ಹಿಜಾಬ್ ಧಾರ್ಮಿಕ ಸ್ವಾತಂತ್ರ್ಯವಾದರೆ, ಜನಿವಾರ ಏನು: ಬಿಜೆಪಿ
ಜನಿವಾರ ಧರಿಸಿದ ವಿದ್ಯಾರ್ಥಿಗೆ ಪರೀಕ್ಷೆ ಕುಳಿತುಕೊಳ್ಳಲು ಅವಕಾಶ ನಿರಾಕರಿಸಿರುವುದು ಭಾರಿ ವಿವಾದ ಹಾಗೂ ವಿರೋಧಕ್ಕೆ ಕಾರಣವಾಗಿದೆ. ಇದು ರಾಜಕೀಯ ತಿರುವು ಪಡೆದುಕೊಂಡಿದ್ದು, ಕಾಂಗ್ರೆಸ್ ಸರ್ಕಾರದ ವಿರುದ್ಧ ಗರಂ ಆಗಿದ್ದಾರೆ. ಬಿಜೆಪಿ ನಾಯಕರು ಕೂಡ ಈ ವಿಚಾರವನ್ನು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು, ಭಾಷಣದಲ್ಲಿ ಬೀಗುತ್ತಿದ್ದ ಧಾರ್ಮಿಕ ಸ್ವಾತಂತ್ರ್ಯ ಇದೇನಾ ಎಂದು ಕುಟುಕಿದ್ದಾರೆ. ಸಂವಿಧಾನವನ್ನು ತಮಗೆ ಮನಸ್ಸಿಗೆ ಬಂದ ಹಾಗೆ ತಿರುಚುವುದರಲ್ಲಿ ಕಾಂಗ್ರೆಸ್ಸಿಗರು ಸಿದ್ದಹಸ್ತರು ಎಂದು ಬಿಜೆಪಿ ದೂರಿದೆ.
ಈ ಹಿಂದೆ ಶಾಲಾ-ಕಾಲೇಜುಗಳಲ್ಲಿ ಎಲ್ಲರೂ ಸಮಾನರು ಎಂಬ ನಿಟ್ಟಿನಲ್ಲಿ ವಸ್ತ್ರಸಂಹಿತೆಯ ಅಡಿಯಲ್ಲಿ ಸಮವಸ್ತ್ರವನ್ನು ಜಾರಿಗೆ ತಂದಿದ್ದೆ ನಾವು ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದರು. ಆದರೆ, ಯಾವಾಗ ಮುಸ್ಲಿಂ ಸಮುದಾಯದ ಕೆಲವು ವಿದ್ಯಾರ್ಥಿನಿಯರು ಶಾಲಾ-ಕಾಲೇಜುಗಳಲ್ಲಿ ಸಮಾನತೆಗೆ ವಿರುದ್ಧವಾಗಿ ಹಿಜಾಬ್ ಧರಿಸಿ ಬರುತ್ತಿರುವುದನ್ನು ಪ್ರಶ್ನಿಸಿದರೆ, ಅದಕ್ಕೆ ಕಾಂಗ್ರೆಸ್ಸಿಗರು ಇದು ಬಾಬಾ ಸಾಹೇಬರು ನಮಗೆ ನೀಡಿರುವ ಧಾರ್ಮಿಕ ಸ್ವಾತಂತ್ರ್ಯ ಎಂದು ತೇಪೆ ಹಚ್ಚಿದರು. ಹೇಗಿದೆ ನೋಡಿ, ಕಾಂಗ್ರೆಸ್ಸಿಗರ ಇಬ್ಬಂದಿತನ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.

