ರಾಜ್ಯದೆಲ್ಲೆಡೆ ಕಾಲೇಜುಗಳಲ್ಲಿ ಭುಗಿಲೆದ್ದ ಹಿಜಾಬ್ vs ಕೇಸರಿ ಶಾಲು ವಿವಾದ
ಉಡುಪಿ, ಫೆಬ್ರವರಿ 8: ರಾಜ್ಯದ ಕಾಲೇಜುಗಳಲ್ಲಿ ಹಿಜಾಬ್ vs ಕೇಸರಿ ಶಾಲು ಫೈಟ್ ಜೋರಾಗಿದ್ದು, ಇಂದು ಹೈಕೋರ್ಟ್‌ನಲ್ಲಿ ಮಹತ್ವದ ವಿಚಾರಣೆ ನಡೆಯಲಿದೆ. ಈ ಮಧ್ಯೆಯೇ ವಿದ್ಯಾರ್ಥಿಗಳು ಮಾತ್ರ ತಮ್ಮ ಹೋರಾಟ ಮುಂದುವರಿಸುತ್ತಲೇ ಇದ್ದಾರೆ. ರಾಜ್ಯದ ವಿವಿಧ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಕಲ್ಲು ತೂರಾಟ ನಡೆಸಿದ್ದಾರೆ.
ಇಂದು ಉಡುಪಿ ನಗರದ ಎಂಜಿಎಂ ಕಾಲೇಜಿನ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಹಿಜಾಬ್- ಬುರ್ಕಾ, ಕೇಸರಿ ಪೇಟ, ಶಾಲಿನೊಂದಿಗೆ ಕಾಲೇಜಿಗೆ ಆಗಮಿಸಿ, ರಾಜ್ಯ ಸರ್ಕಾರದ ಸಮವಸ್ತ್ರ ಸಂಹಿತೆ ಆದೇಶವನ್ನು ಮತ್ತೆ ಉಲ್ಲಂಘಿಸಿದ್ದಾರೆ.
ವಿದ್ಯಾರ್ಥಿಗಳ ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಉಡುಪಿಯ ಎಂಜಿಎಂ ಕಾಲೇಜಿಗೆ ಅನಿರ್ದಿಷ್ಟಾವಧಿ ರಜೆ ಘೋಷಿಸಲಾಗಿದೆ. ಹೈಕೋರ್ಟ್ ಆದೇಶ ಬರುವವರೆಗೂ ಉಡುಪಿಯ ಎಂಜಿಎಂ ಕಾಲೇಜಿಗೆ ರಜೆ ಘೋಷಿಸಲಾಗಿದೆ ಪ್ರಿನ್ಸಿಪಾಲ್ ಡಾ. ದೇವದಾಸ್ ನಾಯಕ್ ವಿದ್ಯಾರ್ಥಿಗಳಿಗೆ ಮನವಿ ಮಾಡಿದರು.
ಬುರ್ಖಾ, ಹಿಜಾಬ್ ಧರಿಸಿ ಮುಸ್ಲಿಂ ವಿದ್ಯಾರ್ಥಿನಿಯರು ಬಂದರೆ, ಕೇಸರಿ ಪೇಟ, ಕೇಸರಿ ಶಾಲು ತೊಟ್ಟು ಹಿಂದೂ ವಿದ್ಯಾರ್ಥಿಗಳು ಕಾಲೇಜಿಗೆ ಬಂದಿದ್ದಾರೆ. ಈ ವೇಳೆ ಆಡಳಿತ ಮಂಡಳಿ ಗೇಟ್‌ಗೆ ಬೀಗ ಹಾಕಿದೆ. ಕೇಸರಿ ಪೇಟ ತೊಟ್ಟ ಹಿಂದೂ ವಿದ್ಯಾರ್ಥಿಗಳು ಆವರಣದ ಹೊರಕ್ಕೆ ಇದ್ದು, ಬೀಗ ತೆಗೆಯಲು ಕಾಯುತ್ತಿದ್ದಾರೆ.

ರಾಜ್ಯಾದ್ಯಂತ ಹಿಜಾಬ್ ಧರಿಸುವ ಹಕ್ಕಿಗಾಗಿ ಹೋರಾಟ ನಡೆಯುತ್ತಿದೆ. ಸರ್ಕಾರಿ ಪದವಿ ಪೂರ್ವ ಕಾಲೇಜಿನ 8 ವಿದ್ಯಾರ್ಥಿಗಳು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಧಾರ್ಮಿಕ ಹಕ್ಕು ಎರಡು ಧರ್ಮಗಳ ನಡುವೆ ಸಂಘರ್ಷಕ್ಕೆ ಎಡೆಮಾಡಿಕೊಟ್ಟಿದ್ದು, ಇಂದು ಪ್ರಕರಣದ ವಿಚಾರಣೆ ಆರಂಭವಾಗಲಿದೆ. ಹೀಗಾಗಿ ಇಡೀ ರಾಜ್ಯದ ಚಿತ್ತ ಹೈಕೋರ್ಟ್‌ನತ್ತ ನೆಟ್ಟಿದೆ.
ಉಡುಪಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಿಜಾಬ್‍ಗೆ ನಿರ್ಬಂಧ ಹೇರಿದ್ದನ್ನು ವಿರೋಧಿಸಿ, ಕೆಲ ವಿದ್ಯಾರ್ಥಿನಿಯರು ಹೈಕೋರ್ಟ್ ಮೆಟ್ಟಿಲೇರಿದ್ದರು. ಮಂಗಳವಾರ ಹೈಕೋರ್ಟ್ ಈ ಪ್ರಕರಣವನ್ನು ವಿಚಾರಣೆಗೆ ತೆಗೆದುಕೊಳ್ಳಲಿದೆ.

ಸುಪ್ರೀಂಕೋರ್ಟ್, ಕೇರಳ, ಮದ್ರಾಸ್ ಹೈಕೋರ್ಟ್‌ಗಳು ಇಂಥದ್ದೇ ಪ್ರಕರಣಗಳಲ್ಲಿ ಸಮವಸ್ತ್ರ ಸಂಹಿತೆಯನ್ನು ಎತ್ತಿ ಹಿಡಿದಿವೆ. ಹೀಗಾಗಿ ಉಡುಪಿ ಪ್ರಕರಣದಲ್ಲಿ ಹೈಕೋರ್ಟ್ ಯಾವ ಆದೇಶ ನೀಡಲಿದೆ ಅನ್ನುವುದು ಎಲ್ಲರ ಕುತೂಹಲ ಕೆರಳಿಸಿದೆ.
ಮಂಡ್ಯದಲ್ಲಿ ಜೈ ಶ್ರೀರಾಮ್, ಅಲ್ಲಾಹು ಅಕ್ಬರ್ ಘೋಷಣೆ
ಮಂಡ್ಯದ ಸರ್ಕಾರಿ ಕಾಲೇಜಿನಲ್ಲಿ ಬುರ್ಖಾ ಧರಿಸಿ ಬಂದ ವಿದ್ಯಾರ್ಥಿನಿಯನ್ನು ಸುತ್ತವರೆದು ಕೇಸರಿ ಶಾಲು ಧರಿಸಿದ ವಿದ್ಯಾರ್ಥಿಗಳು ಜೈ ಶ್ರೀರಾಮ್ ಘೋಷಣೆ ಕೂಗಿದ್ದಾರೆ. ಇದರಿಂದ ಕೋಪಗೊಂಡ ಯುವತಿ ಅಲ್ಲಾಹು ಅಕ್ಬರ್ ಎಂದು ಕೂಗಿದ್ದಾಳೆ. ನಂತರ ಕಾಲೇಜು ಸಿಬ್ಬಂದಿ ಯುವತಿಯನ್ನು ಕರೆದೊಯ್ದಿದಿದ್ದಾರೆ.
ಬಾಗಲಕೋಟೆ ಜಿಲ್ಲೆಯಲ್ಲಿ ಕಲ್ಲು ತೂರಾಟ
ಬಾಗಲಕೋಟೆ ಜಿಲ್ಲೆಯ ರಬಕವಿ ಸರ್ಕಾರಿ ಪಿಯು ಕಾಲೇಜಿನಲ್ಲಿಯೂ ಕಲ್ಲು ತೂರಾಟ ನಡೆಸಲಾಗಿದೆ. ಓರ್ವನ ತಲೆಗೆ ಕಲ್ಲು ತಾಗಿದ್ದು, ಗಾಯಗೊಂಡಿದ್ದಾನೆ. ಹಿಜಾಬ್ ಪರ ವಿದ್ಯಾರ್ಥಿಗಳ ಗುಂಪು ಕಾಲೇಜಿನ ಮೇಲೆ ಕಲ್ಲು ತೂರಾಟ ನಡೆಸಿರುವ ಮಾಹಿತಿ ಲಭ್ಯವಾಗಿದೆ. ಲಾಠಿ ಚಾರ್ಜ್ ನಡೆಸುವ ಮೂಲಕ ಪರಿಸ್ಥಿತಿಯನ್ನು ತಿಳಿಗೊಳಿಸಿ, ಕೆಲವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಇನ್ನು ಚಿಕ್ಕಮಗಳೂರು, ಉಡುಪಿ, ಬಾಗಲಕೋಟೆ, ರಾಮನಗರ, ಚಾಮರಾಜನಗರ, ಕುಂದಾಪುರ ಭಾಗದಲ್ಲಿಯ ಕಾಲೇಜುಗಳಲ್ಲಿ ಹಿಜಾಬ್ ವಿವಾದ ಉದ್ವಿಘ್ನ ಪರಿಸ್ಥಿತಿಗೆ ತಲುಪಿದೆ.
