ಕಟುಕರ ಪಾಲಾಗುವ ಗೋವುಗಳಿಗೆ ರಕ್ಷೆ, ಆ 11ರಿಂದ ಅಭಯ ಜಾತ್ರೆ

Written By:
Subscribe to Oneindia Kannada

ಬೆಂಗಳೂರು, ಆ 9: ಭಾರತೀಯ ಗೋಸಂಪತ್ತನ್ನು ಸಂರಕ್ಷಿಸುವ ಉದ್ದೇಶದ 'ಅಭಯ ಜಾತ್ರೆ' ಇದೇ ತಿಂಗಳ 11ರಿಂದ 13ರವರೆಗೆ ಚಾಮರಾಜನಗರ ಜಿಲ್ಲೆ ಹನೂರಿನ ಕೆಂಪಯ್ಯನಹಟ್ಟಿಯಲ್ಲಿ ನಡೆಯಲಿದೆ.

ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳ ವಿಶಿಷ್ಟ ಪರಿಕಲ್ಪನೆ ಇದಾಗಿದ್ದು, ದೇಶೀ ಗೋಸಂರಕ್ಷಣೆಯ ಉದ್ದೇಶದಿಂದ ಜಾನುವಾರು ಜಾತ್ರೆಯೊಂದನ್ನು ಹಮ್ಮಿಕೊಳ್ಲಲಾಗುತ್ತಿದ್ದು, ಸುಮಾರು ಎರಡು ಸಾವಿರಕ್ಕೂ ಹೆಚ್ಚು ಜಾನುವಾರುಗಳ ವಹಿವಾಟು ಈ ಜಾತ್ರೆಯಲ್ಲಿ ನಡೆಯುವ ನಿರೀಕ್ಷೆ ಇದೆ.

ಮಲೆಮಹದೇಶ್ವರ ಬೆಟ್ಟಕ್ಕೆ ಸರ್ಕಾರ ಬೇಲಿ ಹಾಕಿದ ಪರಿಣಾಮ ಜಾನುವಾರುಗಳಿಗೆ ಮೇವು ಇಲ್ಲವಾಗಿದ್ದು, ಬೆಟ್ಟದ ತಪ್ಪಲಿನ ಸಾವಿರಾರು ಗೋಪಾಲಕರು ಕಂಗಾಲಾಗಿದ್ದಾರೆ.

 Hosanagara Ramachandrapura Math organizing Abhaya Jatre from Aug 11 to Aug 13

ಜಾನುವಾರುಗಳಿಗೆ ಪರ್ಯಾಯ ಮೇವಿನ ವ್ಯವಸ್ಥೆ ಇಲ್ಲದೇ ಗೋಸಾಕಾಣಿಕೆಯೇ ರೈತರಿಗೆ ಕಷ್ಟಕರವಾಗಿದ್ದು, ಈ ಅಸಹಾಯಕ ಪರಿಸ್ಥಿತಿಯ ಲಾಭ ಪಡೆಯಲು ಕಸಾಯಿಖಾನೆಯವರು ಹೊಂಚು ಹಾಕಿ ಸಮಯ ಕಾಯುತ್ತಿರುವ ಹಿನ್ನೆಲೆಯಲ್ಲಿ ಅಮೂಲ್ಯ ಗೋಸಂಪತ್ತು ರಕ್ಷಣೆಗೆ ಈ ಜಾತ್ರೆಯನ್ನು ಮಠ ಆಯೋಜಿಸುತ್ತಿದೆ.

ತಮಿಳುನಾಡಿನ ಗಡಿಭಾಗದ ಈರೋಡ್ ಜಿಲ್ಲೆ ಅಂದಿಯೂರಿನಲ್ಲಿ ನಡೆಯುವ ವಾರ್ಷಿಕ ಜಾನುವಾರು ಜಾತ್ರೆಯಲ್ಲಿ ಸಾವಿರಾರು ಗೋವುಗಳು ಕಟುಕರ ಪಾಲಾಗುತ್ತಿವೆ. ಇದನ್ನು ತಪ್ಪಿಸುವ ಸಲುವಾಗಿ ರಾಮಚಂದ್ರಾಪುರ ಮಠ ಹಾಗೂ ಮಲೆಮಹದೇಶ್ವರ ಗೋಪರಿವಾರದ ಸಂಯುಕ್ತ ಆಶ್ರಯದಲ್ಲಿ ಈ ಜಾತ್ರೆ ಆಯೋಜಿಸಲಾಗಿದೆ.

ಈ ಭಾಗದಲ್ಲಿ ಅಪರೂಪದ ಬರಗೂರು, ಹಳ್ಳಿಕಾರ್ ಹಾಗೂ ಆಲಂಬಾಡಿ ಗೋ ತಳಿಗಳು ಕಟುಕರ ಪಾಲಾಗದೇ ರೈತರಿಂದ ರೈತರ ಮನೆಗೇ ತಲುಪಬೇಕು ಎಂಬ ಉದ್ದೇಶದಿಂದ ಈ ಅಭಯ ಜಾತ್ರೆ ಹಮ್ಮಿಕೊಳ್ಳಲಾಗಿದೆಯೆಂದು ಮಠದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕೆಂಪಯ್ಯನಹಟ್ಟಿ ಗವ್ಯ ಉದ್ಯಮ ಆವರಣದಲ್ಲಿ ನಡೆಯುವ ಜಾತ್ರೆಯಲ್ಲಿ ಭಾರತೀಯ ಗೋ ತಳಿಯ ಗೋವುಗಳಿಗೆ ಮಾತ್ರ ಅವಕಾಶವಿದೆ. ಖರೀದಿಸಿದ ಗೋವುಗಳನ್ನು ರೈತರಲ್ಲದೇ ಬೇರಾರಿಗೂ ಮಾರಾಟ ಮಾಡುವಂತಿಲ್ಲ.

ಗೋವು ಖರೀದಿಸಿ ಸಾಕಲು ಸಾಧ್ಯವಿಲ್ಲದ ಪರಿಸ್ಥಿತಿಯಲ್ಲಿ ಪುನಃ ಶ್ರೀಮಠದ ಗೋಬ್ಯಾಂಕಿಗೇ ಅದನ್ನು ನೀಡಬೇಕು ಹಾಗೂ ಕೃತಕ ಗರ್ಭಧಾರಣೆ ಮಾಡಿಸುವಂತಿಲ್ಲ ಎಂಬ ಷರತ್ತುಗಳೊಂದಿಗೆ ಇಲ್ಲಿ ಜಾನುವಾರು ವಹಿವಾಟು ನಡೆಯುತ್ತದೆ.

ಜಾತ್ರೆಯಲ್ಲಿ ಭಾಗವಹಿಸಿ ಗೋವುಗಳನ್ನು ಖರೀದಿಸುವವರು ಕೃಷಿಕ ಅಥವಾ ಗೋಶಾಲೆಗೆ ಸಂಬಂಧಿಸಿದ ವ್ಯಕ್ತಿ ಎಂಬ ದಾಖಲೆಯನ್ನು ಹೊಂದಿರಬೇಕು. ವಿವರಗಳಿಗೆ ಮೊಬೈಲ್: 9663660535 ಸಂಪರ್ಕಿಸಬಹುದಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Hosanagara Ramachandrapura Math organizing Abhaya Jatre from Aug 11 to Aug 13 in Hanuru in Chamarajanagara district, Karnataka.
Please Wait while comments are loading...