ಬೆಂಗಳೂರಲ್ಲಿ ಕದ್ದುಮುಚ್ಚಿ ಹಿಂದಿ ದಿವಸ: ಕರವೇ ವಿರೋಧ ಇಲ್ಲಿದೆ ವೈರಲ್ ವಿಡಿಯೋ!
ದೇಶದಾದ್ಯಂತ ಮತ್ತೆ ಹಿಂದಿ ದಿವಸ್ ಅಥವಾ ಹಿಂದಿ ದಿನ ನಡೆಯುತ್ತಿದ್ದು, ಇದಕ್ಕೆ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಿಂದ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಈ ಸಂಬಂಧ ಮಾತನಾಡಿರುವ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಾರಾಯಣಗೌಡ್ರು.ಟಿ.ಎ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕರ್ನಾಟಕ ರಕ್ಷಣಾ ವೇದಿಕೆ ಕಳೆದ ಹದಿನೈದು ವರ್ಷಗಳಿಂದಲೂ ಹಿಂದಿ ದಿವಸ ಕಾರ್ಯಕ್ರಮಗಳನ್ನು ವಿರೋಧಿಸುತ್ತಲೇ ಬಂದಿದೆ.
ಕರವೇ ಹೋರಾಟದಿಂದಾಗಿ ಇತ್ತೀಚಿನ ವರ್ಷಗಳಲ್ಲಿ ಪ್ರತಿ ಸೆಪ್ಟೆಂಬರ್ 14ರಂದು ಒಕ್ಕೂಟ ಸರ್ಕಾರದ ಇಲಾಖೆಗಳು, ಸಾರ್ವಜನಿಕ ಸ್ವಾಮ್ಯದ ಸಂಸ್ಥೆಗಳಲ್ಲಿ ಹಿಂದಿ ದಿವಸ ಆಚರಣೆಗೆ ಕಡಿವಾಣ ಬಿದ್ದಿತ್ತು. ಆದರೆ, ಸೋಮವಾರ ರೈಲ್ವೆ ಇಲಾಖೆ ಬೆಂಗಳೂರಿನ ಗಾಂಧಿನಗರದ ಖಾಸಗಿ ಹೋಟೆಲ್ ಒಂದರಲ್ಲಿ ಕದ್ದುಮುಚ್ಚಿ ಹಿಂದಿದಿವಸ ಆಚರಣೆಗೆ ಮುಂದಾಗಿತ್ತು. ವಿಷಯ ತಿಳಿಯುತ್ತಿದ್ದಂತೆ ನಮ್ಮ ಕರವೇ ಮಹಿಳಾ ಘಟಕದ ಮುಖಂಡರು, ಕಾರ್ಯಕರ್ತೆಯರು ಅಲ್ಲಿಗೆ ಧಾವಿಸಿ ಪೋಸ್ಟರ್ ಗಳನ್ನು ಹರಿದೆಸೆದು ಕಾರ್ಯಕ್ರಮವನ್ನು ನಿಲ್ಲಿಸಿದ್ದಾರೆ ಎಂದು ಹೇಳಿದ್ದಾರೆ.

ದುರಂತೆವೆಂದರೆ ಈ ಅನ್ಯಾಯದ, ಕನ್ನಡಿಗರ ಮೇಲಿನ ಆಕ್ರಮಣದ ಕಾರ್ಯಕ್ರಮವನ್ನು ನಿಲ್ಲಿಸಿದಕ್ಕಾಗಿ ನಮ್ಮ ಕರವೇ ಕಾರ್ಯಕರ್ತೆಯರ ಮೇಲೆ ಉಪ್ಪಾರಪೇಟೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಎಂದು ಪ್ರತಿಪಾದಿಸಿದರೆ ನಮ್ಮ ಮೇಲೆ ಎಫ್ಐಆರ್‌ಗಳು ದಾಖಲಾಗುತ್ತವೆ. ನಮ್ಮ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ತಮ್ಮನ್ನು ತಾವು ಕನ್ನಡಪ್ರೇಮಿಗಳು ಎಂದು ಹೇಳಿಕೊಳ್ಳುತ್ತಾರೆ. ಆದರೆ ಕನ್ನಡ ಕಾರ್ಯಕರ್ತರ ಮೇಲೆ ಮನಸಿಗೆ ಬಂದಂತೆ ಮೊಕದ್ದಮೆಗಳನ್ನು ದಾಖಲಿಸಲಾಗುತ್ತದೆ. ಇದಕ್ಕೆ ನಾವು ಅಂಜುವುದಿಲ್ಲ. ಇಂಥ ಸಾವಿರ ಎಫ್‌ಐಆರ್ ಹಾಕಿದರೂ ಬೆದರುವ ಪ್ರಶ್ನೆಯೇ ಇಲ್ಲ. ಹಿಂದಿ ಹೇರಿಕೆ ವಿರುದ್ಧ ನಮ್ಮ ಹೋರಾಟವನ್ನು ನಾವು ನಿರಂತರವಾಗಿ ಮುಂದುವರೆಸುತ್ತೇವೆ ಎಂದು ಹೇಳಿದ್ದಾರೆ.
