DCM DK Shivakumar: ಚನ್ನಪಟ್ಟಣಕ್ಕೆ ನಾನೇ ಅಭ್ಯರ್ಥಿ: ಡಿಸಿಎಂ ಡಿ ಕೆ ಶಿವಕುಮಾರ್
ಬೆಂಗಳೂರು, ಜುಲೈ 10: ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಡಿ ಕೆ ಸುರೇಶ್ ಸೋಲು ಅನುಭವಿಸಿದ್ದಾರೆ. ಪ್ರತಿಷ್ಠೆಯಾಗಿದ್ದ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಿ ಕೆ ಬ್ರದರ್ಸ್ ಸೋಲು ಕಂಡಿದ್ದು, ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆಗೆ ಡಿ ಕೆ ಬ್ರದರ್ಸ್ ಭರ್ಜರಿ ತಯಾರಿ ನಡೆಸಿದ್ದಾರೆ. ಅಲ್ಲದೇ ಡಿ ಕೆ ಶಿವಕುಮಾರ್ ಚನ್ನಪಟ್ಟಣ ಅಭ್ಯರ್ಥಿ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.
ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಚನ್ನಪಟ್ಟಣದಲ್ಲಿ ಯಾರೇ ನಿಂತರು ನಾನೇ ಅಭ್ಯರ್ಥಿ ಅಲ್ಲವೇ? ಎಂದು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮಾರ್ಮಿಕವಾಗಿ ಉತ್ತರಿಸಿದ್ದಾರೆ.

ಮಾಜಿ ಸಚಿವ ನಾಗೇಂದ್ರ ಮನೆ ಸೇರಿ ಹಲವು ಕಡೆ ಇ.ಡಿ ದಾಳಿ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಇಷ್ಟು ದೊಡ್ಡ ಮೊತ್ತದ ಹಗರಣ ಎಂದ ಮೇಲೆ ಬ್ಯಾಂಕ್ ನವರು ತನಿಖೆ ನಡೆಸುವ ಅಧಿಕಾರವಿದೆ. ಇ.ಡಿ ಅವರು ಅವಶ್ಯಕತೆ ಇರದಿದ್ದರೂ ಬಂದಿದ್ದಾರೆ. ರಾಜ್ಯ ಸರ್ಕಾರ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ತನಿಖೆ ನಡೆಸಲು ಎಸ್ಐಟಿ ರಚನೆ ಮಾಡಿದೆ. ಹೀಗಾಗಿ ಇ.ಡಿ ( ಜಾರಿ ನಿರ್ದೇಶನಾಲಯ) ದಾಳಿ ಮಾಡುವ ಅವಶ್ಯಕತೆ ಇರಲಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.
ಎಸ್ ಐಟಿ ರಚನೆ ಮಾಡಿದರೂ ಇ.ಡಿ ತನಿಖೆ ನಡೆಸಲು ಮುಂದುವರೆಯುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿ, ಇದರ ಬಗ್ಗೆ ಮಾತನಾಡಲು ಹೋಗುವುದಿಲ್ಲ. ನಾಗೇಂದ್ರ ಅವರದ್ದು ಯಾವುದೇ ತರದ ತಪ್ಪಿಲ್ಲ. ಕಳಂಕರಹಿತರಾಗಿ ಪ್ರಕರಣದಿಂದ ಹೊರಗಡೆ ಬರುತ್ತಾರೆ ಎನ್ನುವ ನಂಬಿಕೆ ಇದೆ" ಎಂದು ಹೇಳಿದರು.
"ಈ ಹಿಂದೆ ಬಿಜೆಪಿ ಕಾಲದಲ್ಲಿಯೂ ಇಂತಹ ಪ್ರಕರಣ ನಡೆದಿರುವ ಉದಾಹರಣೆಗಳಿವೆ. ಬಹಳ ವ್ಯವಸ್ಥಿತವಾಗಿ ವಂಚನೆ ಮಾಡಿದ್ದಾರೆ. ವಂಚನೆ ಮಾಡಿದವರಿಗೆ ಶಿಕ್ಷೆ ಆಗಲೇಬೇಕು. ಅಧಿಕಾರಿಗಳು ದುರುಪಯೋಗ ಪಡಿಸಿಕೊಂಡಿರುವುದರಲ್ಲಿ ಯಾವುದೇ ಅನುಮಾನ ಇಲ್ಲ. ಪ್ರಕರಣ ಆಗಬಾರದಾಗಿತ್ತು, ನಡೆದು ಹೋಗಿದೆ" ಎಂದು ಹೇಳಿದರು.
ನಾಗೇಂದ್ರ ಅವರ ಮನೆ ಸೇರಿದಂತೆ ನಾಲ್ಕೈದು ಕಡೆ ಇಡೀ ದಾಳಿ ಮಾಡಿದೆ ಎನ್ನುವ ಪ್ರಶ್ನೆಗೆ "ಇದರ ಬಗ್ಗೆ ನನಗೆ ಸರಿಯಾದ ಮಾಹಿತಿ ಇಲ್ಲ. ನಾಗೇಂದ್ರ ಅವರು ಹಾಗೂ ದದ್ದಲ್ ಅವರಿಗೆ ಎಸ್ ಐಟಿ ನೋಟಿಸ್ ನೀಡಿದೆ. ನಾವು ಆಂತರಿಕವಾಗಿ ಎಲ್ಲಾ ರೀತಿಯಲ್ಲಿ ತನಿಖೆ ಮಾಡಿದ್ದೇವೆ. ಹಗರಣದಲ್ಲಿ ನಮ್ಮ ಶಾಸಕರ, ಸಚಿವರ ಕೈವಾಡ ಇಲ್ಲ ಎಂಬುದನ್ನ ಅವರು ನಮಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಅವರು ಏನೇ ಕೇಳಿದರೂ ಉತ್ತರ ಕೊಡುತ್ತಾರೆ" ಎಂದು ತಿಳಿಸಿದರು.
ಹಂದನಕೆರೆ ಮಠಕ್ಕೆ ಭೇಟಿ ನೀಡಿದ ಬಗ್ಗೆ ಕೇಳಿದಾಗ "ನಾನು ಮಠಕ್ಕೆ ಹೋಗಿರಲಿಲ್ಲ. ಅಲ್ಲಿ ಗವಿ ಸಿದ್ದೇಶ್ವರ ಬೆಟ್ಟಕ್ಕೆ ರಸ್ತೆ ಮಾಡಿಸಿದ್ದೆ. ಅರಣ್ಯ ಇಲಾಖೆಯಿಂದ ತೊಂದರೆ ಇದ್ದ ಕಾರಣಕ್ಕೆ, ಯಾವ ರೀತಿಯ ತೊಂದರೆ ಎದುರಾಗಿದೆ ಎಂದು ತಿಳಿಯಲು ನಾನೇ ಭೇಟಿ ನೀಡಿದ್ದೇ" ಎಂದು ಹೇಳಿದರು.












Click it and Unblock the Notifications