ಕರೆಂಟು ಕೈಕೊಟ್ಟಾಗ ಅಂಗಿ ಇಸ್ತ್ರಿ ಹೆಂಗೆ ಮಾಡ್ತೀರಿ?

Posted By:
Subscribe to Oneindia Kannada

ಚಿಕ್ಕಬಳ್ಳಾಪುರ, ಏಪ್ರಿಲ್ 04 : ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿಯ ಸ್ನೇಹಿತರ ಮನೆಯಲ್ಲಿ ಮಗುವಿನ ನಾಮಕರಣ ಆಯೋಜಿಸಲಾಗಿತ್ತು. ಬಂಧುಗಳೆಲ್ಲ ಚೆನ್ನಾಗಿರುವ ಬಟ್ಟೆ ತೊಟ್ಟು ಶುಭಹಾರೈಸಲು ಅಲ್ಲಿ ನೆರೆದಿದ್ದರು. ಅಂಗಿ ಹಾಕಿಕೊಂಡು ರೆಡಿಯಾಗಬೇಕಾಗಿದ್ದವರು ಇಬ್ಬರೇ ಇಬ್ಬರು. ಆ ಪುಟ್ಟ ಮಗುವಿನ ತಂದೆ ಮತ್ತು ತಾತ.

ಎಷ್ಟೊತ್ತಾದರೂ ಅವರು ಹೊರಗೆ ಬರುತ್ತಲೇ ಇಲ್ಲ. ಕಾರಣವೇನೆಂದರೆ, ಕಳೆದ ಶಿವರಾತ್ರಿಯ ಸಂದರ್ಭದಲ್ಲಿ ಹೊಲಿಸಲಾಗಿದ್ದ ಹೊಸಬಟ್ಟೆಯನ್ನು ಒಗಿದು ಹಾಕಿತ್ತು. ಈ ಬಿರುಬಿಸಿಲಿಗೆ ಒಣಗದೆ ಇರತ್ತಾ? ಚಿಂತಾಮಣಿಯ ರಣರಣ ಬಿಸಿಲಿಗೆ ಹೆದರಿ ಕ್ಷಣಾರ್ಧದಲ್ಲಿ ಒಣಗಿತ್ತು. ಮತ್ತಿನ್ನೇನು ಅನ್ನಬೇಡಿ! ಸುಕ್ಕುಸುಕ್ಕಾಗಿದ್ದ ಅಂಗಿಯನ್ನು ಇಸ್ತ್ರಿ ಮಾಡಬೇಡವೆ?

ಹೌದು ಇಸ್ತ್ರಿ ಮಾಡಬೇಕಾದದ್ದೇ. ಆದರೆ ಹೇಗೆ? ಇಸ್ತ್ರಿಯೇನೋ ಇದೆ, ಆದರೆ ಕರೆಂಟ್ ಇರಬೇಕಲ್ಲ? ಎಷ್ಟೊತ್ತಂತ ಕಾಯೋದು? ಒಂದು ಗಂಟೆ, ಎರಡು ಗಂಟೆ, ಮೂರು ಗಂಟೆ... ಭಾರತೀಯ ರೈಲ್ವೆಗಳೂ ಇಷ್ಟೂ ತಡ ಮಾಡಲ್ಲ. ಆದರೆ, ಕರೆಂಟ್ ಪತ್ತೆಯೇ ಇಲ್ಲ! Innovation is the mother of all invensions! [ಕರ್ನಾಟಕದಲ್ಲಿ ವಿದ್ಯುತ್ ದರಗಳು ಏರಿಕೆ]

How will you iron your shirt when there is no power

ಅದಕ್ಕೂ ಪರಿಹಾರವಿತ್ತು. ಆ ಮಗುವಿನ ಸೋದರತ್ತೆ ಮತ್ತು ಸ್ನೇಹಿತರು ಒಂದು ಐಡಿಯಾ ಮಾಡಿದರು. ತಡಮಾಡದೆ ಕುಕ್ಕರಲ್ಲಿ ಒಂದಿಷ್ಟು ನೀರು ಹಾಕಿ ಎರಡು ವಿಷಲ್ ಹಾಕಿಸಿಯೇಬಿಟ್ಟರು. ಬೆಡ್ಶೀಟು ಹಾಸಿ ಅದರ ಮೇಲೆ ಸುಕ್ಕಾದ ಅಂಗಿಯಿಟ್ಟು ಐರನಿಂಗ್ ಶುರು ಹಚ್ಚಿದರು ನೋಡಿ. ಕೆಲ ಹೊತ್ತಿನಲ್ಲಿ ಮಗುವಿನ ಅಪ್ಪ, ತಾತ ಅಂಗಿ ಹಾಕಿಕೊಂಡು ರೆಡಿ! ಹೆಂಗೈತೆ ಐಡಿಯಾ?

