Hindustani music: ಸಂಗೀತ ಸ್ವರ ನಿಲ್ಲಿಸಿದ ಗಂಗೂಬಾಯಿ ಹಾನಗಲ್ ಗುರುಕುಲ, ಕಾರವೇನು?
ಹುಬ್ಬಳ್ಳಿ, ಡಿಸೆಂಬರ್ 07: ಗುರು-ಶಿಷ್ಯ ಪರಂಪರೆಯಲ್ಲಿ ಹಿಂದುಸ್ತಾನಿ ಸಂಗೀತವನ್ನು ಕಲಿಸುವ ದೇಶದ ಏಕೈಕ ಎಂದೆನಿಸಿಕೊಂಡಿರುವ ಡಾ. ಗಂಗೂಬಾಯಿ ಹಾನಗಲ್ ಗುರುಕುಲದಲ್ಲಿ ಆಲಾಪ ಕೇಳಿಸದಾಗಿದೆ. ಗೌರವ ಧನ ನೀಡಲು ಸರ್ಕಾರ ಸತಾಯಿಸುತ್ತಿರುವುದರಿಂದ ಗುರುಕುಲ ವೃಂದವು ಪಾಠ ನಿಲ್ಲಿಸಿದೆ.
ಕಳೆದ ಜೂನ್‌ನಿಂದ ಗೌರವಧನ ನೀಡದಿರುವ ಪರಿಣಾಮ ಐವರು ಗುರುಗಳು, ನಾಲ್ವರು ತಬಲಾ ಸಾಥಿದಾರರು ಪಾಠ ಮಾಡುವುದನ್ನು ಡಿಸೆಂಬರ್ 1ರಿಂದ ನಿಲ್ಲಿಸಿದ್ದಾರೆ. ಹೀಗಾಗಿ, ಸಂಗೀತ ಶಿಕ್ಷಣ ಪಡೆಯಲು ದೇಶದ ನಾನಾ ಭಾಗಗಳಿಂದ ಬಂದಿರುವ 30 ವಿದ್ಯಾರ್ಥಿಗಳು ಪಾಠದಿಂದ ವಂಚಿತರಾಗಿದ್ದಾರೆ. ಕಳೆದೊಂದು ವಾರದಿಂದ ಗುರುಕುಲ ಕಾರ್ಯಚಟುವಟಿಕೆ ಬಂದ್ ಆಗಿವೆ.

ಹೆಸರಾಂತ ಹಿಂದುಸ್ತಾನಿ ಸಂಗೀತಗಾರರಾದ ಪಂಡಿತ್ ಗಣಪತಿ ಭಟ್ ಹಾಸಣಗಿ, ಪಂಡಿತ್ ಕೈವಲ್ಯಕುಮಾರ ಗುರವ್, ಉಸ್ತಾದ್ ಫಯಾಜ್‌ಖಾನ್, ವಿದುಷಿ ವಿಜಯಾ ಜಾಧವ ಘಾಟ್ಲೆವಾರ್, ಅಕ್ಕಮಹಾದೇವಿ ಮಠ ಅಂಥವರನ್ನೇ ಸರ್ಕಾರ ಗೌರವಧನ ನೀಡದೆ ಸತಾಯಿಸುತ್ತಿರುವುದು ಸಂಗೀತ ಪ್ರಿಯರನ್ನು ಕೆರಳಿಸಿದೆ. ಸಂಗೀತಾಭ್ಯಾಸ ಮಾಡಲು ಬಂದ ವಿದ್ಯಾರ್ಥಿಗಳ ಭವಿಷ್ಯ ಮೇಲೆ ಸರ್ಕಾರ ಚೆಲ್ಲಾಟವಾಡುತ್ತಿದೆ. ಇದು ಸಂಗೀತಾಸಕ್ತರ ಆತಂಕಕ್ಕೆ ಕಾರಣವಾಗಿದೆ.
ವಸತಿ ಸಹಿತ ಸಂಗೀತ ಪಾಠ
ಡಾ. ಗಂಗೂಬಾಯಿ ಹಾನಗಲ್ ಗುರುಕುಲವು ರಾಷ್ಟ್ರಕ್ಕೆ ಒಂದು ಮಾದರಿ ಸಂಸ್ಥೆಯಾಗಿ 2007ರಲ್ಲಿ ಲೋಕಾರ್ಪಣೆಗೊಂಡಿತ್ತು. ಪಾಠ ಹೇಳಿಕೊಡುವ ಗುರುಗಳಿಗೆ, ವಿದ್ಯಾರ್ಥಿಗಳಿಗೆ ವಸತಿ ಗೃಹಗಳನ್ನು ಕಲ್ಪಿಸಲಾಗಿದೆ. ಇಲ್ಲಿ ಊಟೋಪಚಾರದ ವ್ಯವಸ್ಥೆ ಇದೆ. ಆಡಳಿತಾಧಿಕಾರಿ ಸೇರಿ ನಾಲ್ವರು ಸರ್ಕಾರಿ ಸಿಬ್ಬಂದಿ ಹಾಗೂ ಹೊರಗುತ್ತಿಗೆ ಆಧಾರದ ಮೇಲೆ 13 ಜನ ಕಾರ್ಯ ನಿರ್ವಹಿಸುತ್ತಿದ್ದಾರೆ.
ಆಡಳಿತ ನಿರ್ವಹಣೆಗೆ ಬೇಕು 1.44 ಕೋಟಿ ರೂ
ಸರ್ಕಾರ ಎರಡು ಕಂತುಗಳ ರೂಪದಲ್ಲಿ ಕೇವಲ 30.96 ಲಕ್ಷ ರೂ. ಬಿಡುಗಡೆ ಮಾಡಿದೆ. ಆದರೆ, ವಾರ್ಷಿಕ ವೇತನ, ಸಂಗೀತ ಗುರುಗಳಿಗೆ, ತಬಲಾ ಸಾಥಿದಾರರಿಗೆ ಗೌರವ ಧನ, ಹೊರಗುತ್ತಿಗೆ ನೌಕರರಿಗೆ ವಾರ್ಷಿಕ ವೇತನ, ಊಟೋಪಚಾರ, ಆಡಳಿತ ನಿರ್ವಹಣೆ ಗಾಗಿ 1.44 ಕೋಟಿ ರೂ. ಬೇಕಾಗುತ್ತದೆ. ಸರ್ಕಾರ ನೀಡಿದ ಬಿಡಿಗಾಸಿನಿಂದಾಗಿ ಗುರುಕುಲದಲ್ಲಿನ ಕಾರ್ಯಚಟುವಟಿಕೆಗಳು ಸ್ಥಗಿತಗೊಂಡಂತಾಗಿದೆ. ಅವಶ್ಯವಿರುವ ಅನುದಾನ ಬಿಡುಗಡೆ ಮಾಡುವಂತೆ ಧಾರವಾಡ ಜಿಲ್ಲಾಧಿಕಾರಿಗಳು ಸಾಕಷ್ಟು ಬಾರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರೂ ಅನುದಾನ ಬಿಡುಗಡೆ ಆಗಿಲ್ಲ.