ನೀಲಿ ಶಾಲು ಧರಿಸಿ ಬಂದ ವಿದ್ಯಾರ್ಥಿಗಳು
ವಿಜಯಪುರ ಜಿಲ್ಲೆಯ ಇಂಡಿ ಶಾಂತೇಶ್ವರ ಕಾಲೇಜಿನಲ್ಲಿ ಹಿಜಾಬ್ ವಿವಾದ ಮುಂದುವರಿದಿದೆ. ಹಿಜಾಬ್ ಬೆಂಬಲಿಸಿ ನೀಲಿ ಶಾಲು ಧರಿಸಿ ಕೆಲ ವಿದ್ಯಾರ್ಥಿಗಳು ಬಂದಿದ್ದಾರೆ. ನೀಲಿ ಶಾಲು ಧರಿಸಿ ಬಂದ ವಿದ್ಯಾರ್ಥಿಗಳಿಗೆ ಮುಸ್ಲಿಂ ಯುವಕರು ಸಾಥ್ ನೀಡಿದ್ದಾರೆ. ಮತ್ತೊಂದು ಹಿಜಾಬ್ ವಿರೋಧಿಸಿ ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಕಾಲೇಜಿನ ಮುಂದೆ ನಿಂತಿದ್ದಾರೆ.
ಗುಂಪು ಘರ್ಷಣೆ ಉಂಟಾಗುವ ಸಾಧ್ಯತೆ ಹಿನ್ನೆಲೆ ಇಂಡಿ ಪೊಲೀಸರು ಕಾಲೇಜಿಗೆ ಭೇಟಿ ನೀಡಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ವಿದ್ಯಾರ್ಥಿಗಳ ಗುಂಪು ಗುಂಪಾಗಿ ನಿಲ್ಲದಂತೆ ಎಲ್ಲರನ್ನು ಚದುರಿಸುತ್ತಿದ್ದಾರೆ. ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿದ್ದು, ಹಿರಿಯ ಅಧಿಕಾರಿಗಳ ಸ್ಥಳದಲ್ಲಿದ್ದು, ಪರಿಸ್ಥಿತಿ ಕುರಿತು ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.
ಸರ್ಕಾರದ ಆದೇಶಕ್ಕೆ ಕಿಮ್ಮತ್ತಿಲ್ಲ
ಹಿಜಾಬ್ ವಿವಾದ ಶಮನಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಕಡ್ಡಾಯ ಸಮವಸ್ತ್ರ ನಿಯಮ ಆದೇಶ ಜಾರಿಗೆ ತಂದಿದೆ. ಆದರೂ ಸೋಮವಾರ ಎರಡೂ ಕಡೆಯ ವಿದ್ಯಾರ್ಥಿಗಳು ಸರ್ಕಾರದ ಆದೇಶವನ್ನು ಗಾಳಿಗೆ ತೂರಿ ಹಿಜಾಬ್, ಕೇಸರಿ ಶಾಲು ಧರಿಸಿ ಆಗಮಿಸಿದ್ದಾರೆ.
ಶಾಂತಿ ಕಾಪಾಡುವಂತೆ ಸಿಎಂ ಮನವಿ
ಇಂದು ಹೈಕೋರ್ಟ್ ನಲ್ಲಿ ಅರ್ಜಿ ವಿಚಾರಣೆ ಹಿನ್ನೆಲೆ ನ್ಯಾಯಾಲಯದ ತೀರ್ಮಾನಕ್ಕೆ ಎಲ್ಲರೂ ಬದ್ಧವಾಗಿರಬೇಕು. ನ್ಯಾಯಾಲಯದಿಂದ ಯಾವುದೇ ಆದೇಶ ಬಂದ್ರೂ ವಿದ್ಯಾರ್ಥಿಗಳು ಮತ್ತು ಪೋಷಕರು ಶಾಂತಿ ಕಾಪಾಡಬೇಕೆಂದು ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಮನವಿ ಮಾಡಿಕೊಂಡಿದ್ದಾರೆ.












Click it and Unblock the Notifications