ಆನ್‌ಲೈನ್ ಜೂಜು ನಿಷೇಧ ತಿದ್ದುಪಡಿ ಮಸೂದೆ ಮಂಡನೆ ಮಾಡಿದ ಹೋಮ್ ಮಿನಿಸ್ಟರ್
ಬೆಂಗಳೂರು, ಸೆ. 17: ಹಣವನ್ನು ಪಣವಾಗಿ ಕಟ್ಟುವ ಆನ್‌ಲೈನ್ ಗೇಮ್ ಸೇರಿದಂತೆ ಎಲ್ಲಾ ಜೂಜಾಟವನ್ನು ಜಾಮೀನು ರಹಿತ ಅಪರಾಧ ಎಂದು ಪರಿಗಣಿಸುವ ಕರ್ನಾಟಕದ ಪೊಲೀಸ್ ಕಾಯ್ದೆಯ ತಿದ್ದುಪಡಿ ವಿಧೇಯಕವನ್ನು ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಶುಕ್ರವಾರ ವಿಧಾನಸಭೆಯಲ್ಲಿ ಮಂಡನೆ ಮಾಡಿದರು.
ಆನ್‌ಲೈನ್ ಸೇರಿದಂತೆ ಎಲ್ಲಾ ರೀತಿಯ ಜೂಜಾಟವನ್ನು ನಿಷೇಧ ಮಾಡುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿರುವ ರಾಜ್ಯ ಸರ್ಕಾರ, ಜೂಜಾಟದಲ್ಲಿ ಭಾಗಿಯಾದವರಿಗೆ ವಿಧಿಸುವ ಶಿಕ್ಷೆ ಹಾಗೂ ದಂಡದ ಪ್ರಮಾಣ ಹಲವು ಪಟ್ಟು ಹೆಚ್ಚಳ ಮಾಡುವ ಪ್ರಸ್ತಾಪ ಹೊಂದಿದೆ.
ಆನ್‌ಲೈನ್ ಜೂಜಾಟ ನಿಷೇಧ ಮಾಡುವ ಸಂಬಂಧ "ಕರ್ನಾಟಕ ಪೊಲೀಸ್ ಕಾಯ್ದೆ-1963 ಕ್ಕೆ ತಿದ್ದುಪಡಿ ತರಲಾಗುತ್ತಿದೆ. ತಿದ್ದುಪಡಿ ಮಸೂದೆಗೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿತ್ತು. ಇದೀಗ ವಿಧಾನಸಭೆಯಲ್ಲಿ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಮಂಡನೆ ಮಾಡಿದ್ದಾರೆ. ಈ ತಿದ್ದಪಡಿ ಮಸೂದೆ ಎರಡೂ ಸದನದಲ್ಲಿ ಅಂಗೀಕಾರವಾದ ಬಳಿಕ ರಾಜ್ಯಪಾಲರ ಅನುಮೋದನೆಯೊಂದಿಗೆ ರಾಜ್ಯದಲ್ಲಿ ಅನುಷ್ಠಾನಕ್ಕೆ ಬರಲಿದೆ.

ಹಣವನ್ನು ಪಣವಾಗಿಟ್ಟುಕೊಂಡು ಆನ್‌ಲೈನ್‌ನಲ್ಲಿ ಆಡುವ ಗೇಮ್ ಗಳನ್ನು ನಿಷೇಧಿತ ಜೂಜು ಚಟುವಟಿಕೆ ವ್ಯಾಪ್ತಿಯಲ್ಲಿ ಸೇರಿಸಲಾಗಿದ್ದು, ಸ್ಕಿಲ್ ಗೇಮ್ ಹೆಸರಿನಲ್ಲಿ ಜೂಜಾಡುವುದನ್ನು ಸಹ ಗಂಭೀರ ಅಪರಾಧ ಎಂದು ಪರಿಗಣಿಸಲಾಗಿದೆ. ಕಂಪ್ಯೂಟರ್, ಮೊಬೈಲ್ ಸೇರಿದಂತೆ ಯಾವುದೇ ಸಾಧನವನ್ನು ಬಳಸಿಕೊಂಡು ಆನ್‌ಲೈನ್ ಮೂಲಕ ಜೂಜು ಆಡುವುದು ಅಪರಾಧ. ಇದರ ಜತೆಗೆ ಮನರಂಜನಾ ಕ್ಲಬ್‌ಗಳು , ಗೇಮ್ ಹೌಸ್‌ಗಳು ಈ ಚಟುವಟಿಕೆ ನಡೆಸುವುದನ್ನು ಅಪರಾಧ ಎಂದು ಪರಿಗಣಿಸಲಾಗಿದೆ. ಈ ಮೂಲಕ ರಾಜ್ಯದಲ್ಲಿ ಜೂಜು ಕೇಂದ್ರಗಳನ್ನು ನಿಯಂತ್ರಣ ಮಾಡಲು ಸರ್ಕಾರ ಮುಂದಾಗಿದೆ.