ಒಂದು ಭಾಷೆಯಾಗಿ ಹಿಂದಿಯ ಕುರಿತು ನಮ್ಮ ದ್ವೇಷ, ಅಸಹನೆ, ಕೋಪ ಯಾವುದೂ ಇಲ್ಲ. ಅದೂ ಕೂಡ ಕನ್ನಡ, ತಮಿಳು, ತೆಲುಗು, ಬಂಗಾಳಿಯಂತೆ ಒಂದು ಭಾರತೀಯ ಭಾಷೆ. ಆದರೆ ಅದನ್ನು ದೇಶದ ಎಲ್ಲ ಭಾಷಿಕರ ಮೇಲೆ ಹೇರುವುದು ಅನ್ಯಾಯ, ದೌರ್ಜನ್ಯ, ದಬ್ಬಾಳಿಕೆಯ ಪ್ರತೀಕ. ಇದನ್ನು ನಾವು ಯಾವತ್ತೂ ಸಹಿಸಿಕೊಂಡಿಲ್ಲ, ಮುಂದೆಯೂ ಸಹಿಸಿಕೊಳ್ಳುವುದಿಲ್ಲ. ಹಿಂದಿ ಹೇರಿಕೆಯಿಂದಾಗಿ ದೇಶದ ಬಹುತ್ವಕ್ಕೆ ಧಕ್ಕೆಯಾಗುತ್ತಿದೆ, ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗುತ್ತಿದೆ. ಒಂದು ಭಾಷೆಯನ್ನು ಹೇರುವ ಮೂಲಕ ದೇಶವನ್ನು ಒಡೆಯುವ ಸಂಚನ್ನು ನಾವು ಸಹಿಸುವುದಿಲ್ಲ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.
"Hindi Diwas" celebration by railway department in Bengaluru was stopped by KaRaVe.
— Ethnic Kannadiga (@Ellarakannada) September 15, 2025
Hindi imposition is nothing but Hindi Racism.
Kannadigas are fighting Hindi Racism.pic.twitter.com/eNXG3UB8jk
ಬೆಂಗಳೂರಲ್ಲಿ ಹಿಂದಿ ದಿವಸ ವಿಡಿಯೋ ವೈರಲ್: ಇನ್ನು ಬೆಂಗಳೂರಿನಲ್ಲಿ ಸೋಮವಾರ ಸೆಪ್ಟೆಂಬರ್ 15ರಂದು ಕದ್ದುಮುಚ್ಚಿ ಹಿಂದಿ ದಿವಸ ಆಚರಣೆ ಮಾಡಿರುವುದನ್ನು ವಿರೋಧಿಸಿದ ಕರವೇ ಕಾರ್ಯಕರ್ತೆಯರು ಪ್ರತಿಭಟನೆ ಮಾಡಿದ್ದಾರೆ. ಹಿಂದಿ ದಿವಸ ಆಚರಣೆಯನ್ನು ವಿರೋಧಿಸಿ ಪ್ರತಿಭಟನೆ ಮಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಹಿಂದಿ ದಿವಸ ಆಚರಣೆಯನ್ನು ಕನ್ನಡಿಗರ ವಿರೋಧಕ್ಕೆ ಮಣಿದು ನಿಲ್ಲಿಸಲಾಗಿತ್ತು. ಆದರೆ ಇದೀಗ ಮತ್ತೆ ಬೆಂಗಳೂರಿನಲ್ಲಿ ಹಾಗೂ ಕರ್ನಾಟಕದಲ್ಲಿ ಹಿಂದಿ ದಿವಸ ಆಚರಣೆ ನಡೆಯುತ್ತಿದೆ ಎಂದು ಕರವೇ ದೂರಿದೆ.












Click it and Unblock the Notifications