ಕನ್ನಡ ಧ್ವಜ: ದಿನೇಶ್ ಗುಂಡೂರಾವ್ ಡಿಲಿಟ್ ಮಾಡಿದ ಟ್ವೀಟ್ ನಲ್ಲಿ ಅಂತದ್ದೇನಿದೆ?
ಬೆಂಗಳೂರು, ನ 2: ಕನ್ನಡ ರಾಜ್ಯೋತ್ಸವದ ದಿನದಂದು ಕನ್ನಡ ಧ್ವಜ ಹಾರಿಸುವ ವಿಚಾರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಟ್ವೀಟ್ ಸಮರ ತೀವ್ರವಾಗಿದೆ. ನವೆಂಬರ್ ಒಂದರಂದು, ಮುಖ್ಯಮಂತ್ರಿ ಯಡಿಯೂರಪ್ಪ, ರಾಷ್ಟ್ರಧ್ವಜದ ಜೊತೆಗೆ ಕನ್ನಡ ಧ್ವಜಾರೋಹಣವನ್ನೂ ಮಾಡಿದ್ದರು.
ಕನ್ನಡ ಧ್ವಜ ಹಾರಿಸುವ ವಿಚಾರದಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಟ್ವೀಟ್ ಮಾಡಿ, ನಂತರ ಅದನ್ನು ಡಿಲಿಟ್ ಮಾಡಿದ್ದರು. ಈಗ, ಡಿಲಿಟ್ ಮಾಡಿರುವ ಟ್ವೀಟ್ ಅನ್ನು ಹಿಡಿದುಕೊಂಡು, ಬಿಜೆಪಿ ಸಾಲುಸಾಲು ಟ್ವೀಟ್ ಮಾಡುತ್ತಿದೆ.
ದಿನೇಶ್ ಡಿಲಿಟ್ ಮಾಡಿದ ಟ್ವೀಟ್ ಹೀಗಿತ್ತು, "ಧ್ವಜ ಸಂಹಿತೆ ಹೆಸರಿನಲ್ಲಿ ಜನಮಾನಸದಲ್ಲಿ ದಶಕಗಳಿಂದ ನೆಲೆಯೂರಿದ ಕನ್ನಡದ ಅಸ್ಮಿತೆಯ ಪ್ರತಿಬಿಂಬವಾದ ನಾಡಧ್ವಜ ಹಾರಾಟಕ್ಕೆ ಅವಕಾಶ ನೀಡದೇ ಇರುವ ಮೂಲಕ, ಬಿಜೆಪಿ ಸರಕಾರ ಕನ್ನಡಿಗರ ಭಾವನೆಯೊಂದಿಗೆ ಚೆಲ್ಲಾಟವಾಡುತ್ತಿದೆ. ಕರ್ನಾಟಕದಲ್ಲಿ ನಾಡಧ್ವಜವಲ್ಲದೇ ಭಗವಾಧ್ವಜ ಹಾರಿಸಬೇಕೇ?".

ಇದಕ್ಕೆ ಬಿಜೆಪಿಯ ತಿರುಗೇಟು ಹೀಗಿದೆ, "ಕೇವಲ ಚುನಾವಣೆಯ ಸಂದರ್ಭದಲ್ಲಿ ದೇಶ, ನಾಡು, ಭಾಷೆ ಎಂದು ಮಾತನಾಡಿ ತಮ್ಮ ಸ್ವಾರ್ಥಕ್ಕೆ ನಾಡ ಧ್ವಜವನ್ನೇ ಬದಲಾಯಿಸಲು ಯತ್ನಿಸಿ ಸೋತ @INCKarnataka ಕ್ಕೇನು ಗೊತ್ತು ರಾಜ್ಯ ಬಿಜೆಪಿಗೆ ಕನ್ನಡ ನಾಡು, ನುಡಿ ಎಂದೆಂದಿಗೂ ಉಸಿರೆಂದು! ಬಿಜೆಪಿ ಬಗ್ಗೆ ನಾಡಜನರಲ್ಲಿ ದಿಕ್ಕು ತಪ್ಪಿಸುವ @dineshgrao ರವರ ಈ ಕೆಲಸವು ನೀರ ಮೇಲಿನ ಗುಳ್ಳೆಯಂತೆ".
ಇನ್ನೊಂದು ಟ್ವೀಟ್, "ಧ್ವಜ ಸಂಹಿತೆ ಹೆಸರಿನಲ್ಲಿ ಜನ ಮಾನಸದಲ್ಲಿ ದಶಕಗಳಿಂದ ನೆಲೆಯೂರಿದ ಕನ್ನಡದ ಅಸ್ಮಿತೆಯನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಂಡು ಬಂದು ಕನ್ನಡಾಭಿಮಾನಿಗಳ ಭಾವನೆಗಳೊಂದಿಗೆ ಚೆಲ್ಲಾಟವಾಡಿದ್ದಲ್ಲದೇ ಈಗ ತಮ್ಮ ಟ್ವಿಟ್ ಡಿಲೀಟ್ ಮಾಡಿದ್ದೀರಿ. ಸದಾ ಸುಳ್ಳನ್ನೇ ಹೇಳುವ ನಿಮ್ಮ ಈ ಪ್ರವೃತ್ತಿ ನಿಮಗೂ ನಿಮ್ಮ ಪಕ್ಷಕ್ಕೂ ನಾಚಿಕೆಗೇಡಿನ ವಿಷಯ".
"ಒಂದು ಕಾಲದಲ್ಲಿ ರಾಷ್ಟ್ರೀಯ ಪಕ್ಷವಾಗಿದ್ದ @INCKarnataka ವು ತನ್ನ ನಾಯಕರ ಅಪಪ್ರಚಾರದ ಮೂಲಕ ಇಂದು ಪ್ರಾಂತೀಯ ಪಕ್ಷದ ಮಟ್ಟಕ್ಕೆ ಇಳಿದಿದೆ. ಸುಳ್ಳು ಸುದ್ದಿಗಳನ್ನ ಹಬ್ಬಿಸುವ ಕೆಲಸ ಇನ್ನಾದರೂ ಈ ನಾಯಕರು ಬಿಡದಿದ್ದರೆ ಮುಂದಿನ ಚುನಾವಣೆ ಹೊತ್ತಿಗೆ ಕಾಂಗ್ರೆಸ್ ಪಕ್ಷ ನಿರ್ನಾಮವಾಗುವ ಎಲ್ಲಾ ಸಾಧ್ಯತೆಗಳೂ ಇವೆ! ಎಚ್ಚರ!" ಇದು ಬಿಜೆಪಿ ಮಾಡಿರುವ ಇನ್ನೊಂದು ಟ್ವೀಟ್.












Click it and Unblock the Notifications