ಭಾರತ ಜೋಡೋ ಯಾತ್ರೆ; ಮಲ್ಲಿಕಾರ್ಜುನ ಖರ್ಗೆ ಪತ್ರಿಕಾಗೋಷ್ಠಿ ವಿವರ
ಬೆಂಗಳೂರು, ಅಕ್ಟೋಬರ್ 16; "ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸಲು ಕಲ್ಯಾಣ ಕರ್ನಾಟಕದ ಬಳ್ಳಾರಿ ಭಾಗಕ್ಕೆ ಆಗಮಿಸಿದ್ದೇನೆ. ಆರ್ಟಿಕಲ್ 371 ಜಾರಿಗೆ ತಂದಿದ್ದು, ಕಾಂಗ್ರೆಸ್ ಸರ್ಕಾರ. ಸಂಸತ್ತಿನಲ್ಲಿ ಕಾಂಗ್ರೆಸ್‌ಗೆ ಕೇವಲ 208 ಸಂಸದರಿದ್ದರು. ಈ ವಿಶೇಷ ಸ್ಥಾನಮಾನ ನೀಡಲು ಅಂಗೀಕರಿಸಲು 381 ಸಂಸದರ ಬೆಂಬಲ ಬೇಕಿತ್ತು. ಆದರೂ ಸೋನಿಯಾ ಗಾಂಧಿ ವಿಶೇಷ ಆದ್ಯತೆ ನೀಡಿ ಎಲ್ಲಾ ಬೆಂಬಲ ಪಡೆದು ಈ ಭಾಗಕ್ಕೆ ಅನುಕೂಲ ಮಾಡಿಕೊಟ್ಟಿದ್ದು, ಹೀಗಾಗಿ ಈ ಭಾಗದ ಕಾರ್ಯಕ್ರಮಕ್ಕೆ ಭಾಗಿಯಾಗಲು ಬಂದಿದ್ದೇನೆ" ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಕಾಂಗ್ರೆಸ್‌ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದರು. "ನಾನು ಕಾಂಗ್ರೆಸ್ ಪಕ್ಷದ ಸಂಘಟನೆಯ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಅಭ್ಯರ್ಥಿಯಾಗಿದ್ದೇನೆ. ಗಾಂಧಿ ಕುಟುಂಬ ಚುನಾವಣೆಯಿಂದ ಹಿಂದೆ ಸರಿದು, ಬೇರೆಯವರಿಗೆ ಅವಕಾಶ ಕೊಟ್ಟ ಹಿನ್ನೆಲೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದೆ. ಆರಂಭದಲ್ಲಿ ನನಗೆ ಈ ಚುನಾವಣೆ ಬಗ್ಗೆ ಆಸಕ್ತಿ ಇಲ್ಲದಿದ್ದರೂ ರಾಜ್ಯ ಪ್ರಮುಖ ನಾಯಕರು, ರಾಷ್ಟ್ರ ಹಾಗೂ ಬೇರೆ ರಾಜ್ಯದ ನಾಯಕರ ಸಲಹೆ ಮೇರೆಗೆ ಸ್ಪರ್ಧಿಸುತ್ತಿದ್ದೇನೆ" ಎಂದರು.
"ಕಳೆದ 55 ವರ್ಷಗಳಿಂದ ನೀವು ಪಕ್ಷವನ್ನು ಸಂಘಟಿಸುತ್ತಿದ್ದು, ನೀವು ಸ್ಪರ್ಧಿಸಬೇಕು ಎಂದು ಹಲವು ನಾಯಕರು ನನಗೆ ಒತ್ತಾಯಿಸಿದರು. ರಾಜ್ಯದಲ್ಲಿ ಚುನಾವಣಾ ಪ್ರಚಾರ ಕಾರ್ಯಕ್ರಮ ಇತ್ತಾದರೂ ಎಲ್ಲರೂ ಭಾರತ ಐಕ್ಯತಾ ಯಾತ್ರೆಯಲ್ಲಿ ಭಾಗವಹಿಸುವುದರಿಂದ ನಾನು ಸಹ ಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದೇನೆ" ಎಂದು ತಿಳಿಸಿದರು.
