ಕಾಂಗ್ರೆಸ್ ಲಿಂಗಾಯತ ವಿರೋಧಿ ಹೇಗೆ?; ಬಿಜೆಪಿ ವಿವರಣೆ
ಬೆಂಗಳೂರು, ಏಪ್ರಿಲ್ 22; ಈ ಬಾರಿಯ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಲಿಂಗಾಯತರ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ಬಿಜೆಪಿ ಲಿಂಗಾಯತ ನಾಯಕರನ್ನು ಕಡೆಗಣಿಸುತ್ತಿದೆ ಎಂಬದು ಕಾಂಗ್ರೆಸ್ ಆರೋಪ. ಇದಕ್ಕೆ ಪ್ರತಿಯಾಗಿ ಬಿಜೆಪಿ ನಾಯಕರು ಸಹ ಪ್ರತಿಪಕ್ಷ ಕಾಂಗ್ರೆಸ್‌ಗೆ ತಿರುಗೇಟು ನೀಡುತ್ತಿದೆ. ಚುನಾವಣಾ ಪ್ರಚಾರದ ಕಾವು ಏರಿರುವಾಗ ಈ ಟೀಕೆಗಳಿಗೆ ತಡೆ ಬೀಳುವ ಸಾಧ್ಯತೆಗಳು ಕಡಿಮೆ ಇದೆ.
ಶನಿವಾರ ಕರ್ನಾಟಕ ಬಿಜೆಪಿ ಸರಣಿ ಟ್ವೀಟ್ ಮಾಡಿದೆ. ಪಕ್ಷ ಪ್ರಮುಖವಾಗಿ #LingayatVirodhiCongress #AntiLingayatCongress #ReverseGearCongress #CriminalCongress ಎಂಬ ಹ್ಯಾಷ್‌ಟ್ಯಾಗ್ ಬಳಕೆ ಮಾಡಿಕೊಂಡು ಟ್ವೀಟ್ ಮಾಡಿ ಪ್ರತಿಪಕ್ಷ ಹೇಗೆ ಲಿಂಗಾಯತ ವಿರೋಧಿ ಎಂದು ಹೇಳಿದೆ.

'ಕಾಂಗ್ರೆಸಿನ ವೀರಶೈವ ಲಿಂಗಾಯತ ವಿರೋಧಿ ನಡೆಗಳು ಜನತೆಗೆ ಗೊತ್ತಿಲ್ಲದೆ ಏನಿಲ್ಲ. ದಶಕಗಳಿಂದಲೂ ಕಾಂಗ್ರೆಸ್ ವೀರಶೈವ ಲಿಂಗಾಯತ ಸಮುದಾಯವನ್ನು ತನ್ನ ವೋಟ್ ಬ್ಯಾಂಕ್ ಎಂದು ಬಳಸಿ ಬಿಸಾಡುತ್ತಾ ಬಂದಿದೆ. ಅದಕ್ಕೆ ಹಲವಾರು ಉದಾಹರಣೆಗಳು ನಮ್ಮ ಕಣ್ಣಮುಂದಿವೆ' ಎಂದು ಟ್ವೀಟ್ ಮಾಡಿದೆ.
'ನಾಡು ಕಂಡ ಸಜ್ಜನ ರಾಜಕಾರಣಿ, ವೀರಶೈವ ಲಿಂಗಾಯತ ಸಮುದಾಯದ ವೀರೇಂದ್ರ ಪಾಟೀಲ್ ಅವರನ್ನು ಮಾನವೀಯತೆಯ ನೆಲಗಟ್ಟನ್ನು ಮೀರಿ, ಅಂದಿನ ಕಾಂಗ್ರೆಸ್ ಪ್ರಧಾನಿ ರಾಜೀವ್ ಗಾಂಧಿ ವಿಮಾನ ನಿಲ್ದಾಣದಿಂದಲೇ ವೀರೇಂದ್ರ ಪಾಟೀಲ್ ಅವರನ್ನು ಮುಖ್ಯಮಂತ್ರಿಗಾದಿಯಿಂದ ಕಿತ್ತು ಹಾಕಿದರು. ಇದು ಕರ್ನಾಟಕದ ವೀರಶೈವ ಲಿಂಗಾಯತ ಸಮುದಾಯಕ್ಕೆ ಕಾಂಗ್ರೆಸ್ ಮಾಡಿದಂತಹ ಘನ ಘೋರ ಅಪಮಾನ' ಎಂದು ತಿಳಿಸಿದೆ.

