ಹಿಜಾಬ್ ವಿವಾದ: ವಿಚಾರಣೆಗೆ ಮೂವರು ನ್ಯಾಯಮೂರ್ತಿಗಳ ಪೀಠ ರಚನೆ
ಬೆಂಗಳೂರು, ಫೆ. 09: ಹಿಜಾಬ್ ವಿವಾದ ರಾಜ್ಯದೆಲ್ಲೆಡೆ ಭುಗಿಲೆದ್ದಿರುವ ಮಧ್ಯೆಯೇ, ಆ ಕುರಿತು ವಿಚಾರಣೆ ನಡೆಸುತ್ತಿದ್ದ ಹೈಕೋರ್ಟ್‌ನ ಏಕಸದಸ್ಯಪೀಠವು ವಿಸ್ತೃತಪೀಠ ರಚನೆ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದೆ. ಅಲ್ಲದೆ, ಆ ಬಗ್ಗೆ ಮುಖ್ಯ ನ್ಯಾಯಮೂರ್ತಿಗಳು ತೀರ್ಮಾನಿಸಲಿ ಎಂದು ಏಕಸದಸ್ಯಪೀಠ ಆದೇಶ ನೀಡಿತ್ತು.
ಅದರಂತೆ, ಇದೀಗ ಬಂದ ಅಪ್ಡೇಟ್ ಪ್ರಕಾರ, ಹಿಜಾಬ್ ವಿವಾದ ವಿಚಾರಣೆಗೆ ಹೈಕೋರ್ಟ್ ಪೂರ್ಣ ಪೀಠ ರಚನೆಯಾಗಿದೆ. ಮೂವರು ನ್ಯಾಯಮೂರ್ತಿಗಳ ಪೀಠವನ್ನು ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ರಚಿಸಿದ್ದಾರೆ.
ನ್ಯಾಯಪೀಠದಲ್ಲಿ ಸಿಜೆ ರಿತುರಾಜ್ ಅವಸ್ತಿ, ನ್ಯಾ. ಕೃಷ್ಣ ಎಸ್ ದೀಕ್ಷಿತ್, ನ್ಯಾ. ಖಾಜಿ ಜೈಬುನ್ನೀಸಾ ಮೊಹಿಯುದ್ದೀನ್ ಅವರಿದ್ದು,
ಫೆ.10ರಂದು ಮಧ್ಯಾಹ್ನ 2.30ಕ್ಕೆ ಅರ್ಜಿ ಹೈಕೋರ್ಟ್ ನ್ಯಾಯಪೀಠದಿಂದ ವಿಚಾರಣೆ ನಡೆಯಲಿದೆ.
ಹಿಜಾಬ್ ಧಾರಣೆಗೆ ನಿರ್ಬಂಧಿಸಿರುವ ಕ್ರಮ ಪ್ರಶ್ನಿಸಿ ಮುಸ್ಲಿಂ ವಿದ್ಯಾರ್ಥಿನಿಯರು ಹಾಗೂ ಅವರ ಪೋಷಕರು ಸಲ್ಲಿಸಿರುವ ಏಳು ಪ್ರತ್ಯೇಕ ಅರ್ಜಿಗಳ ಕುರಿತು ನ್ಯಾ. ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ಏಕಸದಸ್ಯಪೀಠ ಬುಧವಾರ ಮಧ್ಯಾಹ್ನ ವಿಚಾರಣೆ ಕೈಗೆತ್ತಿಕೊಂಡಿತು.
ಆರಂಭದಲ್ಲೇ ನ್ಯಾಯಮೂರ್ತಿಗಳು, ಪ್ರಕರಣವನ್ನು ವಿಸ್ತೃತ ನ್ಯಾಯಪೀಠಕ್ಕೆ ವರ್ಗಾಯಿಸುವ ಬಗ್ಗೆ ಅರ್ಜಿದಾರರು ಮತ್ತು ಸರಕಾರದ ಅಭಿಪ್ರಾಯವೇನು ಎಂದು ಪ್ರಶ್ನಿಸಿತು.