"ಸಾಮಾನ್ಯ ಸದಸ್ಯತ್ವದಿಂದ, ಬ್ಲಾಕ್, ಜಿಲ್ಲಾ ಮಟ್ಟದ ಸಮಿತಿಯಿಂದ ಕೆಪಿಸಿಸಿ ಅಧ್ಯಕ್ಷನಾಗಿ, ಶಾಸಕ, ಮಂತ್ರಿಯಿಂದ ಸಿಎಲ್‌ಪಿ ನಾಯಕನಾಗಿ ಕೆಲಸ ಮಾಡಿದ್ದು ನನ್ನ ರಾಜಕೀಯ ಜೀವನ ಕರ್ನಾಟಕದಿಂದಲೇ ಆರಂಭವಾಗಿದೆ. ರಾಜ್ಯ ನಾಯಕರು ನನಗೆ ಬೆಂಬಲ ನೀಡುವುದರಲ್ಲಿ ಸಂಶಯವಿಲ್ಲ. ಆದರೆ ನನ್ನ ಕರ್ತವ್ಯ ಹಿನ್ನೆಲೆಯಲ್ಲಿ ನಾನು ಎಲ್ಲರಿಗೂ ಬೆಂಬಲ ನೀಡುವಂತೆ ಮನವಿ ಮಾಡಿಕೊಳ್ಳುತ್ತೇನೆ" ಎಂದರು.

ಕಾಂಗ್ರೆಸ್ ಶಕ್ತಿಶಾಲಿಯಾಗಬೇಕು
"ಇಂದು ದೇಶದಲ್ಲಿ ಬಿಜೆಪಿ ಹಾಗೂ ಆರ್. ಎಸ್. ಎಸ್. ಬೆಂಬಲಿತ ಸರ್ಕಾರ ಸಂವಿಧಾನಕ್ಕೆ ತಿಲಾಂಜಲಿ ಕೊಟ್ಟಿದ್ದು, ಸಂವಿಧಾನ ರೀತಿ ನಡೆದುಕೊಳ್ಳುತ್ತಿಲ್ಲ. ಐಟಿ ಇಡಿ ಮೂಲಕ ಚುನಾಯಿತ ಸರ್ಕಾರ ಕೆಡವುತ್ತಿದ್ದಾರೆ. ಅವರ ಪಕ್ಷ ಸೇರಲು ಒಪ್ಪದಿದ್ದರೆ ಕೇಸ್ ಮುಂದುವರಿಸುತ್ತಾರೆ. ಇಲ್ಲಿ ಕಳಂಕಿತರು ಅಲ್ಲಿ ಹೋಗಿ ಕ್ಲೀನ್ ಆಗುತ್ತಾರೆ. ದೇಶದ 6-7 ರಾಜ್ಯಗಳಲ್ಲಿ ಕಾಂಗ್ರೆಸ್ ಸರ್ಕಾರ ಕೆಡವಲಾಗಿದೆ. ಇನ್ನು ದೇಶದಲ್ಲಿ ಧರ್ಮಗಳ ನಡುವೆ ದ್ವೇಷ ಹುಟ್ಟು ಹಾಕುತ್ತಿದ್ದಾರೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಹೀಗಾಗಿ ಇದೆಲ್ಲವನ್ನೂ ಎದುರಿಸಲು ಕಾಂಗ್ರೆಸ್ ಶಕ್ತಿಶಾಲಿಯಾಗಬೇಕು.ಇದು ಒಬ್ಬರಿಂದ ಆಗುವ ಕೆಲಸ ಅಲ್ಲ. ಎಲ್ಲರೂ ಒಟ್ಟಾಗಿ ಸೇರಿ ಸಂಘಟನೆ ಮಾಡಬೇಕು. ದುರ್ಬಲ ವರ್ಗದವರಿಗೆ ಮೀಸಲಾತಿ ಉದ್ಯೋಗ ಸಿಗುತ್ತಿಲ್ಲ"ಎಂದು ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದರು.

