಕ್ಷ್ಯ ತೋರದೆ ತಕ್ಷಣವೇ ಸಮೀಪದ ಆರೋಗ್ಯ ಕೇಂದ್ರಗಳಿಗೆ ತೆರಳಿ ಪರೀಕ್ಷೆಗೆ ಒಳಗಾಗಬೇಕು ಎಂದು ಮನವಿ ಮಾಡುತ್ತೇನೆ ಎಂದು ಹೇಳಿದರು.












Click it and Unblock the Notifications