ಹುಬ್ಬಳ್ಳಿ ಇನ್ಫೋಸಿಸ್ ಟೆಕ್ಕಿ ಭಯಂಕರ ಸಾವು, ಹತ್ಯೆಯಾ?

ಇದು ಆತ್ಮಹತ್ಯೆಯಾ ಅಥವಾ ಯಾರಾದರೂ ಹತ್ಯೆ ಮಾಡಿದ್ದಾರಾ ಎಂಬ ಅನುಮಾನಗಳು ಹುಟ್ಟಿಕೊಂಡಿವೆ. ಹುಬ್ಬಳ್ಳಿಯ ದೀಪಕ್ ಫಕೀರಸಾ ಹಬೀಬ್ (33) ಮೃತ ದುರ್ದೈವಿ. ಇತ್ತೀಚೆಗಷ್ಟೇ ಇವರು ಇನ್ಫೋಸಿಸ್ ಕಂಪನಿ ಸೇರಿದ್ದರು.
ಆತ್ಮಹತ್ಯೆ ಪತ್ರವೂ ಇಲ್ಲ : ನವೆಂಬರ್ 8ರಂದು ಬೆಂಗಳೂರು ಕಚೇರಿಯಿಂದ ವರ್ಗಾವಣೆಗೊಂಡ ದೀಪಕ್ ಹೈದರಾಬಾದಿನಲ್ಲಿ ಕೆಲಸಕ್ಕೆ ಸೇರಿದ್ದರು. ಮೊದಲಿಗೆ ಮಣಿಕಟ್ಟನ್ನು ಕತ್ತರಿಸಿಕೊಂಡ ಬಳಿಕ ಕಟ್ಟಡದಿಂದ ಜಿಗಿದಿದ್ದಾರೆ. ಆದರೆ ಯಾವುದೇ ಆತ್ಮಹತ್ಯೆ ಪತ್ರ ಲಭಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ದೀಪಕ್ ಅವರ ಪತ್ನಿ ಜ್ಯೋತಿ ಏಳು ತಿಂಗಳ ಗರ್ಭಿಣಿಯಾಗಿದ್ದು, ನಗರದ ಚೋಳರ ಓಣಿಯಲ್ಲಿ ವಾಸವಾಗಿದ್ದಾರೆ.
ಭಯಾನಕ ಸಾವು : ದೀಪಕ್ ವಾಸವಾಗಿದ್ದ ಮೊದಲ ಮಹಡಿ ರಕ್ತಸಿಕ್ತವಾಗಿದ್ದು, ಸ್ಥಳದಲ್ಲಿ ನೈಲ್ ಕಟ್ಟರ್ ದೊರೆತಿದೆ. ಅದರಿಂದ ಮಣಿಕಟ್ಟನ್ನು ಕೊಯ್ದುಕೊಂಡು ದೀಪಕ್ ಸಾವನ್ನಪಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ದೀಪಕ್ ಬೆಡ್ ರೂಂ, ಹಾಲ್ ಮತ್ತ ವಾಶ್ ಬೇಸಿನ್ ಮುಂತಾದ ಕಡೆಗಳಲ್ಲೆಲ್ಲಾ ರಕ್ತದ ಕಲೆಗಳು ಅಂಟಿವೆ. ಮೊದಲ ಮಹಡಿಯಿಂದ ಲಿಫ್ಟ್ ಮೂಲಕ ಮೂರನೆಯ ಮಹಡಿಗೆ ತೆರಳಿ, ಅಲ್ಲಿಂದ ಕೆಳಗೆ ಹಾರಿಬಿದ್ದು ಭಯಾನಕವಾಗಿ ಸಾವನ್ನಪ್ಪಿದ್ದಾರೆ. ಲಿಫ್ಟ್ ಸಹ ರಕ್ತದೋಕುಳಿ ಕಂಡಿದೆ ಎಂದು ಘಾಟಕೇಸರ್ ಠಾಣೆಯಯ ಇನ್ಸ್ ಪೆಕ್ಟರ್ ವಿವಿ ಚಲಪತಿ ತಿಳಿಸಿದ್ದಾರೆ.