ಈಗ ಸಂಘಟನೆಗೆ ಶಕ್ತಿ ತುಂಬಬೇಕು
ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, "ನಾನು ವಿದ್ಯಾರ್ಥಿ ಘಟ್ಟದಿಂದ ಈ ವಿಚಾರವಾಗಿ ಹೋರಾಟ ಮಾಡಿಕೊಂಡು ಬಂದಿದ್ದೇನೆ. ಈ ಪಕ್ಷಕ್ಕೆ ಬಲ ತುಂಬುತ್ತಾ ಬಂದಿದ್ದೇನೆ. ನಾವು ಸಂಘಟನೆಗೆ ಶಕ್ತಿ ತುಂಬಲು ಈ
ಈ ಮನವಿ ಮಾಡುತ್ತಿದ್ದೇನೆ" ಎಂದರು.
ಶಶಿ ತರೂರ್‌ಗೆ ಯಾವ ಸಲಹೆ ನೀಡುತ್ತೀರಿ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, "ನಾನು ಈ ವಿವಾದಾತ್ಮಕ ವಿಚಾರವಾಗಿ ಮಾತನಾಡುವುದಿಲ್ಲ. ನಾನು ನನ್ನ ವಿಚಾರವನ್ನು ಮಾತ್ರ ಮಾತನಾಡುತ್ತೇನೆ. ಅವರ ವಿಚಾರದ ಬಗ್ಗೆ ಚರ್ಚೆ ಮಾಡಲು ಬಯಸುವುದಿಲ್ಲ. ಇದು ನಮ್ಮ ಮನೆ ವಿಚಾರ. ಇಲ್ಲಿ ಅವರಿಗೂ ಅಭಿಪ್ರಾಯ ವ್ಯಕ್ತಪಡಿಸುವ ಅಧಿಕಾರ ಇದೆ. ಇದು ಪಕ್ಷದ ಆಂತರಿಕವಾಗಿ ನಡೆಯುತ್ತಿರುವ ಸ್ನೇಹಯುತ ಸ್ಪರ್ಧೆ. ನಾನು ಕಾಂಗ್ರೆಸ್ ಪಕ್ಷದ ತಳಮಟ್ಟದಿಂದ ಇಲ್ಲಿಯವರೆಗೂ ನಾನು ಬೆಳೆದು ಬಂದಿದ್ದು, ಆ ಬಗ್ಗೆ ನಾನು ಮಾತನಾಡುತ್ತೇನೆ" ಎಂದರು.

ಚರ್ಚೆ ಮಾಡಲು ಬೇರೆ ವಿಷಯವಿಲ್ಲ
ಖರ್ಗೆ ಅವರು ಗಾಂಧಿ ಕುಟುಂಬದ ನಿಯಂತ್ರಣದಲ್ಲಿ ಕೆಲಸ ಮಾಡುತ್ತಾರೆ ಎಂಬ ಬಿಜೆಪಿ ಆರೋಪದ ಬಗ್ಗೆ ಕೇಳಿದಾಗ ಮಾತನಾಡಿ, "ಅವರಿಗೆ ಚರ್ಚೆ ಮಾಡಲು ಬೇರೆ ವಿಷಯ ಸಿಗುತ್ತಿಲ್ಲ. ಕಳೆದ 20 ವರ್ಷಗಳಿಂದ ಸೋನಿಯಾ ಗಾಂಧಿ ಅವರು ಪಕ್ಷ ಸಂಘಟನೆ ಮಾಡಿ ಹಲವು ಕಾನೂನು ತಂದು ಬಡವರ ಹೊಟ್ಟೆ ತುಂಬುವ ಆಹಾರ ಭದ್ರತೆ, ಶಿಕ್ಷಣ ಹಕ್ಕು, ನರೆಗಾದಂತಹ ಯೋಜನೆ ತಂದಿದ್ದಾರೆ. ಇಂತಹ ಯೋಜನೆಗಳಿಗೆ ಬೆಂಬಲ ನೀಡಬೇಕು" ಎಂದರು.