ಗೇಮಿಂಗ್‌ಗೆ ನಗದು ಹಣ ಹೂಡಿಕೆ ಆನ್‌ಲೈನ್ ಮೂಲಕ ಹಣ ವರ್ಗಾವಣೆ, ಹಣ ಪಾವತಿ ಮಾಡದ ಟೋಕನ್ ಪಡೆದು ಜೂಜು ಆಡುವುದು, ಡಿಜಿಟಲ್ ಕರೆನ್ಸಿ ಬಳಸಿಕೊಂಡು ಜೂಜಾಟ ಆಡುವುದು ಕೂಡ ನಿಷೇಧಿತ ಜೂಜು ಪರಿವ್ಯಾಪ್ತಿಗೆ ಸೇರಿಸಲಾಗಿದೆ. ಇದರ ಜತೆಗೆ ಯಾವುದೇ ರೀತಿಯ ಜೂಜು ಕೇಂದ್ರ ತೆಗೆಯುವುದು ಜೂಜು ಕೇಂದ್ರಕ್ಕೆ ಹೂಡಿಕೆ ಮಾಡುವುದು, ಜೂಜು ಕೇಂದ್ರಕ್ಕೆ ಸಹಾಯ ಮಾಡುವುದು, ಸಾರ್ವಜನಿಕ ಸ್ಥಳದಲ್ಲಿ ಜೂಜು ಆಡುವುದು, ಜೂಜಾಟದಲ್ಲಿ ಭಾಗಿಯಾಗಿ ಗಡಿಪಾರು ಆದ ವ್ಯಕ್ತಿ ಪುನಃ ಜೂಜು ಕೃತ್ಯದಲ್ಲಿ ಭಾಗಿಯಾಗುವುದು ಗಂಭೀರ ಅಪರಾಧದ ವ್ಯಾಪ್ತಿಗೆ ತರಲಾಗಿದೆ. ಈ ಮೂಲಕ ವಿವಿಧ ಅಪರಾಧಗಳಿಗೆ ದಂಡದ ಪ್ರಾಮಾಣ ಹೆಚ್ಚಿಸುವ ಜತೆಗೆ ಶಿಕ್ಷಾ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ.
ಯಾವ ಅಪರಾಧಗಳಿಗೆ ಯಾವ ಶಿಕ್ಷೆ: ಜೂಜು ಕೇಂದ್ರಕ್ಕೆ ಕಟ್ಟಡ ಬಾಡಿಗೆ ನೀಡುವುದು, ಜೂಜು ಕೇಂದ್ರದ ಮೇಲ್ವಿಚಾರಣೆ, ಜೂಜಾಟಕ್ಕೆ ಸಾಲ ನೀಡುವುದು ಹಾಗೂ ಜೂಜು ಕೇಂದ್ರ ತೆರೆಯುವರಿಗೆ ಮೂರು ವರ್ಷದ ವರೆಗೆ ಶಿಕ್ಷೆ ಮತ್ತು ಒಂದು ಲಕ್ಷ ರೂ. ದಂಡ ನಿಗದಿ ಮಾಡಲಾಗಿದೆ. ಯಾವುದೇ ರೀತಿಯ ಜೂಜಾಟದಲ್ಲಿ ತೊಡಗಿರುವ ವ್ಯಕ್ತಿಗೆ ಆರು ತಿಂಗಳ ಜೈಲು ಶಿಕ್ಷೆ ಮತ್ತು ಹತ್ತು ಸಾವಿರ ರೂ. ದಂಡ ವಿಧಿಸಲಾಗುತ್ತದೆ.