ಈ ವಿನೂತನ ಐಡಿಯಾ ಕಂಡುಹಿಡಿದವರಿಗೆ ಸನ್ಮಾನ್ಯ ಇಂಧನ ಸಚಿವರಾದ ಡಿ.ಕೆ. ಶಿವಕುಮಾರ್ ಅವರು ಎಸಿ ಅಳವಡಿಸಿಕೊಂಡ ತಮ್ಮ ಮನೆಗೆ ಕರೆಯಿಸಿಕೊಂಡು ಪ್ರಶಸ್ತಿಯನ್ನು ನೀಡಬೇಕು. ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಆ ಸಂದರ್ಭದಲ್ಲಿ ಉಪಸ್ಥಿತರಿದ್ದರೆ ಇನ್ನೂ ಉತ್ತಮ. [ಇನ್ನು ಮುಂದೆ ಕರೆಂಟ್ ಕೈಕೊಡಲ್ಲ ಎಂದ ಡಿಕೆಶಿ]

ಪಿಯುಸಿ ಪರೀಕ್ಷೆ ಇದೀಗ ತಾನೆ ಮುಗಿದಿದೆ, ಎರಡರಡು ಬಾರಿ ಸೋರಿಕೆ ಕಂಡು ವಿದ್ಯಾರ್ಥಿಗಳನ್ನು ಕಂಗಾಲು ಮಾಡಿರುವ ರಸಾಯನಶಾಸ್ತ್ರ ಒಂದೇ ಬಾಕಿಯಿರುವುದು. ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳು ಮತ್ತಾವ ಪೇಪರು ಸೋರಿಕೆಯಾಗುತ್ತೋ ಎಂಬ ಆತಂಕಗಳ ನಡುವೆಯೇ ಪರೀಕ್ಷೆ ಬರೆಯುತ್ತಿದ್ದಾರೆ.

ರಾಜ್ಯದಲ್ಲಿ ಭೀಕರ ಬರಗಾಲ, ವಿದ್ಯುತ್ ಕೊರತೆ ತಾಂಡವವಾಡುತ್ತಿದೆ. ಆದರೂ ವಿದ್ಯಾರ್ಥಿ ವಿದ್ಯಾರ್ಥಿನಿಯರನ್ನು ಗಮನದಲ್ಲಿಟ್ಟುಕೊಂಡು ವಿದ್ಯುತ್ ಕಡಿತ ಮಾಡಲ್ಲ, ಹಳ್ಳಿಗಳಲ್ಲಿ ಕನಿಷ್ಠ 6ರಿಂದ 7 ತಾಸು ಕರೆಂಟ್ ಕೊಟ್ಟೇ ಕೊಡುತ್ತೇನೆ ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್ ವಾಗ್ದಾನ ನೀಡಿದ್ದರು. ಹಳ್ಳಿಯ ಜನರೇ, ಸಚಿವರು ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರಾ?

ಹಳ್ಳಿಗಳಲ್ಲಿ ಹೋಗಿ ನೋಡಿ ಸಾವಿರಾರು ರೈತರು ಕರೆಂಟ್ ಬರತ್ತಾ ಅಂತ ಚಾತಕ ಪಕ್ಷಿಯಂತೆ ಕಾದು ಕುಳಿತಿದ್ದಾರೆ. ವಿದ್ಯಾರ್ಥಿಗಳು ಬುಡ್ಡಿ ದೀಪದ ಬೆಳಕಿನಲ್ಲೇ ಉತ್ತಮ ಮಾರ್ಕ್ಸ್ ಪಡೆಯುವ ಉಮೇದಿಯಿಂದ ಓದುತ್ತಿದ್ದಾರೆ. ಭೂಮಿಯನ್ನು ಹಸನು ಮಾಡಿಕೊಂಡು ಕುಳಿತಿರುವ ರೈತರು ಆಕಾಶದತ್ತ ನೋಡುತ್ತಿದ್ದಾರೆ. [ಸುದ್ದಿ-ಚಿತ್ರ ಕೃಪೆ]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
When there is unscheduled power cut, how are you going to iron your shirt or saree? Don't worry! People in Chintamani in Chikkaballapur district have invented an innovative idea when there is no power. Use pressure cooker and iron your apparels! How is it power minister D.K. Shivakumar?
Please Wait while comments are loading...