"ಪಕ್ಷ ಅಧಿಕಾರಕ್ಕೆ ಬಂದಾಗ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅಧಿಕಾರ ಸ್ವೀಕಾರ ಮಾಡಲಿಲ್ಲ. ಆರ್ಥಿಕ ತಜ್ಞ ಮನಮೋಹನ್ ಸಿಂಗ್ ಅವರಿಗೆ ಆ ಹುದ್ದೆ ನೀಡಿದರು. 10 ವರ್ಷಗಳಲ್ಲಿ ಹಲವು ಪ್ರಗತಿಪರ ಯೋಜನೆಗಳು ಬಂದವು. ಕೆಲ ಚುನಾವಣೆ ಕಳೆದುಕೊಂಡ ಹಿನ್ನೆಲೆಯಲ್ಲಿ ಇಂತಹ ಮಾತು ಹೇಳುವುದು ಸರಿಯಲ್ಲ. ಒಳ್ಳೆಯ ವಿಚಾರಗಳು ಇದ್ದರೆ ಅವರ ಸಲಹೆ ಪಡೆಯುತ್ತೇನೆ. ಉತ್ತಮ ಸಲಹೆ ನೀವು ಕೊಟ್ಟರೂ ಸ್ವೀಕರಿಸುತ್ತೇವೆ" ಎಂದು ಹೇಳಿದರು.

ಸಾಮೂಹಿಕ ನೇತೃತ್ವದ ಫಲ
ಈ ಚುನಾವಣೆ ರಾಜ್ಯದ ಮೇಲೆ ಪ್ರಭಾವ ಬೀರುತ್ತದೆಯೆ? ಎಂಬ ಪ್ರಶ್ನೆಗೆ ಉತ್ತರಿಸಿ, "ನಮ್ಮ ರಾಜ್ಯದಲ್ಲಿ ಸಾಕಷ್ಟು ಮುಖಂಡರು ಇದ್ದಾರೆ. ರಾಜ್ಯದಲ್ಲಿ ಸದನದ ಒಳಗೆ ಹಾಗೂ ಹೊರಗೆ ಹೋರಾಡುತ್ತಿದ್ದಾರೆ. ಹೀಗಾಗಿ ನನ್ನಿಂದ ಎಲ್ಲಾ ಪ್ರಯೋಜನ ಆಗಲಿದೆ ಎಂದು ನಾನು ಹೇಳುವುದಿಲ್ಲ. ಏನೇ ಆದರೂ ಅದು ಎಲ್ಲಾ ನಾಯಕರ ಸಾಮೂಹಿಕ ನೇತೃತ್ವದ ಫಲ. ಇದನ್ನೇ ನಾನು ನಂಬಿದ್ದೇನೆ" ಎಂದು ಖರ್ಗೆ ಹೇಳಿದರು.