ಇದನ್ನೆಲ್ಲಾ ಕಂಡು ಕೇಳಿದ ನಂತರ ಮೃತನ ಸಹೋದರ ಅಮೃತ್ ಅವರು ದೀಪಕ್ ಹಬೀಬ್ ಆತ್ಮಹತ್ಯೆ ಮಾಡಿಕೊಂಡಿಲ್ಲ. ಆತ್ಮಹತ್ಯೆ ಮಾಡಿಕೊಳ್ಳುವಂತಹ ವ್ಯಕ್ತಿತ್ವ ಅವನದಲ್ಲ. ಆತನ ಕೊಲೆಯಾಗಿದೆ' ಎಂದು ಅಲವತ್ತುಕೊಂಡಿದ್ದಾರೆ.
ಹುಬ್ಬಳ್ಳಿಯ ದೀಪಕ್ ಬಿವಿಬಿ ಕಾಲೇಜಿನಲ್ಲಿ ಪದವಿ ಪಡೆದು ಕಳೆದ ಆರು ವರ್ಷಗಳಿಂದ ಐಎನ್ ಟಿ ಕಂಪನಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಆದರೆ ಇತ್ತೀಚೆಗೆ ಇನ್ಫೋಸಿಸ್ ಟೆಕ್ನಾಲಜೀಸ್ ಸೇರಿದ ಇವರು ನವೆಂಬರ್ 24ರಂದು ಹೈದರಾಬಾದಿಗೆ ತೆರಳಿ ಅಣ್ಣಾಜಿಗುಡ ಪ್ರದೇಶದ ಸಿಂಗಾಪುರ ಟೌನ್ ಶಿಪ್ ನಲ್ಲಿ ಮನೆ ಬಾಡಿಗೆ ಪಡೆದು ವಾಸವಾಗಿದ್ದರು.
ಪ್ರತಿದಿನ ಪತ್ನಿ ಜ್ಯೋತಿಯೊಂದಿಗೆ ದೂರವಾಣಿಯಲ್ಲಿ ಮಾಡುತ್ತಿದ್ದ ದೀಪಕ್ ಶನಿವಾರ ಕೂಡ ಕರೆ ಮಾಡಿದ್ದರು. ರಾತ್ರಿ 12.30 ರವರೆಗೆ ಪತ್ನಿ ಹಾಗೂ ಸಂಬಂಧಿಗಳೊಂದಿಗೆ ಮಾತನಾಡಿ ಕುಶಲೋಪರಿ ವಿಚಾರಿಸಿದ್ದಾನೆ. ಕಳೆದ ದೀಪಾವಳಿಗೆ ನಗರಕ್ಕೆ ಆಗಮಿಸಿದ್ದ ಈತ ಹಬ್ಬದ ಉಡುಗೊರೆಯನ್ನು ನೀಡಿದ್ದ.
ಸದಾ ಪ್ರೀತಿ ವಾತ್ಸಲ್ಯದಿಂದ ಇರುವ ದೀಪಕ್ ಎಲ್ಲರೊಂದಿಗೂ ಅನೋನ್ಯವಾಗಿದ್ದ. ಹೀಗಾಗಿ ಆತ ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವೇ ಇಲ್ಲ. ಆದರೂ ಪೊಲೀಸರು ಇದನ್ನು ಆತ್ಮಹತ್ಯೆ ಎಂದು ಪರಿಗಣಿಸುತ್ತಿದ್ದಾರೆ. ಈ ಬಗ್ಗೆ ತನಿಖೆ ನಡೆಸಬೇಕು' ಎಂದು ದೀಪಕ್ ಅವರ ಸಹೋದರರಾದ ಅಮೃತ್, ಸುನೀಲ, ಪ್ರವೀಣ ಕೋರಿದ್ದಾರೆ.












Click it and Unblock the Notifications