'1991ರಲ್ಲಿ ವೀರೇಂದ್ರ ಪಾಟೀಲ್ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ ನಂತರ, ಕಾಂಗ್ರೆಸ್ ಇಲ್ಲಿಯವರೆಗೂ ಯಾವೊಬ್ಬ ವೀರಶೈವ ಲಿಂಗಾಯತ ಸಮುದಾಯದವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಿಲ್ಲ. 2008ರಲ್ಲಿ ರೈತನಾಯಕ ಶ್ರೀ ಬಿ. ಎಸ್. ಯಡಿಯೂರಪ್ಪನವರಿಗೆ ಜನತಾ ಜನಾರ್ದನನ ಆಶೀರ್ವಾದ ಸಿಕ್ಕಿದಾಗ, ವೀರಶೈವ ಲಿಂಗಾಯತ ವ್ಯಕ್ತಿಯ ಕೈಗೆ ಅಧಿಕಾರ ಬಂತಲ್ಲ ಎಂಬ ಅಸೂಯೆಯಿಂದ, ಇದೇ ಕಾಂಗ್ರೆಸ್ ಪಕ್ಷದ ನಾಯಕರು ಅಂದಿನ ಕರ್ನಾಟಕದ ರಾಜ್ಯಪಾಲರಾಗಿದ್ದಂತ ಹಂಸರಾಜ್ ಭಾರದ್ವಾಜ್ ಅವರ ಕಚೇರಿಯನ್ನು ದುರುಪಯೋಗಪಡಿಸಿಕೊಂಡು, ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವಂತೆ ಮಾಡಿದ್ದು ಇಡೀ ಸಮುದಾಯಕ್ಕೆ ಮಾಡಿದ ಅವಮಾನ' ಎಂದು ವಿವರಣೆ ನೀಡಿದೆ.
'ಮುಂದೆ 2017ರ ಹೊತ್ತಿಗೆ ವೀರಶೈವ ಲಿಂಗಾಯತ ಸಮುದಾಯವನ್ನೇ ಒಡೆಯಲು ಯತ್ನಿಸಿ, ಕೈ ಸುಟ್ಟುಕೊಂಡಿದ್ದು ಇದೇ ಕಾಂಗ್ರೆಸ್ ಪಕ್ಷ. 2018ರ ಚುನಾವಣಾ ಫಲಿತಾಂಶ ಮತ್ತೊಮ್ಮೆ ಭಾರತೀಯ ಜನತಾ ಪಕ್ಷದ ಪರವಾಗಿ ಬಂದಾಗ, ಎಲ್ಲಿ ಮತ್ತೊಮ್ಮೆ ಶ್ರೀ ಯಡಿಯೂರಪ್ಪನವರು ಮುಖ್ಯಮಂತ್ರಿ ಆಗಿಬಿಡುತ್ತಾರೋ ಎನ್ನುವ ದುರಾಲೋಚನೆಯಿಂದ, ಜನತಾದಳದೊಂದಿಗೆ ಅಪವಿತ್ರ ಮೈತ್ರಿ ಮಾಡಿಕೊಂಡು, ಯಡಿಯೂರಪ್ಪನವರು ಮುಖ್ಯಮಂತ್ರಿ ಆಗದಂತೆ ನೋಡಿಕೊಂಡಿದ್ದು ಇದೇ ಕಾಂಗ್ರೆಸ್ ಪಕ್ಷ. ಇದು ವೀರಶೈವ ಲಿಂಗಾಯತ ಸಮುದಾಯಕ್ಕೆ ಮಾಡಿದ ಅವಮಾನವೇ' ಎಂದು ಬಿಜೆಪಿ ಹೇಳಿದೆ.