ಈ ಹಿಂದೆ ಕೆಪಿಎಸ್‌ಸಿ ಪರೀಕ್ಷೆ ನಡೆಯುವ ಸಂದರ್ಭದಲ್ಲಿ ಮಹಿಳೆಯೊಬ್ಬರ ಮಾಂಗಲ್ಯ ಸರವನ್ನು ತೆಗೆಸಿದ್ದರು. ಈ ಬಗ್ಗೆ ಮಾಧ್ಯಮದವರು ಕಾಂಗ್ರೆಸ್ಸಿಗರನ್ನು ಪ್ರಶ್ನಿಸಿದರೆ, "ಏಯ್ ಅದು ರೂಲ್ಸು ಕಣ್ರೀ" ಎಂದು ಅಬ್ಬರಿಸಿದ್ದರು. ಆದರೆ, ಅದೇ ಮಾಧ್ಯಮದವರು ಹಾಗಾದರೆ ರೂಲ್ಸ್ ಪ್ರಕಾರ ಹಿಜಾಬ್ ಅನ್ನು ಏಕೆ ತೆಗೆಸಲಿಲ್ಲ ಎಂದು ಮರುಪ್ರಶ್ನೆ ಹಾಕಿದರೆ, ಅದಕ್ಕೆ ಕಾಂಗ್ರೆಸ್ಸಿಗರದ್ದು "ನೋ ಕಾಮೆಂಟ್ಸ್..ನೋ ಕಾಮೆಂಟ್ಸ್" ಎಂದು ಟೀಕಿಸಿದೆ.
ಈಗ ಬೀದರ್‌ನಲ್ಲಿ ಸಿಇಟಿ ಪರೀಕ್ಷೆಗೆ ಜನಿವಾರ ಧರಿಸಿ ಬಂದಿದ್ದ ಎಂಬ ಏಕೈಕ ಕಾರಣಕ್ಕೆ ವಿದ್ಯಾರ್ಥಿಯೊಬ್ಬನಿಗೆ ಪರೀಕ್ಷೆಗೆ ಹಾಜರಾಗಲು ಅನುಮತಿ ನೀಡಿಲ್ಲ. ಸಾಲದ್ದಕ್ಕೆ ಜನಿವಾರವನ್ನು ಕಟ್ ಮಾಡಿಕೊಂಡು ಬಾ, ಹಾಗಿದ್ದರೆ ಮಾತ್ರ ಪರೀಕ್ಷೆ ಬರೆಯಲು ನಿನಗೆ ಅವಕಾಶ ನೀಡುತ್ತೇವೆ ಎಂದು ಅಲ್ಲಿನ ಸಿಬ್ಬಂದಿ ಹೇಳಿದರು ಎಂದು ಪರೀಕ್ಷೆ ವಂಚಿತ ವಿದ್ಯಾರ್ಥಿ ಅಳಲು ತೋಡಿಕೊಂಡಿದ್ದಾನೆ ಎಂದು ಆಕ್ರೋಶ ಹೊರಹಾಕಿದೆ.

ಸಿಇಟಿ ಪರೀಕ್ಷೆಯ ಹಾಲ್ ಟಿಕೆಟ್‌ನಲ್ಲಿ ಆಗಲಿ ಅಥವಾ ಇತರ ಯಾವುದೇ ಮಾರ್ಗಸೂಚಿಯಲ್ಲಿ ಜನಿವಾರ ಧರಿಸಬಾರದು ಎಂದು ಎಲ್ಲಿಯೂ ಉಲ್ಲೇಖವಾಗಿರಲಿಲ್ಲ. ಹಾಗಿದ್ದ ಮೇಲೆ ಜನಿವಾರ ಧರಿಸಿದ ವಿದ್ಯಾರ್ಥಿಗೆ ಪರೀಕ್ಷೆ ಕುಳಿತುಕೊಳ್ಳಲು ಅವಕಾಶ ನೀಡದಿರುವುದು ಏಕೆ? ಈ ಅನ್ಯಾಯಕ್ಕೆ ಯಾರು ಹೊಣೆ? ಎಂದು ಕೇಳಿದೆ.
ದೂರದ ಉತ್ತರಪ್ರದೇಶದಲ್ಲಿ ದನಗಳ್ಳನ ಮೇಲೆ ಹಲ್ಲೆಯಾದರೆ ತಮ್ಮ ಮನಸ್ಸಿಗೆ ಅಪಾರ ದುಃಖವಾಗಿದೆ ಎಂದು ಪುಟಗಟ್ಟಲೆ ಟ್ವೀಟಿಸುವ ಸಿಎಂ ಸಿದ್ದರಾಮಯ್ಯ ಅವರು ತಮ್ಮದೆ ಆಡಳಿತವಿರುವ ರಾಜ್ಯದಲ್ಲಿ ವಿದ್ಯಾರ್ಥಿಯೊಬ್ಬನ ಉಜ್ವಲ ಭವಿಷ್ಯವನ್ನು ಮಂಕಾಗಿಸಿರುವ ಘಟನೆಯ ಬಗ್ಗೆ ಏಕೆ ಇದುವರೆಗೂ ಬಾಯ್ಬಿಟ್ಟಿಲ್ಲ? ಎಂದು ಪ್ರಶ್ನಿಸಿದೆ. ಸಂವಿಧಾನದ ಬಗ್ಗೆ ಮಾರುದ್ದ ಭಾಷಣ ಬಿಗಿಯುವ ಕಾಂಗ್ರೆಸ್ಸಿಗರಿಗೆ ಜನಿವಾರ ಧರಿಸಿದ ವಿದ್ಯಾರ್ಥಿಯ ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಿರುವುದು ಕಣ್ಣಿಗೆ ಕಾಣಿಸುತ್ತಿಲ್ಲವೇ? ಇದಕ್ಕೆ ಉತ್ತರಿಸಿ ಎಂದು ಬೆನ್ನುಬಿದ್ದಿದೆ.












Click it and Unblock the Notifications