ಕಟಕಟೆ ಏರಿದ ಹಿಜಾಬ್ ವಿವಾದ: ಉಡುಪಿಯ ವಿದ್ಯಾರ್ಥಿನಿಯಿಂದ ಹೈಕೋರ್ಟ್‌ನಲ್ಲಿ ಅರ್ಜಿ
ಬೆಂಗಳೂರು, ಜ.31: ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿರುವ ಹಿಜಾಬ್ ಧಾರಣೆ ವಿವಾದ ಇದೀಗ ಹೈಕೋರ್ಟ್ ಅಂಗಳ ತಲುಪಿಸಿದೆ.
ಉಡುಪಿ ಸರ್ಕಾರಿ ಕಾಲೇಜಿನ ಮುಸ್ಲಿಂ ವಿದ್ಯಾರ್ಥಿನಿಯೊಬ್ಬಳು ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಆ ಅರ್ಜಿ ಇನ್ನು ಕೆಲವೇ ದಿನಗಳಲ್ಲಿ ನ್ಯಾಯಾಲಯದ ಮುಂದೆ ವಿಚಾರಣೆಗೆ ಬರಲಿದೆ. ಆಕೆ ಸಂವಿಧಾನದ ಕಲಂ 14 ಮತ್ತು 25ರ ಅನ್ವಯ ತಮಗಿರುವ ಧಾರ್ಮಿಕ ಸ್ವಾತಂತ್ರ್ಯದಡಿ ಹಿಜಾಬ್ ಧರಿಸುತ್ತಿದ್ದೇವೆ. ಆದರೆ ಅದನ್ನು ನಿರ್ಬಂಧಿಸುವ ಮೂಲಕ ಮೂಲಭೂತ ಹಕ್ಕಗಳನ್ನು ಮೊಟಕುಗೊಳಿಸಲಾಗುತ್ತಿದೆ ಎಂದು ಹೇಳಿದ್ದಾರೆ.
"ಉಡುಪಿಯ ಸರ್ಕಾರಿ ಬಾಲಕಿಯರ ಪಿಯು ಕಾಲೇಜಿನಲ್ಲಿ ಹಿಜಾಬ್ ಧರಿಸಲಾಗುತ್ತಿದೆ ಎಂಬ ಒಂದೇ ಕಾರಣಕ್ಕೆ ಮುಸ್ಲಿಂ ಹೆಣ್ಣುಮಕ್ಕಳಿಗೆ ಕಾಲೇಜಿನ ಪ್ರವೇಶಕ್ಕೆ ಅವಕಾಶ ನೀಡುತ್ತಿಲ್ಲ. 2021ರ ಡಿ.28ರಂದು ಮುಸ್ಲಿಂ ಧರ್ಮದ ಹೆಣ್ಣು ಮಕ್ಕಳಿಗೆ ಕಾಲೇಜು ಪ್ರವೇಶ ನಿರ್ಬಂಧಿಸಲಾಗಿದೆ, ಅವರಿಗೆ ತರಗತಿಗಳಿಗೆ ಹಾಜರಾಗಲು ಅವಕಾಶ ನೀಡಿಲ್ಲ'' ಎಂದು ಅರ್ಜಿದಾರರು ದೂರಿದ್ದಾರೆ.

ಅಲ್ಲದೆ, ಶಿಕ್ಷಣ ಸಂಸ್ಥೆಗಳು ಹಿಜಾಬ್ ಧಾರಣೆಯನ್ನು ನಿರ್ಬಂಧಿಸುವಂತಿಲ್ಲವೆಂದು ಕೋರ್ಟ್ ಆದೇಶ ನೀಡಬೇಕೆಂದು ವಿದ್ಯಾರ್ಥಿನಿ ಕೋರಿದ್ದಾರೆ. "ಹಿಂದೂ ರಿಲಿಜಿಯಸ್ ಎಂಡೋಮೆಂಟ್, ಮದ್ರಾಸ್ ವರ್ಸಸ್ ಶ್ರೀ ಲಕ್ಷ್ಮೀಂದ್ರ ತೀರ್ಥ ಸ್ವಾಮಿಯಾರ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್, ಸಂವಿಧಾನದಲ್ಲಿರುವ ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ಕೇವಲ ನಂಬಿಕೆಗಳಿಗೆ ಅಲ್ಲ, ಆಚರಣೆಗಳಿಗೂ ಅನ್ವಯಸುತ್ತವೆ' ಎಂದು ಸ್ಪಷ್ಟವಾಗಿ ಹೇಳಿದೆ. ಹಾಗಾಗಿ ಸರಕಾರದ ಕ್ರಮ ಸಂವಿಧಾನದ ಕಲಂ 25 ಮತ್ತು 26ರ ಸ್ಪಷ್ಟ ಉಲ್ಲಂಘನೆಯಾಗಿದೆ. ಆದ್ಧರಿಂದ ಸರಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕೆಂದು'' ವಿದ್ಯಾರ್ಥಿನಿ ಕೋರಿದ್ದಾಳೆ.
ಪವಿತ್ರ ಖುರಾನ್ ನಲ್ಲಿ ಮುಸ್ಲಿಂ ಧರ್ಮದ ಯುವತಿಯರು ಹಿಜಾಬ್ ಧರಿಸಬೇಕೆನ್ನುವ ಪದ್ದತಿಯ ಉಲ್ಲೇಖಲಿದೆ. ಹಾಗಾಗಿ ಹಿಜಾಬ್ ಧರಿಸಿದವರಿಗೆ ಕಾಲೇಜಿಗೆ ಪ್ರವೇಶ ನಿರಾಕರಣೆ ಮೂಲಕ ಮೂಲಭೂತ ಹಕ್ಕು ಉಲ್ಲಂಘಸಿಲಾಗಿದೆ ಎಂದು ಆಕೆ ಹೇಳಿದ್ದಾರೆ.

ಜೊತೆಗೆ ಭಾರತೀಯ ಸಂವಿಧಾನದಡಿ ಎಲ್ಲರಿಗೂ ತಮ್ಮ ಆದೇಶ ಧಾರ್ಮಿಕ ಆಚರಣೆಗಳನ್ನು ಕೈಗೊಳ್ಳಲು ಅವಕಾಶವಿದೆ. ಧಾರ್ಮಿಕ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡಲು ಸರ್ಕಾರಕ್ಕೆ ಅಧಿಕಾರವಿಲ್ಲ. ಹಾಗೆ ಮಾಡಿದರೆ ಅದು ಸಂವಿಧಾನಿಕ ನಿಯಮಗಳ ಉಲ್ಲಂಘನೆಯಾಗಿದೆ . ಸರ್ಕಾರ ರಾಜಕೀಯ ಪ್ರೇರಿತವಾಗಿ, ತಾರತಮ್ಯದ ಉದ್ದೇಶದಿಂದ ಇಂತಹ ಕ್ರಮ ಅನುಸರಿಸುತ್ತಿದೆ. ಇದು ಮಾನವ ಹಕ್ಕುಗಳ ಉಲ್ಲಂಘನೆಯೂ ಆಗಿದೆ ಎಂದು ಅರ್ಜಿಯಲ್ಲಿ ದೂರಲಾಗಿದೆ.












Click it and Unblock the Notifications