'ಇಷ್ಟೆಲ್ಲಾ ಆದ ನಂತರ ಸಿದ್ದರಾಮಯ್ಯನವರು ತಮ್ಮ ಎಲುಬಿಲ್ಲದ ನಾಲಿಗೆಯನ್ನು ಉದ್ದ ಚಾಚಿ, ವೀರಶೈವ ಲಿಂಗಾಯತ ಸಮಾಜದವರೆಲ್ಲರೂ ರಾಜ್ಯ ಹಾಳುಗೆಡುವವರು ಎನ್ನುವ ಮೂಲಕ ಜಗದ್ಗುರು ಬಸವಣ್ಣನವರ ಅನುಯಾಯಿಗಳಾದ ಸಮಸ್ತರನ್ನು ಅವಮಾನಿಸಿದ್ದಾರೆ. ಇದು ಏಳು ಕೋಟಿ ಕನ್ನಡಿಗರಿಗೂ ಆದ ಅವಮಾನ. ಸಮುದಾಯಗಳನ್ನು ಹೀಗೆ ಗುರಿಯಾಗಿರಿಸಿಕೊಂಡು ಅವಮಾನ ಮಾಡುವುದು ಕಾಂಗ್ರೆಸ್ಸಿಗೆ ಹೊಸತೇನಲ್ಲ. ಆದರೆ ಕಾಲ ಬದಲಾಗಿದ್ದು, ಜನ ಇಂಥ ನೀಚ ರಾಜಕೀಯ ಮಾಡುವ ಕಾಂಗ್ರೆಸ್ಸಿಗೆ ಮತ್ತೊಮ್ಮೆ ತಕ್ಕ ಬುದ್ಧಿ ಕಲಿಸಿ ಮನೆಗೆ ಕಳಿಸಲಿದ್ದಾರೆ ಎನ್ನುವುದು ಸತ್ಯ' ಎಂದು ಬಿಜೆಪಿ ಎಚ್ಚರಿಕೆ ನೀಡಿದೆ.
ಸಿದ್ದರಾಮಯ್ಯ ಪ್ರತಿಕ್ರಿಯೆ; ಲಿಂಗಾಯತ ಸಮುದಾಯದ ಬಗ್ಗೆ ನೀಡಿರುವ ಹೇಳಿಕೆಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಶನಿವಾರ ಮೈಸೂರಿನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. "ಬಸವರಾಜ ಬೊಮ್ಮಾಯಿಗೆ ಮಾತ್ರ ಭ್ರಷ್ಟ ಮುಖ್ಯಮಂತ್ರಿ ಎಂದು ಹೇಳಿದ್ದೇನೆ. ನನ್ನ ಹೇಳಿಕೆಯನ್ನು ಬಿಜೆಪಿ ಸಾಮಾಜಿಕ ಜಾಲತಾಣ ವಿಭಾಗ ತಿರುಚುತ್ತಿದೆ. ಚುನಾವಣೆಯ ಹಿನ್ನೆಲೆ ಹೇಳಿಕೆ ತಿರುಚಿ ಲಾಭ ಪಡೆಯಲು ಪ್ರಯತ್ನಿಸುತ್ತಿದೆ. ಲಿಂಗಾಯತರ ಮೇಲೆ ವಿಶ್ವಾಸ ಇಲ್ಲದಿದ್ದರೆ ಏಕೆ ಇಷ್ಟು ಕ್ಷೇತ್ರದಲ್ಲಿ ಟಿಕೆಟ್ ನೀಡುತ್ತಿದ್ದೆವು?" ಎಂದು ಅವರು ಪ್ರಶ್ನಿಸಿದರು.












Click it and Unblock the Notifications