ಕಾಂಗ್ರೆಸ್ ನಾಯಕರು ಸಹಕಾರ ನೀಡುತ್ತಿಲ್ಲ ಎಂಬ ಶಶಿ ತರೂರ್ ಅವರ ಹೇಳಿಕೆ ಬಗ್ಗೆ ಕೇಳಿದಾಗ, "ನಾನು ಹಾಗೂ ನನ್ನ ಚುನಾವಣಾ ಪ್ರಚಾರದ ಅಧಿಕಾರಿಗಳು ನನ್ನ ಪರವಾಗಿ ಸಂಘಟನೆ ಮಾಡುತ್ತಿದ್ದಾರೆ. ನಮ್ಮ ಬಳಿ ಬಂದವರನ್ನು ಬೇರೆಯವರ ಜೊತೆ ಕಳಿಸಲು ಆಗುತ್ತದೆ?. ನನಗೆ ಹಲವು ಹಿರಿಯ ನಾಯಕರು ಹಾಗೂ ಪದಾಧಿಕಾರಿಗಳು ಬೆಂಬಲ ನೀಡಿ ಚುನಾವಣೆಗೆ ಸ್ಪರ್ಧಿಸುವಂತೆ ಮಾಡಿದ್ದಾರೆ. ನಾನು ಇದನ್ನು ನಿರೀಕ್ಷೆ ಮಾಡಿಲ್ಲದಿದ್ದರೂ ನನಗೆ ಬೆಂಬಲ ನೀಡಿದ್ದಾರೆ. ನನಗೆ ಸಂಪುಟ ಸ್ಥಾನಮಾನಕ್ಕಿಂತ ಸಂಘಟನೆಯೇ ಮುಖ್ಯ" ಎಂದು ತಿಳಿಸಿದರು.

ನನಗೆ ಯಾರೂ ವಿರೋಧಿಗಳಿಲ್ಲ
2019ರ ಚುನಾವಣೆಯಲ್ಲಿ ನಿಮ್ಮನ್ನು ಸೋಲಿಸಿ ರಾಜಕೀಯವಾಗಿ ಮುಗಿಸಲು ಪ್ರಯತ್ನಿಸಿದವರಿಗೆ ಏನು ಹೇಳಬಯಸುತ್ತೀರಿ ಎಂದು ಕೇಳಿದಾಗ, "ನಾನು ಎಂದಿಗೂ ಯಾವುದೇ ಸ್ಥಾನ ಬಯಸಿರಲಿಲ್ಲ. ವಿರೋಧ ಪಕ್ಷದ ನಾಯಕ ಸ್ಥಾನ, ಈ ಅವಕಾಶವನ್ನು ನಿರೀಕ್ಷೆ ಮಾಡಿರಲಿಲ್ಲ. 1994ರಲ್ಲಿ ರಾಜ್ಯದಲ್ಲಿ ನಮ್ಮ ಸರ್ಕಾರ ಬಿದ್ದ ನಂತರ ವಿರೋಧ ಪಕ್ಷದ ನಾಯಕ ಆಗುತ್ತೇನೆ ಎಂದು ನಿರೀಕ್ಷೆ ಮಾಡಿರಲಿಲ್ಲ. 2008ರಲ್ಲಿ ಶಾಸಕಾಂಗ ಪಕ್ಷದ ನಾಯಕನಾಗಿದ್ದೆ. ನಾನು ಪಕ್ಷಕ್ಕಾಗಿ ಇದ್ದೇನೆ ಹೊರತು ಬೇರೆ ವಿಚಾರಕ್ಕೆ ಅಲ್ಲ. ನನ್ನಂತಹ ಹಲವರು ಪಕ್ಷದಲ್ಲಿ ಇದ್ದಾರೆ. ಹೀಗಾಗಿ ಪಕ್ಷ ಯಾವ ಜವಾಬ್ದಾರಿ ನೀಡುತ್ತದೆಯೋ ಅದರಂತೆ ನಡೆಯುತ್ತೇನೆ. ನನಗೆ ಯಾರೂ ವಿರೋಧಿಗಳಿಲ್ಲ. ನಮ್ಮಲ್ಲಿ ಯಾವುದೇ ಬಣ ಇಲ್ಲ. ನಾವೆಲ್ಲರೂ ಸಮಾನರು. ಒಗ್ಗಟ್ಟಿದ್ದರೆ ನಮ್ಮ ಸರ್ಕಾರ ಬರುವುದು ಖಚಿತ" ಎಂದು ಖರ್ಗೆ ವಿಶ್ವಾಶ ವ್ಯಕ್ತಪಡಿಸಿದರು.












Click it and Unblock the Notifications