ಸಾರ್ವಜನಿಕ ಸ್ಥಳದಲ್ಲಿ ಜೂಜು ಆಡುವರಿಗೆ ಒಂದು ವರ್ಷ ಜೈಲು ಶಿಕ್ಷೆ ಮತ್ತು 20 ಸಾವಿರ ರೂ. ದಂಡ ವಿಧಿಸಲಾಗುತ್ತದೆ. ಜೂಜಾಡುವರಿಗೆ ಸಾಲ ನೀಡಿ ನೆರವು ನೀಡುವರಿಗೆ ಮೊದಲ ಅಪರಾಧಕ್ಕೆ ಆರು ತಿಂಗಳ ಜೈಲು ಹಾಗೂ ಹತ್ತು ಸಾವಿರ ದಂಡ ವಿಧಿಸುವ ಪಸ್ತಾಪ ವಿಧೇಯಕ ಹೊಂದಿದೆ. ಅದೇ ರೀತಿ ಎರಡನೇ ಅಪರಾಧಕ್ಕೆ ಒಂದು ವರ್ಷ ಜೈಲು ಶಿಕ್ಷೆ ಹಾಗೂ 15 ಸಾವಿರ ದಂಡ, ಮೂರನೇ ಅಪರಾಧಕ್ಕೆ ಒಂದೂವರೆ ವರ್ಷ ಜೈಲು ಶಿಕ್ಷೆ ಹಾಗೂ 20 ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತದೆ. ಜೂಜಾಟದ ಉದ್ದೇಶಕ್ಕಾಗಿ ಸಾರ್ವಜನಿಕ ಸ್ಥಳದಲ್ಲಿ ಸೇರಿರುವ ಅಪರಾಧಕ್ಕೆ ಆರು ತಿಂಗಳ ಶಿಕ್ಷೆ ವಿಧಿಸುವ ಪ್ರಸ್ತಾಪ ಹೊಂದಲಾಗಿದೆ.

Recommended Video
ಆನ್‌ಲೈನ್ ಗೇಮ್ ನಿಷೇಧ ಮಾಡುವಂತೆ ಹೈಕೋರ್ಟ್ ತಾಕೀತು: ಇತ್ತೀಚೆಗೆ ತಮಿಳುನಾಡಿನಲ್ಲಿ ಆನ್‌ಲೈನ್ ಗೇಮ್ ನ್ನು ನಿಷೇಧ ಮಾಡಿ ಮಹತ್ವದ ತೀರ್ಮಾನ ತೆಗೆದುಕೊಂಡಿತ್ತು. ಆನ್‌ಲೈನ್ ಸೇರಿದಂತೆ ಜೂಜು ನಿಯಂತ್ರಣ ಸಂಬಂಧ ತಮಿಳುನಾಡು ಸರ್ಕಾರ ಹೊಸ ಮಸೂದೆ ಜಾರಿ ಮಾಡಿದ್ದನ್ನು ಪ್ರಸ್ತಾಪಿಸಿದ್ದ ಮದ್ರಾಸು ಹೈಕೋರ್ಟ್, ಕೂಡ ಈ ಆನ್‌ಲೈನ್ ಬೆಟ್ಟಿಂಗ್ ಮತ್ತು ಜೂಜು ಸಂವಿಧಾನದ ಮೂಲಭೂತ ಹಕ್ಕುಗಳಿಗೆ ಧಕ್ಕೆ ಉಂಟು ಮಾಡುವ ವೈರಸ್ ಎಂದು ಅಭಿಪ್ರಾಯಪಟ್ಟಿತ್ತು. ಇದರ ಬೆನ್ನಲ್ಲೇ ರಾಜ್ಯದಲ್ಲಿ ಜೂಜು ನಿಷೇಧ ಮಾಡುವ ಸಂಬಂಧ ರಾಜ್ಯ ಸರ್ಕಾರ ಕರ್ನಾಟಕ ಪೊಲೀಸ್ ಕಾಯ್ದೆಗೆ ತಿದ್ದುಪಡಿ ತಂದಿದ್ದು, ಇತ್ತೀಚೆಗೆ ಸಚಿವ ಸಂಪುಟದದಲ್ಲಿ ಮಂಡಿಸಿ ಅನುಮೋದನೆ ಪಡೆಯಲಾಗಿತ್ತು. ಇದೀಗ ವಿಧೇಯಕವನ್ನು ವಿಧಾನಸಭೆ ಅಧಿವೇಶನದಲ್ಲಿ ಮಂಡಿಸಿದ್ದು, ಕಾಯ್ದೆಯಾಗಿ ಜಾರಿಯಾದರೆ, ಪೊಲೀಸ್ ಠಾಣಾ ಜಾಮೀನು ಪಡೆದು ಜೂಜು ನಡೆಸುತ್ತಿದ್ದವರು ಜೈಲು ಪಾಲಾಗಲಿದ್ದಾರೆ. ಅಂತಹ ಮಹತ್ವದ ವಿಧೇಯಕ ಮಂಡನೆ ಮಾಡಿದ್ದು, ಅನುಮೋದನೆ ಬಳಿಕ ರಾಜ್ಯದಲ್ಲಿ ಜಾರಿಗೆ ಬರಲಿದೆ.












Click it and Unblock the Notifications