ರಾಜ್ಯದಿಂದ ಎಷ್ಟು ಮಂದಿಗೆ ಸಿಗಬಹುದು ಮೋದಿ ಸಂಪುಟದಲ್ಲಿ ಸ್ಥಾನ? ಇಲ್ಲಿದೆ ಮಾಹಿತಿ
ಬೆಂಗಳೂರು, ಜೂನ್ 5: ದೇಶದಲ್ಲಿ ಮತ್ತೆ ಎನ್ ಡಿ ಎ ಮೈತ್ರಿ ಕೂಟ ಬಹುಮತ ಪಡೆದಿದ್ದು, ಮೂರನೇ ಬಾರಿಗೆ ನರೇಂದ್ರ ಮೋದಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲು ದಿನಗಣನೆ ಆರಂಭವಾಗಿದೆ. ಇದೇ ವೇಳೆ ನರೇಂದ್ರ ಮೋದಿ ಸಂಪುಟದಲ್ಲಿ ಕರ್ನಾಟಕದಿಂದ ಯಾರಿಗೆಲ್ಲ ಅವಕಾಶ ಸಿಗಬಹುದು ಎಂಬ ಚರ್ಚೆಯೂ ಜೋರಾಗಿದೆ.
ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಫೈಕಿ ಬಿಜೆಪಿ ಮೈತ್ರಿ 19 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು, ರಾಜ್ಯದಿಂದ ಪರಿಗಣಿಸಬಹುದಾದ ಕೆಲವು ಸಂಸದರಲ್ಲಿ ಜೆಡಿಎಸ್ ನಾಯಕ ಹೆಚ್‌ಡಿ ಕುಮಾರಸ್ವಾಮಿ ಕೂಡ ಒಬ್ಬರಾಗಿರಬಹುದು ಎನ್ನಲಾಗುತ್ತಿದೆ.

ಈ ಬಾರಿ ಏಕಾಂಗಿಯಾಗಿ ಬಿಜೆಪಿ ಮ್ಯಾಜಿಕ್ ನಂಬರ್ ಅನ್ನು ಕ್ರಾಸ್ ಮಾಡಿಲ್ಲ.ಹೀಗಾಗಿ ಮಿತ್ರ ಪಕ್ಷಗಳನ್ನ ಮೋದಿ ಅವಲಂಭಿಸಿದ್ದಾರೆ. ಇತ್ತ ರ್ನಾಟಕಕ್ಕೆ ಅಂದುಕೊಂಡದ್ದಕ್ಕಿಂತ ಕಡಿಮೆ ಸಚಿವ ಸ್ಥಾನಗಳು ಸಿಗಲಿವೆ. ಕಳೆದ ಬಾರಿ ನಾಲ್ಕು ಜನ ಸಂಸದರಿಗೆ ಮೋದಿ ಸಂಪುಟದಲ್ಲಿ ಸ್ಥಾನ ಸಿಕ್ಕಿತ್ತು. ಕರ್ನಾಟಕದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡು 17 + 2 ಒಟ್ಟು 19 ಸ್ಥಾನಗಳನ್ನು ಗೆದ್ದುಕೊಂಡಿವೆ. ಅದರಲ್ಲೂ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ನಾಯಕರಾಗಿರುವ ಎಚ್‌ಡಿ ಕುಮಾರಸ್ವಾಮಿಅವರಿಗೆ ಸಚಿವ ಸ್ಥಾನ ಬಹುತೇಕ ಫಿಕ್ಸ್ ಎನ್ನಲಾಗಿದೆ.
ಇನ್ನೂ ಸಂಸದೀಯ ಸಚಿವರಾಗಿರುವ ಕಾರಣ ಹಾಲಿ ಸಚಿವ ಪ್ರಹ್ಲಾದ್ ಜೋಶಿಯೇ ಕ್ಯಾಬಿನೆಟ್‌ನಲ್ಲಿ ಮುಂದುವರಿಯುವ ಸಾಧ್ಯತೆ ಹೆಚ್ಚಾಗಿದೆ. ಇನ್ನೂ ಕರ್ನಾಟಕದಲ್ಲಿ ಲಿಂಗಾಯತರಿಗೊಂದು, ಹಿಂದುಳಿದ ವರ್ಗಗಳಿಗೊಂದು ರಾಜ್ಯ ಸಚಿವ ಸ್ಥಾನವನ್ನು ನೀಡಬಹುದು ಎನ್ನಲಾಗಿದೆ. ಬಾಗಲಕೋಟೆ ಸಂಸದ ಪಿಸಿ ಗದ್ದಿಗೌಡರ್ ಐದನೇ ಬಾರಿ ಸಂಸದರಾಗಿ ಆಯ್ಕೆ ಆಗಿರುವುದರಿಂದ ಲಿಂಗಾಯತ ಕೋಟಾದಲ್ಲಿ ಅವರಿಗೆ ಸಚಿವ ಸ್ಥಾನ ಸಿಗಬಹುದು.