ಅರ್ಜಿದಾರರ ಪರ ವಕೀಲ ದೇವದಾಸ್ ಕಾಮತ್, ''ನ್ಯಾಯಮೂರ್ತಿಗಳು ವಿಷಯವನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸುವುದಾದರೆ, ವಿದ್ಯಾರ್ಥಿನಿಯರಿಗೆ ತಮ್ಮ ಧರ್ಮಕ್ಕೆ ಅನುಗುಣವಾಗಿ ಶಾಲಾ-ಕಾಲೇಜಿಗೆ ಹೋಗಲು ಅನುವು ಮಾಡಿಕೊಡಬೇಕು. ಅದಕ್ಕೆ ಮಧ್ಯಂತರ ಆದೇಶ ನೀಡಬೇಕು, ಎರಡು ತಿಂಗಳು ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಲು ಅವಕಾಶ ನೀಡಬೇಕು. ಎಲ್ಲ ಸಂಗತಿಗಳನ್ನು ಮುಕ್ತವಾಗಿರಿಸಿ ವಿದ್ಯಾರ್ಥಿಗಳಿಗೆ ಎಂದಿನಂತೆ ತರಗತಿಗಳನ್ನು ಅಟೆಂಡ್ ಮಾಡಲು ಅವಕಾಶ ನೀಡಬೇಕೆಂದು,'' ಎಂದು ಕೋರಿದರು.

ಮತ್ತೊಬ್ಬ ಅರ್ಜಿದಾರರ ಪರ ವಕೀಲ ಕಾಳೀಶ್ವರಮ್ ರಾಜ್, ''ಮದ್ರಾಸ್ ಮತ್ತು ಕೇರಳದಲ್ಲಿ ಏಕಸದಸ್ಯಪೀಠಗಳೇ ಇಂತಹ ವಿಚಾರದ ಬಗ್ಗೆ ತೀರ್ಪು ನೀಡಿವೆ. ಇಲ್ಲಿಯೂ ಏಕಸದಸ್ಯಪೀಠವೇ ವಿಚಾರಣೆ ಪೂರ್ಣಗೊಳಿಸಿ ತೀರ್ಪು ನೀಡಬಹುದು,'' ಎಂದರು.
ಅರ್ಜಿದಾರರ ವಾದ ಮಂಡಿಸಿದ ಸುಪ್ರೀಂಕೋರ್ಟ್‌ನ ಹಿರಿಯ ನ್ಯಾಯವಾದಿ ಸಂಜಯ್ ಹೆಗ್ಡೆ, ''ಮೊದಲಿಗೆ ಶಾಂತಿ ನೆಲೆಸಬೇಕು ಮತ್ತು ಮಕ್ಕಳು ಎಂದಿನಂತೆ ಶಾಲೆಗೆ ಹೋಗಬೇಕು. ಇಲ್ಲಿ ಹಿಜಾಬ್ ಪ್ರಶ್ನೆ ಬೇಡ, ಆದರೆ ಯಾವ ಧಾರ್ಮಿಕ ಪದ್ದತಿ ಅಗತ್ಯವಿದೆ ಎಂಬುದರ ಬಗ್ಗೆ ವಿಚಾರಣೆ ನಡೆಸೋಣ, ಸರ್ಕಾರಕ್ಕೆ ಹಿಬಾಜ್ ಧಾರಣೆ ನಿರ್ಬಂಧಿಸಲು ಯಾವುದೇ ಅಧಿಕಾರವಿಲ್ಲ. ಎರಡು ತಿಂಗಳಲ್ಲಿ ಆಕಾಶ ಕಳಚಿ ಬೀಳುವುದಿಲ್ಲ. ಹಾಗಾಗಿ ಮಧ್ಯಂತರ ಆದೇಶ ನೀಡಬೇಕು,'' ಎಂದರು.