ತುರ್ತು ಅನುದಾನಕ್ಕೆ ಡಿಸಿಗೆ ಮನವಿ
ತುರ್ತಾಗಿ ಒಂದು ಕೋಟಿ ರೂ. ಅನುದಾನ ನೀಡುವಂತೆ ಕೆಲದಿನಗಳ ಹಿಂದಷ್ಟೇ ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಆದರೂ ಸ್ಪಂದನ ವ್ಯಕ್ತವಾಗಿಲ್ಲ. ಹೀಗಾಗಿ, ಗುರುಕುಲವನ್ನು ಸಮರ್ಪಕವಾಗಿ ನಡೆಸಲು ಸಾಧ್ಯವಾಗದಾಗಿದೆ. ಇದರೊಟ್ಟಿಗೆ ಭಾರತದ ಭವ್ಯ ಪರಂಪರೆಯನ್ನು ಸಾರುವ ಹಿಂದುಸ್ತಾನಿ ಸಂಗೀತ ಕಾರ್ಯಾಗಾರ, ಸಾಂಸ್ಕೃತಿಕ ಕಾರ್ಯಕ್ರಮ, ಸಂಗೀತಾಭ್ಯಾಸದ ಚಟುವಟಿಕೆಗಳು ನಿಂತು ಹೋಗಿವೆ. ಕೆಲವೊಬ್ಬರು ಈ ಗುರುಕುಲ ಸ್ಥಳಾಂತರಗೊಳ್ಳಲಿದೆ ಅಂತಲೂ ವದಂತಿ ಹಬ್ಬಿಸಿದ್ದಾರೆ.
ದೇಶದ ಹೆಮ್ಮೆಯ ಡಾ. ಗಂಗೂಬಾಯಿ ಹಾನಗಲ್ ಗುರುಕುಲವನ್ನು ಸರ್ಕಾರ ಸ್ಥಗಿತಗೊಳಿಸಲು ಹೊರಟಂತಿದೆ. ನಾವು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳನ್ನು ಪರಿ ಪರಿಯಾಗಿ ವಿನಂತಿಸಿಕೊಂಡರು ಯಾವುದೇ ಪ್ರಯೋಜನ ಆಗಿಲ್ಲ.
ಇದು ಸಂಗೀತ ಕ್ಷೇತ್ರಕ್ಕೆ ಮಾಡಿದ ಅವಮಾನ ಎಂದು ಡಾ. ಗಂಗೂಬಾಯಿ ಹಾನಗಲ್ ಅವರ ಮೊಮ್ಮಗಳು ವೈಷ್ಣವಿ ಹಾನಗಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಅವರ ಪರಂಪರೆಯನ್ನು ಸಂರಕ್ಷಿಸುವ ಅಪರೂಪದ ಗುರುಕುಲ ಇದು. ಸಂಗೀತದ ಮೇಲಿನ ನಮ್ಮ ಪ್ರೀತಿ, ಬದ್ಧತೆಯಿಂದ ಕಳೆದ ಆರು ತಿಂಗಳಿಂದ ವೇತನದ ಇಲ್ಲದೇ ಸಂಗೀತ ಹೇಳಿಕೊಟ್ಟ ಗುರುಗಳಿಗೆ ದಿಕ್ಕೆ ತೋಚದಂತಾಗಿದೆ.












Click it and Unblock the Notifications