ಇತ್ತ ಮಾಜಿ ಮುಖ್ಯಮಂತ್ರಿ ಹಾಗೂ ಪ್ರಭಾವಿ ಲಿಂಗಾಯತ ನಾಯಕರಾದ ಬಿ ಎಸ್ ಯಡಿಯೂರಪ್ಪ ಅವರ ಪುತ್ರ ಶಿವಮೊಗ್ಗ ಸಂಸದ ಬಿವೈ ರಾಘವೇಂದ್ರ ಕೂಡ ಸಚಿವ ಸ್ಥಾನದ ರೇಸ್‌ನಲ್ಲಿದ್ದಾರೆ. ಆದರೆ, ಅವರ ತಂದೆ ಬಿಎಸ್ ಯಡಿಯೂರಪ್ಪ ಬಿಜೆಪಿ ಸಂಸದೀಯ ಮಂಡಳಿ ಸದಸ್ಯರಾಗಿರುವುದರಿಂದ ರಾಘವೇಂದ್ರಗೆ ಸಚಿವ ಸ್ಥಾನ ತಪ್ಪುವ ಸಾಧ್ಯತೆ ಇದೆ. ಶೋಭಾ ಕರಂದ್ಲಾಜೆ ಅವರ ಹೆಸರು ಸಹ ಕೇಳಿ ಬರುತ್ತಿದ್ದು, ಕೋಟ ಶ್ರೀನಿವಾಸ್ ಪೂಜಾರಿ ಹಾಗೂ ಗೋವಿಂದ ಕಾರಜೋಳ ಅವರು ಮೊದಲ ಬಾರಿ ಸಂಸದರಾಗಿದ್ದರೂ ಕೂಡ ಅವರಿಗೆ ರಾಜ್ಯ ರಾಜಕೀಯದಲ್ಲಿ ಅಪಾರ ಅನುಭವ ಇರುವುದರಿಂದ ಇಬ್ಬರಲ್ಲಿ ಒಬ್ಬರಿಗೆ ಸಚಿವ ಸ್ಥಾನ ಸಿಗಬಹುದು ಎನ್ನಲಾಗಿದೆ.
ಮೋದಿ ಕ್ಯಾಬಿನೆಟ್ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಗೆಲುವು ಸಾಧಿಸಿರುವ ಡಾ. ಸಿ ಎನ್ ಮಂಜುನಾಥ್ ಅವರ ಹೆಸರು ಸಹ ಕೇಳಿ ಬರುತ್ತಿದ್ದು, ಕುಮಾರಸ್ವಾಮಿ ಅವರಿಗೆ ಈ ಬಾರಿ ಅವಕಾಶವನ್ನ ನೀಡಿದ್ರೆ ಕೆಲವು ದಿನ ಕಾಲ ಮಂಜುನಾಥ್ ಅವರು ಕಾಯಬೇಕಾಗಿದೆ ಎನ್ನಲಾಗಿದೆ.
2014 ಮತ್ತು 2019ರಲ್ಲಿ ತಲಾ ಎರಡೆರಡು ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನವನ್ನು ಕರ್ನಾಟಕಕ್ಕೆ ನೀಡಲಾಗಿತ್ತು. ಅದೇ ಫಾರ್ಮುಲಾವನ್ನು ಈ ಬಾರಿಯೂ ಮುಂದುವರಿಸುವ ಸಾಧ್ಯತೆ ಇದೆ. ಒಂದು ಅಥವಾ ಎರಡು ರಾಜ್ಯ ಸಚಿವ ಸ್ಥಾನ ನೀಡಬಹುದು. ಮುಂದಿನ ದಿನಗಳಲ್ಲಿ ಮಹಾರಾಷ್ಟ್ರ ಹಾಗೂ ದಿಲ್ಲಿ ವಿಧಾನಸಭಾ ಚುನಾವಣೆ ಇರುವುದರಿಂದ ಅಲ್ಲಿಗೆ ಹೆಚ್ಚಿನ ಸಚಿವ ಸ್ಥಾನಗಳನ್ನು ನೀಡುವ ನಿರೀಕ್ಷೆ ಇದೆ.












Click it and Unblock the Notifications