ಮತ್ತೊಬ್ಬ ಅರ್ಜಿದಾರರ ಪರ ವಕೀಲ ಮೊಹಮ್ಮದ್ ತಾಹೀರ್ ಕೂಡ ಪರೀಕ್ಷೆಗಳು ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಹಿಜಾಬ್ ಧಾರಣೆಗೆ ಅವಕಾಶ ನೀಡಬೇಕು ಎಂದು ಕೋರಿದರು.
ಮಧ್ಯಂತರ ಆದೇಶಕ್ಕೆ ಎಜಿ ವಿರೋಧ: ಸರ್ಕಾರದ ಪರ ವಾದ ಮಂಡಿಸಿದ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ, ನ್ಯಾಯಪೀಠ ಯಾವುದೇ ಮಧ್ಯಂತರ ಆದೇಶ ನೀಡಬಾರದು. ಹಾಗೆ ನೀಡಿದರೆ ಅದು ಅರ್ಜಿದಾರರ ಪರವಾಗಿ ಇರಲಿದೆ. ಹಾಗಾಗಿ ಪೂರ್ಣ ವಿಚಾರಣೆ ನಡೆಸಿ ತೀರ್ಪು ನೀಡಬೇಕು ಎಂದರು.
ಅಲ್ಲದೆ, ವಿಚಾರಣೆಯನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸುವ ಕುರಿತು ಏಕಸದಸ್ಯಪೀಠವೇ ತನ್ನ ವಿವೇಚನೆ ಬಳಸಿ ನಿರ್ಧಾರ ಕೈಗೊಳ್ಳಬಹುದು. ಯಾವುದೇ ತೀರ್ಮಾನ ಕೈಗೊಂಡರೂ ಅದು ಬೇಗ ಆದರೆ ಒಳ್ಳೆಯದು. ಏಕೆಂದರೆ ಇಡೀ ರಾಜ್ಯ ಕೋರ್ಟ್ ನತ್ತ ನೋಡುತ್ತಿದೆ ಎಂದು ಹೇಳಿದರು.
ಸೂಕ್ಷ್ಮ ವಿಚಾರ: ಎಲ್ಲರ ವಾದ-ಪ್ರತಿವಾದ ಆಲಿಸಿದ ಬಳಿಕ ನ್ಯಾ. ಕೃಷ್ಣ ಎಸ್ ದೀಕ್ಷಿತ್ , ಇದು ಅತ್ಯಂತ ಸೂಕ್ಷ್ಮ ವಿಚಾರ, ಇದರಲ್ಲಿ ಅನೇಕ ಸಾಂವಿಧಾನಿಕ ಹಾಗೂ ಕಾನೂನಾತ್ಮಕ ಅಂಶಗಳಿವೆ. ಜೊತೆಗೆ ವೈಯಕ್ತಿಕ ಕಾನೂನು ಮತ್ತು ಹಕ್ಕುಗಳ ವಿಚಾರವಿದೆ. ಹಾಗಾಗಿ ಆ ಕುರಿತು ವಿಸ್ತೃತ ವಿಚಾರಣೆ ಅಗತ್ಯವಿರುವುದರಿಂದ ಪ್ರಕರಣವನ್ನು ಸಿಜೆ ಅವರಿಗೆ ವರ್ಗಾಯಿಸುತ್ತಿದ್ದೇನೆ. ಅವರೇ ವಿಸ್ತೃತ ಪೀಠ ರಚನೆ ಬಗ್ಗೆ ತೀರ್ಮಾನಿಸಲಿ ಎಂದು ಆದೇಶಿಸಿದರು.
ಅಲ್ಲದೆ, ಅರ್ಜಿಗಳ ಎಲ್ಲ ಕಡತಗಳನ್ನು ಸಿಜೆ ಮುಂದೆ ಮಂಡಿಸುವಂತೆ ನ್ಯಾಯಾಲಯ ರಿಜಿಸ್ಟ್ರಾರ್ ಜನರಲ್‌ಗೆ ಆದೇಶ ನೀಡಿತು.












Click it and Unblock the Notifications